Updated News From Kaup

ಸಹಕಾರಿ ರಂಗವು ಜನರ ಮತ್ತು ಸಂಸ್ಥೆಯ ನಂಬಿಕೆಯ ಮೇಲೆ ನಿಂತಿದೆ : ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

Posted On: 17-11-2021 12:01PM

ಪಡುಬಿದ್ರಿ : ಸಹಕಾರಿ ರಂಗವು ಜನರ ಮತ್ತು ಸಂಸ್ಥೆಯ ನಂಬಿಕೆಯ ಮೇಲೆ ನಿಂತಿದೆ. ಹಣಕಾಸು ಸಂಸ್ಥೆಯು ನಿರ್ಧಿಷ್ಟ ಜವಾಬ್ದಾರಿಗಳಿಂದ ಜನರಿಗೆ ನೆರವಾಗುವ ಮೂಲಕ ಧರ್ಮ ಕರ್ಮ ಸಿದ್ದಾಂತದ ಮೇಲೆ ನಿಂತಿದೆ ಎಂದು ಧರ್ಮಸ್ಥಳದ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಅವರು ಪಡುಬಿದ್ರಿ ಕಣ್ಣಂಗಾರ್ ಬೈಪಾಸ್‌ನಲ್ಲಿ ಕರ್ಕೇರ ಟವರ್ ನಲ್ಲಿ ಇರುವ ಸ್ವರ್ಣ ಸೌಹಾರ್ದ ಕ್ರೆಡಿಟ್ ಕೋ ಒಪರೇಟಿವ್ ಲಿಮಿಟೆಡ್ ಇದರ ದಶಮ ಸಂಭ್ರಮದ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಮ್ಮಾನ : ಬ್ರಹ್ಮ ಬೈದರ್ಕಳ ಗರಡಿ ಪಾತ್ರಿಗಳಾದ ಕೋಟಿ ಪೂಜಾರಿ ಸೂಡ, ಗುರುರಾಜ ಪೂಜಾರಿ, ಗರಡಿ ಪೂಜಾ ಅರ್ಚಕರಾದ ಗಿರಿಧರ ಪೂಜಾರಿ, ಸದಾನಂದ ನಾಯ್ಗ, ಕೃಷಿ ಕ್ಷೇತ್ರದ ಪೂವಪ್ಪ ಪೂಜಾರಿ, ಸಾಮಾಜಿಕ ಕ್ಷೇತ್ರದ ಗಂಗಾಧರ ಪೂಜಾರಿ, ರಾಜು, ಬಿಎಸ್‌ಎನ್ ಎಲ್ ಸಿಬಂದಿ ಪ್ರೇಮಾನಂದ್, ನಿವೃತ್ತ ಸಿಇಒಗಳಾದ ಎಚ್.ವಿ. ಶೆಣೈ, ಶೀಶ ತಂತ್ರಿ, 36 ಮಂದಿ ಆಶಾ ಕಾರ್ಯಕರ್ತೆಯರು, ವಿವಿಧ ಸಾಧಕರು, ಬ್ಯಾಂಕ್‌ನ ನಿರ್ದೇಶಕ ಮಂಡಳಿ, ಪ್ರಬಂಧಕರು, ಸಿಬಂದಿ ವರ್ಗದವರನ್ನು ಸಮ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಹೆಜಮಾಡಿ ಕಣ್ಣಂಗಾರು, ಜುಮ್ಮಾ ಮಸೀದಿಯ ಆಡಳಿತಾಧಿಕಾರಿ ಕೆ.ಎಮ್.ಕೆ ಮಂಜನಾಡಿ, ಎರ್ಮಾಳ್ ಸೆಕ್ರೇಡ್ ಹಾರ್ಟ್ ಚಚ್೯ನ ಧರ್ಮಗುರುಗಳಾದ ರೆ| ಫಾ| ಜೊಸ್ವಿ ಫೆರ್ನಾಂಡೀಸ್, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮ ಬೆಂಗಳೂರಿನ ನಿರ್ದೇಶಕರಾದ ಮಂಜುನಾಥ ಎಸ್.ಕೆ. ಸಂಸ್ಥೆಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸ್ವರ್ಣ ಸೌಹಾರ್ದ ಕ್ರೆಡಿಟ್ ಕೋ ಒಪರೇಟಿವ್ ಲಿಮಿಟೆಡ್ ಇದರ ನಿರ್ದೇಶಕರು, ಸಿಬಂದಿ ವರ್ಗ, ಸಂಸ್ಥೆಯ ಗ್ರಾಹಕರು ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ವೈ. ಸುಧೀರ್ ಕುಮಾರ್‌ ಸ್ವಾಗತಿಸಿ, ಸ್ವರ್ಣ ಸೌಹಾರ್ದ ಕ್ರೆಡಿಟ್ ಕೋ-ಒಪರೇಟಿವ್ ಸೌಹಾರ್ದ ಲಿಮಿಟೆಡ್‌ನ ಅಧ್ಯಕ್ಷ ಶೇಖರ್‌ ಕೆ. ಕರ್ಕೇರ ಪ್ರಸ್ತಾವನೆಗೈದು, ಉಪನ್ಯಾಸಕ ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು ಕಾರ್ಯಕ್ರಮ ನಿರೂಪಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ಅಮೀನ್ ವಂದಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರಿಂದ ವಿವಿದೆಡೆ ಪರಿಶೀಲನೆ

Posted On: 16-11-2021 10:40PM

ಉಡುಪಿ : ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರು ಇಂದು ಜಿಲ್ಲೆಯ ಕೋವಿಡ್ ಲಸಿಕಾ ಕೇಂದ್ರಗಳು, ಶಾಲೆಗಳು ಮತ್ತು ಮಹಿಳಾ ರಾಜ್ಯ ನಿಲಯ, ಸಖಿ ಒನ್ ಸ್ಟಾಪ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲಿಸಿದರು. ಉಡುಪಿ ಕೆ.ಎಂ. ಮಾರ್ಗದಲ್ಲಿನ ಹಳೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ನ್ಯಾಯಮೂರ್ತಿಗಳು ,ಇದುವರೆಗೆ ಈ ಕೇಂದ್ರದಲ್ಲಿ ಪ್ರಥಮ ಡೋಸ್ ಲಸಿಕೆ ಪಡೆದಿರುವ ಸಂಖ್ಯೆ ಮತ್ತು ಎರಡನೇ ಡೋಸ್ ಪಡೆಯಲು ಬಾಕಿ ಇರುವವರ ಸಂಖ್ಯೆ ಕುರಿತು ಮಾಹಿತಿ ಪಡೆದು, 2 ನೇ ಡೋಸ್ ಪಡೆಯಲು ಬಾಕಿ ಇರುವ ಎಲ್ಲರಿಗೂ ತಪ್ಪದೇ ಲಸಿಕೆ ನೀಡಿ,ಅವರಿಗೆ ಎರಡನೇ ಡೋಸ್ ಪಡೆಯುವ ಬಗ್ಗೆ ಮಾಹಿತಿ ನೀಡಿ, ಕೇಂದ್ರಕ್ಕೆ ಬಂದು ಲಸಿಕೆ ಪಡೆಯಲು ಕ್ರಮ ಕೈಗೊಳ್ಳಿ , ಅರ್ಹ ಎಲ್ಲಾ ನಾಗರೀಕರು 2 ಡೋಸ್ ಲಸಿಕೆ ಪಡೆಯುವುದರಿಂದ ಕೋವಿಡ್ ನಿಂದ ಸಂಪೂರ್ಣ ಸುರಕ್ಷೆ ಪಡೆಯಲು ಸಾಧ್ಯವಾಗಲಿದೆ ಎಂದರು.

ಉಡುಪಿಯ ಬೋರ್ಡ್ ಸ್ಕೂಲ್ ಗೆ ಭೇಟಿ ನೀಡಿದ ನ್ಯಾಯಮೂರ್ತಿಗಳು ತಾವು ಇದೇ ಶಾಲೆಯಲ್ಲಿ ಕಲಿತ ದಿನಗಳನ್ನು,ತಮ್ಮ ಸ್ನೇಹಿತರನ್ನು ಮತ್ತು ಅಧ್ಯಾಪಕರನ್ನು ನೆನಪು ಮಾಡಿಕೊಂಡರು ,ಈ ಶಾಲೆಯಲ್ಲಿ ಕಲಿತ ಹಲವು ಮಂದಿ ಉನ್ನತ ಹುದ್ದೆಗೇರಿದ್ದು, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು. ನಿಟ್ಟೂರಿನ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡಿ,ಅಲ್ಲಿನ ಸ್ವಚ್ಚತೆ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು, ಇಲ್ಲಿನ ಮಹಿಳೆಯರು ಸಿದ್ದಪಡಿಸುವ ಉತ್ನನ್ನಗಳಿಗೆ ಮಾರುಕಟ್ಟೆಯಲ್ಲಿನ ದರ ನೀಡುವ ಬಗ್ಗೆ ಸಂಬಂದಪಟ್ಟವರಿಗೆ ಸೂಚನೆ ನೀಡುವಂತೆ ತಿಳಿಸಿದ ಅವರು, ಮಹಿಳೆಯರಿಗೆ ಎಂಬ್ರಾಯಡರಿ ಸೇರಿದಂತೆ ಮತ್ತಿತರ ಕೌಶಲಯುಕ್ತ ತರಬೇತಿ ನೀಡಿ ,ಅವರು ಹೆಚ್ಚಿನ ಆರ್ಥಿಕ ಲಾಭ ಪಡೆಯುವಂತೆ ನೋಡಿಕೊಳ್ಳಿ ಎಂದರು . ಸಖಿ ಒನ್ ಸ್ಟಾಪ್ ಸೆಂಟರ್ ಪರಿಶೀಲನೆ ನಡೆಸಿದರು.

ಹನುಮಂತನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಡಿಹೆಚ್‌ಓ ಡಾ.ನಾಗಭೂಷಣ ಉಡುಪ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ, ಡಿಡಿಪಿಐ ನಾಗೂರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬಜಗೋಳಿ ಸರಕಾರಿ ಕಾಲೇಜಿನ ಶೌಚಾಲಯ ಸಮಸ್ಯೆ : ಸಚಿವ ವಿ.ಸುನಿಲ್ ಕುಮಾರ್ ರಿಂದ 5ಲಕ್ಷ ರೂಪಾಯಿಯ ಕಾಮಗಾರಿ ಆರಂಭಿಸುವ ಭರವಸೆ

Posted On: 16-11-2021 10:27PM

ಕಾರ್ಕಳ : ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ಬಾಲಕರ ಶೌಚಾಲಯದ ಸಮಸ್ಯೆಯ ಕುರಿತು ಅ.ಭಾ.ವಿ.ಪ ಕಾರ್ಕಳ ತಾಲೂಕು ತಂಡ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯಸರಕಾರದ ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ವಿ ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಶಾಸಕರು ಆದಷ್ಟು ಬೇಗ ಶೌಚಾಲಯ ನಿರ್ಮಿಸಿ ಕೊಡಲು ₹5 ಲಕ್ಷ ಶೀಘ್ರವಾಗಿ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸುವ ಭರವಸೆಯನ್ನು ನೀಡಿದರು.

ಈ ಸಂದರ್ಭ ರಾಜ್ಯಕಾರ್ಯಕಾರಿಣಿ ಸದಸ್ಯ ಯುಕೇಶ್ ಉಜಿರೆ, ತಾಲೂಕು ಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಕಾಂತಿಶ್ರೀ, ನಗರ ಹೋರಾಟ ಪ್ರಮುಖ್ ಮನೋಜ್, ನಗರ ವಿದ್ಯಾರ್ಥಿನಿ ಪ್ರಮುಖ್ ಮುಕ್ತಿವರ್ಧನ, ಸಾಮಾಜಿಕ ಜಾಲತಾಣ ಸಹಪ್ರಮುಖ್ ಆಕಾಶ್, ಹಾಗೂ ಪ್ರಮುಖ ಕಾರ್ಯಕರ್ತರಾದ ಅನ್ವಿತ ಶರ್ಮ,ರಂಜನ್, ಕೀರ್ತಿಕ್,ಕಿರಣ್, ಮಂಜುಪ್ರಸಾದ್, ಅಕ್ಷಯ್ ಉಪಸ್ಥಿತರಿದ್ದರು.

ಪತ್ರಿಕೋದ್ಯಮಕ್ಕೆ ಆಲ್‌ರೌಂಡರ್ ಅಗತ್ಯ : ಕೃಷ್ಣ ಭಟ್ ಅಳದಂಗಡಿ

Posted On: 16-11-2021 10:15PM

ಮಂಗಳೂರು: ಪತ್ರಕರ್ತರಾಗಿ ಕಚೇರಿಯಲ್ಲಿ ಕೆಲಸ ಮಾಡುವ ಸಂದರ್ಭ ಸಮಯ, ಕೆಲಸದ ಒತ್ತಡವನ್ನು ನೋಡದೆ ಕಾರ್ಯ ನಿರ್ವಹಿಸಬೇಕಾಗಿದೆ. ಈ ಕಾರಣದಿಂದ 20 -20 ಕ್ರಿಕೆಟ್ ತಂಡದಂತೆ ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಈಗ ಆಲ್‌ರೌಂಡರ್‌ಗಳ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ, ವಿಜಯ ಕರ್ನಾಟಕ ಪತ್ರಿಕೆಯ ಸಹಾಯಕ ಸಂಪಾದಕ ಕೃಷ್ಣ ಭಟ್ ಅಳದಂಗಡಿ ಹೇಳಿದರು. ನಗರದ ಪ್ರೆಸ್‌ಕ್ಲಬ್‌ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಮಾಧ್ಯಮಗಳ ಮುಂದಿರುವ ಸವಾಲು’ ಎಂಬ ವಿಷಯದಲ್ಲಿ ಅವರು ಮಾತನಾಡಿದರು.

ಸುದ್ದಿಮನೆಯಲ್ಲಿ ಎಲ್ಲವನ್ನು ನಿಭಾಯಿಸಬಲ್ಲ ಪತ್ರಕರ್ತರ ಅಗತ್ಯ ಇದೆ. ಪತ್ರಕರ್ತನಾದವನಿಗೆ ಬರವಣಿಗೆಯ ಜತೆಗೆ ವಾಕ್ಚಾರ್ತುಯ್ಯ ಅಗತ್ಯವಾಗಿದೆ. ನಾವು ಬರೆದಿದ್ದನ್ನು ತಿಳಿದುಕೊಂಡಿದ್ದನ್ನು ಇನ್ನೊಬ್ಬರ ಮುಂದೆ ಪ್ರಸ್ತುಪಡಿಸುವ ಕೌಶಲ್ಯವನ್ನು ಕೂಡಾ ಹೊಂದಿರುವುದು ಮುಖ್ಯ. ಟಿವಿ ಮಾಧ್ಯಮದಲ್ಲಿ ಈ ಕಲೆಗಾರಿಕೆ ಪ್ರಮುಖ ಪಾತ್ರ ವಹಿಸುವ ಜತೆಗೆ ಪತ್ರಿಕಾ ಮಾಧ್ಯಮದಲ್ಲೂ ಇದು ಇಂದಿನ ಅಗತ್ಯ ಎಂದು ಅವರು ಹೇಳಿದರು. ಸಾಮಾಜಿಕ ಸ್ವಾಸ್ಥ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಇಂಡಿಯನ್ ಅಸೋಸಿಯೇಶ್ ಆಫ್ ಪೆಥಾಲಜಿಸ್ಟ್‌ನ ಕರ್ನಾಟಕ ಸ್ಟೇಟ್ ಚಾಪ್ಟರ್‌ನ ನೂತನ ಅಧ್ಯಕ್ಷ ಡಾ.ಎನ್. ಕಿಶೋರ್ ಆಳ್ವ ಮಿತ್ತಳಿಕೆ ಹೇಳಿದರು. ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಎಷ್ಟು ಮಹತ್ತರವೋ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರವೂ ಹಿರಿದು ಎಂದು ಅಭಿಪ್ರಾಯಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಚೀನಾದಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಾಗ ಈ ಬಗ್ಗೆ ಅಲ್ಲಿನ ಮಾಧ್ಯಮ ಎಚ್ಚರಿಕೆ ವಹಿಸಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲವಾದ ಕಾರಣ ಅದು ಜಗತ್ತಿಗೆ ಪಸರಿಸುವಂತಾಯಿತು. ಆದರೆ ಭಾರತದಲ್ಲಿ ಮಾಧ್ಯಮವು ಸಕಾಲಿಕ ಎಚ್ಚರಿಕೆ, ಜಾಗೃತಿ ಮೂಡಿಸಿ ಜನರಲ್ಲಿ ರೋಗದ ಬಗ್ಗೆ ಮಾಹಿತಿಯನ್ನು ನೀಡಿದ ಕಾರಣ ಹೆಚ್ಚು ಅಪಾಯವಿಲ್ಲದೆ ಜನರಲ್ಲಿ ರೋಗ ಎದುರಿಸುವ ಕ್ಷಮತೆಯನ್ನು ಹೆಚ್ಚಿಸಿ ನಿಯಂತ್ರಿಸಲು ಸಾಧ್ಯವಾಯಿತು ಎಂದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್, ಪತ್ರಕರ್ತರಲ್ಲಿ ಸಾಮಾಜಿಕ ಬದ್ಧತೆ, ಕಳಕಳಿಯ ನಿಲುವು ಸ್ಪಷ್ಟವಾಗಿದ್ದಾಗ ಯಾವುದೇ ಒತ್ತಡಗಳಿಗೆ ಒಳಗಾಗದೆ ತಮ್ಮ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ವೇದಿಕೆಯಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ., ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಆರ್., ಮಾಧ್ಯಮ ಅಕಾಡಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.

ಮಿಲಾಗ್ರಿಸ್ ಕನ್ನಡ ಮಾಧ್ಯಮ ಶಾಲೆ ಕಲ್ಯಾಣಪುರ : ಇಂಟರಾಕ್ಟ್ ಕ್ಲಬ್ ಪದಪ್ರದಾನ

Posted On: 16-11-2021 10:05PM

ಉಡುಪಿ‌, ನ.16 : ಇಂಟರಾಕ್ಟ್ ಕ್ಲಬ್ ಮಿಲಾಗ್ರಿಸ್ ಕನ್ನಡ ಮಾಧ್ಯಮ ಹೈಸ್ಕೂಲ್ ಕಲ್ಯಾಣಪುರ ಇದರ 3ನೇ ವರ್ಷದ ಪದಪ್ರದಾನ ಸಮಾರಂಭ ಶಾಲಾ ಸಭಾಂಗಣದಲ್ಲಿ ನೆರವೇರಿತು. ರೋಟರಿ ಕ್ಲಬ್ ಕಲ್ಯಾಣಪುರದ ಅಧ್ಯಕ್ಷ ಶಂಭು ಶಂಕರ್ ರವರು ಇಂಟರಾಕ್ಟ್ ನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿ ಸಂದರ್ಭೋಚಿತವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೋಟರಿ ವಲಯದ ಇಂಟರಾಕ್ಟ್ ಸಂಯೋಜಕರಾದ ರಾಜರಾಮ ಐತಾಳ್ ರವರು ಸೂಕ್ತ ಮಾರ್ಗದರ್ಶನ ಹಾಗೂ ಮಾಹಿತಿಗಳನ್ನು ನೀಡಿ, ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ವಲಯ ಸೇನಾನಿ ಬ್ರಯಾನ್ ಡಿಸೋಜರವರು ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಪ್ರಾಮುಖ್ಯತೆ ಕುರಿತು ಮಾತನಾಡಿ ಶುಭಾಶಯಗೈದರು.

ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ಇಂಟರಾಕ್ಟ್ ಕ್ಲಬ್ ನಲ್ಲಿ ತೊಡಗಿಕೊಳ್ಳುವ ಮುಖೇನ ನಾಯಕತ್ವ ಮತ್ತು ಸೇವಾ ಮನೋಭಾವವನ್ನು ರೂಢಿಸಿಕೊಂಡು ಉತ್ತಮ ವಿದ್ಯಾರ್ಥಿ ಹಾಗೂ ಮುಂದೆ ಉತ್ತಮ ಪ್ರಜೆಗಳಾಗಿ ಬಾಳಲು ಸಹಕಾರಿಯಾಗುತ್ತದೆ ಎಂದರು.

ರೋಟರಿ ಕಾರ್ಯದರ್ಶಿ ಪ್ರಕಾಶ್ ಕುಮಾರ್, ರಾಮ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಟೀಚರ್ ಕೋರ್ಡಿನೇಟರ್ ಸಿಪ್ರಿಯನ್ ರವರು ಕಾರ್ಯಕ್ರಮ ಸಂಯೋಜಿಸಿ, ವರದಿ ವಾಚಿಸಿದರು.

ಎಬಿವಿಪಿ ಬಜಗೋಳಿ ಕಾಲೇಜು ಘಟಕದಿಂದ ಕಾಲೇಜಿನ ಸಮಸ್ಯೆಗಳ ಪರಿಹಾರಕ್ಕಾಗಿ ತಹಶಿಲ್ದಾರರಿಗೆ ಮನವಿ

Posted On: 16-11-2021 05:09PM

ಕಾರ್ಕಳ : ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ಬಾಲಕರ ಶೌಚಾಲಯದ ಸಮಸ್ಯೆಯು ಇದೇ ಶೈಕ್ಷಣಿಕ ವರ್ಷದಲ್ಲಿ ಪರಿಹಾರ ಕಾಣಬೇಕು ಮತ್ತು ಇತರೆ ಶೈಕ್ಷಣಿಕ ಸಮಸ್ಯೆಗಳಿಗೂ ಆದಷ್ಟು ಬೇಗ ಪರಿಹಾರ ದೊರಕಿಸಿಕೊಡಬೇಕೆಂದು ಕಾರ್ಕಳದ ತಹಶಿಲ್ದಾರರಾದ ಪ್ರಕಾಶ್ ಎಸ್ ಮರಬಳ್ಳಿ ಇವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕಿನ ಬಜಗೋಳಿ ಕಾಲೇಜು ಘಟಕದಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ರಾಜ್ಯಕಾರ್ಯಕಾರಿಣಿ ಸದಸ್ಯ ಯುಕೇಶ್ ಉಜಿರೆ, ತಾಲೂಕು ಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಕಾಂತಿಶ್ರೀ, ನಗರ ಹೋರಾಟ ಪ್ರಮುಖ್ ಮನೋಜ್, ನಗರ ವಿದ್ಯಾರ್ಥಿನಿ ಪ್ರಮುಖ್ ಮುಕ್ತಿವರ್ಧನ, ಸಾಮಾಜಿಕ ಜಾಲತಾಣ ಸಹಪ್ರಮುಖ್ ಆಕಾಶ್, ಹಾಗೂ ಪ್ರಮುಖ ಕಾರ್ಯಕರ್ತರಾದ ಅನ್ವಿತ ಶರ್ಮ,ರಂಜನ್, ಕೀರ್ತಿಕ್, ಕಿರಣ್, ಮಂಜುಪ್ರಸಾದ್, ಅಕ್ಷಯ್ ಉಪಸ್ಥಿತರಿದ್ದರು.

ಧಾರ್ಮಿಕ ಕೇಂದ್ರದ ಗುರುಗಳ ಮೇಲೆ ಹಲ್ಲೆಗೆ ಪ್ರಯತ್ನ, ಧಾರ್ಮಿಕ ಕೇಂದ್ರದ ಹಾನಿಗೆ ಯತ್ನ, ಧಾರ್ಮಿಕ ಭಾವನೆಗೆ ಧಕ್ಕೆ ತಂದ ಮೂವರ ವಿರುದ್ಧ ಪ್ರಕರಣ ದಾಖಲು

Posted On: 15-11-2021 10:39PM

ಮಂಗಳೂರು : ಕೊಣಾಜೆ ಠಾಣಾ ವ್ಯಾಪ್ತಿಯ ಕುರ್ನಾಡು ಗ್ರಾಮದ ಧಾರ್ಮಿಕ ಕೇಂದ್ರ ಗುರುಗಳ ಮೇಲೆ ಹಲ್ಲೆಗೆ ಯತ್ನ, ಅವ್ಯಾಚ್ಯ ಶಬ್ದಗಳಿಂದ ಕೋಮು ಧರ್ಮನಿಂದನೆ ಮಾಡಿದ ಮೂವರ ಮೇಲೆ ದೂರು ದಾಖಲಾಗಿದೆ.

ಶರಣ್, ವಿಘ್ನೇಶ್, ಹರ್ಷಿತ್ ಇವರು ಗುರುಗಳ ಮೇಲೆ ಹಲ್ಲೆಗೆ ಪ್ರಯತ್ನ, ಧಾರ್ಮಿಕ ಕೇಂದ್ರದ ಹಾನಿಗೆ ಯತ್ನ ಜೊತೆಗೆ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶ ಇವರದ್ದಾಗಿದೆ ಎಂದು ಅಬ್ದುಲ್ ಸಮೀರ್ ಎಂಬುವವರು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಕೊಣಾಜೆ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದುಬೈನಲ್ಲಿ ಮಿಂಚುತ್ತಿರುವ ಸಮಾಜ ಸೇವಕ ತುಳುನಾಡಿನ ಕಿಶೋರ್ ಶೆಟ್ಟಿ

Posted On: 14-11-2021 05:33PM

ಕರ್ನಾಟಕ ದಿಂದ ಅದರಲ್ಲೂ ತುಳು ನಾಡಿನ ಅನೇಕರು ಉದ್ಯೋಗ ಶಿಕ್ಷಣ ವ್ಯಾಪಾರ ಹೀಗೆ ಅನೇಕ ಉದ್ದೇಶಗಳಿಗಾಗಿ ಗಲ್ಫ್ ರಾಷ್ಟ್ರಗಳೊಂದಿಗೆ ಸಂಬಂಧ ವನ್ನು ಹೂಡಿದ್ದಾರೆ ಹೀಗೆ ಅನೇಕ ರು ತಮ್ಮ ದುಡಿಮೆಯ ಮೂಲಕ ಯಶಸ್ಸನ್ನು ಸಂಪಾದಿಸಿ ತಮ್ಮ ಊರಿನಲ್ಲಿ ಅವಶ್ಯಕತೆ ಇರುವವರಿಗೆ ಸಹಾಯವನ್ನು ಮಾಡುತ್ತಿದ್ದಾರೆ.ಹೀಗೆ ತೆರೆ ಮರೆಯಲ್ಲಿ ನಿಂತು ತನ್ನಿಂದ ಆದಷ್ಟು ಸಮಾಜ ಸೇವೆಯನ್ನು ಮಾಡುತ್ತಿರುವವರಲ್ಲಿ ಕಾರ್ಕಳ ಕುಂಟಾಡಿ ಮೂಲದ ಇದೀಗ ದುಬೈನಲ್ಲಿ ಕಳೆದ ಹತ್ತು ವರ್ಷದಿಂದ ವಾಸವಾಗಿರುವ ಕಿಶೋರ್ ಶಿವರಾಮ್ ಶೆಟ್ಟಿ ಕೂಡ ಒಬ್ಬರು.

ಉಡುಪಿಯ ಕಾರ್ಕಳ ಮೂಲದ ಮನೆತನದವರಾದರೂ ಹುಟ್ಟಿದ್ದು, ಬೆಳೆದಿದ್ದು ವಿದ್ಯಾಭ್ಯಾಸ ಎಲ್ಲವೂ ಮುಂಬೈನಲ್ಲಿ. ಮುಂಬೈನ ಡೊಂಬಿವಿಲಿಯಲ್ಲಿ ವಾಸವಾಗಿದ್ದವರು ಜೀವನದಲ್ಲಿ ಏನಾದರೂ ಮಾಡಬೇಕೆಂಬ ಛಲ ಉಳ್ಳ ವ್ಯಕ್ತಿ. ಹೀಗಿರುವಾಗ ಅವರಿಗೆ ದುಬೈನ ಖ್ಯಾತ ಸಂಸ್ಥೆ ಡಾ||ಬು ಅಬ್ದುಲ್ಲಾ ಗ್ರೂಪ್ನಲ್ಲಿ ಉದ್ಯೋಗವಕಾಶ ಹುಡುಕಿ ಬಂತು ಹೀಗೆ ದುಬೈಗೆ ಹೋದ ಕಿಶೋರ್ ಸದಾ ಸಮಾಜ ಸೇವೆಯ ಬಗ್ಗೆ ಹೆಚ್ಚು ಯೋಚಿಸಲಾರಂಭಿಸಿದರು.

ತನ್ನ ಸಂಪಾದನೆಯಲ್ಲಿ ಅನೇಕ ಶಿಕ್ಷಣ ಉದ್ಯೋಗ ಚಿಕಿತ್ಸೆಗಾಗಿ ಸಹಾಯ ಮಾಡಲಾರಂಭಿಸಿದರು. ಕೋವಿಡ್ ಸಂದರ್ಭದಲ್ಲಿ ಅನೇಕರಿಗೆ ಇವರು ನೆರವಾಗುವ ಮೂಲಕ ಅನೇಕ ಕುಟುಂಬದ ಕಣ್ಣೀರನ್ನು ಒರೆಸುವ ಪ್ರಯತ್ನವನ್ನು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಇವರ ಸೇವೆಗೆ ದುಬೈನಲ್ಲಿ ಗೌರವ ಕೂಡ ದೊರಕಿದೆ.

ಇವರು ಸ್ವತಃ ಒಬ್ಬ ಕ್ರೀಡಾಪಟು ಆಗಿದ್ದು ಕ್ರಿಕೆಟ್ ಹಾಗು ಫುಟ್ಬಾಲ್ ಆಟಗಾರರಾಗಿದ್ದಾರೆ. ಇವರ ಹೆಸರಿನಲ್ಲಿ ಗಿನ್ನಿಸ್ ದಾಖಲೆ ಕೂಡ ಇದೆ. ದುಬೈನಲ್ಲಿ ನಡೆದ ಅನೇಕ ರಾಷ್ಟ್ರಗಳ ರಾಷ್ಟ್ರಗೀತೆ ಹಾಡುವ ಕಾರ್ಯಕ್ರಮವು ಗಿನ್ನಿಸ್ ದಾಖಲೆ ಯ ಪುರಸ್ಕಾರಕ್ಕೆ ಪಾತ್ರವಾಗಿತ್ತು ಕಿಶೋರ್ ಅವರು ಈ ಕಾರ್ಯಕ್ರಮ ದ ಭಾಗವಾಗಿದ್ದರು.ಇವರಿಗೆ ದುಬೈನಲ್ಲಿ ಅನೇಕ ಪ್ರಶಸ್ತಿಗಳು ದೊರಕಿವೆ. ಇಷ್ಟಾದರು ಇವರು ಯಾವುದೇ ಅಹಂಕಾರವಿಲ್ಲದೆ ಎಲ್ಲರೊಂದಿಗೆ ಪ್ರೀತಿ ಯಿಂದ ಬೆರೆಯುತ್ತಾರೆ. ದುಬೈನಲ್ಲಿದ್ದರು ಊರಿನವರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗಲ್ಪ್ ರಾಷ್ಟ್ರಕ್ಕೆ ಹೀಗೆ ಅನೇಕ ರಾಷ್ಟ್ರಕ್ಕೆ ಬೇಟಿ ನೀಡಿದರೂ. ಮಂಗಳೂರು ಮತ್ತು ತುಳು ಭಾಷೆಗೆ ತನ್ನ ಹ್ರದಯದಲ್ಲಿ ವಿಷೇಶ ಸ್ಥಾನ ಇದೆ ಎನ್ನುತ್ತಾರೆ ಕಿಶೋರ್ ಶೆಟ್ಟಿ.

ವೈದ್ಯಕೀಯ ಪ್ರಕೋಷ್ಠದ ಕಾಯ೯ ಅಭಿನಂದನೀಯ : ಸಚಿವ ವಿ. ಸುನಿಲ್ ಕುಮಾರ್

Posted On: 14-11-2021 02:15PM

ಉಡುಪಿ : ಉಡುಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಮತ್ತು ರೋಟರಿ ಆಸ್ಪತ್ರೆ ಕೆಎಂಸಿ ಆಸ್ಪತ್ರೆ ಮಣಿಪಾಲ ಇದರ ಸಂಯುಕ್ತ ಆಶ್ರಯದಲ್ಲಿ ಬಜಗೋಳಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಕಾಯ೯ಕ್ರಮವನ್ನು ಉಡುಪಿ ಜಿಲ್ಲಾ ಉಸ್ತುವಾರಿ, ಇಂಧನ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಆರೋಗ್ಯವೇ ಭಾಗ್ಯವೆಂಬಂತೆ ಆರೋಗ್ಯ ಅತ್ಯಂತ ಮಹತ್ವದ್ದಾಗಿದೆ. ವೈದ್ಯಕೀಯ ಪ್ರಕೋಷ್ಠದಿಂದ ಉತ್ತಮ ಕಾಯ೯ ನಡೆಯುತ್ತಿರುವುದು ಅಭಿನಂದನೀಯ ಎಂದರು.

ಅಧ್ಯಕ್ಷತೆಯನ್ನು ಸಂಘಟಕ ಹಾಗೂ ವೈದ್ಯಕೀಯ ಪ್ರಕೋಷ್ಠ ದ ತಾಲೂಕು ಸಂಚಾಲಕ ಡಾ.ರಾಮದಾಸ್ ಹೆಗ್ಡೆ ವಹಿಸಿದ್ದರು. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ, ಕಣ್ಣು, ಚಮ೯ ರೋಗ ಸೇರಿದಂತೆ ವಿವಿಧ ವಿಭಾಗದಲ್ಲಿ ಸುಮಾರು 400 ಜನರು ಪ್ರಯೋಜನ ಪಡೆದರು.

ವೇದಿಕೆಯಲ್ಲಿ ರೋಟರಿ ಆಸ್ಪತ್ರೆಯ ಡಾ.ಚಿದಾನಂದ ಕುಲಕಣಿ೯, ಜಿಲ್ಲಾ ಸಂಚಾಲಕ ಡಾ. ರಾಮಚಂದ್ರ ಕಾಮತ್, ಗ್ರಾ.ಪಂ ಅಧ್ಯಕ್ಷ ಸುರೇಶ್, ಶಾಲಾ ಮುಖ್ಯ ಶಿಕ್ಷಕರು ಮತ್ತು ವೈದ್ಯರು ಉಪಸ್ಥಿತರಿದ್ದರು.

ಉಂಡಾರು : ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ರಜತ ಆರತಿಗಳ ಸಮರ್ಪಣೆ

Posted On: 14-11-2021 01:56PM

ಕಾಪು : ಸೋದೆ ವಾದಿರಾಜ ಮಠದ ಆಡಳಿತಕ್ಕೆ ಒಳಪಟ್ಟ ಉಂಡಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶನಿವಾರ ಉದಯಾಸ್ತಮಾನ ಭಜನಾ ಸಹಿತ ದೀಪೋತ್ಸವ ನಡೆಯಿತು.

ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಭಕ್ತಾದಿಗಳ ಸೇವೆಯ ಸಹಕಾರದಿಂದ ರಜತ ಆರತಿಗಳನ್ನು ಶ್ರೀದೇವರಿಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕರಾದ ವಿಷ್ಣುಮೂರ್ತಿ ಮಂಜಿತ್ತಾಯ, ಚಂದ್ರಹಾಸ ಗುರುಸ್ವಾಮಿ, ರವಿವರ್ಮ ಶೆಟ್ಟಿ, ಉದಯ ಶೆಟ್ಟಿ ಅಣ್ಣಪ್ಪ ಸೌಂಡ್ಸ್ ಹಾಗೂ ಊರ ಪರವೂರ ಭಕ್ತರು ಉಪಸ್ಥಿತರಿದ್ದರು.