Updated News From Kaup

ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಸಿಹಿ ಸುದ್ದಿ: ಅಡುಗೆ ಎಣ್ಣೆ, ಈರುಳ್ಳಿ ಸೇರಿ ಅಗತ್ಯ ವಸ್ತು ದರ ಇಳಿಕೆ

Posted On: 24-10-2021 08:17PM

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ದೀಪಾವಳಿ ಹಬ್ಬದ ಹೊತ್ತಲ್ಲಿ ಈರುಳ್ಳಿ ಮತ್ತು ಅಡುಗೆ ಎಣ್ಣೆ ದರ ಇಳಿಕೆಯಾಗಲಿದೆ. ಖಾದ್ಯ ತೈಲ, ಈರುಳ್ಳಿ ಮೊದಲಾದ ಅಗತ್ಯ ವಸ್ತುಗಳ ದರ ಇಳಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಈ ಬಗ್ಗೆ ಮಾಹಿತಿ ನೀಡಿ, ಮಾರುಕಟ್ಟೆಗೆ ಹೊಸ ಈರುಳ್ಳಿ ಬರುತ್ತಿದ್ದು, ಬೆಲೆ ಕಡಿಮೆಯಾಗಲಿದೆ. ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ರಾಜ್ಯಗಳು ಮುಂದಿನ ವಾರದಿಂದ ಅಡುಗೆ ಎಣ್ಣೆ ದಾಸ್ತಾನು ಮೇಲೆ ಮಿತಿ ಹೇರಲು ಆರಂಭಿಸುವುದರಿಂದ ಬೆಲೆ ಕಡಿಮೆಯಾಗಲಿದೆ. ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ದೇಶಕ್ಕೆ ಪೂರೈಕೆಯಾಗುತ್ತಿದ್ದಂತೆ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ ಎನ್ನಲಾಗಿದೆ.

ಬರ್ಕೆ : ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಡಿಜೆ ಸೌಂಡ್ ನ ಅಬ್ಬರ, ಸಾರ್ವಜನಿಕರಿಗೆ ತೊಂದರೆ - ಬಾರ್ ಮಾಲಕರ ವಿರುದ್ಧ ದೂರು ದಾಖಲು

Posted On: 24-10-2021 05:53PM

ಮಂಗಳೂರು : ಇಲ್ಲಿನ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ M G ರಸ್ತೆಯಲ್ಲಿರುವ Onyx Air Lounge and Kitchen ಎಂಬ ಹೆಸರಿನ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕಾನೂನುಬಾಹಿರವಾಗಿ ಕರ್ನಾಟಕ ಪೊಲೀಸ್ ಕಾಯ್ದೆ, ಅಬಕಾರಿ ಕಾಯ್ದೆ ಹಾಗೂ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಲೌಡ್ ಸ್ಪೀಕರ್ ಮೂಲಕ ಡಿಜೆ ಸೌಂಡ್ ನ ಅಬ್ಬರದ ಸಂಗೀತವನ್ನು ಹಾಕಿ ನೆರೆಕರೆಯ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದೂ ಅಲ್ಲದೆ ನಿಗದಿತ ಅವಧಿಯನ್ನು ಮೀರಿ ಮದ್ಯ ಸರಬರಾಜು ಮಾಡುತ್ತಿದ್ದು ಅಲ್ಲಿ ಮದ್ಯ ಸೇವನೆಗೆ ಬಂದಿದ್ದ ಗ್ರಾಹಕರು ಅವರವರ ವಾಹನಗಳನ್ನು ಕಟ್ಟಡದ ಹೊರಗೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದು ಮಂಗಳೂರು ನಗರ ಸಿಸಿಬಿ ಹಾಗೂ ಬರ್ಕೆ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಈ ಸಂದರ್ಭ ಅಬ್ಬರದ ಸಂಗೀತ ಉಂಟುಮಾಡಲು ಉಪಯೋಗಿಸುತ್ತಿದ್ದ Pioneer ಕಂಪನಿಯ DJ Console, Pro Voice DJ Console, Laptop ಹಾಗೂ Processor ಸೇರಿದಂತೆ ಒಟ್ಟು 7,66,500/- ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಅಮಾನತ್ತುಪಡಿಸಿ ಸದರಿ ಬಾರ್ ಅಂಡ್ ರೆಸ್ಟೋರೆಂಟ್ ನ ಮಾಲಕರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ, ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಸಾಂಕ್ರಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಪ್ರಕರಣದ ತನಿಖೆಯನ್ನು ಮುಂದುವರೆಸಲಾಗಿದೆ.

ಭತ್ತ ಖರೀದಿ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

Posted On: 23-10-2021 08:23PM

ಉಡುಪಿ : ಜಿಲ್ಲೆಯಲ್ಲಿ ಭತ್ತದ ಕಟಾವು ಆರಂಭಗೊಳ್ಳುತ್ತಿದ್ದು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ,ಉಡುಪಿ,ಕಾರ್ಕಳ ಮತ್ತು ಕುಂದಾಪುರದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತಂತೆ ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ ನಡೆದ, ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸಾಮಾನ್ಯ ಭತ್ತಕ್ಕೆ ಪ್ರತೀ ಕ್ವಿಂಟಾಲ್ ಗೆ ರೂ.1940 ಮತ್ತು ಗ್ರೇಡ್ ಎ ಭತ್ತಕ್ಕೆ ರೂ. 1960 ದರ ನಿಗಧಿಪಡಿಸಿದ್ದು, ಜಿಲ್ಲೆಯ ರೈತರಿಂದ ಭತ್ತ ಖರೀದಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಭತ್ತ ಖರೀದಿ ಕೇಂದ್ರಗಳಿಗೆ ಗ್ರೇಡರ್ ಗಳನ್ನು ನೇಮಿಸುವಂತೆ ಮತ್ತು ಗೋದಾಮು ಗಳನ್ನು ಸಿದ್ದಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಜಿಲ್ಲೆಯ 20 ಅಕ್ಕಿ ಮಿಲ್ಲುಗಳ ಮಾಲೀಕರು ಭತ್ತವನ್ನು ಹಲ್ಲಿಂಗ್ ಮಾಡಿಕೊಡಲು ಒಪ್ಪಿದ್ದು, ಜಿಲ್ಲೆಯ ರೈತರು ಬೆಳೆದ ಎಫ್.ಎ.ಕ್ಯೂ ಮಾದರಿಯ ಎಂಓ 04, ಜಯ,ಕಜೆ ಜಯ,ಜ್ಯೋತಿ ಬತ್ತದ ತಳಿಗಳನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಿ, ಸಾರ್ವಜನಿಕ ವಿತರಣಾ ಪದ್ದತಿಯಲ್ಲಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೃಷಿ, ತೋಟಗಾರಿಕೆ, ಸಹಕಾರ ಇಲಾಖೆ ಮತ್ತು ಕೃಷಿ ಮಾರಾಟ ಇಲಾಖೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಡಳಿತ ಸೇವೆಗೆ ಬನ್ನಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Posted On: 23-10-2021 08:12PM

ಉಡುಪಿ : ಜಿಲ್ಲೆಯ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಡಳಿತ ಸೇವೆಗೆ ಸೇರ್ಪಡೆಗೊಳ್ಳಬೆಕು, ಈ ಮೂಲಕ ಸಮಾಜದಲ್ಲಿ ತಮ್ಮ ಚಿಂತನೆಯ ಬದಲಾವಣೆಯನ್ನು ತರಬಹುದು ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ಹೇಳಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಸಹಯೋಗದಲ್ಲಿ ಶುಕ್ರವಾರ ಮಣಿಪಾಲ ರಜತಾದ್ರಿ ಸಭಾಂಗಣದಲ್ಲಿ ಆಯೋಜಿಸಿದ್ದ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಕುರಿತು ಹಮ್ಮಿಕೊಂಡ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ತರಬೇತಿ ಕಾರ್ಯಾಗಾರವನ್ನು ಆಫ್ಲೈನ್ ಮತ್ತು ಆನ್ ಲೈನ್ ಎರಡೂ ಮಾದರಿಯಲ್ಲಿ ನಡೆಸುವ ಚಿಂತನೆಯಿದ್ದು, ಸ್ಪರ್ದಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೊದಲು ತಮ್ಮ ಬಗ್ಗೆ ತಾವೇ ಅರಿತಿರಬೇಕು,ಆಸಕ್ತಿಯಿರುವ ಕ್ಷೇತ್ರಗಳ ಬಗ್ಗೆ ತಿಳಿದಿರಬೇಕು. ಸಾಧನೆಯ ಹಾದಿಯಲ್ಲಿ ವೈಪಲ್ಯಗಳು ಎದುರಾದರೂ ಮುನ್ನೆಡೆದು ಗುರಿ ಸಾಧಿಸಬೇಕು , ಶ್ರಮ ಪಟ್ಟರೆ ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟು ಜನರು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆ ಬರೆಯಲು ಮುಂದಾಗುತ್ತಿದ್ದಾರೆ. ಆಡಳಿತ ಸರಿ ಇಲ್ಲ ಎನ್ನುವ ಯುವಕರೇ ನಾಗರಿಕ ಸೇವೆಗೆ ಬಂದು ಸರಿಪಡಿಸುವ ಪ್ರಯತ್ನಕ್ಕೆ ಮುಂದಾಗಬೇಕು , ಸುಶಿಕ್ಷಿತರ ಜಿಲ್ಲೆಯಾದ ಉಡುಪಿಯಲ್ಲಿ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಯತ್ತ ಒಲವು ತೋರಿಸುವವರ ಸಂಖ್ಯೆ ತುಂಬ ವಿರಳ. ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಒಂದು ಪ್ರದೇಶದಲ್ಲಿ ಕನಿಷ್ಠವೆಂದರು 10 ಅಭ್ಯರ್ಥಿಗಳು ತಯಾರಿ ನಡೆಸುತ್ತಾರೆ ಎಂದರು. ಯುಪಿಎಸ್ಸಿ ರ್ಯಾಂಕ್ ಆಧಾರದ ಮೇಲೆ ಒಟ್ಟು 19 ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಸ್ಥಳೀಯ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗಿನ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಬಹುದಾಗಿದೆ. ವ್ಯವಸ್ಥೆಯನ್ನು ಬದಲಿಸಬೇಕು ಎನ್ನುವ ಹಂಬಲವಿರುವ ಯುವಜನರು ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ನಡೆಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾತನಾಡಿದರು. ದ.ಕ. ಪ್ರೋಬೆಷನರಿ ಐಎಎಸ್ ಅಧಿಕಾರಿ ಎನ್.ಎಂ.ಎ. ಅಕ್ರಂ ಶಾ, ಕುದುರೆಮುಖ ವನ್ಯ ಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಅಜಿತ್ ಪಾಟೀಲ್ ತಮ್ಮ ಸಾಧನೆಯ ಹಾದಿಯ ಬಗ್ಗೆ ವಿವರಿಸಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಉಡುಪಿ ಕೆಎಂಎಸ್ ಅಕ್ಷತಾ, ಜಿ.ಪಂ. ಯೋಜನಾಧಿಕಾರಿ ಬಾಬು ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಡಾ| ರೋಶನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ನೆಹರೂ ಯುವ ಕೇಂದ್ರದ ವಿಲ್ಫ್ರೆಡ್ ಡಿ'ಸೋಜಾ ಸ್ವಾಗತಿಸಿದರು.

ಮೂಳೂರು: ಪಾದಾಚಾರಿ ಮಹಿಳೆಗೆ ಕಾರು ಡಿಕ್ಕಿ, ಮೃತ್ಯು

Posted On: 23-10-2021 08:00PM

ಕಾಪು : ಇಲ್ಲಿನ ಠಾಣಾ ವ್ಯಾಪ್ತಿಯ ಮೂಳೂರು ಯೂನಿಯನ್ ಬ್ಯಾಂಕ್ ಎದುರು ರಾಹೆ 66 ರಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

ಮೃತ ಮಹಿಳೆಯನ್ನು ಮೂಳೂರು ಪಡು ನಿವಾಸಿ 45 ವರ್ಷದ ಆಯಿಸಮ್ಮ ಎಂದು ಗುರುತಿಸಲಾಗಿದೆ. ಅವರು ಮೂಳೂರು ಯೂನಿಯನ್ ಬ್ಯಾಂಕ್ ಗೆ ವ್ಯವಹಾರಕ್ಕೆಂದು ಬಂದಿದ್ದರು. ಬ್ಯಾಂಕ್ ರಜೆಯ ಕಾರಣ ಅವರು ವಾಪಸಾಗುತ್ತಿದ್ದ ಸಂದರ್ಭ, ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಬೊಲೇನೋ ಕಾರು ಡಿಕ್ಕಿ ಹೊಡೆದಿದೆ.

ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಹಾದಿಯಲ್ಲಿ ಅವರು ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಕಾಪು ಠಾಣಾಧಿಕಾರಿ ರಾಘವೇಂದ್ರ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕು ವತಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಕುರಿತು ತಹಶಿಲ್ದಾರರಿಗೆ ಮನವಿ

Posted On: 23-10-2021 12:23PM

ಕಾರ್ಕಳ : ವಿದ್ಯಾರ್ಥಿಗಳ ಹಲವು ಶೈಕ್ಷಣಿಕ ಸಮಸ್ಯೆಗಳಾದ ವಸತಿನಿಲಯ, ವಿದ್ಯಾರ್ಥಿ ವೇತನ, ಸರಿಯಾದ ಸಾರಿಗೆ ವ್ಯವಸ್ಥೆ ಕಲ್ಪಿಸಿ ಆದಷ್ಟು ಶೀಘ್ರದಲ್ಲಿ ಪರಿಹರಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕಿನಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ತಾಲೂಕು ಸಂಚಾಲಕ ಯುಕೇಶ್ ಉಜಿರೆ, ನಗರ ಸಹಕಾರ್ಯದರ್ಶಿ ಶಿವರುದ್ರ ಪಾಟೀಲ್, ಹಾಗೂ ಕಾಲೇಜು ಘಟಕ ಕಾರ್ಯದರ್ಶಿ ಸುಮಂತ್ ಪೂಜಾರಿ, ನಗರ ವಿದ್ಯಾರ್ಥಿನಿ ಸಹ ಪ್ರಮುಖ್ ಕಾಂತಿಶ್ರೀ ಹಾಗೂ ಪ್ರಮುಖ ಕಾರ್ಯಕರ್ತರಾದ ಗೌತಮ್ ಪೂಜಾರಿ, ಸುಶಾನ್, ಸನತ್ ಉಪಸ್ಥಿತರಿದ್ದರು.

ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಹಿಂಸಾಚಾರ ಖಂಡಿಸಿ ಪ್ರತಿಭಟನೆ

Posted On: 22-10-2021 08:33PM

ಪಡುಬಿದ್ರಿ : ಬಾಂಗ್ಲಾದೇಶದ ಹಿಂದುಗಳ ಮೇಲೆ ನಡೆಯುತ್ತಿರುವ ವ್ಯಾಪಕ ಹಿಂಸಾಚಾರ ಖಂಡಿಸಿ ಕಾಪು ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಪಡುಬಿದ್ರಿಯಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಉಚ್ಚಿಲ, ತಾಲೂಕು ಅಧ್ಯಕ್ಷ ಶಶಿಧರ ಹೆಗ್ಡೆ ಅಡ್ವೆ, ತಾಲೂಕು ಉಪಾಧ್ಯಕ್ಷ ಲೋಕೇಶ್ ಪಲಿಮಾರು, ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಸೂಡಾ, ಪಡುಬಿದ್ರಿ ವಲಯಾಧ್ಯಕ್ಷ ಪ್ರತೀಕ್ ನಂದಿಕೂರು, ಶಿರ್ವ ವಲಯ ಅಧ್ಯಕ್ಷ ರಕ್ಷಿತ್, ಹಿಂದು ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನೀತಾ ಗುರುರಾಜ್, ಶಿವಪ್ರಸಾದ್ ಶೆಟ್ಟಿ ಎರ್ಮಾಳ್, ಕೃಷ್ಣ ಕಂಚಿನಡ್ಕ, ಸುರೇಶ್ ಪೂಜಾರಿ ಪಾದೆಬೆಟ್ಟು, ಪಡುಬಿದ್ರಿ ವಲಯ ಉಪಾಧ್ಯಕ್ಷ ಉಮಾನಾಥ್ ಮೆಂಡನ್, ವಲಯ ಪ್ರಧಾನ ಕಾರ್ಯದರ್ಶಿ ಸುಹಾಸ್ ನಟವರ್ಯ, ಪಲಿಮಾರು ಘಟಕಾಧ್ಯಕ್ಷ ರಾಘವೇಂದ್ರ ಸುವರ್ಣ, ಉಪಾಧ್ಯಕ್ಷ ರಿತೇಶ್ ದೇವಾಡಿಗ, ನಂದಿಕೂರು ಘಟಕಾಧ್ಯಕ್ಷ ನಿತಿನ್ ಶೆಟ್ಟಿ, ಉಪಾಧ್ಯಕ್ಷ ಸುಕೇಶ್ ಕುಲಾಲ್, ಕಂಚಿನಡ್ಕ ಘಟಕಾಧ್ಯಕ್ಷ ಶಂಕರ್‌, ಉಪಾಧ್ಯಕ್ಷ ಶಿವು ಮತ್ತಿತರರು ಉಪಸ್ಥಿತರಿದ್ದರು.

ಕ್ಯಾನ್ಸರ್ ಬಾಧಿತರಿಗೆ ಕೇಶದಾನ ಮಾಡಿದ ಸುಧಾ ಪೂಜಾರಿ

Posted On: 22-10-2021 07:27PM

ಸುರತ್ಕಲ್ : ಸದಾ ತೆರೆಮರೆಯಲ್ಲಿ ನಿಸ್ವಾರ್ಥ ಸೇವಾ ಚಟುವಟಿಕೆಯನ್ನು ಮಾಡುತ್ತಿರುವ, ಇದೀಗ ಕ್ಯಾನ್ಸರ್ ರೋಗದಿಂದ ತಲೆ ಕೂದಲು ನಷ್ಟವಾಗುವ ರೋಗಿಗಳಿಗೆ ವಿಗ್‌ ತಯಾರಿಸಲು ತನ್ನ ಕೇಶವನ್ನು ದಾನ ಮಾಡಿದ್ದಾರೆ ಸುರತ್ಕಲ್ ಚೆಲ್ಯಾರ್ ನ ಸುಧಾ ಪೂಜಾರಿ.

ಈ ಕಾರ್ಯದ ಮೂಲಕ ಮಾನವೀಯತೆ ಮೆರೆದ ಸುಧಾ ಪೂಜಾರಿಯವರ ಸೇವಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಕಲ್ಯಾಣಪುರ ರೋಟರಿ ಕ್ಲಬ್ಬಿನಿಂದ ವಿವಿಧ ಸಾಮಾಜಿಕ ಚಟುವಟಿಕೆಗಳು

Posted On: 22-10-2021 07:19PM

ಉಡುಪಿ : ರೋಟರಿ ಜಿಲ್ಲೆ 3182 ಇದರ ಗವರ್ನರ್ ರಾಮಚಂದ್ರ ಮೂರ್ತಿ ಹಾಗೂ ರೋಟರಿ ಜಿಲ್ಲಾ ಪ್ರಥಮ ಮಹಿಳೆ ಸುರೇಖಾ ಪ್ರಪ್ರಥಮ ಬಾರಿಗೆ ಕಲ್ಯಾಣಪುರ ರೋಟರಿ ಕ್ಲಬ್ಬಿಗೆ ಅಧಿಕೃತವಾಗಿ ಭೇಟಿ ನೀಡಿದರು.

ಅಸಿಸ್ಟೆಂಟ್ ಗವರ್ನರ್, ಪದ್ಮನಾಭ ಕಾಂಚನ್ , ಅಧ್ಯಕ್ಷ ಶಂಭು ಶಂಕರ್, ಪೂರ್ಣಿಮಾ, ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ನಿಕಟಪೂರ್ವ ಗವರ್ನರ್ ರಾಜಾರಾಮ್ ಭಟ್, ನಿಕಟಪೂರ್ವ ಜಿಲ್ಲಾಕಾರ್ಯದರ್ಶಿ ಅಲೆನ್ ಲುಯಿಸ್, ವಲಯ ಸೇನಾನಿ ಬ್ರ್ಯಾನ್ ಡಿಸೋಜ ಹಾಗೂ ಸದಸ್ಯರು ಬರಮಾಡಿಕೊಂಡರು.

ಸಂತೆಕಟ್ಟೆ ಗೊರೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಕಲ್ಯಾಣಪುರ ರೋಟರಿ ಕ್ಲಬ್ಬಿನಿಂದ ನೀಡಲಾದ ಡಯಾಲಿಸಿಸ್ ಸೆಂಟರ್ ಗೆ ಭೇಟಿ ಪರಿಶೀಲಿಸಿ ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು. ಹಾಗೂ ನಾಮ ಫಲಕವನ್ನು ಅನಾವರಣಗೊಳಿಸಿದರು.

ನಂತರ ಮೌಂಟ್ ರೋಸಾರಿ ಹೈಸ್ಕೂಲ್ ಸಂತೆಕಟ್ಟೆ ಶಾಲೆಗೆ ಭೇಟಿ ನೀಡಿ ಸುಮಾರು ರೂ. 18,000 ಮೌಲ್ಯದ ಇನ್ಸಿನರೇಟರನ್ನು ಪ್ರಥಮ ಮಹಿಳೆ ಸುರೇಖ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೊಡುಗೆ ನೀಡಿದ ಬ್ಯಾಪ್ಟಿಸ್ಟ್ ಡಯಾಸ್ , ಶಾಲಾ ಮುಖ್ಯೋಪಾಧ್ಯಾಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಸ್ವಚ್ಛವಾದ ಶಾಂತಿಗುಡ್ಡೆ ಪರಿಸರ - ತಕ್ಷಣ ಸ್ಪಂದಿಸಿದ ಶಿರ್ವ ಪಂಚಾಯತ್

Posted On: 22-10-2021 11:41AM

ಶಿರ್ವ: ಕಾಪು-ಶಿರ್ವ ರಸ್ತೆಯ ಶಾಂತಿಗುಡ್ಡೆ ಎಂಬಲ್ಲಿ ಸಾರ್ವಜನಿಕರು ಘನ ಮತ್ತು ದ್ರವ ತ್ಯಾಜ್ಯಗಳು ಹಾಗು ಪ್ಲಾಸ್ಟಿಕ್ ವಸ್ತುಗಳನ್ನು ಮನ ಬಂದಂತೆ ರಸ್ತೆ ಬದಿಗೆ ಎಸೆಯುವುದರಿಂದ ಪರಿಸರದ ದನಕರುಗಳಿಗೆ ಮತ್ತು ಜನರಿಗೆ ತೊಂದರೆ ಉಂಟಾಗುವ ಬಗ್ಗೆ ಶಿರ್ವದ ಸಂತ ಮೇರಿ ಕಾಲೇಜಿನ ಉಪನ್ಯಾಸಕರಾದ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ನಮ್ಮ ಕಾಪು ವೆಬ್ ಪೋರ್ಟಲ್ ತಿಳಿಸಿದ ಹಿನ್ನೆಲೆಯಲ್ಲಿ ತಕ್ಷಣ ಸ್ಪಂದಿಸಿದ ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ ಆರ್ ಪಾಟ್ಕರ್ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.