ತುಳುನಾಡ ಪಂಡಿತರು,ನಾಟಿ ವೈದ್ಯರು (ವ್ಯಕ್ತಿ ಪರಿಚಯ)
ಪಂಡಿತ್ ಉಮೇಶ್ ಪ್ರಭು
ಈ ನಮ್ಮ ತುಳುನಾಡು ಆಧುನೀಕರಣ ಹಾಗೂ ಅನ್ಯ ಸಂಸ್ಕೃತಿಯ ದಾಳಿಯಿಂದಾಗಿ ಇಂದು ನಮ್ಮ ಮೂಲ ಸತ್ವವು ನಶಿಸುತ್ತಾ ಬಂದಿದೆ.ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ಪ್ರತೀ ಒಂದು ಹಳ್ಳಿಯಲ್ಲಿ ನಾಟಿ ಮದ್ದು ನೀಡುವ ಪಂಡಿತರು ಅಥವಾ ಬೈದ್ಯರಿದ್ದರು. ಇವರು ಯಾವುದೇ ರೀತಿಯ ರೋಗಕ್ಕೆ ಮದ್ದು ನೀಡಿ ಜೀವ ಉಳಿಸುತ್ತಿದ್ದರು.
ಆದರೆ ಈಗಿನ ಕಾಲದಲ್ಲಿ ನಾಟಿವೈದ್ಯರ ಸಂಖ್ಯೆ ಬಹಳ ಕ್ಷೀಣಿಸುತ್ತಾ ಬಂದಿದೆ, ಕಾರಣ ಈಗಿನ ಯುವ ಜನಾಂಗಕ್ಕೆ ಇದರ ಮೇಲೆ ನಂಬಿಕೆ ಕಡಿಮೆಯಾಗಿದೆ. ಕುಡಿಯುವ ನೀರು, ಉಸಿರಾಡುವ ಗಾಳಿ ತಿನ್ನುವ ಆಹಾರ ಎಲ್ಲವೂ ವಿಷಯುಕ್ತವಾಗಿದೆ, ಅವಸರದ ಜೀವನದಲ್ಲಿ ಬೆಳಗ್ಗೆ ಜ್ವರ ಬಂದರೆ ಸಂಜೆಗೆ ಗುಣಮುಖರಾಗಬೇಕೆಂಬ ಹಂಬಲದಲ್ಲಿ ಇರುವ ಜನ ಇಂದು ಇಂಗ್ಲಿಷ್ ಮದ್ದನ್ನೇ ಅವಲಂಬಿಸಿದ್ದಾರೆ ಇದರಿಂದಾಗಿ ನಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಬೀಳುತ್ತದೆ. 90 ವರ್ಷ ಆಯುಷ್ಯದ ಮಾನವ 50 ವರ್ಷದಲ್ಲಿಯೇ ಬಗೆ ಬಗೆಯ ರೋಗಕ್ಕೆ ತುತ್ತಾಗಿ ಮರಣ ಹೊಂದುತ್ತಾನೆ.
ಆದರೆ ನಾಟಿಮದ್ದು ನಿಧಾನಗತಿಯಲ್ಲಿ, ನಿಯಮಬದ್ಧ ಪಥ್ಯೆಯ ಮುಖಾಂತರ ಕ್ರಮ ಪ್ರಕಾರ ಮಾಡಿದರೆ ಯಾವುದೇ ರೋಗ ಸಂಪೂರ್ಣ ವಾಸಿಯಾಗುವುದಲ್ಲದೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ.
ತುಳುನಾಡಿನಲ್ಲಿ ಮನೆ ಮನೆಯಲ್ಲಿ ಇದ್ದ ನಾಟಿ ವೈದ್ಯರು ಇಂದು ಅಲ್ಲೊಂದು ಇಲ್ಲೊಂದು ಎಂಬಂತೆ ಬಹು ಅಪರೂಪದಲ್ಲಿ ಕಾಣ ಸಿಗುತ್ತಾರೆ, ಅದರಲ್ಲೂ ಹೆಚ್ಚಿನವರು ವೃದ್ಧರೇ ಅವರನ್ನು ಅನುಸರಿಸಿ ಮುಂದುವರೆಸುವವರು ಬಹು ಕಡಿಮೆ.
ತನ್ನ ಹಿರಿಯರು ಮಾಡುತ್ತಿದ್ದ ನಾಟಿವೈದ್ಯ ಪದ್ದತಿಯನ್ನು ತನ್ನ ಜೀವನದ ಒಂದು ಭಾಗವಾಗಿ ಅಳವಡಿಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ಜನಸೇವೆ ಮಾಡುತ್ತಾ ಬಂದಿರುವವರು ಶಿರ್ವದ ನೆರೆಯ ಪಾದೂರು ಗ್ರಾಮದ ಪಾಲಮೆಯ ಪಂಡಿತ್ ಉಮೇಶ್ ಪ್ರಭು, ಇವರು 1-03-1972 ರಲ್ಲಿ ಪಾಲಮೆ ನಡುಮನೆಯಲ್ಲಿ ದಿ ಪಂಡಿತ್ ಶ್ರೀನಿವಾಸ ಪ್ರಭು ಮತ್ತು ದಿ ವಸಂತಿ ಪ್ರಭು ದಂಪತಿಗಳ ಅಷ್ಟಮ ಪುತ್ರನಾಗಿ ಜನಿಸಿದರು. ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿಎ ಪದವಿಯನ್ನು ಪಡೆದು, ವಂಶ ಪಾರಂಪರ್ಯವಾಗಿ ಬಂದ ಕೃಷಿಯನ್ನು ಪ್ರಧಾನ ವೃತ್ತಿಯನ್ನಾಗಿಸಿ, ಸಹವೃತ್ತಿಯಾಗಿ ಬಂಟಕಲ್ಲಿನಲ್ಲಿ ರಿಕ್ಷಾ ಚಾಲಕರಾಗಿದ್ದಾರೆ ಮತ್ತು ನಾಟಿ ವೈದ್ಯ ಪಂಡಿತರಾಗಿದ್ದಾರೆ
ಪಾರಂಪರಿಕ ಹಿನ್ನಲೆ :
ಶಿರ್ವ ಹಾಗೂ ನೆರೆಹೊರೆಯ ಊರಲ್ಲಿ ಪಂಡಿತ್ ಎಂದಾಕ್ಷಣ ಗೋಚರಿಸುವುದು ಪಾಲಮೆ ಉಮೇಶ್ ಪ್ರಭು, ಇವರ ಮನೆತನ "ಪಂಡಿತ್"ಎಂದೇ ಪ್ರಸಿದ್ದಿ.
ನಾಟಿವೈದ್ಯ ಪದ್ಧತಿ ಇವರಿಗೆ ವಂಶಪಾರಂಪರ್ಯವಾಗಿ ಬಂದದ್ದು, ಇವರ ಅಜ್ಜ ಪಂಡಿತ್ ಅನಂತ ಪ್ರಭು ನಂತರ ಇವರ ತಂದೆ ದಿ ಶ್ರೀ ಶ್ರೀನಿವಾಸ ಪ್ರಭು ನಾಟಿ ವೈದ್ಯರಾಗಿ ಮುಂದುವರೆದರು, ಇವರು ತನ್ನ ಜೀವನದ 40 ವರ್ಷಕ್ಕೂ ಹೆಚ್ಚು ಕಾಲ ಚಿಕಿತ್ಸೆ ನೀಡಿ ಅದೆಷ್ಟೋ ಜೀವಗಳನ್ನು ಉಳಿಸಿದ ಕೀರ್ತಿ ಇವರದ್ದು. ಇವರು ಕೃಷಿಯೊಂದಿಗೆ, ದೈವ ಮಧ್ಯಸ್ಥರಾಗಿ, ಅಡುಗೆ ಭಟ್ಟರಾಗಿ, ನಾಟಿ ವೈದ್ಯ ಚಿಕಿತ್ಸೆ ನೀಡುವ ಪಂಡಿತರಾಗಿ ಪ್ರಸಿದ್ದಿ ಪಡೆದಿದ್ದರು.
ಪಶು ಚಿಕಿತ್ಸೆ, ಪಿತ್ತ ಕಾಮಲೆ, ಸರ್ಪ ಸುತ್ತು, ಬಾಣಂತಿ ಸಮಸ್ಯೆ, ಮಕ್ಕಳ ತೈಲ, ಸ್ತ್ರೀ ರೋಗ, ಮುಂತಾದ ಸಮಸ್ಯೆಗಳಿಗೆ, ರೋಗಿಗಳಿಗೆ, ಚಿಕಿತ್ಸೆ ನೀಡಿ ಗುಣ ಪಡಿಸುತ್ತಿದ್ದರು.ಬದುಕಲಾರದ ರೋಗಿಗಳನ್ನು ಬದುಕಿಸಿದ ಕೀರ್ತಿ ಇವರದ್ದು
ಕಾಲ ಉರುಳಿ ಮುಂದೆ ಹೋದಂತೆ ಶ್ರೀನಿವಾಸ ಪ್ರಭು ಅವರು ವೃದ್ಧರಾಗಿ ದೃಷ್ಟಿ ಹೀನತೆ ಆದಾಗ ವಿಷ ಚಿಕಿತ್ಸೆ ಅಥವಾ ಯಾವುದೇ ಗಾಯವನ್ನು ಗುರುತಿಸಲಾಗದಾಗ ಉಮೇಶ್ ಪ್ರಭು ಅವರಿಗೆ ಸಹಾಯ ಮಾಡಿ ಗಾಯದ ಪ್ರಮಾಣವನ್ನು ಗುರುತಿಸಿ ಹೇಳುತ್ತಿದ್ದರು, ಮಾತ್ರವಲ್ಲದೆ ತನ್ನ ತಂದೆ ಕೊಡುವ ಮದ್ದಿನ ರೀತಿ ನೀತಿಯನ್ನು ಮೈಗೂಡಿಸಿಕೊಂಡರು, ಗಿಡಮೂಲಿಕೆಗಳ ಪರಿಚಯ ಪಡೆದು ನಾಟಿ ವೈದ್ಯ ಕಲಿತರು.
1996ರಲ್ಲಿ ಪಂಡಿತ್ ಶ್ರೀನಿವಾಸ ಪ್ರಭುಗಳ ದೈವಾಧೀನ ನಂತರ ಉಮೇಶ್ ಪ್ರಭು ಅವರು ತನ್ನ ಇಷ್ಟ ದೇವತೆ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನ ಅನುಗ್ರಹದಿಂದ ನಾಟಿವೈದ್ಯಕೀಯ ಪದ್ಧತಿಯನ್ನು ಮುಂದುವರೆಸಿದರು. ವಿಷ ಚಿಕಿತ್ಸೆ ಹಾಗೂ ಗಿಡಮೂಲಿಕೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಇವರು ಧರ್ಮಸ್ಥಳದ ಉಜಿರೆಯಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿದ್ದ ನಾಟಿ ವೈದ್ಯಕೀಯ ಕಮ್ಮಟಗಳಿಗೆ ಹೋಗಿದ್ದರು. ಶ್ರೀ ರವೀಂದ್ರನಾಥ ಐತಾಳ್ ರಿಂದ ವಿಷ ಚಿಕಿತ್ಸೆಯನ್ನು ಸಂಪೂರ್ಣವಾಗಿ ಕಲಿತರು, ಹಾವಿನ ತಜ್ಞ ಗುರುರಾಜ್ ಸನಿಲ್ ರಿಂದ ಹಾವಿನ ಪರಿಚಯದ ಬಗ್ಗೆ ಮಾಹಿತಿ ಪಡೆದರು.
ಒಂದು ಕಾಲದಲ್ಲಿ ಮನೆಯ ವರೆಗೆ ರಸ್ತೆಯ ವ್ಯವಸ್ಥೆ ಇರಲಿಲ್ಲ, ಪಾದೂರು ಪಾಲಮೆಯಲ್ಲಿ ಒಂದೇ ಒಂದು ಹುಲ್ಲಿನ ಮನೆ ಇವರದ್ದಾಗಿತ್ತು, ಮಳೆಗಾಲದಲ್ಲಂತೂ ಕಿರು ಸೇತುವೆ ದಾಟಿ ಇವರ ಮನೆಗೆ ರೋಗಿಗಳು ಬರಬೇಕಿತ್ತು, ಯಾವುದೇ ಹೊತ್ತಲ್ಲೂ, ಯಾವುದೇ ರೋಗಿಗೂ ಬೇಧ ಭಾವ ಇಲ್ಲದೆ ಇವರು ಚಿಕಿತ್ಸೆ ನೀಡಿ ಗುಣಪಡಿಸುತ್ತಿದ್ದರು.
24 ವರ್ಷದಿಂದ ನಾಟಿವೈದ್ಯ ಚಿಕಿತ್ಸೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತವಾಗಿ ನೀಡಿರುವ ಇವರಿಗೆ ಚಿಕಿತ್ಸೆಗೆ ಸಹಾಯ ಮಾಡುವವರು ಇವರ ಹೆಂಡತಿ ಸತ್ಯವತಿ ಪ್ರಭು.
ಗುಣಮಟ್ಟದ ವಿಷ ಚಿಕಿತ್ಸೆ, ಪಶು ಚಿಕಿತ್ಸೆ, ಪಿತ್ತಕಾಮಲೆ, ಸರ್ಪಸುತ್ತು, ಬಾಣಂತಿ ಸಮಸ್ಯೆ ಮುಂತಾದ ಚಿಕಿತ್ಸೆ ನೀಡಿ ನೂರಾರು ಜನರಿಗೆ ಆಪತ್ತಿನಲ್ಲಿ ಸಹಾಯ ಮಾಡಿದ್ದಾರೆ.
ಇವರು ಕೊಡುವ ಮಕ್ಕಳ ತೈಲ ಬಹು ಬೇಡಿಕೆಯದ್ದು, ಇವರ ಕೈಗುಣದ ಪ್ರಭಾವ ಎಷ್ಟಿದೆ ಎಂದರೆ ಆಯುರ್ವೇದ ವೈದ್ಯರಿಗೂ ಇವರು ಚಿಕಿತ್ಸೆ ನೀಡಿ ಗುಣ ಪಡಿಸಿದ್ದಾರೆ.
ಮನೆಯ ಒಳಗೆ ನುಗ್ಗಿದ ಹಾವನ್ನು ಗುರುತಿಸಿ ಹಿಡಿದು ಕಾಡಿಗೆ ಬಿಡುತ್ತಾರೆ, ರಸ್ತೆಯಲ್ಲಿ ವಾಹನದ ಚಕ್ರದಡಿ ಬಿದ್ದು ಸತ್ತ ಅದೆಷ್ಟೋ ಸರ್ಪಗಳ ಸಂಸ್ಕಾರವನ್ನು ತಾನೇ ಖುದ್ದಾಗಿ ಮಾಡಿದ್ದಾರೆ,
ತನ್ನ ಮನೆಯ ಮುಂದೆ ಇರುವ ನಾಗ ಬನದಲ್ಲಿ ಆಯುರ್ವೇದಿಕ್ ಗಿಡಮೂಲಿಕೆಗಳ ಗಿಡಗಳನ್ನು ಸಂಗ್ರಹಿಸಿರುವ ಇವರು ಪಂಚಾಯತ್ ಮಟ್ಟದಲ್ಲಿ ಜನರಿಗೆ ನಾಟಿವೈದ್ಯಕೀಯದ ಬಗ್ಗೆ ಮಾಹಿತಿ ನೀಡುತ್ತಾರೆ.
ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ನಾಟಿವೈದ್ಯಕೀಯ ಚಿಕಿತ್ಸೆ ಬಗ್ಗೆ ಮಾಹಿತಿ ನೀಡುತ್ತಾರೆ.
ತನ್ನ ಜೀವನದ ಇದುವರೆಗೆ 27 ಸಲ ರಕ್ತದಾನ ಮಾಡಿ ಸಮಾಜದಲ್ಲಿ ಮಾದರಿಯಾಗಿದ್ದಾರೆ,
ಹಲವಾರು ರೀತಿಯಲ್ಲಿ ತಮ್ಮಿಂದಾಗುವ ಜನಸೇವೆಯನ್ನು ನೀಡುತ್ತಾ ಬಂದಿರುವ ಇವರು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ, ಹಲವು ಸಂಘ ಸಂಸ್ಥೆಯ ಸದಸ್ಯರಾಗಿ ಸಂಘಟಕರಾಗಿ ಸಮಾಜದಲ್ಲಿ ಮಾರ್ಗದರ್ಶಕರಾಗಿದ್ದಾರೆ.
ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಪ್ರೋತ್ಸಾಹಿಸಿದೆ.
ಇವರ ಪ್ರಕಾರ ನಾಟಿ ವೈದ್ಯಕ್ಕೆ, ಅಥವಾ ತುಳುನಾಡ ಬೈದ್ಯ ಪದ್ದತಿಗೆ ಕಾನೂನಿನ ಬೆಂಬಲ ಅಗತ್ಯವಿದೆ, ವಿಷದ ಹಾವು ಕಚ್ಚಿದ ರೋಗಿಯನ್ನು ಆಸ್ಪತ್ರೆಯಲ್ಲಿ ಕೈಬಿಟ್ಟಾಗ ಕೊನೆಯ ಹಂತದವರೆಗೆ ತಮ್ಮ ಎಲ್ಲಾ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿ ಜೀವ ಉಳಿಸುವ ಕಾರ್ಯ ಮಾಡಿದ್ದಾರೆ.
ನಾಟಿ ವೈದ್ಯರಿಗೆ ಸುರಕ್ಷೆ ಕಡಿಮೆಯಾಗಿದೆ, ಅವನತಿಯಲ್ಲಿರುವ ಅಲ್ಪ ಸ್ವಲ್ಪ ನಾಟಿವೈದ್ಯರಿಗೆ ಕಾನೂನಿನ ಅಥವಾ ಸರ್ಕಾರದ ಬೆಂಬಲ ಇದ್ದರೆ ಇನ್ನಷ್ಟು ಪರಿಣಾಮಕಾರಿಯಾದಂತಹ ಚಿಕಿತ್ಸೆ ನೀಡಬಹುದೆಂದು, ಮತ್ತು ನಾಟಿವೈದ್ಯ ಪದ್ಧತಿ ಉಳಿಯಬಹುದೆಂದು ಇವರ ಅಭಿಪ್ರಾಯ.
ಬರಹ : ಅತಿಥ್ ಸುವರ್ಣ ಪಾಲಮೆ