ಜಿಲ್ಲೆಯಲ್ಲಿ 15 -18 ವರ್ಷದವರೆಗಿನ 53,555 ಮಕ್ಕಳಿಗೆ ಕೋವಿಡ್-19 ಲಸಿಕೆ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.
Thumbnail
ಉಡುಪಿ : ಜಿಲ್ಲೆಯಲ್ಲಿ ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 309 ಹೈಸ್ಕೂಲ್, 104 ಪದವಿ ಪೂರ್ವ ಕಾಲೇಜು, 21 ಐ.ಟಿ.ಐ ಇತ್ಯಾದಿ ಸಂಸ್ಥೆಗಳನ್ನು ಸೇರಿದಂತೆ ಒಟ್ಟು 434 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು, 15 ರಿಂದ 18 ವರ್ಷದವರೆಗಿನ 53,555 ಮಕ್ಕಳಿಗೆ ಲಸಿಕೆ ನೀಡಲು ಗುರಿಯನ್ನು ನಿಗದಿಪಡಿಸಲಾಗಿದೆ. 2007 ಹಾಗೂ ಇದಕ್ಕೂ ಮುನ್ನ ಜನಿಸಿರುವ ಮಕ್ಕಳು ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಅರ್ಹರಿದ್ದು, ಮಕ್ಕಳು ಕಲಿಯುತ್ತಿರುವ ಹೈಸ್ಕೂಲ್, ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಲಸಿಕಾ ಶಿಬಿರಗಳನ್ನು ಏರ್ಪಡಿಸಿ ಅರ್ಹ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ. ಶಾಲೆಯಿಂದ ಹೊರಗುಳಿದ ಅಥವಾ ಶಾಲೆ ಬಿಟ್ಟ ಮಕ್ಕಳಿಗೆ ಅವರು ವಾಸಿಸುವ ಸ್ಥಳದ ಹತ್ತಿರದ ಶಿಕ್ಷಣ ಸಂಸ್ಥೆಯ ಲಸಿಕಾ ಶಿಬಿರದಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳು ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಅಗತ್ಯವಿದ್ದು, ಪೋಷಕರು ಮಕ್ಕಳ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಮತ್ತು ಪೋಷಕರ ಮೊಬೈಲ್ ಸಂಖ್ಯೆ ನೀಡಿ ಮಕ್ಕಳು ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು. ಫಲಾನುಭವಿ ಮಕ್ಕಳು ಮೊಬೈಲ್ ಸಂಖ್ಯೆ ಬಳಸಿ ಅಥವಾ ಕೋವಿನ್ ಪೋರ್ಟಲ್ನಲ್ಲಿ ಈಗಾಗಲೇ ಇರುವ ಪೋಷಕರ ಅಕೌಂಟಲ್ಲಿ ನೋಂದಣಿ ಮಾಡಿಕೊಳ್ಳಬಹುದು ಅಥವಾ ಶಾಲೆಯ ಮಖ್ಯೋಪಾಧ್ಯಾಯರ ಹಾಗೂ ಶಿಕ್ಷಕರ ಮೊಬೈಲ್ ಸಂಖ್ಯೆ ಮೂಲಕ ಲಸಿಕಾ ಶಿಬಿರದಲ್ಲಿಯೂ ನೋಂದಣಿ ಮಾಡಿಕೊಳ್ಳಬಹುದು. ಪ್ರತಿ ಶಿಕ್ಷಣ ಸಂಸ್ಥೆ, ಕಾಲೇಜು ಹಾಗೂ ತರಬೇತಿ ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಯವರನ್ನು ನೇಮಿಸಲಾಗಿದ್ದು, ಮಕ್ಕಳು ಅಥವಾ ಪೋಷಕರು ಲಸಿಕಾಕರಣದ ಬಗ್ಗೆ ಮಾಹಿತಿ ಪಡೆಯಲು ಶಿಕ್ಷಣ ಸಂಸ್ಥೆಯ ನೋಡಲ್ ಅಧಿಕಾರಿ, ಮುಖ್ಯಸ್ಥರು ಅಥವಾ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಯವರನ್ನು ಸಂಪರ್ಕಿಸಬಹುದು. ಕೋವಿಡ್ ಲಸಿಕೆ ಪಡೆಯುವವರಿಗೆ ಯಾವುದೇ ಲಸಿಕಾ ಕೇಂದ್ರದಲ್ಲಿ ಕೋವಿಡ್-19 ಮಾದರಿ ಪರೀಕ್ಷೆ ನಡೆಸಲಾಗುವುದಿಲ್ಲ. ಲಸಿಕಾ ಶಿಬಿರ ನಡೆಯುವ ದಿನದಂದು, ಪೋಷಕರು ಲಸಿಕಾ ಶಿಬಿರ ಜರುಗುವ ಶಿಕ್ಷಣ ಸಂಸ್ಥೆಗಳಲ್ಲಿ ಉಪಸ್ಥಿತರಿದ್ದು, ಲಸಿಕಾ ಕಾರ್ಯಕ್ರಮಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
01 Jan 2022, 08:09 PM
Category: Kaup
Tags: