ಜಿಲ್ಲೆಯಲ್ಲಿ 4 ದಿನದಲ್ಲಿ 60,000 ಮಕ್ಕಳಿಗೆ ಕೋವಿಡ್ ಲಸಿಕೆ : ಶಾಸಕ ರಘುಪತಿ ಭಟ್
Thumbnail
ಉಡುಪಿ : ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಸುಮಾರು 60,000 ಮಕ್ಕಳಿಗೆ ಕೋವಿಡ್-19 ಲಸಿಕೆಯನ್ನು 4 ದಿನಗಳಲ್ಲಿ ಸಂಪೂರ್ಣವಾಗಿ ನೀಡುವ ಗುರಿ ಹೊಂದಲಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಇಂದು ನಗರದ ನಿಟ್ಟೂರು ಪ್ರೌಢಶಾಲೆಯಲ್ಲಿ ನಡೆದ, 15 ರಿಂದ 18 ವರ್ಷಗೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ವರಿಗೆ ಮೊದಲನೇ ಡೋಸ್ ಕೋವಿಡ್ ಲಸಿಕೆಯನ್ನು 96.3% ಹಾಗೂ ಎರಡು ಡೋಸ್ಗಳನ್ನು 84.3% ನೀಡಿದ್ದು, 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ನಿಂದ ರಕ್ಷಣೆ ನೀಡಲು ಲಸಿಕೆ ನೀಡುವ ಕಾರ್ಯವನ್ನು ಪ್ರಸ್ತುತ ಆರಂಭಿಸಿದ್ದು, ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು, ಇದು ಅತ್ಯಂತ ಸುರಕ್ಷಿತವಾಗಿದೆ. ಅರ್ಹ ಎಲ್ಲಾ ಮಕ್ಕಳು ಕೋವಿಡ್ ಲಸಿಕೆ ಪಡೆಯುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕು. ಪೋಷಕರು ಸಹ ಈ ಕಾರ್ಯಕ್ರಮಕ್ಕೆ ಸಹಕರಿಸಬೇಕು. ಮುಂದಿನ ದಿನಗಳಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಕೂಡ ಲಸಿಕೆ ಬರಲಿದೆ ಎಂದು ಶಾಸಕರು ಹೇಳಿದರು. ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಕೋವಿಡ್ ಹರಡುವುದನ್ನು ನಿಯಂತ್ರಿಸಲು ಎಲ್ಲರೂ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆಯುವುದು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡಿದ್ದಲ್ಲಿ ಮಾತ್ರ ಇದರ ನಿಯಂತ್ರಣ ಸಾಧ್ಯವಾಗಲಿದೆ. ಪರ್ಯಾಯ ಮಹೋತ್ಸವ ಕಾರ್ಯಕ್ರಮದಲ್ಲಿ ಸಹ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದವರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ರಘುಪತಿ ಭಟ್ ಹೇಳಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಮಕ್ಕಳು ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ನಿಂದ ಸಂಪೂರ್ಣ ಸುರಕ್ಷೆ ಪಡೆಯಲಿದ್ದು, ಭೌತಿಕವಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಲಿದೆ. ಸಾರ್ವಜನಿಕರು ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸೂಚಿಸುವ ಎಲ್ಲಾ ಮಾರ್ಗಸೂಚಿಗಳನ್ನು ಮತ್ತು ಕೋವಿಡ್ ಸಮುಚಿತ ವರ್ತನೆಗಳನ್ನು ಎಲ್ಲಡೆ ಪಾಲಿಸಬೇಕು. ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆಯಬೇಕು ಮತ್ತು ರೋಗ ಲಕ್ಷಣಗಳಿದ್ದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ನಗರಸಭಾ ಸದಸ್ಯ ಗಿರಿಧರ ಆಚಾರ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ನಿಟ್ಟೂರು ಪ್ರೌಢಶಾಲೆಯ ಪ್ರಾಂಶುಪಾಲೆ ಅನಸೂಯ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ, ನಾಗಭೂಷಣ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ ವಂದಿಸಿದರು.
03 Jan 2022, 06:16 PM
Category: Kaup
Tags: