Updated News From Kaup
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣೇಶ್ ಪಂಜಿಮಾರ್ : ಕಾಪು ಕುಲಾಲ ಸಂಘ ಹರ್ಷ

Posted On: 31-10-2021 06:46PM
ಕಾಪು : ಚಿತ್ರಕಲೆಯ ಮೂಲಕ ಸಾಧನೆಗೈದ ವಿಕಲಾಂಗ ಪ್ರತಿಭೆ ಗಣೇಶ್ ಪಂಜಿಮಾರ್ ಅವರಿಗೆ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಕಾಪು ಭಾಗದ ಸಮಸ್ತ ಕುಲಾಲರಿಗೆ ಖುಷಿ ತಂದು ಕೊಟ್ಟಿದೆ.
ಅಪೂರ್ವ ವ್ಯಕ್ತಿತ್ವದ ಗಣೇಶ್ ಪಂಜಿಮಾರ್ ಅವರ ಸಾಧನೆಯನ್ನ ಗುರುತಿಸಿದ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಶಸ್ತಿ ಬರುವಲ್ಲಿ ಸಹಕರಿಸಿದ ಎಲ್ಲರಿಗೂ ಕಾಪು ಕುಲಾಲ ಸಂಘದ ಅಧ್ಯಕ್ಷರಾದ ಸಂದೀಪ್ ಬಂಗೇರ, ಪ್ರಧಾನ ಕಾರ್ಯದರ್ಶಿ ಉದಯ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕುಲಾಲ್ ಶಿರ್ವ, ಕಾಪು ಸಂಘದ ಕುಲಾಲ ಯುವ ವೇದಿಕೆ ಅಧ್ಯಕ್ಷರಾದ ಶಶಿಧರ್ ಕುಲಾಲ್ ಹಾಗೂ ಸಂಘದ ಸರ್ವ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ : ತಾಲೂಕು ಅಭ್ಯಾಸ ವರ್ಗ

Posted On: 31-10-2021 06:40PM
ಕಾರ್ಕಳ : ಇಲ್ಲಿನ ತಾಲೂಕು ಅಭ್ಯಾಸ ವರ್ಗವು ಭುವನೇಂದ್ರ ಪ್ರೌಢ ಶಾಲೆಯಲ್ಲಿ ಜರಗಿದ್ದು ಉದ್ಘಾಟನೆಯನ್ನು ರಾಜ್ಯ ಸಹಕಾರ್ಯದರ್ಶಿ ಮಣಿಕಂಠ ಕಳಸ ನೆರವೇರಿಸಿದರು.

ಸಮಾಜ ಸೇವಕಿ ರಮಿತಾ ಕಾರ್ಕಳ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದರು.
ಈ ಸಂದರ್ಭ ಜಿಲ್ಲಾ ಸಹ ಪ್ರಮುಖರಾದ ಡಾ.ದಯಾನಂದ ಬಾಯಾರ್, ಜಿಲ್ಲಾ ಸಂಚಾಲಕರಾದ ಆಶಿಶ್ ಶೆಟ್ಟಿ ಬೋಳ, ನಗರ ಅಧ್ಯಕ್ಷರಾದ ಅಭಿಷೇಕ್ ಸುವರ್ಣ ರವರು ಉಪಸ್ಥಿತರಿದ್ದರು.
ಕಾಪು ವಿಧಾನಸಭೆ ಕ್ಷೇತ್ರದಲ್ಲಿ ಮಹಿಳೆಯರಿಂದ ಜಾತ್ಯತೀತ ಜನತಾದಳ ಸೇರ್ಪಡೆ

Posted On: 31-10-2021 06:32PM
ಕಾಪು : ಉಡುಪಿ ಜಿಲ್ಲೆಯ ಕಾಪು ವಿಧಾನಸಭೆ ಕ್ಷೇತ್ರದ ಮಹಿಳಾ ಜನತಾದಳ ಜಿಲ್ಲಾ ಕಾರ್ಯಾಧ್ಯಕ್ಷರಾದ ತಬಸ್ಸುಮ್, ಕಾಪು ಜೆಡಿಎಸ್ ಮಹಿಳಾ ಕಾರ್ಯಾಧ್ಯಕ್ಷರಾದ ಸನಾ ಮಲ್ಲಾರು, ಉಪಾಧ್ಯಕ್ಷರಾದ ಅಕ್ಷತಾರವರ ಮುಂದಾಳತ್ವದಲ್ಲಿ ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನೇಕ ಮಹಿಳೆಯರು ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭ ಜಯರಾಮ ಆಚಾರ್ಯ,ಜಿಲ್ಲಾ ಕಾರ್ಯದರ್ಶಿ, ರಾಜು ಆರ್ ಪುತ್ರನ್, ಕಾಪು ವಿಧಾನಸಭಾ ಕ್ಷೇತ್ರ ಕಾರ್ಯಾಧ್ಯಕ್ಷರು ಉಪಸ್ಥಿತರಿದ್ದರು.
ಕಾಪು : ಸ್ವರ್ಣ ಬ್ಯೂಟಿ ಪಾರ್ಲರ್ ಮತ್ತು ಕೋಚಿಂಗ್ ಕ್ಲಾಸ್ ಶುಭಾರಂಭ

Posted On: 31-10-2021 03:18PM
ಕಾಪುವಿನ ಬಿಲ್ಲವರ ಸಹಾಯಕ ಸಂಘದ ನೂತನ ಕಟ್ಟಡದ ಒಂದನೇ ಮಹಡಿಯಲ್ಲಿ ಸರಿತಾ ವಿ ಸಾಲ್ಯಾನ್, ಪೊಲಿಪು ಮಾಲೀಕತ್ವದ ಸ್ವರ್ಣ ಬ್ಯೂಟಿ ಪಾರ್ಲರ್ ಮತ್ತು ಕೋಚಿಂಗ್ ಕ್ಲಾಸ್ ಇಂದು ಶುಭಾರಂಭಗೊಂಡಿತು.

ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ ಕಾಪು ಮತ್ತು ಕಾಪು ಪುರಸಭೆಯ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಮ್ಮ ಕಾಪು ನ್ಯೂಸ್ ವರದಿಗಾರರೊಂದಿಗೆ ಮಾತನಾಡಿದ ಸರಿತಾ ಅವರು ಒಂದನೇ ತರಗತಿಯಿಂದ ಡಿಗ್ರಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯವಾಗಲು ಕೋಚಿಂಗ್ ಕ್ಲಾಸ್ ಆರಂಬಿಸಿದ್ದೇವೆ ಮತ್ತು ಅತ್ಯುತ್ತಮ ಬ್ಯೂಟಿಶಿಯನ್ ಸೇವೆಗಳನ್ನು ಒದಗಿಸಿ ಸೌಂದರ್ಯ ವರ್ಧನೆಗೆ ಕೂಡಾ ಒತ್ತು ನೀಡಿ ಕಾಪು ಭಾಗದಲ್ಲಿ ಉತ್ತಮ ಸೇವೆಯನ್ನು ನೀಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : 7204739160 , 8296309931
ನ್ಯೂನತೆಯ ಮೆಟ್ಟಿ ನಿಂತ ಸಾಧಕ ಚಿತ್ರ ಕಲಾವಿದ ಗಣೇಶ್ ಪಂಜಿಮಾರುಗೆ ಒಲಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Posted On: 30-10-2021 09:30PM
ಕಾಪು : ಮೂಳೆಗಳ ತೀವ್ರ ದುರ್ಬಲತೆಯ ರೋಗದಿಂದ ಬಳಲುತ್ತಿದ್ದರೂ ತನ್ನ ಹವ್ಯಾಸವಾದ ಚಿತ್ರಕಲೆಯಲ್ಲಿ ತಾನು ಸಾಧಿಸಬೇಕೆಂಬ ಅಚಲ ವಿಶ್ವಾಸದ ಮೂಲಕ ಸಾಧಿಸಿ ತೋರಿಸಿದ ವ್ಯಕ್ತಿ ಗಣೇಶ್ ಪಂಜಿಮಾರು.
ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಅವರಿಗೆ ಮತ್ತು ಅವರ ಬಂಧುವರ್ಗ, ಹಿತೈಷಿಗಳಿಗೆ ಸಂತಸ ಉಂಟು ಮಾಡಿದೆ.
ಸಾವಯವ, ಪರಿಸರಸ್ನೇಹಿ ಉತ್ಪನ್ನಗಳಿಗೆ ಮಾರುಕಟ್ಟೆ, ರೈತ ಸಬಲೀಕರಣ, ಉದ್ಯೋಗ ಸೃಷ್ಟಿ, ತ್ಯಾಜ್ಯದಿಂದ ಜೈವಿಕ ಇಂಧನ ಕ್ರಾಂತಿ : ಎಮ್ ಸಿ ಎಲ್ ಸಂಸ್ಥೆಯ ಗುರಿ

Posted On: 29-10-2021 09:19PM
ಕಾಪು : ಮೀರಾಕ್ಲೀನ್ ಫ್ಯುಯೆಲ್ ಲಿಮಿಟೆಡ್ ಸಂಸ್ಥೆಯು ದೇಶದ ಪ್ರತಿ ತಾಲೂಕಿನಲ್ಲಿ ನವೀಕರಿಸಬಹುದಾದ ಸಾವಯವ ಇಂಧನ ತಯಾರಿಕಾ ಘಟಕಗಳ ಸ್ಥಾಪನೆಗೆ ಒತ್ತು ನೀಡಿ ಖನಿಜ ಇಂಧನಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಜೈವಿಕ ಇಂಧನದ ತಯಾರಿಯೊಂದಿಗೆ, ಆಹಾರೇತರ ಸಾಮಗ್ರಿಗಳಿಂದ ಇಂಧನ, ಗೊಬ್ಬರ ತಯಾರಿ ನಮ್ಮ ಸುತ್ತಮುತ್ತಲಿರುವ ಮನೆ ತ್ಯಾಜ್ಯಗಳನ್ನು ಇಂಧನ ಘಟಕದಲ್ಲಿ ಕಚ್ಚಾ ವಸ್ತುವಾಗಿ ಉಪಯೋಗಿಸಿ ಜನರಿಗೆ ಆದಾಯವನ್ನು ಕೊಡುವ ಸಂಪನ್ಮೂಲವಾಗಿ ಸುವುದು ನಮ್ಮ ಉದ್ದೇಶ ಎಂದು ಎಮ್ ಸಿ ಎಲ್ ಸಂಸ್ಥೆಯ ಅಧಿಕಾರಿ ವಸಂತ ಪೂಜಾರಿ ತಿಳಿಸಿದರು.
ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಪು ತಾಲೂಕಿನ ಘಟಕದಲ್ಲಿ ಸುಮಾರು 12,000 ಉದ್ಯೋಗ ಸೃಷ್ಟಿಸುವುದು, ಆಸಕ್ತ ಜನತೆಗೆ ನಾಟಿ ಕೋಳಿ ಸಾಕಣೆ, ದೇಶಿಹಸು ಸಾಕಣೆ, ಮೀನುಗಾರಿಕೆ, ಜೇನುಸಾಕಣೆ ಇತ್ಯಾದಿ ಉದ್ಯಮಗಳಿಗೆ ಪ್ರೋತ್ಸಾಹ ತರಬೇತಿ ನೀಡಲಾಗುವುದು. ಎಲ್ಲಾ ಸಾವಯವ ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳಿಗೆ ಮಾರುಕಟ್ಟೆ ಜವಾಬ್ದಾರಿ ಸಂಪೂರ್ಣವಾಗಿ ಎಂಸಿಎಲ್ ಸಂಸ್ಥೆಯಾಗಿರುತ್ತದೆ. ತಾಲೂಕಿನ ಪ್ರತಿಯೊಬ್ಬರಿಗೂ ಈ ಸಂಸ್ಥೆಯಲ್ಲಿ ಸದಸ್ಯತನವನ್ನು ಕಲ್ಪಿಸಿ ಪಾಲುದಾರರಾಗಲು ಅವಕಾಶವನ್ನು ಒದಗಿಸಲಾಗುವುದು.
ಗ್ರಾಮಾಂತರ ಪ್ರದೇಶಗಳ ಮೂಲಭೂತ ಅವಶ್ಯಕತೆಗಳಾದ ನೀರಾವರಿ, ರಸ್ತೆ, ವಿದ್ಯುಚ್ಛಕ್ತಿ ಸಂಪರ್ಕಗಳನ್ನು ಅಭಿವೃದ್ಧಿ, ಬಡಮಕ್ಕಳ ಹಾಗೂ ಕ್ರೀಡಾಪಟುಗಳಿಗೆ ಸಹಾಯ, ತರಬೇತಿ. 2030ರ ವೇಳೆಗೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾ ಗಿಸುವುದು ನಮ್ಮ ಗುರಿಯಾಗಿದೆ ಎಂದರು.
ಈ ಸಂದರ್ಭ ಲಿಂಗಪ್ಪ ಪೂಜಾರಿ, ಶ್ರೀಧರ ಆಚಾರ್ಯ, ರಮಾಕಾಂತ ರಾವ್, ಸುರೇಂದ್ರ ಶೆಟ್ಟಿ, ಚೇತನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Posted On: 29-10-2021 05:45PM
ಮಂಗಳೂರು : ಬಂಟ್ವಾಳ ಸ್ಪರ್ಶ ಕಲಾಮಂದಿರದಲ್ಲಿ ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳ ಕುರಿತ ಮಾಹಿತಿ ಕಾರ್ಯಾಗಾರ ನಡೆಯಿತು.

ಸದರಿ ಕಾರ್ಯಾಗಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋನಾವಣೆ ಐ.ಪಿ.ಎಸ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್, ಬಂಟ್ವಾಳ ಪೊಲೀಸ್ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಶಿವಾಂಶು ರಜಪೂತ್ ಐ.ಪಿ.ಎಸ್ ಸೇರಿದಂತೆ ಬಂಟ್ವಾಳ ಉಪವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೆರೆದಿದ್ದ ವಿವಿಧ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರಿಗೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳ ಕುರಿತ ಮಾಹಿತಿಯನ್ನು ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯುವಕ/ಯುವತಿಯರು ಪೊಲೀಸ್ ಇಲಾಖೆಗೆ ಸೇರಲು ಸೂಕ್ತ ಮಾರ್ಗದರ್ಶನ ನೀಡಿದರು.
ಇದರೊಂದಿಗೆ ಪೊಲೀಸ್ ಹುತಾತ್ಮ ದಿನಾಚರಣೆಯ ಮಹತ್ವ, ರಸ್ತೆ ಸುರಕ್ಷತೆಯ ಕುರಿತು ಮಾಹಿತಿ ಹಾಗೂ ಸಂಚಾರ ನಿಯಮಗಳು, ಮಾದಕದ್ರವ್ಯ ಸೇವನೆ, ಸೈಬರ್ ಅಪರಾಧ ಬಗ್ಗೆ ಕಾನೂನು ಅರಿವು ಮೂಡಿಸಲಾಯಿತು.
ಶಿರ್ವ : ನವೆಂಬರ್ ೧ರಂದು ಎಣ್ಣೆ ದೀಪದ ಬೀದಿ ದೀಪ ಉದ್ಘಾಟನಾ ಕಾರ್ಯಕ್ರಮ

Posted On: 29-10-2021 05:33PM
ಶಿರ್ವ : ವಿದ್ಯುತ್ ದೀಪಗಳು ಇಲ್ಲದ ಹಲವು ವರ್ಷಗಳ ಹಿಂದೆ ರಸ್ತೆಬದಿಗಳಲ್ಲಿ ಅಲ್ಲಲ್ಲಿ ಎಣ್ಣೆ ದೀಪದ ಬೀದಿ ದೀಪಗಳು ಕಂಡುಬರುತ್ತಿದ್ದವು ಕಲ್ಲಿನ ಕಂಬದಲ್ಲಿ ದೀಪವನ್ನು ಎಣ್ಣೆ ಹಾಕಿ ಇರಿಸಲಾಗುತ್ತಿತ್ತು ದಾರಿಯಲ್ಲಿ ಹೋಗುವವರಿಗೆ ಸ್ಥಳದ ಗುರುತುಹಿಡಿಯಲು ರಸ್ತೆಯಲ್ಲಿ ಹೋಗುವಾಗ ಬೆಳಕಿಗಾಗಿ ಹಾಗೂ ಬ್ಯಾಟರಿ ಗಳಿಲ್ಲದ ಆ ಕಾಲದಲ್ಲಿ ತೂಟ /thute / ಹಿಡಿದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಅದನ್ನು ಉರಿಸಲು ಈ ಎಣ್ಣೆ ದೀಪದ ಬೀದಿದೀಪದ ಉದ್ದೇಶವಾಗಿತ್ತು.

ಇಂತಹ ಬೀದಿದೀಪ ಒಂದು ಬಂಟಕಲ್ಲು ಮಾಧವ ಕಾಮತ್ ರವರ ಮನೆ ಬಳಿ ಇದ್ದ ಬಗ್ಗೆ ತಿಳಿದಿದ್ದು, ಅಲ್ಲೇ ಸಮೀಪದಲ್ಲಿ ಹೋಟೆಲ್ ಒಂದನ್ನು ನಡೆಸುತ್ತಿದ್ದ ದಿ| ನಾರಾಯಣ ನಾಯಕ್ ಎಂಬವರು ಈ ಕಂಬದಲ್ಲಿರುವ ದೀಪಕ್ಕೆ ಎಣ್ಣೆ ಹಾಕಿ ಸಂಜೆ ಹೊತ್ತಿಗೆ ದೀಪ ಉರಿಸುತ್ತಿದ್ದರು. ಅವರ ನಂತರ ಮಾನಿಪ್ಪಾಡಿ ಪುಂಡಲೀಕ ನಾಯಕ್ ರವರು ದೀಪ ಹಚ್ಚುವುದನ್ನು ಮುಂದುವರಿಸಿದ್ದರು.
ಸುಮಾರು ನಲವತ್ತು, ಐವತ್ತು ವರ್ಷಗಳ ಹಿಂದಿನಿಂದ ಅಶ್ವತ್ಥ ಮರದ ಹತ್ತಿರವಿದ್ದ ಈ ಕಲ್ಲಿನ ಕಂಬವು ಇತ್ತೀಚಿನ ಕೆಲವು ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಸಮಯದಲ್ಲಿ ಮುರಿದುಬಿದ್ದಿತ್ತು. ಹಳೆಯ ನೆನಪನ್ನು ಮರಳಿ ತರುವ ಯತ್ನವಾಗಿ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಧವ ಕಾಮತ್ ರವರ ನೇತೃತ್ವದಲ್ಲಿ ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರ ಸಹಕಾರದೊಂದಿಗೆ ನೂತನ ಎಣ್ಣೆ ದೀಪದ ಬೀದಿ ದೀಪ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ ೧, ಸೋಮವಾರ ಕರ್ನಾಟಕ ರಾಜ್ಯೋತ್ಸವದ ಶುಭದಿನದಂದು ಸಂಜೆ 6 ಗಂಟೆಗೆ ಬಂಟಕಲ್ಲು ಮಾಧವ ಕಾಮತ್ ರವರ ಮನೆಯ ಬಳಿ ಲೋಕಾರ್ಪಣೆಗೊಳ್ಳಲಿದೆ.
ನಮ್ಮ ರಾಜ್ಯದಲ್ಲಿಯೇ ನಡೆಯುವ ಈ ವಿನೂತನ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ರಾಮರಾಯ ಪಾಟ್ಕರ್, ಅತಿಥಿಗಳಾಗಿ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುಂಡಲೀಕ ಮರಾಟೆ, ಪುಂಡಲೀಕ ನಾಯಕ್ ಮಾನಿಪ್ಪಾಡಿ, ಶಂಕರ್ ನಾಯಕ್ ಬಂಟಕಲ್ಲು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ : ಜಾಗೃತಿ ಅರಿವು ಸಪ್ತಾಹ - 2021

Posted On: 29-10-2021 04:36PM
ಶಿರ್ವ: ಇಂದು ದೇಶದಲ್ಲಿ ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ಭ್ರಷ್ಟಾಚಾರ. ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿ, ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಇಂದಿನ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ 'ಜಾಗೃತಿ ಅರಿವು ಸಪ್ತಾಹ-2021' ಏರ್ಪಡಿಸಲಾಯಿತು.
ಪ್ರತಿಯೊಬ್ಬ ನಾಗರಿಕ ಪ್ರಜೆಯೂ ಯಾವುದೇ ಭ್ರಷ್ಟಾಚಾರಕ್ಕೆ ಒಳಪಡದೆ ಅಂಥವರ ವಿರುದ್ಧ ಹೋರಾಡಲು ಸೂಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾನೂನು ರಕ್ಷಣೆ - ದೇಶ ಪ್ರಗತಿಯಲ್ಲಿ ಕೈಜೋಡಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರ ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾವಿಧಿಯನ್ನು ಕಾಲೇಜಿನ ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಬೋಧಿಸುವ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ವಿಠ್ಠಲ ನಾಯಕ್, ಐಕ್ಯೂಎಸಿ ಸಂಯೋಜಕ ಮೆಲ್ವಿನ್ ಕ್ಯಾಸ್ಟಲಿನೊ, ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ಸಂಯೋಜಿಸಿದರು.
ನವೆಂಬರ್ 2 : ಅಯೋಧ್ಯಾ ಬಲಿದಾನ್ ದಿವಸ್ ಪ್ರಯುಕ್ತ ರಕ್ತದಾನ ಶಿಬಿರ

Posted On: 29-10-2021 12:37AM
ಕಾಪು : ವಿಶ್ವ ಹಿಂದೂ ಪರಿಷದ್, ಬಜರಂಗದಳ ಮಾತೃ ಶಕ್ತಿ ದುರ್ಗಾವಾಹಿನಿ ಕಾಪು ತಾಲೂಕು ಹಾಗೂ ಜಿಲ್ಲಾಸ್ಪತ್ರೆ ಉಡುಪಿ ಜಿಲ್ಲೆ ಇವರ ಸಹಭಾಗಿತ್ವದಲ್ಲಿ ಅಯೋಧ್ಯಾ ಬಲಿದಾನ್ ದಿವಸ್ ಪ್ರಯುಕ್ತ ನವೆಂಬರ್ 2 ರಂದು ಬೆಳಗ್ಗೆ 8:30 ರಿಂದ ಮಧ್ಯಾಹ್ನ 1ಗಂಟೆಯವರೆಗೆ ಶಿರ್ವದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.