Updated News From Kaup

'ಪುನೀತ ನೆನಪು' ಕನ್ನಡಿಗಾಸ್ ಫೆಡರೇಷನ್ ವತಿಯಿಂದ ಅಪ್ಪು 'ನುಡಿನಮನ'

Posted On: 03-11-2021 01:43PM

ಅಕ್ಟೋಬರ್29 ಶುಕ್ರವಾರ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾದ ಕನ್ನಡ ಚಿತ್ರರಂಗದ ಯುವರತ್ನ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ 'ಪುನೀತ ನೆನಪು' ಎಂಬ ನುಡಿನಮನ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಆಯೋಜಿಸಿತ್ತು.

ವಿಶ್ವದ 14ಕ್ಕೂ ಹೆಚ್ಚಿನ ದೇಶಗಳಲ್ಲಿ ನೆಲೆಸಿರುವ 38ಕ್ಕೂ ಹೆಚ್ಚಿನ ಕನ್ನಡ ಪರ ಸಂಘಟನೆಗಳು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಅಪ್ಪು ಅಭಿಮಾನಿಗಳು ತಮ್ಮನ್ನಗಲಿದ ನೆಚ್ಚಿನ ನಟನ ಜೊತೆ ತಮಗಿದ್ದ ಒಡನಾಟ, ಪ್ರೀತಿ, ಅಭಿಮಾನವನ್ನು ಮುಕ್ತವಾಗಿ ಹಂಚಿಕೊಂಡು ನುಡಿನಮನ ಸಲ್ಲಿಸಿದರು.

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ರವರು ಪಾಲ್ಗೊಂಡು, 'ನನ್ನ ಸ್ವಂತ ಮಗನನ್ನು ಕಳೆದುಕೊಂಡಷ್ಟು ದುಃಖವಾಗಿದೆ' ಎಂದು ಅಪ್ಪು ಜೊತೆಗಿನ ಹಲವು ನೆನಪುಗಳನ್ನು ಹಂಚಿಕೊಂಡರು. ಮಾಜಿ ಗೃಹ ಸಚಿವರಾದ ಎಂ.ಬಿ ಪಾಟೀಲ್ ರು ಮಾತನಾಡಿ ಅಪ್ಪು ಜೊತೆಗಿನ ಸವಿನಯ ಸಂಬಂಧ ಹಾಗೂ ಅವರ ಜೊತೆ ಕೊನೆಯ ಭೇಟಿ ಸಂದರ್ಭದ ಘಟನೆಯನ್ನು ನೆನಪಿಸಿಕೊಂಡು, ಭಾವುಕರಾಗಿ ಶೃದ್ಧಾಂಜಲಿ ಅರ್ಪಿಸಿದರು. ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹಾರಿಸ್ ಮಾತನಾಡಿ ಪುನೀತ್ ರಾಜಕುಮಾರ್ ಜೀವನದಲ್ಲಿ ಅಳವಡಿಸಿದ್ದ ಸರಳತೆಯ ಕುರಿತು ನೆನಪಿನಂಗಳದಿಂದ ಹಲವು ಘಟನೆಗಳನ್ನು ಸ್ಮರಿಸಿದರು.

ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅಪ್ಪು ರವರ ಮೊದಲ ಭೇಟಿಯಲ್ಲೇ ತೋರಿದ ವಿನಯ ಮತ್ತು ಪ್ರೀತಿಯ ಅನುಭವವನ್ನು ಮಾತಿನಲ್ಲಿ ಹಂಚಿಕೊಂಡರು. ಮಂಗಳೂರು ಸಿಟಿ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ನಟರಾಜ್ ರವರು ಮಾತನಾಡಿ ಪುನೀತ್ ಜೀವನದಲ್ಲಿ ಅಳವಡಿಸಿಕೊಂಡ ಆದರ್ಶಗಳನ್ನು ಹಲವು ನೆನಪುಗಳ ಸಹಿತ ಮೆಲುಕು ಹಾಕಿದರು. ದುಬೈನ ಉದಯೋನ್ಮುಖ ಗಾಯಕ ಉಮರ್ ಸೈಫ್ ರವರು ಪುನೀತ್ ರಾಜಕುಮಾರ್ ರವರ 'ಬೊಂಬೆ ಹೇಳುತೈತೆ' 'ನಿನ್ನಿಂದಲೇ' ಹಾಡನ್ನು ಮನಮುಟ್ಟುವಂತೆ ಹಾಡಿದಾಗ ನೆರೆದಿದ್ದ ಅಭಿಮಾನಿಗಳೆಲ್ಲರೂ ಅಪ್ಪು ನೆನೆದು ಗದ್ಗದಿತರಾದರು. ಕಾರ್ಯಕ್ರಮದ ಸಂಘಟಕ, ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್ ಮಾತನಾಡಿ ನಮ್ಮ ಜೀವನದಲ್ಲಿ ಪುನೀತ್ ರವರಂತಹ ಸರಳತೆ, ಪ್ರಚಾರ ಬಯಸದೇ ನೆರವಾಗುವ ಗುಣವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ, ಆ ಮೂಲಕ ನಿಜಾರ್ಥದಲ್ಲಿ ಶೃದ್ಧಾಂಜಲಿ ಅರ್ಪಿಸೋಣ ಎಂದರು. ಈ ಸಂದರ್ಭದಲ್ಲಿ ಕನ್ನಡಿಗಾಸ್ ಫೆಡರೇಷನ್ ವತಿಯಿಂದ ಪುನೀತ್ ರವರಿಗೆ ಶೃದ್ಧಾಂಜಲಿ ಅರ್ಪಿಸುವ ವೀಡಿಯೊ ಹಾಗೂ ಕಳೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದು ಪುನೀತ್ ರಾಜಕುಮಾರ್ ಶುಭ ಹಾರೈಸಿದ್ದ ವೀಡಿಯೊ ಸಂದೇಶವನ್ನು ಪ್ರದರ್ಶಿಸಲಾಯಿತು. ಬಹರೈನ್ ಕನ್ನಡ ಸಂಘ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಹಾಲೆಂಡ್ ಕನ್ನಡ ಸಂಘದ ಅಶೋಕ್, ಕನ್ನಡ ಸಂಘ ಉಗಾಂಡ ಅಧ್ಯಕ್ಷರಾದ ಸುಧೀರ್, ಬ್ಯಾಂಕಾಕ್ ಕನ್ನಡ ಸಂಘದ ಶಿವು ಪೂಜಾರಿ, ಇಟಲಿ ಕನ್ನಡ ಸಂಘದ ಅಧ್ಯಕ್ಷರಾದ ಹೇಮೇಗೌಡ, ಕನ್ನಡಿಗರು ದುಬೈ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಕನ್ನಡ ಮಿತ್ರರು ಯುಎಇ ಅಧ್ಯಕ್ಷ ಶಶಿಧರ ನಾಗರಾಜಪ್ಪ, ನಮ್ಮ ರೇಡಿಯೋ ಸ್ಥಾಪಕ ಅವನಿಧಾರ್ ಹವಾಲ್ದಾರ್, ಓವರ್ಸೀಸ್ ಕನ್ನಡ ಮೂವೀಸ್ ನ ದೀಪಕ್ ಸೋಮಶೇಖರ್ ಪುನೀತ್ ರಾಜಕುಮಾರ್ ರವರಿಗೆ ನುಡಿನಮನ ಸಲ್ಲಿಸಿದರು. ದ್ವಾರಕೀಶ್ ರವರ ಪುತ್ರ ಸುಕೇಶ್ ದ್ವಾರಕೀಶ್, ಬಾ| ಮಮತಾ ರಡಾರ್, ಕೆ ಎನ್ ಆರೈ ಫೋರಂ ಯುಎಇ ಸದಸ್ಯರಾದ ದಯಾ ಕಿರೋಡಿಯನ್, ಮಂಗಳೂರಿನ ಖ್ಯಾತ ರೇಡಿಯೋ ಜಾಕಿ ಆರ್.ಜೆ ಎರೋಲ್, ಲಕ್ಷ್ಮೀ ಲಿಂಗದಳ್ಳಿ, ವಡೆಕಾರ್ ಅಬುಧಾಬಿ, ಕನ್ನಡ ಮಿತ್ರರು ತಂಡದ ನಾಗರಾಜ್ ರಾವ್, ಕನ್ನಡಿಗಾಸ್ ಫೆಡರೇಷನ್ ನ ಇಮ್ರಾನ್ ಖಾನ್ ಎರ್ಮಾಳ್, ಸೆಂಥಿಲ್ ಬೆಂಗಳೂರು, ಅನ್ಸಾರ್ ಬಾರ್ಕೂರ್, ಸಮೀರ್ ಉದ್ಯಾವರ್ ಪ್ರೀತಿಯ ಅಪ್ಪು ರವರಿಗೆ ಅಭಿಮಾನದಿಂದ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ವಿಷ್ಣುಮೂರ್ತಿ ಮೈಸೂರು ರವರು ನಿರೂಪಿಸಿದರು ಹಾಗೂ ಪುನೀತ್ ಗೆ ಇಷ್ಟವಾದ ಭಕ್ತಿಗೀತೆಯನ್ನೂ ಹಾಡಿದರು, ಮಮತಾ ಶಾರ್ಜಾ ರವರು ಧನ್ಯವಾದ ಅರ್ಪಿಸಿದರು.

ಇನ್ನಂಜೆ : ನವೆಂಬರ್ 4ರ ಬೆಳಿಗ್ಗೆ ಗೊಳಿಕಟ್ಟೆಯಲ್ಲಿ ಮುಳ್ಳಮುಟ್ಟೆ ಕಾರ್ಯಕ್ರಮ

Posted On: 03-11-2021 12:41PM

ಇನ್ನಂಜೆ : ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ನರಕ ಚತುರ್ದಶಿಯ ಪ್ರಯುಕ್ತ ವರ್ಷಂಪ್ರತೀ ನಡೆಯುವ ಮುಳ್ಳಮುಟ್ಟೆ ಕಾರ್ಯಕ್ರಮದಲ್ಲಿ ಜೋಡುಬಂಟ ನರ್ತನ ಸೇವೆಯು ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹೊರಟು ವಿಠೋಬಾ ಭಜನಾ ಮಂದಿರ ಗೊಳಿಕಟ್ಟೆ ಇಲ್ಲಿಗೆ ಮೆರವಣಿಗೆಯ ಮೂಲಕ ಸಾಗಿ ಊರಿಗೆ ಬಂದಿರುವ ದುರಿತಗಳು ತೊಲಗಲಿ/ಹಾಗೂ ನರಕಾಸುರನ ವಧೆ ಎಂಬ ಉದ್ದೇಶದಿಂದ ಮುಳ್ಳಿನ ರಾಶಿಗೆ ಬೆಂಕಿ ಕೊಡುವುದು ವಾಡಿಕೆಯಾಗಿದೆ.

ಈ ಬಾರಿ ನವೆಂಬರ್ 4 ರಂದು ಬೆಳಿಗ್ಗೆ 5 ಗಂಟೆಗೆ ಮುಳ್ಳಮುಟ್ಟೆ ಕಾರ್ಯಕ್ರಮ ನಡೆಯಲಿದೆ ಎಂದು ವಿಠೋಬಾ ಭಜನಾ ಮಂದಿರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

141 ಸೇವಾಯೋಜನೆಗಳನ್ನು ಯಶಸ್ವಿಯಾಗಿಸಿದ ವೀರಕೇಸರಿ ಬೆಳ್ತಂಗಡಿ ಸಂಘಟನೆ

Posted On: 02-11-2021 09:11AM

ಮಂಗಳೂರು : ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಸೇವೆಗಾಗಿ‌ ಸಂಭಾಷಣೆ ಎಂಬ ಕಲ್ಪನೆಯ ಮೂಲಕ ಆರಂಭಗೊಂಡ ವೀರಕೇಸರಿ ಬೆಳ್ತಂಗಡಿ ಸಂಘಟನೆ ಕಳೆದ 5 ವರ್ಷ 6 ತಿಂಗಳುಗಳಲ್ಲಿ 141 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿತು. ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಯಶಸ್ವಿ 6ನೇ ವರ್ಷದ ಪಯಣದಲ್ಲಿ 4 ಕುಟುಂಬಗಳಿಗೆ ನೆರವಾಗುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ. ಉತ್ಸಾಹವಿದ್ದರೆ, ಏನನ್ನಾದರೂ ಸಮಾಜಕ್ಕೆ ಮಾಡಬೇಕು ಎಂಬುವ ಹಂಬಲವಿದ್ದರೆ ಒಂದು ವೇದಿಕೆ ಬೇಕು ಹಾಗೆ ಅದು ಹಲವಾರು ತರುಣರ ಮನಸೆಳೆಯಬೇಕು ವೇದಿಕೆ ಬಳಿಸೇರಿದ ತರುಣರ ಹೃದಯ ಪರಿಪೂರ್ಣವಾಗಿರಬೇಕು ಆಗಮಾತ್ರ ಗೊಂದಲ,ಅಡೆತಡೆಗಳಿಲ್ಲದೆ ಅದರ ಯಶಸ್ಸು ಸಾಧ್ಯ.

ಅಂದು ಅಡಿಗರು ಆಡಿದ ಮಾತು ಕಟ್ಟುವೆವು ನಾವು ಹೊಸದು ನಾಡೊಂದನ್ನ ರಸದ ಬೀಡೊಂದನ್ನ ಬಿಸಿ ನೆತ್ತರು ಉಕ್ಕುಕ್ಕಿ ಹರಿಯುವ ಮುನ್ನ ಕಟ್ಟುವೆವು ನಾವು ಹೊಸದು ನಾಡೊಂದನ್ನು ರಸದ ಬೀಡೊಂದನ್ನು ಎಂಬ ಮಾತಿನಂತೆ ನವ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದೆ. 138ನೇ ಸೇವಾಯೋಜನೆಯಾಗಿ ಕಾಪು ತಾಲೂಕಿನ‌ ಪಡುಬೆಳ್ಳೆ ಧರ್ಮಶ್ರೀ ಕಾಲೋನಿ ಶ್ರೀಮತಿ ಸರಸ್ವತಿ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸಾ ವೆಚ್ಚಕ್ಕಾಗಿ 15,000 ರೂಗಳನ್ನು ಹಸ್ತಾಂತರಿಸಲಾಯಿತು. 139ನೇ ಸೇವಾಯೋಜನೆಯಾಗಿ ಕಾರ್ಕಳ ತಾಲೂಕಿನ ಪಡುಕುಡೂರಿನ ಸುಜಾತ ಇವರ ಮಗ ಅಂಗವಿಕಲನಾಗಿದ್ದು ಹಾಗೂ ಇವರ ಆರ್ಥಿಕ ಸಂಕಷ್ಟವನ್ನು ಕಂಡು ಇವರ ಕುಟುಂಬಕ್ಕೆ 15,000 ರೂಗಳನ್ನು ಹಸ್ತಾಂತರಿಸಲಾಯಿತು. 140ನೇ ಸೇವಾಯೋಜನೆಯಾಗಿ ಉಡುಪಿ ಜಿಲ್ಲೆಯ ಕುಕ್ಕಿಕಟ್ಟೆ , ಆಶಾ ಭಂಡಾರಿ ಇವರ ಗಂಡ ತೀರಿಕೊಂಡಿದ್ದು ಹಾಗೂ ಇವರ ಮನೆಯಲ್ಲಿ ತೀರಾ ಆರ್ಥಿಕ ಸಂಕಷ್ಟದಲ್ಲಿದ್ದು ಮತ್ತು ಇವರ ಮಗಳು ಸ್ಪಂದನಾಳ ವಿಧ್ಯಾಭ್ಯಾಸಕ್ಕಾಗಿ 15,000 ರೂಗಳನ್ನು ಇವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

141ನೇ ಸೇವಾಯೋಜನೆಯಾಗಿ ಉಡುಪಿ ಜಿಲ್ಲೆಯ ಪಕ೯ಳ ಭೂಮಿಕ ಇವರ ತಂದೆ ತೀರಿಕೊಂಡಿದ್ದು ಹಾಗೂ ಇವರ ಅಜ್ಜ ಅನಾರೋಗ್ಯದಿಂದ ಇದ್ದು .ಮನೆಯಲ್ಲಿ ತೀರಾ ಕಷ್ಟದ ಪರಿಸ್ಥಿತಿಯಲ್ಲಿದ್ದು.ಇವರ ತಂಗಿ ಜಾಹ್ನವಿಯ ವಿಧ್ಯಾಭ್ಯಾಸಕಾಗಿ 15,000 ರೂಗಳನ್ನು ಇವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ 4 ಸೇವಾಯೋಜನೆಗಳಿಗೆ ಮತ್ತು ತುರ್ತು ಸೇವೆಗಾಗಿ ಒಟ್ಟು ₹60,000 ರೂ ಗಳನ್ನು ವೀರಕೇಸರಿ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು. ಈ ಯೋಜನೆಯ ಯಶಸ್ಸಿನೊಂದಿಗೆ ಸಂಘಟನೆಯು 141 ಸೇವಾಯೋಜನೆಗಳನ್ನು ತಲುಪಿದ್ದು ತಂಡದ ಸದಸ್ಯರ ಸಮ್ಮುಖದಲ್ಲಿ ಚೆಕ್ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ಳೆ ದೊಡ್ಡ ಮನೆ ಅಜಿತ್ ಪಿ ಶೆಟ್ಟಿ ಪಡುಬೆಳ್ಳೆ, ಪಡುಬೆಳ್ಳೆ ವಿಶ್ವ ಹಿಂದೂ ಪರಿಷತ್ ಸ್ಧಾಪಕ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಪಡುಬೆಳ್ಳೆ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರು ಶಿವ೯ ವಲಯ ಸುಧೀರ್ ಸೋನು, ಕಾಪು ಬಜರಂಗದಳ ಪ್ರಖಂಡ ಸಂಚಾಲಕರಾದ ಕೃಷ್ಣ ಮೂತಿ೯, ಲೆಕ್ಕ ಪರಿಶೋದಕರು ಮತ್ತು ತೆರಿಗೆ ಸಲಹೆಗಾರರು ಮಧುಗಿರಿ ತುಮಕೂರು ಜಿಲ್ಲೆಯ ಪರಶುರಾಮ ಭಟ್, ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಶೆಟ್ಟಿ, ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯರಾದ ಶಶಿಧರ್ ವಾಗ್ಲೆ, ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಶೆಟ್ಟಿ, ವೀರ ಕೇಸರಿ ಬೆಳ್ತಂಗಡಿ ಸಂಚಾಲಕರು ಹಾಗೂ ವೀರಕೇಸರಿ ಬೆಳ್ತಂಗಡಿ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

ರಾಜ್ಯದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ : ಸಚಿವ ವಿ ಸುನೀಲ್ ಕುಮಾರ್

Posted On: 01-11-2021 07:10PM

ಉಡುಪಿ : ಸರೋಜಿನಿ ಮಹಿಷಿ ವರದಿಯಂತೆ ರಾಜ್ಯದಲ್ಲಿನ ಐಟಿ ಬಿಟಿ ಸೇರಿದಂತೆ ಎಲ್ಲಾ ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ನೀಡುವ ಕುರಿತಂತೆ ,ಕಾನೂನು ಚೌಕಟ್ಟಿನಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ ಸುನೀಲ್ ಕುಮಾರ್ ಹೇಳಿದರು. ಅವರು ಇಂದು ಅಜ್ಜರಕಾಡು ಮಹಾತ್ಮಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಿರುದ್ಯೋಗ ನಿವಾರಣೆ ಮತ್ತು ಕನ್ನಡ ಭಾಷಾಭಿಮಾನ ಹೆಚ್ಚಿಸಲು , ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯವನ್ನು ನೀಡುವ ನಿಟ್ಟಿನಲ್ಲಿ, ಸರೋಜಿನಿ ಮಹಿಷಿ ವರದಿಯಲ್ಲಿ ಕೆಲ ಮಾರ್ಪಾಡುಗಳೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ದೊರಕಿಸಲು ಪ್ರಯತ್ನಿಸಲಾಗುವುದು ಎಂದರು. ಯುವ ಜನತೆ ಕನ್ನಡ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದುವುದರೊಂದಿಗೆ , ನವ ಸಾಹಿತಿಗಳ ಸಂಖ್ಯೆ ಹೆಚ್ಚಿಸಲು ಬೇಕಾದ ಸೌಲಭ್ಯಗಳನ್ನು ಸರಕಾರದಿಂದ ನೀಡಲು ಸೂಕ್ತ ಯೋಜನೆಗಳನ್ನು ರೂಪಿಸಲಾಗುವುದು ಎಂದ ಅವರು , ಕನ್ನಡ ಪುಸ್ತಕಗಳನ್ನು ಓದುವ ಪ್ರವೃತ್ತಿಯನ್ನು ರೂಢಿಸಿಕೊಳ್ಳುವುದರೊಂದಿಗೆ ಇತರರಿಗೂ ಕನ್ನಡ ಓದುವ ಮತ್ತು ಭಾ಼ಷಾಭಿಮಾನದ ಗೀಳು ಮೂಡಿಸಬೇಕು ಎಂದರು. ರಾಜ್ಯದ ಮನೆ ಮನೆಗಳಲ್ಲಿ ಕನ್ನಡದ ಬಳಕೆ ಆಗಬೇಕು, ಮಕ್ಕಳಿಗೆ ಕನ್ನಡ ಭಾವಗೀತೆಗಳನ್ನು ಕೇಳಿಸಬೇಕು ,ಕುಟುಂಬ ಸದಸ್ಯರೊಂದಿಗೆ ಕನ್ನಡದಲ್ಲಿ ಮಾತನಾಡಬೇಕು, ಕನ್ನಡ ಬಳಕೆಯ ಮಧ್ಯದಲ್ಲಿ ಅನ್ಯಭಾಷೆಯ ಪ್ರಯೋಗ ಸಲ್ಲದು ಎಂದು ಸಚಿವರು ಹೇಳಿದರು.

ಜಿಲ್ಲೆಗಳಲ್ಲಿ ನೀಡುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಯಾವುದೇ ನಿರ್ದಿಷ್ಠ ಮಾನದಂಡಗಳು ಇಲ್ಲವಾಗಿದ್ದು, ಇದರಿಂದ ಗೊಂದಲಗಳಾಗುತ್ತಿದ್ದು, ಈ ಬಗ್ಗೆ ಸೂಕ್ತ ಏಕರೂಪದ ನಿಯಮಾವಳಿಗಳನ್ನು ಹೊರಡಿಸಿ,ಅದರ ಆಧಾರದಲ್ಲಿ ಮುಂದಿನ ವರ್ಷದಿಂದ ಜಿಲ್ಲೆಗಳಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದರು. ಕನ್ನಡ ಮತ್ತು ಕರುನಾಡಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕರುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ದೇಶ-ವಿದೇಶಗಳಲ್ಲಿಯೂ ಕನ್ನಡದ ಕಂಪು ಮೂಡಿಸುವಂತಾಗಬೇಕು. ಆ ನಿಟ್ಟಿನಲ್ಲ ನಾವು ದೇಶಭಿಮಾನ ಮತ್ತು ಭಾಷೆಯ ಸ್ವಾಭಿಮಾನಿಗಳಾಗುವುದು ಅನಿವಾರ್ಯತೆ ಇದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ 30 ಸಾಧಕರಿಗೆ ಹಾಗೂ 3 ಸಂಸ್ಥೆಗಳಿಗೆ ಜಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಉಡುಪಿ ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಇತರರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.

ಸೈಬ್ರಕಟ್ಟೆ ರೋಟರಿ ಕ್ಲಬ್ : ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

Posted On: 01-11-2021 07:03PM

ಉಡುಪಿ : ಸೈಬ್ರಕಟ್ಟೆ ರೋಟರಿ ಮತ್ತು ಇಂಟರ್ಯಾಕ್ಟ್ ಕ್ಲಬ್ MGHS ಸೈಬ್ರಕಟ್ಟೆ ವತಿಯಿಂದ ಜಂಟಿಯಾಗಿ ಮಹಾತ್ಮಾ ಗಾಂಧಿ ಪ್ರೌಢ ಶಾಲೆಯಲ್ಲಿ ತಾಯಿ ಭುವನೇಶ್ವರಿ ದೇವಿಯ ಚಿತ್ರಕ್ಕೆ ಪುಷ್ಪ ಅರ್ಚನೆಯ ಮೂಲಕ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.

ವಲಯ 3 ರ ಸಹಾಯಕ ಗವರ್ನರ್ ಪದ್ಮನಾಭ್ ಕಾಂಚನ್ , ಶಾಲಾ ಮುಖ್ಯಶಿಕ್ಷಕ ಸತೀಶ್ ನಾಯ್ಕ್ ರೋಟರಿ ಅಧ್ಯಕ್ಷ ಯು ಪ್ರಸಾದ್ ಭಟ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ, ಸಮವಸ್ತ್ರ ಕೊಡುಗೆಯ ಪ್ರಾಯೋಜಕರು ಸಂದೀಪ್ ಶೆಟ್ಟಿ, ಇಂಟರ್ಯಾಕ್ಟ್ ಅಧ್ಯಕ್ಷೆ ಕುಮಾರಿ ಮಾನ್ಯ ಹಾಗೂ ವಿದ್ಯಾರ್ಥಿಗಳು, ರೋಟರಿ ಮಿತ್ರರು ಉಪಸ್ಥಿತರಿದ್ದರು.

ಮುತ್ತೂಟ್ ಫೈನಾನ್ಸ್ ವತಿಯಿಂದ ಉಳ್ಳಾಲ ಬೀಚ್ ನಲ್ಲಿ ಪ್ಲಾಸ್ಟಿಕ್ ಕಲೆಕ್ಷನ್ ಡ್ರೈವ್

Posted On: 01-11-2021 06:49PM

ಮಂಗಳೂರು : ಮುತ್ತೂಟ್ ಫೈನಾನ್ಸ್ ತನ್ನ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿ ಕರ್ನಾಟಕ ರಾಜ್ಯೋತ್ಸವದ ಸಲುವಾಗಿ ಉಳ್ಳಾಲ ಬೀಚ್ ನಲ್ಲಿ ಪ್ಲಾಸ್ಟಿಕ್ ಕಲೆಕ್ಷನ್ ಡ್ರೈವ್ ಜರಗಿತು.

ಸುಮಾರು 20 ಚೀಲದಷ್ಟು ಪ್ಲಾಸ್ಟಿಕ್ ಬಾಟಲಿ ಹಾಗು ಇತರ ಪ್ಲಾಸ್ಟಿಕ್ ವಸ್ತು ಗಳು ಕಾಗದ, ಫೋಮ್, ಚಪ್ಪಲ್ ಇತ್ಯಾದಿ ಸಂಗ್ರಹಿಸಿ ಪ್ಲಾಸ್ಟಿಕ್ ಫಾರ್ ಚೇಂಜ್ ಸಂಸ್ಥೆ ಹಾಗು ಪಟ್ಟಣ ಪಂಚಾಯತ್ ಪೌರ ಕಾರ್ಮಿಕರ ಮೂಲಕ ವಿಲೇವಾರಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು 30 ಕ್ಕಿಂತಲೂ ಹೆಚ್ಚು ಮುತ್ತೂಟ್ ಫೈನಾನ್ಸ್ ಮಂಗಳೂರಿನ ಸಿಬ್ಬಂದಿಗಳು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಂಗಳೂರು ರಿಜನ್ ನ ರೀಜನಲ್ ಮ್ಯಾನೇಜರ್ ಉದಯ್ ಶ್ಯಾಮ್ ಖಂಡಿಗೆ, ಕ್ಲಸ್ಟರ್ ಮ್ಯಾನೇಜರ್ ಸುರೇಶ ಉಚ್ಚಿಲ್, ರೀಜನಲ್ ಆಫೀಸ್ ನಿಂದ ರಾಹುಲ್ ರಾಘವನ್, ಮೋನಿಷಾ ಕಿರಣ್ ಕುಮಾರ್, ರಮೀಜ್, ಬ್ರಾಂಚ್ ಮ್ಯಾನೇಜರ್ ಪವಿತ್ರ, ಚಂದ್ರಶೇಖರ್, ಯು ಸಿ ಎಸ್ ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು.

ಎಲ್ಲೂರು :ಕೆ.ಎಲ್.ಕುಂಡಂತಾಯರ ಸೊಡರ ಹಬ್ಬ ಪುಸ್ತಕ ಬಿಡುಗಡೆ

Posted On: 31-10-2021 11:01PM

ಕಾಪು : ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಕೆ.ಎಲ್.ಕುಂಡಂತಾಯರ ಪುಸ್ತಕ 'ಸೊಡರ ಹಬ್ಬ' ಬಿಡುಗಡೆಗೊಂಡಿತು.

ದೇವಳದ ಅರ್ಚಕ ವೇ.ಮೂ. ಹರಿಕೃಷ್ಣ ಉಡುಪ ಸೊಡರ ಹಬ್ಬವನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದರು.

ಸೊಡರ ಹಬ್ಬ (ದೀಪಾವಳಿ,ಗೋಪೂಜೆ, ತುಳಸಿಪೂಜೆ,ಲಕ್ಷದೀಪ) ಪುಸ್ತಕದಲ್ಲಿ ಬಲೀಂದ್ರ ಬರುತ್ತಾನೆ ’ಹಣತೆ’ ಹಚ್ಚೋಣ, ಬಂದು ಹೋಗುವ ಬಲೀಂದ್ರನಿಗೆ ಬಹುಪರಾಕು, ಪೊಲಿ ಹಬ್ಬ, ಸೊಡರ ಹಬ್ಬಕ್ಕೆ ಸೊಬಗಿನ ಸೋಬಾನೆ, ಸಮೃದ್ಧಿಯ ಸಮುಲ್ಲಾಸ, ಸೊಬಗು ಸೊರಗಿದ ಸೊಡರ ಹಬ್ಬ, ದೀಪಾವಳಿಗಿಲ್ಲ ಕೃಷಿಯ ಸೊಂಪು, ಕ್ಷಮಿಸು ಬಲೀಂದ್ರ/ಮಾಪಿ ನಟ್ಟೊಂದು ಬಲೀಂದ್ರಗ್ ಲೆಪ್ಪು, ನಿಸರ್ಗ ನೀರೆಗೆ ನೀರಾಜನ, ಬಲೀಂದ್ರೆ ಬರ್ಪೆ ಪೊಲಿ ಕೊರ್ಪೆ (ತುಳು ಲೇಖನ), ಗೋಪೂಜೆಯ ಆಶಯ, ತುಳಸಿ ಕಟ್ಟೆಗೆ ಬಲಬಂದು, ಉಬತ್ಥಾಪನಾ ಆಚರಣೆ, ಎಲ್ಲೂರಿನ ದೀಪೋತ್ಸವ, ಲಕ್ಷ್ಯ ಬೆಳಗುವ ಲಕ್ಷದೀಪೋತ್ಸವ ಮುಂತಾದ ಲೇಖನಗಳಿದ್ದು ಹಾಗೂ ನಂದೊಳ್ಗೆ ಅಮುಣಿಂಜೆಗುತ್ತು ಶೀನಪ್ಪ ಹೆಗ್ಡೆ ಅವರು ೫೨ ಸಂಗ್ರಹಿಸಿ ೧೯೫೨ರಲ್ಲಿ ಪ್ರಕಟಿಸಿದ ’ತುಳುವಾಲ ಬಲಿಯೇಂದ್ರೆ’ ಪಾರ್ದನದ ಕೊನೆಯ ಭಾಗವನ್ನು ಸೇರಿಸಿಕೊಳ್ಳಲಾಗಿದೆ.

ದೇವಳದ ಆಡಳಿತಾಧಿಕಾರಿ‌ ಮಮತಾ ವೈ ಶೆಟ್ಟಿ , ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವರಾಜ ರಾವ್ , ಪುಣೆ ಉದ್ಯಮಿ ಎರ್ಮಾಳು ನಾರಾಯಣ ಕೆ.ಶೆಟ್ಟಿ, ಸಂಜೀವ ಶೆಟ್ಟಿ , ನಿವೃತ್ತ ಪಾಂಶುಪಾಲ ಸುದರ್ಶನ ವೈ.ಎಸ್.ನಾಗರಾಜ ಉಡುಪ , ಶ್ರೀಧರ ಮಂಜಿತ್ತಾಯ ,ದುರ್ಗಾ ಮಿತ್ರಮಂಡಳಿ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ದೇವಳದ ಪ್ರಬಂಧಕ ರಾಘವೇಂದ್ರ ಶೆಟ್ಟಿ , ಸತೀಶ ಕುಂಡಂತಾಯ, ಭಾರ್ಗವ ಕುಂಡಂತಾಯ ಉಪಸ್ಥಿತರಿದ್ದರು.

ಕ್ರಿಮಿನಲ್ ಪ್ರಕರಣದ ಆರೋಪಿ ತಪ್ಪಿಸಿಕೊಳ್ಳಲು ಯತ್ನ ; ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ನ್ಯಾಯಾಂಗ ಬಂಧನ

Posted On: 31-10-2021 10:53PM

ಮೂಡಬಿದ್ರಿ : ಕ್ರಿಮಿನಲ್ ಪ್ರಕರಣ ಒಂದರಲ್ಲಿ ಬಾಂಬೆ ಪೊಲೀಸರಿಗೆ ಬೇಕಾಗಿದ್ದು, ತಲೆಮರೆಸಿಕೊಂಡಿದ್ದ ಮೂಡಬಿದ್ರೆ ಪೊಲೀಸ್ ಠಾಣೆ ಸರಹದ್ದಿನ ಕೊಟೆಬಾಗಿಲು ನಿವಾಸಿ ಪ್ರವೀಣ್ ಕುಮಾರ್ (46 ವರ್ಷ) ಎಂಬಾತನನ್ನು ಭೂಗತ ಪಾತಕಿಗಳೊಂದಿಗೆ ನಂಟು ಹೊಂದಿರುವ ಹಾಗೂ ತನ್ನೊಂದಿಗೆ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿರುವ ಸಾಧ್ಯತೆಗಳು ಇರುವ ಬಗ್ಗೆ ಮಾಹಿತಿ ಇದ್ದ ಮೇರೆಗೆ ಆತನನ್ನು ವಿಚಾರಣೆಗಾಗಿ ಠಾಣೆಗೆ ಕರೆತರುವ ಸಲುವಾಗಿ ಇಬ್ಬರು ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನೇಮಿಸಿ ಕಳುಹಿಸಿ ಕೊಡಲಾಗಿತ್ತು.

ಸಿಬ್ಬಂದಿಗಳು ಆರೋಪಿಯ ಮನೆಯ ಬಳಿ ಹೋದಾಗ ಸಮವಸ್ತ್ರದಲ್ಲಿದ್ದ ಸಿಬ್ಬಂದಿಗಳನ್ನು ನೋಡಿ ಆತನು ಓಡಿಹೋಗಲು ಪ್ರಯತ್ನ ಪಟ್ಟಿದ್ದು ಆಗ ಆತನನ್ನು ಹಿಡಿಯಲು ಹೋದಾಗ ಆರೋಪಿಯು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪಿಸಿ 617 ರವರನ್ನು ಜೋರಾಗಿ ಕೈಯಿಂದ ತಳ್ಳಿ ನೆಲಕ್ಕೆ ಬೀಳಿಸಿ ನೋವುಂಟು ಮಾಡಿದ್ದ, ನಂತರ ಸಿಬ್ಬಂದಿಗಳು ಆತನನ್ನು ಬೆನ್ನಟ್ಟಿ ಹಿಡಿದು ಠಾಣೆಗೆ ಕರೆತಂದಿದ್ದಾರೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆತನ ಮೇಲೆ ಪ್ರಕರಣವನ್ನು ದಾಖಲಿಸಿ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.

ಕಾಪು : ಟೀಮ್ ಮೋದಿಯಿಂದ ಪುನೀತ್ ರಾಜಕುಮಾರ್ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ

Posted On: 31-10-2021 10:43PM

ಕಾಪು : ಇಲ್ಲಿನ ಟೀಮ್ ಮೋದಿ ವತಿಯಿಂದ ನಟ ಪುನೀತ್ ರಾಜಕುಮಾರ್ ರವರಿಗೆ ಸಾರ್ವಜನಿಕವಾಗಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಕೈಪುಂಜಾಲು, ಸಂಘಟಕರಾದ ಅಶ್ವಿನ್ ಪುತ್ರನ್ˌ ಜಿತೇಂದ್ರ ಕೊಟ್ಯನ್ˌ ಸತೀಶ್ˌ ನಿತೇಶ್ ಕಾಂಚನ್, ರಾಹುಲ್ ರಾವ್ˌ ಕೃಷ್ಣˌˌ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ನೂತನ ಆಡಳಿತ ಮೊಕ್ತೇಸರರಾಗಿ ವೇದಮೂರ್ತಿ ಕೇಂಜ ಶ್ರೀಧರ ತಂತ್ರಿ

Posted On: 31-10-2021 10:33PM

ಕಾಪು : ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ನ ಮಾಜಿ ಸದಸ್ಯರು, ಇತಿಹಾಸ ಪ್ರಸಿದ್ಧ ಎಲ್ಲೂರು ಸೀಮೆಯ ಆಗಮ ಪಂಡಿತರಾದ ವೇದಮೂರ್ತಿ ಕೇಂಜ ಶ್ರೀಧರ ತಂತ್ರಿಯವರು ಇತಿಹಾಸ ಪ್ರಸಿದ್ಧ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ನೂತನ ಆಡಳಿತ ಮೊಕ್ತೇಸರರಾಗಿದ್ದಾರೆ.