Updated News From Kaup

ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ವ್ಯವಸ್ಥೆಗೆ ಆದ್ಯತೆ: ಜಂಟಿ ಮುಖ್ಯ ಚುನಾವಣಾಧಿಕಾರಿ ಡಿ.ಶಂಭುಶೆಟ್ಟಿ

Thumbnail
Posted On: 06 Feb 2022, 09:49 AM

ಉಡುಪಿ : ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ವ್ಯವಸ್ಥೆಯ ಬಳಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಚುನಾವಣಾ ಪ್ರಕ್ರಿಯೆಯ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಬಗ್ಗೆ ಹೆಚ್ಚಿನ ತಾಂತ್ರಿಕ ಕೌಶಲ್ಯವನ್ನು ಪಡೆದುಕೊಳ್ಳುವಂತೆ ರಾಜ್ಯದ ಜಂಟಿ ಮುಖ್ಯ ಚುನಾವಣಾಧಿಕಾರಿ ಡಿ.ಶಂಭು ಶೆಟ್ಟಿ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ, ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ನೋಂದಣಿ ಅಭಿಯಾನದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳಾದ ಮತದಾರರ ನೊಂದಣಿ, ತಿದ್ದುಪಡಿಗಳನ್ನು ಆನ್ಲೈನ್ ಮೂಲಕ ಮಾಡಲು ಅವಕಾಶ ನೀಡಿದ್ದು, ಮತಗಟ್ಟೆ ಅಧಿಕಾರಿಗಳಿಗೆ ವಿವಿಧ ಆಪ್ಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ತರಬೇತಿಗಳನ್ನೂ ಸಹ ಆನ್ಲೈನ್ ಮೂಲಕವೇ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ, ಚುನಾವಣೆಯ ವಿವಿಧ ಹಂತದಲ್ಲಿ ಅತ್ಯಂತ ಸುಲಭ ಮತ್ತು ನಿಖರ ಹಾಗೂ ತ್ವರಿತ ಕಾರ್ಯನಿರ್ವಹಣೆಗಾಗಿ ಚುನಾವಣಾ ಆಯೋಗವು ಮತ್ತಷ್ಟು ವಿದ್ಯುನ್ಮಾನ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿದ್ದು, ಎಲ್ಲಾ ಆಧಿಕಾರಿಗಳು ಮತ್ತು ಸಿಬ್ಬಂದಿಗಳು ಇವುಗಳನ್ನು ಬಳಸುವ ಬಗ್ಗೆ ತಾಂತ್ರಿಕವಾಗಿ ತಿಳಿದುಕೊಳ್ಳಬೇಕು. ಈ ಬಗ್ಗೆ ಚುನಾವಣಾ ಆಯೋಗದಿಂದ ತರಬೇತಿಯನ್ನೂ ಸಹ ನೀಡಲಾಗುವುದು ಎಂದರು. ಉಡುಪಿ ಜಿಲ್ಲೆಯಲ್ಲಿ ಮತದಾರರ ವಿಶೇಷ ನೋಂದಣಿ ಆಭಿಯಾನವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಆಯೋಗದಿಂದ ಕೋರುವ ಯಾವುದೇ ವರದಿಯನ್ನು ಅತ್ಯಂತ ನಿಖರವಾಗಿ ಮತ್ತು ಶೀಘ್ರದಲ್ಲಿ ಉಡುಪಿ ಜಿಲ್ಲೆಯಿಂದ ನೀಡುತ್ತಿದ್ದು, ಇದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಮತದಾರರ ವಿಶೇಷ ನೋಂದಣಿ ಅಭಿಯಾನದ ನಂತರ ಜಿಲ್ಲೆಯಲ್ಲಿ 487676 ಪುರುಷರು, 525155 ಮಹಿಳೆಯರು, ಇತರೆ 11 ಸೇರಿ ಒಟ್ಟು 1012842 ಮಂದಿ ಮತದಾರರಿದ್ದು, ಇದರಲ್ಲಿ 18-19 ವಯೋಮಾನದ 8392 ಯುವ ಮತದಾರರಿದ್ದಾರೆ. ಯುವ ಮತದಾರರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸುವ ಅಗತ್ಯವಿದ್ದು, 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರವಹಿಸುವಂತೆ ತಿಳಿಸಿದ ಅವರು, ಒಬ್ಬನೇ ವ್ಯಕ್ತಿ ಎರಡು ಕಡೆಯಲ್ಲಿ ನೋಂದಣಿ ಆಗದಂತೆ ಮತ್ತು ಎರಡು ಎಪಿಕ್ ಕಾರ್ಡ್ಗಳನ್ನು ಪಡೆಯದಂತೆ ನೋಡಿಕೊಳ್ಳಿ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈ ಬಿಡುವ ಮುಂಚೆ ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿ ಎಂದರು. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇಡೀ ರಾಷ್ಟ್ರದಲ್ಲಿ ಕರ್ನಾಟಕದಲ್ಲಿ ಮಾತ್ರ ಚುನಾವಣೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ಈಗಿನಿಂದಲೇ ಪರಿಶೀಲನೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಮತದಾನ ಕೇಂದ್ರಗಳನ್ನು ಪರಿಶೀಲಿಸಲು ಕೇಂದ್ರ ಚುನಾವಣಾ ಆಯೋಗದ ತಂಡ ಭೇಟಿ ನೀಡಲಿದೆ ಎಂದ ಅವರು, ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲಗಳಾಗದಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಸಭೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮಾನಿಟರಿಂಗ್ ಸೆಲ್ನ ಹಿರಿಯ ಸಮಾಲೋಚಕ ಬಿ.ಎಸ್.ಹಿರೇಮಠ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲೆಯ ಎಲ್ಲಾ ತಹಸೀಲ್ದಾರ್ಗಳು ಹಾಗೂ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಬನ್ನಂಜೆ ವರ್ತೆಕಾಳಿ ಕಲ್ಕುಡ ದೈವಸ್ಥಾನ - ಸಿರಿ ಸಿಂಗಾರದ ಕಾಲಾವಧಿ ನೆಮೋತ್ಸವ

Thumbnail
Posted On: 05 Feb 2022, 02:50 PM

ಉಡುಪಿ : ಜಿಲ್ಲೆಯ ಹಲವಾರು ವರ್ಷಗಳ ವರ್ಷಗಳ ಇತಿಹಾಸವಿರುವ ಶ್ರೀ ಬನ್ನಂಜೆ ವರ್ತೆಕಾಳಿ ಕಲ್ಕುಡ ದೈವಸ್ಥಾನ - ಬನ್ನಂಜೆ ಕಲ್ಕುಡ ಮನೆ , ಉಡುಪಿ ಇಲ್ಲಿ ಫೆಬ್ರವರಿ 8, ಮಂಗಳವಾರದಂದು ರಾತ್ರಿ 9 ಗಂಟೆಯಿಂದ ವರ್ತೆ ಕಲ್ಕುಡ ದೈವಗಳಿಗೆ ಸಿರಿ ಸಿಂಗಾರದ ಕಾಲಾವಧಿ ನೆಮೋತ್ಸವ ಜರಗಲಿದೆ. ಮಧ್ಯಾಹ್ನ 12 ಗಂಟೆಗೆ ದರ್ಶನ ಸೇವೆ ಹಾಗೂ 12.30ರಿಂದ ಮಹಾಅನ್ನಸಂತರ್ಪಣೆ ಹಾಗೂ ಸಂಜೆ 6 ಗಂಟೆಯಿಂದ ಭಜನೆ ಕಾರ್ಯಕ್ರಮ ಹಾಗೂ 7 ಗಂಟೆಯಿಂದ ದೈವ ದರ್ಶನ ಹಾಗೂ ಹೂವಿನ ಪೂಜೆ ನಡೆಯಲಿದೆ. ನಮ್ಮ ಉಡುಪಿ ಟಿವಿ ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ 6ರಿಂದ ನೆಮೋತ್ಸವದ ನೇರಪ್ರಸಾರವನ್ನು ವೀಕ್ಷಿಸಬಹುದು ಎಂದು ವಿಠಲ್ ಶೆಟ್ಟಿ ಹಾಗೂ ಕುಟುಂಬಸ್ಥರು ಬನ್ನಂಜೆ ಕಲ್ಕುಡ ಮನೆಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಣವು ಮನುಷ್ಯನ ಮೂಲಭೂತ ಹಕ್ಕು. ವಸ್ತ್ರಧಾರಣೆಯ ಆಧಾರದಲ್ಲಿ ಈ ಮೂಲಭೂತ ಹಕ್ಕಿನಿಂದ ವಂಚಿತಗೊಳಿಸುವುದು ಆಘಾತಕಾರಿ ಮತ್ತು ಸ್ವೀಕಾರಾರ್ಹವಲ್ಲ :ಎಸ್.ಐ.ಓ ಕರ್ನಾಟಕ

Thumbnail
Posted On: 05 Feb 2022, 02:37 PM

ಉಡುಪಿ :ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶಿಸದಂತೆ ಕಾಲೇಜು ಪ್ರಾಂಶುಪಾಲರು ಗೇಟ್‌ಗಳನ್ನು ಮುಚ್ಚಿದ ಘಟನೆ ಕುಂದಾಪುರದಲ್ಲಿ ನಡೆದಿದ್ದು, ಇದು ಅತ್ಯಂತ ಕಳವಳಕಾರಿಯಾಗಿದೆ. ಈ ರೀತಿಯ ಹಠಾತ್ ಮತ್ತು ಅನಿಯಂತ್ರಿತ ಕ್ರಮಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಈ ವಿಚಾರಕ್ಕೆ ರಾಜಕೀಯ ಬಣ್ಣ ನೀಡುವ ಪ್ರಯತ್ನ ಖಂಡನೀಯ. ಕಾಲೇಜು ಅಧಿಕಾರಿಗಳು ಯಾವುದೇ ಗುಂಪಿನ ಒತ್ತಡದಲ್ಲಿ ಕಾರ್ಯನಿರ್ವಹಿಸಬಾರದು ಮತ್ತು ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಬೇಕು. ಅದೇ ಸಮಯ ವಿದ್ಯಾರ್ಥಿಗಳ ಸಾಂವಿಧಾನಿಕ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿ ಅವರ ಮೇಲಿದೆ. ಕೇವಲ ಹಿಜಾಬ್ ಧರಿಸುವುದಕ್ಕೆ ಯಾರೂ ಅಸಹನೆ ವ್ಯಕ್ತ ಪಡಿಸಬಾರದು. ಅದು ವ್ಯಕ್ತಿಯೋರ್ವರ ವೈಯುಕ್ತಿಕ ಹಕ್ಕಾಗಿ ಉಳಿಯಬೇಕು. ಶಿಕ್ಷಣವು ಮೂಲಭೂತ ಹಕ್ಕಾಗಿದೆ ಮತ್ತು ಆ ಬಗ್ಗೆ ನಿರ್ಬಂಧ ವಿಧಿಸಕೂಡದು. ತರಗತಿ ಕೊಠಡಿಗಳು ಕೇವಲ ಪಠ್ಯಕ್ರಮದಲ್ಲಿ ಸೂಚಿಸಲಾದ ವಿಷಯಗಳ ಕಲಿಕೆಗೆ ಮಾತ್ರ ಸೀಮಿತವಲ್ಲ ಬದಲಾಗಿ ಸಂವಹನದ ಮಾಡುವ ಸ್ಥಳವಾಗಿದೆ. ಪರಸ್ಪರ ಗೌರವದ ಆಧಾರದ ಮೇಲೆ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುವ ಮೂಲಕ ಪರಸ್ಪರ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಸ್ಥಳವಾಗಿದೆ. ವಿವಿಧ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳ ನಡುವೆ ಆರೋಗ್ಯಕರ ಚರ್ಚೆಯ ಮೂಲಕ ಪರಸ್ಪರ ಗೌರವವನ್ನು ಬೆಳೆಸುವುದಕ್ಕೆ ವಾತಾವರಣವನ್ನು ಒದಗಿಸಿ ಕೊಡುವ ಜವಾಬ್ದಾರಿ ಕಾಲೇಜುಗಳದ್ದು. ಸಂಕುಚಿತ, ಪಂಥೀಯ ಅಜೆಂಡಾ ಮತ್ತು ಪಕ್ಷಪಾತವು ವಸ್ತುನಿಷ್ಠ ಶಿಕ್ಷಣವನ್ನು ನಿಗ್ರಹಿಸಬಾರದು. ನಾವು ನಿರ್ಮಿಸಲು ಬಯಸುವ ಸಮಾಜದಲ್ಲಿ ಶಿಕ್ಷಣದ ಪಾತ್ರವು ಅವಿಭಾಜ್ಯವಾಗಿದೆ. ವೈವಿಧ್ಯಮಯ ಮತ್ತು ಬಹುತ್ವದ ಸಮಾಜಕ್ಕೆ ಮುಕ್ತ ಮನಸ್ಸಿನ ಮತ್ತು ಸಹನಶೀಲ ವ್ಯಕ್ತಿಗಳ ಅಗತ್ಯವಿದೆ. ತಾರತಮ್ಯದ ಅಭ್ಯಾಸಗಳು ಯಾವುದೇ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆಯ ಭಾಗವಾಗಬಾರದು. ಏಕರೂಪತೆಯನ್ನು ಹೇರಲು ಸಮವಸ್ತ್ರ ಅಥವಾ ಡ್ರೆಸ್ ಕೋಡ್ ಅನ್ನು ಬಳಸಬಾರದು. ಅಲ್ಲದೆ, ಸಮವಸ್ತ್ರ/ಡ್ರೆಸ್ ಕೋಡ್ ಯಾರಿಗೂ ತಾರತಮ್ಯ ಮಾಡಬಾರದು ಮತ್ತು ಅದನ್ನು ಧರಿಸಬೇಕಾದವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವಷ್ಟು ಕಠಿಣವಾದ ಉಡುಪಾಗಿರಬಾರದು. ಕೂಡಲೇ ಆ ವಿದ್ಯಾರ್ಥಿನಿಯರನ್ನು ತರಗತಿಗೆ ಅನುಮತಿಸುವಂತೆ ಎಸ್.ಐ ಓ ಕರ್ನಾಟಕವು ಕಾಲೇಜಿನ ಆಡಳಿತ ಮಂಡಳಿಗೆ ಆಗ್ರಹಿಸುತ್ತದೆ. ಅವರು ಕಲಿಕೆಯನ್ನು ಮುಂದುವರಿಸಲಿ ಮತ್ತು ಅವರು ಏನು ಧರಿಸುತ್ತಾರೆ ಎಂಬುದನ್ನು ಸ್ವತಃ ಅವರೇ ನಿರ್ಧರಿಸಲಿ. ಸಂಬಂಧಪಟ್ಟ ಅಧಿಕಾರಿಗಳು ವ್ಯಕ್ತಿಗಳ ಸಾಂವಿಧಾನಿಕ ಹಕ್ಕುಗಳನ್ನು ಗೌರವಿಸುವುದು ಮತ್ತು ಪ್ರಸ್ತಾವಿತ ಸಮವಸ್ತ್ರ ಮಾರ್ಗಸೂಚಿಯ ಏಕರೂಪತೆಯನ್ನು ಜಾರಿಗೊಳಿಸುವ ಅಥವಾ ಸಂವಿಧಾನ ಖಾತರಿಪಡಿಸಿರುವ ಹಕ್ಕುಗಳನ್ನು ಉಲ್ಲಂಘಿಸುವ ಕಾರ್ಯ ಮಾಡುವುದಿಲ್ಲ ಎಂದು SIO ಕರ್ನಾಟಕವು ಇಲಾಖೆಯಿಂದ ನಿರೀಕ್ಷಿಸುತ್ತದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಎಸ್ ಐ ಓ ಕರ್ನಾಟಕವು ಪ್ರಯತ್ನಿಸಲಿದೆ ಎಂದು ಎಸ್ ಐ ಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ನಾಸೀರ್ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

ಕಲ್ಯಾಣಪುರ ರೋಟರಿ ಕ್ಲಬ್ : ಮಾದಕವಸ್ತುಗಳ ದುಷ್ಪರಿಣಾಮಗಳ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ

Thumbnail
Posted On: 05 Feb 2022, 02:30 PM

ಉಡುಪಿ‌: ಕಲ್ಯಾಣಪುರದ ಟಿ.ಎಂ.ಎ ಪೈ ಪ್ರೌಢ ಶಾಲೆಯ ಇಂಟರ್ಯಾಕ್ಟ್ ಕ್ಲಬ್ (Interact Club) ಹಾಗೂ ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ಮಾದಕವಸ್ತುಗಳ ದುಷ್ಪರಿಣಾಮಗಳ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು. ದೊಡ್ಡಣಗುಡ್ಡೆ ಎ.ವಿ ಬಾಳಿಗಾ ಆಸ್ಪತ್ರೆಯ ಮಾನಸಿಕ ಆರೋಗ್ಯ ಸಲಹೆಗಾರರಾಗಿರುವ ಪದ್ಮ ರಾಘವೇಂದ್ರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಕಲ್ಯಾಣಪುರ ರೋಟರಿ ಕ್ಲಬ್ ಅಧ್ಯಕ್ಷ ಶಂಭುಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರಕಾಶ್, ಸದಸ್ಯರಾದ ರಾಮ ಪೂಜಾರಿ, ವಿದ್ಯಾಧರ ಕಿಣಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಶೇಖರ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸುರೇಖ ವಂದಿಸಿದರು. ಸತ್ಯ ಶಂಕರ್ ಭಟ್ ನಿರೂಪಿಸಿದರು.

ಓಮಸತ್ವ ನೀಡುವ ನೆಪದಲ್ಲಿ ಒಂಟಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ

Thumbnail
Posted On: 04 Feb 2022, 05:09 PM

ಮಂಗಳೂರು : ಇಲ್ಲಿನ ಹೊರವಲಯದ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ‌ವಿಧವೆ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ಸ್ಥಳೀಯರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಗೂಸಾ ತಿಂದು ಪೋಲಿಸರ ಅತಿಥಿಯಾದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಮೊಹಮ್ಮದ್ ಇಕ್ಬಾಲ್ ಕೆಂಚನಕೆರೆ‌ ಎಂದು ಗುರುತಿಸಲಾಗಿದೆ. ಘಟನೆಯ ವಿವರ‌: ಬಜ್ಪೆ ಠಾಣಾ ವ್ಯಾಪ್ತಿಯ ಕಂದಾವರ ಗ್ರಾಮ ಪಂಚಾಯತ್ ನ ಕಜೆಪದವು ಎಂಬಲ್ಲಿ ಔಷಧಿ ಮಾರುವ ನೆಪದಲ್ಲಿ‌ ಮನೆಗೆ ಬಂದ ಆರೋಪಿ ಓಮಸತ್ವ ನೀಡುವ ನೆಪದಲ್ಲಿ ಮನೆಯಲ್ಲಿದ್ದ ವಿಧವೆ ಒಂಟಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಆ ಒಂಟಿ ಮಹಿಳೆ ಕಿರುಚಿದ್ದು, ಸಾರ್ವಜನಿಕರು ಕೂಡಲೇ ಮನೆ ಬಳಿ ಜಮಾಯಿಸಿದ್ದಾರೆ ಎನ್ನಲಾಗಿದೆ. ನಂತರ ಕಾಮುಕನಿಗೆ ಧರ್ಮದೇಟು ಬಿದ್ದಿದ್ದು, ಬಜ್ಪೆ ಪೋಲಿಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಮಹಿಳಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿ ಒಬ್ಬಂಟಿಯಾಗಿರುವ ಮಹಿಳೆಯರು ಅಪರಿಚಿತರಿಗೆ ವ್ಯಾಪಾರದ ನೆಪದಲ್ಲಿ ಮನೆಯ ಆವರಣ ಪ್ರವೇಶಿಸಲು ಬಿಡದೇ ಜಾಗೃತವಾಗಿರಬೇಕು ಎಂಬ ಒಕ್ಕಣೆಯ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ವಿಶ್ವ ಹಿಂದು ಪರಿಷದ್ ಬಜರಂಗದಳ ಕೊಡಿಬೆಟ್ಟು ಘಟಕದಿಂದ ಪಾದಯಾತ್ರೆ - ನಮ್ಮ ನಡಿಗೆ ಅಮ್ಮನೆಡೆಗೆ

Thumbnail
Posted On: 03 Feb 2022, 10:05 PM

ಉಡುಪಿ : ವಿಶ್ವ ಹಿಂದು ಪರಿಷದ್ ಬಜರಂಗದಳ ಪೆರ್ಣಂಕಿಲ, ಕೊಡಿಬೆಟ್ಟು ಘಟಕದಿಂದ ಪ್ರಥಮ ವರ್ಷದ ಸಾಮೂಹಿಕ ಪಾದಯಾತ್ರೆ ಕಾರ್ಯಕ್ರಮವಾದ ನಮ್ಮ ನಡಿಗೆ ಅಮ್ಮನೆಡೆಗೆ ಫೆಬ್ರವರಿ 6, ಆದಿತ್ಯವಾರ ಬೆಳಗ್ಗೆ 7.30ಕ್ಕೆ ಪೆರ್ಣಂಕಿಲ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಿಂದ ಕುಂಜಾರುಗಿರಿ ದುರ್ಗಾದೇವಿ ಸನ್ನಿಧಾನದವರೆಗೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎಲ್ಲೂರು : ವೀರಾಂಜನೇಯ ದೇವರಿಗೆ ಬೆಳ್ಳಿಯ ಕವಚ ಸಮರ್ಪಣೆ

Thumbnail
Posted On: 03 Feb 2022, 09:56 PM

ಕಾಪು : ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನ, ಎಲ್ಲೂರು ಇಲ್ಲಿ ಫೆಬ್ರವರಿ 5, ಶನಿವಾರ ಬೆಳಗ್ಗೆ 10.30ಕ್ಕೆ ಶ್ರೀ ವೀರಾಂಜನೇಯ ದೇವರ ಸನ್ನಿಧಿಯಲ್ಲಿ ಕೆ. ಲಕ್ಷ್ಮೀನಾರಾಯಣ ರಾವ್ ಮತ್ತು ಸಹೋದರರು, ಪಡುಕುದುರೆ ಇವರು ಸೇವಾ ರೂಪದಲ್ಲಿ ಶ್ರೀ ವೀರಾಂಜನೇಯ ದೇವರಿಗೆ ಬೆಳ್ಳಿಯ ಕವಚ ಸಮರ್ಪಣೆ ಮಾಡಲಿದ್ದಾರೆ. ಈ ಪುಣ್ಯಕಾರ್ಯದಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ ದನದ ಮಾಂಸ ವಶ ; ನಾಲ್ವರ ದಸ್ತಗಿರಿ

Thumbnail
Posted On: 03 Feb 2022, 05:17 PM

ಮಂಗಳೂರು : ಕಾಸರಗೋಡು ಕಡೆಯಿಂದ ಉಳ್ಳಾಲಕ್ಕೆ ಅಕ್ರಮವಾಗಿ ಇಂದು ಬೆಳಿಗ್ಗೆ 7ಗಂಟೆಗೆ ಮಾರುತಿ ಈಕೋ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 1 ಕ್ವಿಂಟಲ್ 60 ಕೆ ಜಿ ದನದ ಮಾಂಸವನ್ನು ಪತ್ತೆ ಹಚ್ಚಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಸರಗೋಡು ತಾಲೂಕು ಬಂದ್ಯೋಡು ಎಂಬಲ್ಲಿನ ಮೊಹಮ್ಮದ್ ಎಂಬವರಿಂದ ದನವನ್ನು ಖರೀದಿಸಿ ಅವರ ಮನೆಯಲ್ಲೇ ದನವನ್ನು ಕಡಿದು ಮಾಂಸ ಮಾಡಿ ಉಳ್ಳಾಲಕ್ಕೆ ತಂದು ಯುಸಿ ಇಬ್ರಾಹಿಂ ಕೋಡಿ ಎಂಬವರ ಕೋಡಿ ಮತ್ತು ಮುಕ್ಕಚ್ಚೇರಿಯಲ್ಲಿರುವ ಬೀಫ್ ಸ್ಟಾಲ್ ನಲ್ಲಿ ಮಾರಾಟ ಮಾಡುವುದಾಗಿದೆ. ಈಕೋ ಕಾರಿನಲ್ಲಿ ದನದ ಮಾಂಸ ಮೂರು ತಲೆಗಳು ದನದ ಚರ್ಮಗಳು ಪತ್ತೆ ಯಾಗಿರುತ್ತದೆ. ಈ ಪ್ರಕಾರಣದಲ್ಲಿ ನಾಲ್ಕು ಜನ ಆರೋಪಿಗಳಾದ ಮಂಗಳೂರಿನ ಚೆಂಬುಗುಡ್ಡೆ ಪೆರ್ಮನ್ನೂರಿನ ಹುಸೇನ್ (24), ಮಂಜಿಲ್ ಕೋಡಿ ಉಳ್ಳಾಲದ ಮಹಮ್ಮದ್ ಮುಜಾಂಬಿಲ್ (25), ಮಂಜಿಲ್ ಕೋಡಿ ಉಳ್ಳಾಲದ ಮಹಮ್ಮದ್ ಅಮೀನ್ (21), ಕೋಡಿ ಉಳ್ಳಾಲದ ಸೋಹೈಬ್ ಅಕ್ತರ್ (22) ದಸ್ತಗಿರಿ ಮಾಡಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಅಂದಾಜು ರೂಪಾಯಿ 3,10,000/- ಆಗಿರುತ್ತದೆ. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಮ್ ಶಂಕರ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವರಾದ ದಿನೇಶ್ ಕುಮಾರ್ ಬಿ ಪಿ ರವರ ಮಾರ್ಗದರ್ಶನದಲ್ಲಿ ನಗರ ಅಪರಾಧ ಪತ್ತೆ ವಿಭಾಗದ ಪೋಲಿಸು ನಿರೀಕ್ಷಕರಾದ ಮಹೇಶ್ ಪ್ರಸಾದ್ ರವರ ನೇತೃತ್ವದಲ್ಲಿ ಪಿ ಎಸ್ ಐ ರಾಜೇಂದ್ರ, ಎ ಎಸ್ ಐ ಮೋಹನ್ ಸಿಬಂದಿಗಳಾದ ಸುಬ್ರಹ್ಮಣ್ಯ ಕೆ. ಎನ್, ಮಣಿ ಎಂ. ಎನ್, ಅಬ್ದುಲ್ ಜಬ್ಬಾರ್, ಸುನಿಲ್ ಕುಮಾರ್ ಹಾಗೂ ಎ ಆರ್ ಎಸ್ ಐ ತೇಜ ಕುಮಾರ್ ಭಾಗವಸಿದ್ದರು.

ಬಹುಮುಖ ಪ್ರತಿಭೆ ರಶ್ಮಿ ಸನಿಲ್ ಗೆ ಆದಿಗ್ರಾಮೋತ್ಸವ ಯುವ ಸಿರಿ ಗೌರವ

Thumbnail
Posted On: 03 Feb 2022, 10:53 AM

ಮಂಗಳೂರು : ಕಾರ್ಕಳದ ಅಜೆಕಾರ್ ನಲ್ಲಿ ಡಾ || ಶೇಖರ್ ಅಜೆಕಾರ್ ಇವರು ಕಳೆದ 23 ವರುಷಗಳಿಂದ ನಡೆಸಿಕೊಂಡು ಬರುತ್ತಿರುವ ಆದಿ ಗ್ರಾಮೋತ್ಸವ ಎಂಬ ಕಾರ್ಯಕ್ರಮವು ಜನವರಿ 25ರಂದು ಜರುಗಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ ಶೆಣೈ ಉಡುಪಿ,ಗೌರವಾಧ್ಯಕ್ಷರು ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಇವರು ವಹಿಸಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭ ಹಲವಾರು ಗಣ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಉದ್ಯೋಗಿ ಮಂಗಳೂರಿನ ರಶ್ಮಿ ಸನಿಲ್ ಇವರಿಗೆ ಬಹುಮುಖ ಪ್ರತಿಭೆಗಾಗಿ ಆದಿಗ್ರಾಮೋತ್ಸವ ಯುವಸಿರಿ ಗೌರವ ನೀಡಿ ಸನ್ಮಾನಿಸಲಾಯಿತು.