ಉಳ್ಳಾಲ : ಐಸಿಸ್ ಸಂಪರ್ಕದ ಹಿನ್ನೆಲೆ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಮಗನ ಸೊಸೆಯ ಬಂಧನ
Thumbnail
ಮಂಗಳೂರು: ಐಸಿಸ್ ಉಗ್ರರೊಂದಿಗೆ ಸಂಬಂಧದ ಆರೋಪದಡಿ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಮಗ ಬಿ.ಎಂ ಬಾಷಾ ಅವರ ಸೊಸೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಅವರನ್ನು ರಾಷ್ಟ್ರೀಯ ತನಿಖಾದಳ (ಎನ್‌ಐಎ) ಇಂದು ಉಳ್ಳಾಲದ ಮನೆಯಿಂದ ಬಂಧಿಸಿದೆ. ಇಂದು ಬೆಳಗ್ಗೆ ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಪುತ್ರ, ಬಿ.ಎಂ. ಬಾಷಾ ಮನೆಗೆ ಎನ್‌ಐಎ ನ ಸಹ ತನಿಖಾಧಿಕಾರಿ ಕೃಷ್ಣ ಕುಮಾರ್ ನೇತೃತ್ವದಲ್ಲಿ ಇತರ ಅಧಿಕಾರಿಗಳಾದ ಅಜಯ್ ಸಿಂಗ್ ಮತ್ತು ಮೋನಿಕಾ ಧಿಕ್ವಾಲ್ ಅವರ ತಂಡ ತೀವ್ರ ವಿಚಾರಣೆ ನಡೆಸಿ ದೀಪ್ತಿ ಅಲಿಯಾಸ್ ಮರಿಯಂಳನ್ನು ಬಂಧಿಸಿದ್ದಾರೆ. ನಂತರ ಮಂಗಳೂರು ನಗರದ ಜಿಲ್ಲಾಸ್ಪತ್ರೆ ವೆನ್ಲಾಕ್‌ಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ, ಮಂಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಬಳಿಕ ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದುಕೊಂಡು ಹೋಗಲಿದ್ದಾರೆಂಬ ಮಾಹಿತಿ ವ್ಯಕ್ತವಾಗಿದೆ. ಇದೇ ಕಳೆದ ಅಗಸ್ಟ್ 4ರಂದು ದಾಳಿ ನಡೆಸಿದ್ದ ಎನ್ ಐಎ ಅಧಿಕಾರಿಗಳು, ಅಂದು ಎರಡು ದಿನಗಳ ದಾಳಿಯ ಬಳಿಕ ಮಾಜಿ ಶಾಸಕ ಇದಿನಬ್ಬ ಅವರ ಪುತ್ರ ಬಿ.ಎಂ ಬಾಷಾ ಅವರ ಕಿರಿಯ ಪುತ್ರ ಅಬ್ದುಲ್ ರೆಹಮಾನರನ್ನು ಬಂಧಿಸಿದ್ದರು. ಈ ವೇಳೆ ಬಂಧಿತ ರೆಹಮಾನ್‌ನ ಪತ್ನಿ ದೀಪ್ತಿ ಆಲಿಯಾಸ್ ಮರಿಯಂ ಮೇಲೂ ಅನುಮಾನ ಬಂದಿತ್ತು. ಆದರೆ ಸಣ್ಣ ಮಗುವಿದ್ದ ಕಾರಣ ಎನ್‌ಐಎ ಕೇವಲ ವಿಚಾರಣೆ ನಡೆಸಿ ಬಿಟ್ಟಿತ್ತು. ಇದೀಗ ಮತ್ತೆ ಉಳ್ಳಾಲ ಮನೆಗೆ ಎನ್ ಐಎ ದಾಳಿ ನಡೆಸಿ ದೀಪ್ತಿ ಆಲಿಯಾಸ್ ಮರಿಯಂ ಬಂಧಿಸಿದೆ. ಇದೀಗ ಉಗ್ರವಾದಿ ಗುಂಪು ಐಸಿಸ್ ಸಂಪರ್ಕ ಪಡೆದಿದ್ದು ಯುವಕರನ್ನು ಸೇರಿಸುವ ಜಾಲದಲ್ಲಿ ಇದ್ದಾಳೆ ಎನ್ನುವ ಶಂಕೆಯಲ್ಲಿ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸಿ ಬಂಧಿಸಿದ್ದಾರೆ.
03 Jan 2022, 05:09 PM
Category: Kaup
Tags: