Updated News From Kaup
ಇನ್ನಂಜೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಸಂತಸದ ಶಿಬಿರ - ಸುದರ್ಶನ ಕ್ರಿಯಾ, ಯೋಗ, ಪ್ರಾಣಯಾಮ, ಧ್ಯಾನ, ಜ್ಞಾನಗಳ ಸುಂದರ ಮಿಶ್ರಣ
Posted On: 25 Mar 2022, 10:36 PM
ಕಾಪು : ಜೀವನದಲ್ಲಿ ಸಂತೋಷ, ಯಶಸ್ವಿ ಮತ್ತು ಆರೋಗ್ಯವಾಗಿರಬೇಕೆನ್ನುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಸಂತಸದ ಶಿಬಿರ (ಸುದರ್ಶನ ಕ್ರಿಯಾ, ಯೋಗ, ಪ್ರಾಣಯಾಮ, ಧ್ಯಾನ, ಜ್ಞಾನಗಳ ಸುಂದರ ಮಿಶ್ರಣ) ಮಾಚ್೯ 28 ರಿಂದ ಏಪ್ರಿಲ್ 2ರವರೆಗೆ ಬೆಳಿಗ್ಗೆ ಘಂಟೆ 5 ರಿಂದ 7ರವರೆಗೆ ಇನ್ನಂಜೆ ಶಾಲೆಯ ಹತ್ತಿರದ ದಾಸ ಭವನದಲ್ಲಿ ನಡೆಯಲಿದೆ. ತಕ್ಷಣವೇ ಈ ಶಿಬಿರದಲ್ಲಿ ನೋಂದಾಯಿಸಿ, ಭಾಗವಹಿಸಿ ಜ್ಞಾನದ ಅನುಭವವನ್ನು ಪಡೆದುಕೊಳ್ಳಲು ಸಂಘಟಕರು ವಿನಂತಿಸಿದ್ದಾರೆ. (ವಿ.ಸೂ. : ಶಿಬಿರಾರ್ಥಿಗಳು ಬರುವಾಗ ಬೆಡ್‌ಶೀಟ್ ಮತ್ತು ಕುಡಿಯಲು ನೀರು ತರಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9980915511
ಹೆಜಮಾಡಿ : ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ಚಾಲನೆ
Posted On: 22 Mar 2022, 12:03 PM
ಹೆಜಮಾಡಿ : ಸುರತ್ಕಲ್‌ನ ಎನ್.ಐ.ಟಿ.ಕೆ. ಬಳಿಯ ಟೋಲ್ ಗೇಟನ್ನು ಶೀಘ್ರವಾಗಿ ತೆರವುಗೊಳಿಸುವಂತೆ ಆಗ್ರಹಿಸಿ ಮಾಚ್೯ 22ರಂದು ಬೃಹತ್ ಪಾದಯಾತ್ರೆಗೆ ವಿವಿಧ ಪಕ್ಷ, ಸಂಘ-ಸಂಸ್ಥೆ ಮತ್ತು ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಹೆಜಮಾಡಿ ಟೋಲ್ ಗೇಟ್ ಬಳಿ ಚಾಲನೆ ನೀಡಲಾಯಿತು. ಹೆಜಮಾಡಿ ಟೋಲ್ ಗೇಟ್ ನಿಂದ ಆರಂಭವಾಗಿ ಸುರತ್ಕಲ್ ಟೋಲ್ ಗೇಟ್ ವರೆಗೆ ಪಾದಯಾತ್ರೆಯು ಸಾಗಲಿದೆ. ಸುಮಾರು ಸಾವಿರಾರು ಮಂದಿಯಷ್ಟು ಸೇರಿದ ಪ್ರತಿಭಟನಾಕಾರರು, ಸಂಸದರು ಮತ್ತು ಶಾಸಕರ ವಿರುದ್ಧ ಘೋಷಣೆಯನ್ನು ಕೂಗಿ ಸುರತ್ಕಲ್ ಟೋಲ್ ತೆರವುಗೊಳಿಸಲು ವಿಳಂಬಿಸಿದ್ದಲ್ಲಿ ಮುಂದೆ ನಡೆಯ ಬಹುದಾದ ದುರಂತಕ್ಕೆ ನೀವೇ ಜವಾಬ್ದಾರಿ ಆಗಲಿದ್ದೀರಿ ಎಂಬುದಾಗಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸಂಘಸಂಸ್ಥೆಗಳ ಪ್ರಮುಖರು, ರಾಜಕೀಯ ನಾಯಕರು, ನಾಗರಿಕರು ಉಪಸ್ಥಿತರಿದ್ದರು.
ರೋಟರಿ ಸಮುದಾಯ ದಳ ಇನ್ನಂಜೆಯಿಂದ ಇನ್ನಂಜೆ ಪ್ರಾಥಮಿಕ ಆರೋಗ್ಯ ಉಪಕೇಂದ್ರಕ್ಕೆ ಬಿ. ಪಿ. ಆಪರೇಟರ್ ಕೊಡುಗೆ
Posted On: 21 Mar 2022, 01:26 PM
ಕಾಪು : ರೋಟರಿ ಸಮುದಾಯ ದಳ ಇನ್ನಂಜೆ ಇವರ ವತಿಯಿಂದ ಮಾಲಿನಿ ಶೆಟ್ಟಿ ಇನ್ನಂಜೆ ಇವರ ಪ್ರಾಯೋಜಕತ್ವದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉಪ ಕೇಂದ್ರವಾದ ಇನ್ನಂಜೆಗೆ ಬಿ. ಪಿ. ಆಪರೇಟರನ್ನು ಪ್ರೈಮರಿ ಹೆಲ್ತ್ ಆಫೀಸರ್ ಶಕುಂತಲಾ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಆಚಾರ್ಯ, ಪಂಚಾಯತ್ ಕಾರ್ಯದರ್ಶಿಯಾದ ಚಂದ್ರಶೇಖರ್ ಸಾಲಿಯಾನ್, ಸದಸ್ಯರಾದ ದಿವೇಶ್ ಶೆಟ್ಟಿ, ಕಮ್ಯುನಿಟಿ ಹೆಲ್ತ್ ಆಫೀಸರ್ ದೀಪಕ್, ರೋಟರಿ ಸಮುದಾಯ ದಳ ಸದಸ್ಯರುಗಳಾದ ಆದ ವಜ್ರೇಶ್ ಆಚಾರ್ಯ, ಗಣೇಶ್ ಆಚಾರ್ಯ ಮತ್ತು ಜೇಸುದಾಸ್ ಸೋನ್ಸ್ ಉಪಸ್ಥಿತರಿದ್ದರು.
ಕಾಪು: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ - ಇಬ್ಬರ ಮೃತ್ಯು, ಮೂವರು ಗಂಭೀರ
Posted On: 21 Mar 2022, 01:01 PM
ಕಾಪು : ಇಲ್ಲಿನ ಮಲ್ಲಾರು ಸಲಫಿ ಮಸೀದಿ ಸಮೀಪಗುಜರಿ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನಪ್ಪಿ ಮೂವರು ಗಂಭೀರ ಗಾಯಗೊಂಡ ಘಟನೆ ಮಾಚ್೯ 21ರಂದು ನಡೆದಿದೆ. ಮೃತರನ್ನು ರಜಾಕ್ ಮಲ್ಲಾರ್ ಮತ್ತು ರಜಬ್ ಚಂದ್ರನಗರ ಎಂದು ಗುರುತಿಸಲಾಗಿದೆ. ಅಂಗಡಿಯಲ್ಲಿ ಗುಜರಿಗೆ ಬಂದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಇಬ್ಬರು ಮೃತಪಟ್ಟಿದ್ದಾರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಗುಜರಿ ಅಂಗಡಿಯಲ್ಲಿ ಇರಿಸಲಾದ ಹಳೆಯ ಪ್ರಿಜ್ ಸೇರಿದಂತೆ ಗುಜರಿ ಸಾಮಗ್ರಿಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಕಾಪು ಪೊಲೀಸರು ಧಾವಿಸಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಮಟ್ಟಾರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ - ದಶಮಾನೋತ್ಸವದ ಪ್ರಯುಕ್ತ ಬೃಹತ್ ಸ್ವಚ್ಛತಾ ಜನಜಾಗೃತಿ ಅಭಿಯಾನ
Posted On: 20 Mar 2022, 10:29 PM
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ದಶಮಾನೋತ್ಸವದ ಪ್ರಯುಕ್ತ ಬೃಹತ್ ಸ್ವಚ್ಛತಾ ಜನಜಾಗೃತಿ ಅಭಿಯಾನ ಕಾರ್ಯಕ್ರಮ ಜರಗಿತು. ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ದೇವದಾಸ್ ನಾಯಕ್, ಆಶಾ ಆಚಾರ್ಯ, ಮಮತಾ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ಅಧ್ಯಕ್ಷರಾದ ಜಯಪ್ರಕಾಶ್ ಪ್ರಭು, ಮಟ್ಟಾರು ಘಟಕ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷ ಜಗದೀಶ ಆಚಾರ್ಯ, ಸಂಚಾಲಕ ವಿಶ್ವನಾಥ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ನಾಯಕ್, ರಾಜೇಶ್ ನಾಯ್ಕ್, ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯಕರ್ತರು ಮತ್ತು ನಾಗರಿಕರು ಪಾಲ್ಗೊಂಡಿದ್ದರು. ಅಟ್ಟಿಂಜ ಸೇತುವೆಯಿಂದ ಮಟ್ಟಾರು ಯು.ಬಿ.ಎಂ.ಸಿ ಶಾಲೆಯ ವರೆಗೆ ಸ್ವಚ್ಛತೆ ಮಾಡಲಾಯಿತು.
ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಕಾಪು -ಪಡು ವತಿಯಿಂದ ಜರಗಲಿರುವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ
Posted On: 20 Mar 2022, 11:53 AM
ಕಾಪು : ಕಾಪು -ಪಡು ಇಲ್ಲಿನ ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಇದರ ಆಶ್ರಯದಲ್ಲಿ ಏಪ್ರಿಲ್ 16, ಶನಿವಾರ ಮಧ್ಯಾಹ್ನ 12: 30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಸಭಾ ಕಾರ್ಯಕ್ರಮ ಮತ್ತು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮಂಡಳಿ ಇವರಿಂದ ಸಾರ್ವಜನಿಕ ಹರಕೆಯ ಯಕ್ಷಗಾನ ಬಯಲಾಟ ಶ್ರೀ ಶನೀಶ್ವರ ಮಹಾತ್ಮೆ ಜರಗಲಿದೆ. ಈ ಪ್ರಯುಕ್ತ ಮಾಚ್೯ 20 ರಂದು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಅಧ್ಯಕ್ಷ ಅನಿಲ್ ಕುಮಾರ್ , ಹೊಸ ಮಾರಿಗುಡಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ದಾರದ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ ಶೆಟ್ಟಿ ಬಾಲಾಜಿ, ಪುರಸಭಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಮತ್ತು ಕ್ಲಬ್ ನ ಕೋಶಾಧಿಕಾರಿ ಅನಿಲ್ ಕುಮಾರ್ ಪಾಡಿಮನೆ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.
ರೋಟರಿ ಕಲ್ಯಾಣಪುರ : ಕರಾವಳಿಯಿಂದ ಕಾಶ್ಮೀರಕ್ಕೆ ಕಾಲ್ನಡಿಗೆಯಲ್ಲಿ ಕ್ರಮಿಸಿ ಹುಲಿವೇಷದ ಸಾಂಸ್ಕೃತಿಕ ಸೊಗಡನ್ನು ಪ್ರದರ್ಶಿಸಿದ ಹರ್ಷೆಂದ್ರ ಆಚಾರ್ಯಗೆ ಸನ್ಮಾನ
Posted On: 20 Mar 2022, 09:23 AM
ಉಡುಪಿ : ಉಡುಪಿ ಕರಾವಳಿಯಿಂದ ಭಾರತದ ತುತ್ತ ತುದಿಯ ಕಾಶ್ಮೀರದವರೆಗೆ ಒಂಟಿಯಾಗಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ, ಅಲ್ಲಿ ಹುಲಿವೇಷದ ಸಾಂಸ್ಕೃತಿಕ ಸೊಗಡನ್ನು ಪ್ರದರ್ಶನಗೈದು ಮೆಚ್ಚುಗೆ ಗಳಿಸಿದ ವಿಶೇಷ ವ್ಯಕ್ತಿತ್ವದ ಹರ್ಷೆಂದ್ರ ಆಚಾರ್ಯ ಎಮ್ ಜಡ್ಡು ಬ್ರಹ್ಮಾವರ ಇವರನ್ನು ರೋಟರಿ ಕ್ಲಬ್ ಕಲ್ಯಾಣಪುರದ ವತಿಯಿಂದ ಇತ್ತೀಚೆಗೆ ಗುರುತಿಸಿ ಅಭಿನಂದಿಸಲಾಯಿತು. ಉಡುಪಿಯಿಂದ ಬಹುತೇಕ ರಾಜ್ಯಗಳ ಕರಾವಳಿ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿ ಮಾರ್ಗಗಳ ಮುಖೇನ ದಿನಕ್ಕೆ ಸರಿ ಸುಮಾರು ಬೆಳಗಿನ 6 ಘಂ. ಯಿಂದ ಸಂಜೆ 6. ಘಂಟೆ ಯವರೆಗೆ ಕಾಲ್ನಡಿಗೆಯಲ್ಲಿ ಸಾಗುವ ಮೂಲಕ ಕಾಶ್ಮೀರವನ್ನು ಯಶಸ್ವಿಯಾಗಿ ತಲುಪಿ ಕಿರಿಯ ವಯಸ್ಸಿನ ಇವರ ಸಾಧನೆ ಅತ್ಯಂತ ಶ್ಲಾಘನೀಯ. ಸನ್ಮಾನ ಸ್ವೀಕರಿಸಿದ ಇವರು, ತನ್ನ ಮುಂದಿನ ದಿನಗಳಲ್ಲಿ ರಸ್ತೆ ಮಾರ್ಗವಾಗಿ ಸೈಕ್ಲಿಂಗ್ ಮೂಲಕ ಉಡುಪಿಯಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸುವ ಯೋಜನೆಗೆ, ಸಿದ್ದತೆ ಹಾಗೂ ಅಭ್ಯಾಸಕ್ಕೆ ಪ್ರೋತ್ಸಾಹ ಮಾಡುತ್ತಿರುವ ಕ್ಲಬ್ ನ ಸದಸ್ಯರು ಗಳಿಗೆ ಕ್ರತಜ್ಞತೆ ಸಲ್ಲಿಸಿದರು. ಅಧ್ಯಕ್ಷರಾದ ಶಂಭು ಶಂಕರ್, ಕಾರ್ಯದರ್ಶಿ ಪ್ರಕಾಶ್, ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜಾರಾಂ ಭಟ್, ವಲಯ ಸೇನಾನಿ ಬ್ರಯಾನ್ ಡಿಸೋಜ, ಮಾಜಿ ಸಹಾಯಕ ಗವರ್ನರ್ ಎಮ್ ಮಹೇಶ್ ಕುಮಾರ್ ನಿಯೋಜಿತ ಅಧ್ಯಕ್ಷೆ ಶಾರ್ಲೆಟ್ ಲೂವಿಸ್ ಮತ್ತಿತರ ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಲೆನ್ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು.
ಪ್ರೊಫೆಸರ್ ಮೇಟಿ ಮುದಿಯಪ್ಪ ವಿಧಿವಶ
Posted On: 18 Mar 2022, 05:23 PM
ಉಡುಪಿ : ಉತ್ತಮ ಸಾಹಿತಿ , ರಂಗನಟ, ಶಿಕ್ಷಕ , ಭಾಷಣಕಾರ, ಪರಿಸರ ಪ್ರೇಮಿ, ಸಂಘಟಕ ,ಚಲನ ಚಿತ್ರ ನಟ ಪೊ. ಮೇಟಿ ಮುದಿಯಪ್ಪ ಅಲ್ಪ ಕಾಲದ ಅಸೌಖ್ಯದಿಂದ ವಿಧಿವಶರಾಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕ ಕಳೆದ ೩೫ ವರುಷಗಳಿಂದ ಶಿಷ್ಯರ ಮೆಚ್ಚಿನ ಗುರುಗಳಾಗಿ ಸೇವೆ ಸಲ್ಲಿಸಿದ್ದು ಈಗಲೂ ಹೋದಕಡೆಗಳೆಲ್ಲ ಶಿಷ್ಯವೃಂದ ಇವರನ್ನು ಗೌರವಿಸುವುದು ಇವರ ಜನಪ್ರಿಯತೆಗೆ ಸಾಕ್ಷಿ. ತಮ್ಮ ಸರಳ ಗುಣ ದಿಂದ ಎಲ್ಲರೊಂದಿಗೆ ಬೆರೆಯುವ ಮೇಟಿ ಯವರು ಕಿರಿಯರೆಂಬ ಬೇಧ ಭಾವವಿಲ್ಲದೆ ಪ್ರತಿಭೆಗೆ ಮನ್ನಣೆ ಹಾಗು ಪ್ರೋತ್ಸಾಹ ಕೊಡುವ ಸ್ನೇಹ ಜೀವಿ. ಸದಾ ಹಸನ್ಮುಖಿ ತಮ್ಮ ವಿಶಿಷ್ಟ ಪೋಷಾಕಿನಿಂದ ನೆನಪಿನಲ್ಲಿ ಉಳಿಯುತ್ತಾರೆ. ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ಮಾನವೀಯ ಮೌಲ್ಯಗಳಿಗೆ ಪ್ರಾಧಾನ್ಯತೆ ಕೊಟ್ಟಿದ್ದು ಬಹಳಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯ ಲೋಕಕ್ಕೆ ತಮ್ಮದೆ ಆದ ಕೊಡುಗೆ ನೀಡಿದ ಮೇಟಿಯವರ ಹಲವಾರು ಕೃತಿಗಳು ಲೋಕಾರ್ಪಣೆ ಗೊಂಡಿದೆ . ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕೂಡ ಇವರು ಗಮನಾರ್ಹ ಕಾರ್ಯಕ್ರಮಗಳನ್ನು ಮಾಡಿದ್ದಾರೆ . ಉಧ್ಘೋಷ , ಕಡಲಾಳದ ಮುತ್ತು ನನ್ನೊಳಗಿನ ಕವಿತೆ ,ಮಾನವೀಯತೆಯ ಸುತ್ತ ಮುತ್ತ , ಕಡ್ಯಾವ ನೆನಪು ಇವರ ಕೃತಿಗಳಲ್ಲಿ ಕೆಲವು. ಹೈದರಾಬಾದ್ ಕರ್ನಾಟಕದಿಂದ ಬಂದು ರಂಗದ ಬಗ್ಗೆ ಇರುವ ಪ್ರಾವಿಣ್ಯತೆಯಿಂದ ಉಡುಪಿಯ ಪ್ರತಿಷ್ಠಿತ ರಂಗಭೂಮಿ (ರಿ ) ನಡೆಸುವ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ತೀರ್ಪುಗಾರರಲ್ಲಿ ಓರ್ವರಾಗಿ ಭಾಗವಹಿಸಿದ ನಂತರ ರಂಗಭೂಮಿ (ರಿ.) ಉಡುಪಿಯ ಖಾಯಂ ಸದಸ್ಯರಾದದ್ದು ವಿಶೇಷ. 1985 ರಿಂದ ರಂಗಭೂಮಿ (ರಿ.) ಉಡುಪಿಯ ಒಡನಾಡಿಯಾಗಿದ್ದು ಅಂದಿನಿಂದ ಇಂದಿನವರೆಗೂ ರಂಗಚಟುವಟಿಕೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಸ್ವತಃ ನಟನಾಗಿದ್ದ ಮೇಟಿಯವರು ರಂಗಭೂಮಿ(ರಿ.) ಉಡುಪಿಯ ನಾಟಕಗಳಾದ ನಾಗಮಂಡಲ,ಗಾಂಧಿ ನಗರ ,ಚಮ್ಮಾರನ ಚಾಲಾಕಿ ಹೆಂಡತಿ,ಹೇಮಂತ ,ಸೂರ್ಯ ಶಿಕಾರಿ, ಪರಿಹಾರ ಹೀಗೆ ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ ಹಾಗೂ ರಾಜ್ಯದ ಹೊರರಾಜ್ಯದಲ್ಲಿ ನಡೆದ ಪ್ರದರ್ಶನಗಳಲ್ಲಿ ರಂಗಭೂಮಿ (ರಿ.) ಉಡುಪಿಯನ್ನು ಪ್ರತಿನಿಧಿಸಿದ್ದಾರೆ .ಮೂರು ದಶಕಕ್ಕೂ ಹೆಚ್ಚು ಉಡುಪಿಯ ರಂಗಭೂಮಿಯ ಜೊತೆ ಜೊತೆಯಾಗಿ ನಡೆದಿದ್ದು ಹಲವಾರು ಸಲ ರಂಗಭೂಮಿ ಕಾರ್ಯಕ್ರಮಕ್ಕೆ ಸಂಚಾಲಕರಾಗಿ ಕಾರ್ಯಕ್ರಮವನ್ನು ಚೆಂದಗಾಣಿಸಿ ಕೊಟ್ಟಿದ್ದಾರೆ. ಸಾಮಾನ್ಯ ಸದಸ್ಯರಾಗಿ , ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ, ಜೊತೆ ಕಾರ್ಯದರ್ಶಿಗಳಾಗಿ ತನಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ರಂಗಭೂಮಿ ಸಾಗಿ ಬಂದ ದಾರಿಯಲ್ಲಿ ತಮ್ಮ ಹೆಜ್ಜೆ ಗುರುತನ್ನೂ ಮೂಡಿಸಿರುತ್ತಾರೆ.
ಲಸಿಕೆ ನೀಡುವುದರಿಂದ ಮಕ್ಕಳಿಗೆ ಕೋವಿಡ್ನಿಂದ ಸಂಪೂರ್ಣ ಸುರಕ್ಷೆ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.
Posted On: 17 Mar 2022, 03:15 PM
ಉಡುಪಿ : ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದ್ದು, ಇಂದಿನಿಂದ 12 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತವಾಗಿ ಕೋರ್ಬೆವ್ಯಾಕ್ಸ್ ಲಸಿಕೆ ನೀಡಲಾಗುತಿದ್ದು, ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು, ಇದನ್ನು ಮುಂಜಾಗ್ರತೆಯಾಗಿ ಎಲ್ಲಾ ರೀತಿಯಲ್ಲಿ ಪರೀಕ್ಷೆಗಳಿಗೆ ಒಳಪಡಿಸಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಖಾತ್ರಿಯಾಗಿರುವುದರಿಂದ, ಜಿಲ್ಲೆಯ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆ ಕೊಡಿಸುವ ಮೂಲಕ ಮಕ್ಕಳನ್ನು ಕೋವಿಡ್ನಿಂದ ಸಂಪೂರ್ಣ ಸುರಕ್ಷೆ ಒದಗಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಅಜ್ಜರಕಾಡುವಿನ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ನಡೆದ, 12 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 12 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಲಸಿಕೆ ಕೊಡಿಸಲು ಎಲ್ಲಾ ಪೋಷಕರು ಹಾಗೂ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು. ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಮಕ್ಕಳ ಪೋಷಕರ ಸಭೆಗಳನ್ನು ನಡೆಸಿ, ಅಗತ್ಯ ಮಾಹಿತಿ ನೀಡುವಂತೆ ಎಲ್ಲಾ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. 2008 ರಿಂದ 2010 ರ ಮಾರ್ಚ್ 15 ರೊಳಗೆ ಜನಿಸಿದ ಮಕ್ಕಳು ಲಸಿಕೆ ಪಡೆಯಲು ಅರ್ಹರಿದ್ದು, ಮೊದಲ ಡೋಸ್ ಪಡೆದ 28 ದಿನಗಳ ನಂತರ 2 ನೇ ಡೋಸ್ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆ ನೀಡುವಲ್ಲಿ 100% ಸಾಧನೆ ಆಗಿದ್ದು, 12 ರಿಂದ 14 ವರ್ಷದವರೆಗಿನ ಮಕ್ಕಳ ಲಸಿಕೆ ನೀಡುವಲ್ಲಿ ಸಹ 100% ಸಾಧನೆ ಮಾಡಲು ಹಾಗೂ ಉಡುಪಿ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯಾಗಿಸಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭೆ ಸದಸ್ಯ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಎಂ.ಜಿ.ರಾಮ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಆಯುಷ್ ಆಸ್ಪತ್ರೆಯ ವೈದ್ಯ ಡಾ.ದಿನಕರ ಡೋಂಗ್ರೆ, ಜಿಲ್ಲಾಸ್ಪತ್ರೆಯ ವೈದ್ಯ ಡಾ. ಚಂದ್ರಶೇಖರ ಅಡಿಗ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಸ್ವಾಗತಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಯಾಕೂಬ್ ಖಾದರ್ ಗುಲ್ವಾಡಿ ಅವರ ನಿರ್ದೇಶನದ ಗೋ ಕೊರೋನಾ ವೀಡಿಯೋ ಗೀತೆಯನ್ನು ಬಿಡುಗಡೆಗೊಳಿಸಲಾಯಿತು.
ವಿದ್ಯಾರ್ಥಿ ಆತ್ಮಹತ್ಯೆ : ಡೊನೇಷನ್ ಪಡೆದು ಉತ್ತಮ ಶಿಕ್ಷಣ ನೀಡದ ಕಾಲೇಜು ಮುಖ್ಯಸ್ಥ ಮತ್ತು ಪರೀಕ್ಷೆಗೆ ಕುಳಿತುಕೊಳ್ಳಲು ಬಿಡದ ಪ್ರಾಧ್ಯಾಪಕನ ವಿರುದ್ಧ ದೂರು ದಾಖಲು
Posted On: 16 Mar 2022, 11:04 PM
ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಹೊಟೆಲ್ ಮ್ಯಾನೇಜ್ಮೆಂಟ್ ಕಾಲೇಜು ಡೊನೇಷನ್ ಪಡೆದು ಉತ್ತಮ ಶಿಕ್ಷಣ ನೀಡದಿರುವ ಮತ್ತು ಅಲ್ಲಿನ ಪ್ರಾಧ್ಯಾಪಕರೋರ್ವರ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೈದ ಪ್ರಕರಣ ಉರ್ವ ಠಾಣೆಯಲ್ಲಿ ದಾಖಲಾಗಿದೆ. ಬೆಂಗಳೂರು ನಗರದ ಕುಮಾರಸ್ವಾಮಿ ಬಡಾವಣೆಯ ನಿವಾಸಿಯಾದ ಭರತ್ ಭಾಸ್ಕರ್ (20) 2020-21ನೇ ಸಾಲಿನಲ್ಲಿ ಹೆಚ್ಚಿನ ಡೊನೇಷನ್ ನೀಡಿ ಮಂಗಳೂರು ನಗರದ ಹೊಟೆಲ್ ಮ್ಯಾನೇಜ್ಮೆಂಟ್ ಕಾಲೇಜೊಂದಕ್ಕೆ ಸೇರುತ್ತಾನೆ. ಆದರೆ ಅಲ್ಲಿಯ ಪ್ರಾಧ್ಯಾಪಕರು ಸರಿಯಾದ ರೀತಿಯಲ್ಲಿ ಶಿಕ್ಷಣ ನೀಡದೆ, ಅಲ್ಲಿನ ಪ್ರಾಧ್ಯಾಪಕರೋರ್ವರು ಪ್ರಾಜೆಕ್ಟ್ ವಕ್೯ ಸರಿಯಿಲ್ಲ ಎಂಬ ನೆಪದಲ್ಲಿ ಪರೀಕ್ಷೆಗೆ ಕುಳಿತುಕೊಳ್ಳಲಾಗದು ಎಂದು ಮನೆಗೆ ಕಳುಹಿಸಿರುತ್ತಾರೆ. ಮನನೊಂದ ಆತ ಬೆಂಗಳೂರಿನಲ್ಲಿರುವ ತಾಯಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸದ್ದನ್ನು ಕಂಡು ವಾಟ್ಸಾಪ್ ಸಂದೇಶದ ಮೂಲಕ ಈ ಕಾಲೇಜು ಸರಿಯಿಲ್ಲ ಹಾಗೂ ಕಾಲೇಜಿನಲ್ಲಿ ಪ್ರಾಧ್ಯಾಪಕರಿಲ್ಲ ಆದ್ದರಿಂದ ಈ ಲೋಕ ತ್ಯಜಿಸುತ್ತಿದ್ದೇನೆ ಎಂದಿದ್ದಾನೆ. ನಂತರ ಆತನ ಕಾಲೇಜಿನ ಪ್ರಾಧ್ಯಾಪಕರೋರ್ವರನ್ನು ಆತನ ಹೆತ್ತವರು ಸಂಪರ್ಕಿಸಿದಾಗ ಆತ ತಾನಿರುವ ರೂಮಿನಲ್ಲಿ ಆತ್ಮಹತ್ಯೆಗೈದ ಬಗ್ಗೆ ತಿಳಿದಿರುತ್ತದೆ. ಈ ಬಗ್ಗೆ ಹೆತ್ತವರು ಡೊನೆಷನ್ ಪಡೆದು ಉತ್ತಮ ಶಿಕ್ಷಣ ನೀಡದ ಕಾಲೇಜಿನ ಮುಖ್ಯಸ್ಥ ಮತ್ತು ಅವಹೇಳನ ಮಾಡುತ್ತಿದ್ದ ಪ್ರಾಧ್ಯಾಪಕನ ಮೇಲೆ ಉರ್ವ ಠಾಣೆಯಲ್ಲಿ ಮಾಚ್೯ 16ರಂದು ದೂರು ದಾಖಲಿಸಿದ್ದಾರೆ.
