ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನಿಯಮ ಉಲಂಘನೆಯನ್ನು ಪ್ರಶ್ನಿಸಿದ ಶಿರ್ವ ಗ್ರಾ.ಪಂ ಅಧ್ಯಕ್ಷೆಗೆ 'ರೌಡಿಸಂ ಪಟ್ಟ'

Posted On: 19-04-2020 10:15PM

ಶಿರ್ವ.ಎ, 19 : ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ವಾರಿಜಾ ಪೂಜಾರ್ತಿಯವರು ತಮ್ಮ ಗ್ರಾಮದಲ್ಲಿ ಅಪರಿಚಿತ ಮೂರು ಕಾರುಗಳು ಸಂಚರಿಸುತ್ತಿರುವುದನ್ನು ಗಮನಿಸಿ ತಡೆದು ವಿಚಾರಿಸಿದ ಬಗ್ಗೆ 'ಅದ್ಯಕ್ಷೆಯ ರೌಡಿಸಂ' ಎಂಬ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವವರ ಬಗ್ಗೆ ಶಿರ್ವ ಪಂ.ಅದ್ಯಕ್ಷೆ ವಾರಿಜಾ ಪೂಜಾರ್ತಿ ಬೇಸರ ವ್ಯಕ್ತಪಡಿಸಿದ್ದಾರೆ ಮತ್ತು ಸ್ಪಷ್ಟನೆ ನೀಡಿದ್ದಾರೆ. ತಪ್ಪು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಚಿತ್ರ ಹಾಗೂ ವೀಡಿಯೊಗಳ ಬಗ್ಗೆ ಸ್ಪಷ್ಟನೆ ನೀಡಿರುವ ವಾರಿಜಾ ಪೂಜಾರ್ತಿಯವರು, ಇಂದು ಏಪ್ರಿಲ್ 19 ಬೆಳಿಗ್ಗೆ ಸುಮಾರು 11:00 ರ ಹೊತ್ತಿಗೆ ಗ್ರಾಮ.ಪಂ.ಅಧ್ಯಕ್ಷೆ ತನ್ನ ವಾರ್ಡ್ ಹಾಗು ತನ್ನ ಮನೆಯ ಮುಂದಿನ ರಸ್ತೆಯಲ್ಲಿ ಮೂರು ಅಪರಿಚಿತ ಕಾರುಗಳು ಹಾದು ಹೋಗಿರುವುದನ್ನು ಗಮನಿಸಿದರು, ಸ್ವಲ್ಪ ಸಮಯದ ನಂತರ ಅದೇ ರಸ್ತೆಯಲ್ಲಿ ಮೂರು ಕಾರುಗಳು ವಾಪಾಸು ಬಂದಾಗ ಗ್ರಾಮದ ಕೋವಿಡ್ ಟಾಸ್ಕ್ ಫೋರ್ಸಿನ ಅಧ್ಯಕ್ಷಳೂ ಆಗಿರುವ ಅದ್ಯಕ್ಷರು ಕಾರುಗಳನ್ನು ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ, ಮೂರು ವಾಹನಗಳಲ್ಲಿದ್ದ 10 ಮಂದಿ ನಾವು ವಿಶ್ವಬ್ರಾಹ್ಮಣ ಸಂಘದವರು ಪದ್ಮಾ ಆಚಾರ್ಯ ಅವರ ಮನೆಗೆ ಪರಿಹಾರ ಸಾಮಾಗ್ರಿ ಕಿಟ್ ನೀಡಲು ಹೋಗಿದ್ದಾಗಿ ತಿಳಿಸಿದರು. ಕಿಟ್ ವಿತರಿಸಲು ಬಂದವರ ಬಳಿ ಸಮಯ ಮತ್ತು ವ್ಯಾಪ್ತಿ ಮೀರಿ ಸಂಚರಿಸಬಹುದಾದ ಯಾವ ಪಾಸ್ ಗಳೂ ಇರಲಿಲ್ಲ. ಶಿರ್ವ ಪಂಚಾಯತಿನ ಅದೇ ವಾರ್ಡಿನ ಮತ್ತೊಬ್ಬ ಸದಸ್ಯರಾದ ಶ್ರೀ ಗೋಪಾಲ ಆಚಾರ್ಯ ಅವರು ಸ್ಥಳೀಯ ವಿಶ್ವ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಆಗಿದ್ದು ಅವರಿಗೆ ವಾರಿಜಾರವರು ಫೋನ್ ಮಾಡಿ ವಿಚಾರಿಸಿದಾಗ ಅವರಿಗೆ ಈ ಕುರಿತು ಯಾವ ಮಾಹಿತಿಯೂ ಇರಲಿಲ್ಲ.ಅವರನ್ನು ತಕ್ಷಣ ಸ್ಥಳಕ್ಕೆ ಬರುವಂತೆ ತಿಳಿಸಿದರು. ಸ್ಥಳಕ್ಕೆ ಪಂ.ಸದಸ್ಯ ಗೋಪಾಲ್ ಆಚಾರ್ಯ ಬಂದು ಕಟಪಾಡಿ ವಿಶ್ವಕರ್ಮ ಯುವ ಸಂಘಟನೆಯವರಲ್ಲಿ ಮಾತನಾಡಿ ತಮ್ಮ ಸಮಾಜದ ಬಡವರ ಮನೆಗಳಿಗೆ ಕಿಟ್ ವಿತರಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ಅವರನ್ನು ಮುಂದುವರಿಯಲು ತಿಳಿಸಲಾಯಿತು. "ಬಡವರ ಮನೆಗೆ ಅಕ್ಕಿಯನ್ನು ವಿತರಿಸುವ ತಮ್ಮದು ಒಳ್ಳೆಯ ಕೆಲಸ ಆದರೆ ಒಂದು ಮನೆಗೆ ಒಂದು ಕಿಟ್ ನೀಡುವುದಕ್ಕೆ 3 ಕಾರಿನಲ್ಲಿ 10 ಜನ ,ನಿಯಮಗಳನ್ನು ಉಲ್ಲಂಘಿಸಿ ಹೋಗಬಹುದೇ? ನಮ್ಮಂತಹ ಹಳ್ಳಿಯ ಒಳಗೆ ಸ್ಥಳೀಯ ಅಧಿಕಾರಿಗಳಿಗೂ ತಿಳಿಸದೇ. P.D.O ಅಥವಾ V.A ಅಥವಾ ಸ್ಥಳೀಯ ವಿಶ್ವಕರ್ಮ ಸಂಘಕ್ಕೂ ಮಾಹಿತಿ ನೀಡದೆ ಅಪರಿಚಿತರಾದ ತಾವು ಜನರು ಭೀತಿಯಲ್ಲಿರುವ ಇಂತಹಾ ಸಂದರ್ಭದಲ್ಲಿ ಎಕಾಏಕಿ ಬರಬಹುದೇ?" ಎಂದು ವಾರಿಜಾ ಪೂಜಾರ್ತಿಯವರು ಈ ಸಮಯದಲ್ಲಿ ವಿಶ್ವಕರ್ಮ ಯುವ ಸಂಘದವರಲ್ಲಿ ಪ್ರಶ್ನಿಸಿರುವುದನ್ನೇ ಮುಂದಿಟ್ಟು ಅಸ್ಪಷ್ಟ ವೀಡಿಯೋವನ್ನು ಜಾಲತಾಣದಲ್ಲಿ ಹರಿದಾಡುವಂತೆ ಮಾಡಿರುತ್ತಾರೆ. ಕಿಟ್ ವಿತರಿಸಲು ಬಂದವರ ಬಳಿ ಸಮಯ ಮತ್ತು ವ್ಯಾಪ್ತಿ ಮೀರಿ ಸಂಚರಿಸಬಹುದಾದ ಯಾವ ಪಾಸ್ ಗಳೂ ಇರಲಿಲ್ಲ. ಘಟನೆಯ ಬಗ್ಗೆ ಮಾಹಿತಿ ಕೇಳಿದ ವರದಿಗಾರಲ್ಲಿ ವಾರಿಜಾ ಪೂಜಾರ್ತಿ ಮಾತನಾಡಿ "ನನ್ನ ವಾರ್ಡಿನಲ್ಲಿ ನಾನು ಮೊದಲ ಪರಿಹಾರ ಸಾಮಾಗ್ರಿಗಳ ಕಿಟ್ ನೀಡಿರುವುದೇ ಬಡವರಾದ ಪದ್ಮ ಆಚಾರ್ತಿಯವರ ಮನೆಗೆ.ಮಾತ್ರವಲ್ಲದೆ ನನ್ನ ವಾರ್ಡಿನಲ್ಲಿ ಇಂದಿನವರೆಗೆ ಒಟ್ಟು 28 ವಿಶ್ವಬ್ರಾಹ್ಮಣ ಮನೆಗಳಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದ್ದೇನೆ. ಕಿಟ್ ವಿತರಣೆಯು ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಆದರೆ ಉತ್ತಮ ಎಂಬ ಭಾವನೆಯಿಂದ ನನ್ನ ಮೂಲಕ ದಾನಿಗಳಿಂದ ಸಂಗ್ರಹಿಸಲಾದ ಕಿಟ್ ಗಳನ್ನೂ ಸಹಿತ ಪ್ರಚಾರ ಮಾಡದೆ ಅಧಿಕಾರಿಗಳ ಮೂಲಕವೇ ಹಂಚಿಕೆಯಾಗುವಂತೆ ನೋಡಿಕೊಂಡಿದ್ದೇನೆ. ಶಿರ್ವ ಗ್ರಾಮದ ವ್ಯಾಪ್ತಿಯಲ್ಲಿ ಈಗಾಗಲೇ ಇಂತಹಾ ನೂರಾರು ಕಿಟ್ ಗಳನ್ನು ಜಾತಿ ಮತ ನೋಡದೆ ಬಡ ಕುಟುಂಬಗಳಿಗೆ ಹಂಚಿದ್ದೇವೆ. ಪಂಚಾಯತ್ ಅಧ್ಯಕ್ಷೆ ಹಾಗು ಗ್ರಾಮ ಕಾವಲು ಸಮಿತಿಯ ಅಧ್ಯಕ್ಷೆ ಯಾಗಿದ್ದು ಸಾಮಾಜಿಕ ಜವಾಬ್ದಾರಿಯಿಂದ ಅನುಮತಿಯಿಲ್ಲದೆ ನಿಯಮ ಉಲ್ಲಂಘಿಸಿದವರನ್ನು ಪ್ರಶ್ನಿಸಿದ್ದು ಅಪರಾಧವೇ ಆಗಿದ್ದರೆ ಕ್ಷಮಿಸಿ.ಆದರೆ ತಮ್ಮ ನಡೆ ಇಂತಹಾ ಸಂಕಷ್ಟಕರ ಸನ್ನಿವೇಶದಲ್ಲಿ ಮನೆಯಲ್ಲಿ ವಿಶ್ರಮಿಸದೆ ಸಮಾಜ ಕಾರ್ಯವನ್ನು ಮಾಡುತ್ತಿರುವ ನನ್ನಂತಹ ಹಲವಾರು ಮಹಿಳಾ ಜನಪ್ರತಿನಿಧಿಗಳ ಆತ್ಮ ಸ್ಥೈರ್ಯವನ್ನು ಕುಂದಿಸದಂತೆ ನೋಡಿಕೊಳ್ಳಿ" ಎಂದು ಶಿರ್ವ ಪಂಚಾಯತ್ ಅಧ್ಯಕ್ಷೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಿರುವವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.