ಯುಗಾದಿ, ಇಗಾದಿ ವಿಷು, ಬಿಸು
ಬೆನ್ನಿಗ್ ತೊಡಗ್ ಗ
ಇಗಾದಿ , ಯುಗಾದಿ , ವಿಷು ,ಬಿಸು ಹೀಗೆ ಆಚರಿಸಲ್ಪಡುವ ಹಬ್ಬ , ತುಳುವರ ಮೊತ್ತಮೊದಲ ಹಬ್ಬ ಸೌರಯುಗಾದಿ.
ನಾವು ಕೃಷಿ ಸಂಸ್ಕೃತಿಯಲ್ಲಿ ಬದುಕು ಕಟ್ಟಿದವರು .ಕೃಷಿಯ ಉತ್ಪನ್ನಗಳಲ್ಲಿ ಸಮೃದ್ಧಿಯನ್ನು ಕಂಡವರು .ನಾವು ಬೆಳೆಯುವ ಧಾನ್ಯವೇ ಧಾನ್ಯಲಕ್ಷ್ಮೀ ಎಂದು ಪರಿಗ್ರಹಿಸಿದವರು .ಇದಕ್ಕೆ ಕಾರಣ ಕೃಷಿ ಬೇಸಾಯವೇ ನಮಗೆ ಜೀವನಾಧಾರವಾಗಿತ್ತು .ಬೆನ್ನಿದ ಬದ್ಕ್ . ಮುಂದೆ ಬದಲಾಗುತ್ತಾ ಸಾಗಿಬಂತು .ಪ್ರಸ್ತುತ ಕೃಷಿ ಸಂಪೂರ್ಣ ಅವಗಣಿಸಲ್ಪಟ್ಟು ತುಳುನಾಡಿನಾದ್ಯಂತ ಪಡೀಲ್ ಹಡೀಲು ಗದ್ದೆಗಳನ್ನು ಅಥವಾ ಮಣ್ಣು ತುಂಬಿಸಿದ ಫಲವತ್ತಾದ ಪರಿವರ್ತಿತ ರೂಪಾಂತರಗೊಂಡ ,ವಿರೂಪಗೊಂಡ ಕೃಷಿಭೂಮಿಯನ್ನು ಕಾಣುತ್ತಿದ್ದೇವೆ .
ಪಗ್ಗುದ ತಿಂಗೊಡೆ
ಪಗ್ಗು ತಿಂಗಳ ತಿಂಗೊಡೆ ಅಂದರೆ ಪಗ್ಗುಡು ಒಂಜಿ ಪೋನಗ ಅಥವಾ ಮೇಷಮಾಸದ ಮೊದಲ ದಿನ ನಮಗೆ ಯುಗಾದಿ . ಸುಗ್ಗಿ ಮೀನ ಮಾಸ ತುಳು ತಿಂಗಳ ಯಾದಿಯಲ್ಲಿ ಕೊನೆಯ ತಿಂಗಳು .
ವಾರ್ಷಿಕ ಚಕ್ರ ಆರಂಭವಾಗುವುದು ಪಗ್ಗು ತಿಂಗಳಿನಿಂದ .
ಕೃಷಿಯೇ ಪ್ರಧಾನವಾಗಿರುವುದರಿಂದ ,
ನಾವು ಮಳೆಯನ್ನು ಆದರಿಸಿ ಬೆಳೆಯ ವಿಧಾನವನ್ನು ಅಂದರೆ 'ಕೃಷಿ ಸಂವಿಧಾನವನ್ನು ರೂಪಿಸಿಕೊಂಡವರು .ಸುದೀರ್ಘ ಅವಧಿಯ ಮಾನವ ಪ್ರಕೃತಿಯ ಸಂಬಂಧ , ಋತುಗಳು ,ಮಳೆ, ಚಳಿ, ಬೇಸಗೆ ಇಂತಹ ಸಹಜ ಬದಲಾವಣೆಗಳನ್ನು ಶತಮಾನ , ಶತಮಾನಗಳಷ್ಟು ಕಾಲ ಅನುಭವಿಸುತ್ತಾ ನಮ್ಮ ಜೀವನಾಧಾರವಾದ ಬೆನ್ನಿ ಕೃಷಿ ಬೇಸಾಯದ ಕ್ರಮವನ್ನು ಸಿದ್ಧಗೊಳಿಸಿದ ನಮ್ಮ ಪೂರ್ವಸೂರಿಗಳು ಕೃಷಿಯೇ ಸರ್ವೋತ್ಕೃಷ್ಟವಾದುದು , ಕೃಷಿ ಇದ್ದಲ್ಲಿ ದುರ್ಭಿಕ್ಷೆ ಇಲ್ಲ ಎಂಬುದನ್ನು ಮನಗಂಡರು .ಆದರೆ ಶತಮಾನ ದಾಟಿ ಸಹಸ್ರಮಾನ ಸಹಸ್ರಮಾನಕಾಲ ಸಾಗಿ ಬಂದ ಕೃಷಿಯಲ್ಲಿ ಒಂದು ಸತ್ಯವನ್ನು ದೇವರನ್ನು ನಮ್ಮ ಹಿರಿಯರು ಕಂಡಿದ್ದರು ಆದರೆ ನಾವು ಅವಗಣಿಸುತ್ತಿದ್ದೇವೆ .ಅದರ ಪರಿಣಾಮದ ಫಲವನ್ನು ನೇರವಾಗಿ ಪರೋಕ್ಷವಾಗಿ ಅನುಭವಿಸುತ್ತಿದ್ದೇವೆ . ಇದು ನಮ್ಮ ವಿಕೃತಿ . ಪ್ರಕೃತಿಯ ಮೇಲೆ ನಡೆಸಿದ ಅಭಿಯೋಗದ ಪರಿಣಾಮ .
ಯುಗಾದಿಯ ಶುಭನುಡಿಯನ್ನು ಹೇಳದೆ ಬೇರೆ ಏನನ್ನೋ ಬರೆಯುತ್ತಿದ್ದಾನಲ್ಲ, ಏಕೆ ಪ್ರಾರಂಭ ಮರೆತು ಹೋಯಿತೆ? ಖಂಡಿತ ಇಲ್ಲ .ಕೃಷಿ ಎಂದು ಬಂದಾಗ ಕೃಷಿ ಸಂಸ್ಕೃತಿಯ ಅವಗಣನೆಯನ್ನು ಹೇಳುತ್ತಲೇ ಇರುವುದು ನನ್ನ ಜಾಯಮಾನ .ಆದರೆ ಅದು ಸತ್ಯವೂ ಹಾದು ತಾನೆ?
ತುಳುವರು ಇಗಾದಿ, ಯುಗಾದಿ ವಿಷು, ಬಿಸು ದಿನದಂದು ವಾರ್ಷಿಕ ಕೃಷಿಗೆ ಆರಂಭಿಸುವ ಪವಿತ್ರದಿನ . ನಾಲೆರು ಮಾದಾವೊಡು , ಪುಂಡಿಬಿತ್ತ್ ಪಾಡೊಡು ಇದು ಯುಗಾದಿಯ ಆಚರಣೆ . ಪಗ್ಗು ತಿಂಗಳ ಮೊದಲ ದಿನ ಹೀಗೆ ಕೃಷಿಯನ್ನು ಸಾಂಕೇತಿಕವಾಗಿ ಆರಂಭಿಸುತ್ತಾ ಮುಂದೆ ಪಗ್ಗುಡು ಪದಿನೆಡ್ಮ ಪೋನಗ ಪೂರ್ಣ ಪ್ರಮಾಣದ ಬೇಸಾಯಕ್ಕೆ ಬೇಕಾದ 'ಬಿದೆ' ಅಂದರೆ ತಳಿಯನ್ನು ನಿರ್ಧರಿಸಿ ನೇಜಿ ಹಾಕುವ ಸಂಪ್ರದಾಯ .ಈ ನಡುವೆ ಉರಿನ ದೇವಾಲಯಗಳಲ್ಲಿ , ಮನೆಗಳಲ್ಲಿ ಯುಗಾದಿ ಫಲ ಓದುವ ಶಿಷ್ಟಾಚಾರವಿತ್ತು . ಈಗಲೂ ಕೆಲ ದೇವಳಗಳಲ್ಲಿ ,ಕೆಲವು ಮನೆಗಳಲ್ಲಿ ಓದುವ ಕ್ರಮ ರೂಢಿಯಲ್ಲಿದೆ . ಸುದೀರ್ಘವಾದ ಯುಗಾದಿ ಫಲದ ಓದುವಿಕೆಯಲ್ಲಿ ರೈತನಿಗೆ ಬೇಕಾದ್ದು ಈವರ್ಷ ಎಷ್ಟು ಕೊಳಗ ಮಳೆ ಬರುತ್ತದೆ ಮತ್ತು
ಕಜೆ ಬಿದೆ ಆವ , ಮಡಿ ಬಿದೆ ಆವ ಎಂಬ ತೀರ್ಮಾನಕ್ಕೆ ಬರುವುದೇ ಆಗಿದೆ .
ಪ್ರಕೃತಿಯನ್ನು ಓದುತ್ತಾ ಮಳೆ ಇಷ್ಟು ಬರಬಹುದು ಎಂದು ಊಹಿಸುತ್ತಾ ,
ಕೆಲವೊಂದ ಸಂಜ್ಞೆಗಳನ್ನು ಆಧರಿಸಿ ತಳಿ ನಿರ್ಣಯಿಸುತ್ತಿದ್ದು ಮುಂದೆ ಯುಗಾದಿ ಫಲವನ್ನು ಅವಲಂಬಿಸಿದ್ದು ವಿಕಾಸದ ಹಂತ ಎಂದು ತಿಳಿಯಬಹುದು .
ಆದರೆ ಈಗ ಇದೆಲ್ಲ ಅಪ್ರಸ್ತುತ . ಗಮನಿಸಿ. ಹೇಗೆ ಹಂತ ಹಂತವಾಗಿ ಮಳೆ ಆರಂಭವಾಗುತ್ತಾ ,ಸುರಿಯುತ್ತಾ ತೀವ್ರವಾಗುವ ಮೊದಲು ನೇಜಿ ಭತ್ತದ ಸಣ್ಣ ಗಿಡ ಬೆಳೆಯುತ್ತದೆ , ಮತ್ತೆ ನೆಡುವ ಕಾರ್ಯ ಆರಂಭ ಇದೆ ಬೆನ್ನಿ . ಇದಕ್ಕೆ ತೊಡಗುವ ಸುಮುಹೂರ್ತವೇ ಯುಗಾದಿ, ಇಗಾದಿ ,ವಿಷು, ಬಿಸು
ಬಿಸು ಕಣಿ
ವಿಷು - ಬಿಸು ಕಣಿ ದರ್ಶನ : ಹಿಂದಿನ ರಾತ್ರಿ ಮನೆ ದೇವರ ಮುಂಭಾಗ ಮಂಗಲ ದ್ರವ್ಯಗಳನ್ನು ಅಂದರೆ ತೆಂಗಿನಕಾಯಿ , ಕನ್ನಡಿ , ಚಿನ್ನದ ಆಭರಣ , ಪುಸ್ತಕ , ತರಕಾರಿ , ಲಭ್ಯ ಫಲ ಗೇರು ಹಣ್ಣು , ಮಾವಿನ ಹಣ್ಣು ಮುಂತಾದುವವುಗಳನ್ನು ಇರಿಸಿ ದೀಪ ಹಚ್ಚಿಟ್ಟು ಇಗಾದಿಯಂದು ಬೆಳಗ್ಗೆ ಬೇಗ ಎದ್ದೊಡನೆ ಈ ಮಂಗಲ ದ್ರವ್ಯಗಳನ್ನು ನೋಡಿ ನಮಸ್ಕರಿಸುವುದು ಕ್ರಮ . ಈ ಶಿಷ್ಟಾಚಾರ ತುಳು ನಾಡಿನ ದಕ್ಷಿಣ ಭಾಗದಲ್ಲಿ ಸಂಭ್ರಮದಲ್ಲಿ ನಡೆಯುತ್ತಿರುತ್ತದೆ .
ಈ ಸಂದರ್ಭದಲ್ಲಿ ಉತ್ಸವ ಆರಂಭವಾಗುವ ದೇವಾಲಯಗಳಲ್ಲೂ ಕಣೆ ಇಡುವ ಸಂಪ್ರದಾಯ , ಯುಗಾದಿ ಫಲ ಓದುವ ಕ್ರಮ ಇಂದಿಗೂ ರೂಢಿಯಲ್ಲಿದೆ .
ಹೆಸರು ಬೇಳೆ ಪಾಯಸ ,ಅದಕ್ಕೆ ಗೇರು ಬೀಜದ ಎಳಸು ಬೀಜದ ತಿರುಳನ್ನು ಹಾಕಬೇಕು . ಗೇರು ಬೆಳೆಯುವ ಕಾಲ ತಾನೆ ,ಹಾಗಾಗಿ ಅದು ಸುಲಭ ಲಭ್ಯ .
ಯುಗಾದಿಯಂದು ಮನೆಯ ದೈವ ದೇವರಿಗೆ , ಗುರು ಹಿರಿಯರಿಗೆ ನಮಸ್ಕರಿಸುವುದು , ಊರಿನದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುವುದು ನಡೆದು ಬಂದ ಪದ್ಧತಿ .ಇಗಾದಿ ಸಂಭ್ರಮಿಸುವ ಹಬ್ಬವಲ್ಲ , ಕೃಷಿಗೆ ತೊಡಗುವ ಹಬ್ಬ ಎನ್ನಬಹುದು .ಈಗ ಅದರ ಸ್ವರೂಪ ಬದಲಾಗಿದೆ , ಪ್ರಧಾನವಾದ ಕೃಷಿ ಬೆನ್ನಿ ಮರೆತು ಹೋಗಿದೆ.
ಕೃಷಿ ಸಮೃದ್ಧಿ ಮಾತ್ರ ಈ ವರ್ಷದ ಯುಗಾದಿ ಆಶಯಕ್ಕೆ ಸೀಮಿತವಾಗುವುದು ಬೇಡ . ರಾಜ್ಯ, ರಾಷ್ಟ, ವಿಶ್ವವನ್ನು ಕಂಗೆಡಿಸಿ ಮನುಕುಲ ಆತಂಕ ಪಡುವ ಹಾಗೆ ಮಾಡಿರುವ ಕೊರೋನ ವ್ಯಾದಿ ದೂರವಾಗಲಿ ಎಂದು ಈ ಮಣ್ಣಿನ ಸತ್ಯವನ್ನು ಮತ್ತು ನಿಯಾಮ ಶಕ್ತಿಯನ್ನು ಪ್ರಾರ್ಥಿಸೋಣ .
ಇಗಾದಿ ಬಿಸು ಶುಭಾಶಯಗಳು
ಕೆ.ಎಲ್. ಕುಂಡಂತಾಯ