ಗರ್ಭಪೂರ್ವ ಹಾಗೂ ಪ್ರಸವಪೂರ್ವ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.
ಉಡುಪಿ : ಗರ್ಭಪೂರ್ವ ಹಾಗೂ ಪ್ರಸವಪೂರ್ವ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅವರುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ಕಾಯಿದೆ ಬಗ್ಗೆ ಜಿಲ್ಲೆಯ ಸ್ಕ್ಯಾನಿಂಗ್ ಸೆಂಟರ್ಗಳ ಮಾಲೀಕರು ಮತ್ತು ವೈದ್ಯರಿಗೆ ಏರ್ಪಡಿಸಿದ ಅರಿವು ಮೂಡಿಸುವ ಕಾರ್ಯಗಾರದಲ್ಲಿ ಮಾತನಾಡಿದರು.
ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಸಮತೋಲನ ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇವುಗಳಲ್ಲಿ ಏರುಪೇರಾದರೆ ಅನೇಕ ಬದಲಾವಣೆಗಳು ಸಮಾಜದಲ್ಲಿ ಉಂಟಾಗುತ್ತವೆ. ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ 1000 ಗಂಡು ಮಕ್ಕಳಿದ್ದಾರೆ. 935 ಹೆಣ್ಣುಮಕ್ಕಳ ಸಂಖ್ಯೆಯಿದೆ ಎಂದರು.
ಪ್ರಸವಪೂರ್ವ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹ ಆರೋಪಿಗಳಿಗೆ 10 ವರ್ಷ ಜೈಲು ಹಾಗೂ ದಂಡ ವಿಧಿಸಲಾಗುವುದು ಎಂದ ಅವರು ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಸರ್ಕಾರ ಸೂಚಿಸಿರುವ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಒಂದೊಮ್ಮೆ ಪಾಲಿಸದಿದ್ದಲ್ಲಿ ಅಂತಹವರ ನೊಂದಣಿಯನ್ನು ರದ್ದುಪಡಿಸಲಾಗುವುದು ಎಂದರು.
ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಸಾರ್ವಜನಿಕರಿಗೆ ಎದ್ದು ಕಾಣುವ ರೀತಿಯಲ್ಲಿ ಭ್ರೂಣ ಲಿಂಗ ಪತ್ತೆ ಹಚ್ಚಿದಲ್ಲಿ ಆಗುವ ಶಿಕ್ಷೆಯ ಬಗ್ಗೆ ಸೂಚನಾ ಫಲಕಗಳನ್ನು ತಪ್ಪದೇ ಅಳವಡಿಸಬೆಕು. ಸ್ಕಾö್ಯನಿಂಗ್ ಕಾರ್ಯವನ್ನು ಕೈಗೊಳ್ಳುವ ವೈದ್ಯರ ಸಲಹಾ ಚೀಟಿ ಹೊಂದಿದಲ್ಲಿ ಮಾತ್ರ ಸ್ಕ್ಯಾನಿಂಗ್ ಕಾರ್ಯವನ್ನು ಮಾಡಬೇಕು ಎಂದರು.
18 ವರ್ಷದ ಒಳಗಿನವರು ಗರ್ಭಧಾರಣೆಯಾಗಿ ಅಥವಾ ಇನ್ನಿತರೆ ಕಾರಣಗಳಿಂದ ಪರೀಕ್ಷೆಗೆ ಬಂದಲ್ಲಿ ಅವರುಗಳಿಗೆ ಸ್ಕ್ಯಾನಿಂಗ್ ಕಾರ್ಯ ಕೈಗೊಳ್ಳಬೇಕು. ಗರ್ಭಧಾರಣೆಯಾಗಿರುವ ಬಗ್ಗೆ ಕಂಡುಬಂದಲ್ಲಿ, ಮಾಹಿತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಹಾಲಿ 75 ಸ್ಕ್ಯಾನಿಂಗ್ ಸೆಂಟರ್ಗಳು ಕಾರ್ಯನಿರ್ವಹಿಸುತ್ತಿವೆ ಎಂದ ಅವರು, ಪ್ರತಿವರ್ಷ ನಿಗಧಿತ ಕಾಲಾವಧಿಯೊಳಗೆ ಅನುಮತಿಯನ್ನು ನವೀಕರಣಗೊಳಿಸಿಕೊಳ್ಳಬೇಕು. ಪರೀಕ್ಷೆ ಮಾಡುವ ತಜ್ಷರು ಬದಲಾವಣೆ ಆದಾಗ ಸಹ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಿ.ಸಿ.ಪಿ.ಎನ್.ಡಿ.ಟಿ. ಸಲಹಾ ಸಮಿತಿ ಅಧ್ಯಕ್ಷ ಡಾ.ಪ್ರತಾಪ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್, ಜಿಲ್ಲೆಯ ವಿವಿಧ ಸ್ಕ್ಯಾನಿಂಗ್ ಸೆಂಟರ್ಗಳ ಮಾಲೀಕರು ಮತ್ತು ವೈದ್ಯರು ಉಪಸ್ಥಿತರಿದ್ದರು.
ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯಿದೆ ಬಗ್ಗೆ ವಕೀಲೆ ಮೇರಿ ಶ್ರೇಷ್ಠ ಉಪನ್ಯಾಸ ನೀಡಿದರು.
