ಕಾಪು, ಪಾಂಗಾಳ, ಇನ್ನಂಜೆ ಮತ್ತು ಶಂಕರಪುರ ಪ್ರದೇಶಗಳ ಸಂಗಮ ಸ್ಥಾನವಾಗಿರುವುದು ಮಂಡೇಡಿ.
ಆಗ್ನೇಯ ದಿಕ್ಕಿನಲ್ಲಿ ಉಡುಪಿ ಅಷ್ಟ ಮಠಗಳಿಗೆ ಸಂಬಂಧಿಸಿರುವ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಮಡುಂಬು ಶ್ರೀ ಬ್ರಹ್ಮಲಿಂಗೇಶ್ವರ ಆಲಡೆ, ದಕ್ಷಿಣ ದಿಕ್ಕಿನಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ, ನೈಋತ್ಯ ದಿಕ್ಕಿನಲ್ಲಿ ಕಾಪು ಶ್ರೀ ಜನಾರ್ಧನ ದೇವಸ್ಥಾನ ಮತ್ತು ಮೆರೆಯುತ್ತಿರುವ ಲೋಕಮಾತೆ ಕಾಪು ಶ್ರೀ ಮಾರಿಯಮ್ಮನ ದೇವಸ್ಥಾನಗಳು ಮತ್ತು ಪಶ್ಚಿಮ ದಿಕ್ಕಿನಲ್ಲಿ ಪಾಂಗಾಳ ಶ್ರೀ ಜನಾರ್ಧನ ದೇವರ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಆಲಡೆಗಳ ಸಮುದಾಯ, ಇವೆಲ್ಲದರ ನಡುವೆ ಕಂಗೊಳಿಸುತ್ತಿರುವ 'ಮಂಡೇಡಿ ಶ್ರೀ ಕೊರತಿ ಮತ್ತು ಪಂಚದೈವ ದೈವಸ್ಥಾನ'
ಮಂಡೇಡಿಯ ಗದ್ದೆ ಸಾಲುಗಳ ರಮಣೀಯ ವಾತಾವರಣದಲ್ಲಿ ಭಕ್ತರ ಅಭೀಷ್ಟೆಗಳನ್ನು ಈಡೇರಿಸುತ್ತಿರುವ ಶ್ರೀ ಕೊರತಿ ಮತ್ತು ಪಂಚದೈವಕ್ಕೊಂದು ಇತಿಹಾಸವಿದೆ. ಶ್ರೀ ಕ್ಷೇತ್ರವು ಹಿಂದೊಂದು ಕಾಲದಲ್ಲಿ ಜೈನ ರಾಜಾಶ್ರಯದಿಂದ ಮೆರೆದಿತ್ತೆಂದು ಬಿದ್ದಿರುವ ಕಲೆಗಳ ಕುರುಹುಗಳು ಹೇಳುತ್ತವೆ. ಮತ್ತು ಆ ಕಾಲದಲ್ಲಿ ದೈನಂದಿನ ಪೂಜೆಗಳು, ವಿವಿಧ ಸೇವೆಗಳು, ನೃತ್ಯ ಸೇವೆಗಳು ನಿರಂತರವಾಗಿ ನಡೆಯುತ್ತಿದ್ದವು.
ನಾಗದೇವರು, ರಕ್ತೇಶ್ವರಿ, ಪಂಜುರ್ಲಿ, ಬಬ್ಬುಸ್ವಾಮಿ, ಗುಳಿಗ ಮತ್ತು ನೀಚ ಇತ್ಯಾದಿ ಪರಿವಾರ ಶಕ್ತಿಗಳ ಕೇಂದ್ರವಾಗಿದ್ದವು. ಈಶ್ವರನು ಕಿರಾತನ ರೂಪದಲ್ಲಿ ಬೇಟೆಯಾಡಲು ಭೂಲೋಕಕ್ಕೆ ಬಂದಾಗ ಪಾರ್ವತಿಯು ಕೊರತಿಯ ರೂಪದಲ್ಲಿ ಆತನ ಬೇಟೆಯಾಟವನ್ನು ವೀಕ್ಷಿಸಲು ಭೂಲೋಕಕ್ಕೆ ಬಂದಿದ್ದಾಳೆಂದು ಪುರಾಣ ಹೇಳುತ್ತದೆ.
ಕಾಲ ಉರುಳಿದಂತೆ ರಾಜವಂಶಗಳು ನಾಶವಾದವು. ಜನರು ದೇವರು ಮತ್ತು ದೈವಗಳ ಪೂಜಾ ಪುರಸ್ಕಾರಗಳನ್ನು ನಿರ್ಲಕ್ಷಿಸಿದರು. ಆಗ ಇಡಿ ಊರಿನಲ್ಲಿ ತೊಂದರೆಗಳುಂಟಾದವು.
ಆ ಕಾಲದಲ್ಲಿ ಊರಿನ ಪ್ರಮುಖ ಬ್ರಾಹ್ಮಣರ ಮನೆಯ ಹಿರಿಯರ ಮುಂದಾಳತ್ವದಲ್ಲಿ ಊರಿನ ಜನರೊಂದಿಗೆ ಕೂಡಿ ಶ್ರೀ ಕೊರತಿ ಮತ್ತು ಪಂಚದೈವಗಳ ದೈವಸ್ಥಾನವನ್ನು ಪುನಃ ನಿರ್ಮಿಸಿ ಜೀರ್ಣೋದ್ದಾರ ಮಾಡಿದ್ದರು, ಅನೇಕ ವರ್ಷಗಳ ನಂತರ ಭಾರತ ಸರಕಾರದ ಆದೇಶದ ಪ್ರಕಾರ ರೈಲು ಮಾರ್ಗವು ಶ್ರೀ ಕೊರತಿ ಮತ್ತು ಪಂಚದೈವ ದೈವಸ್ಥಾನದ ಜಾಗದಲ್ಲೇ ಬಂದ ಕಾರಣ ಗುಡಿಯನ್ನು ತೆಗೆಯಬೇಕಾಯಿತು, ಈ ಸಂದರ್ಭದಲ್ಲಿ ರೈಲ್ವೆ ಗುತ್ತಿಗೆದಾರನಿಗೆ, ಅವರ ಕೂಲಿಗಾರರಿಗೆ ಮತ್ತವರ ಯಂತ್ರಗಳಿಗೆ ತುಂಬಾ ಅಡಚಣೆಯುಂಟಾಗಿ ಕಾಮಗಾರಿ ಕೆಲಸವು ಮುಂದೆ ಸಾಗಲಿಲ್ಲ. ಇದಕ್ಕೆ ದೈವಗಳ ಶಕ್ತಿಯೇ ಕಾರಣ ಎಂದು ತಿಳಿದುಬಂತು. ಆಗ ಗುತ್ತಿಗೆ ದಾರರು ಎಲ್ಲರನ್ನು ಕರೆದು ದೈವಗಳ ಶಿಲೆಗೆ ಕೈ ಮುಗಿದು ಪ್ರತ್ಯೇಕ ಗುಡಿ ಕಟ್ಟಲು ಸಹಾಯ ನೀಡುವ ಆಶ್ವಾಸನೆಯಿತ್ತರು.
ಈ ಸಂದರ್ಭದಲ್ಲಿ ಕಂಬೊಲಿ ಮನೆಯ ದಿ. ಮೋನಪ್ಪ ಶೆಟ್ರ ಕುಟುಂಬಿಕರು ತಮ್ಮ ನಿಸ್ವಾರ್ಥ ಮನಸಿನಿಂದ ತಮ್ಮ ಸ್ವಂತ ಜಾಗದಲ್ಲಿ ದೈವಸ್ಥಾನ ಕಟ್ಟಲು ಅವಕಾಶ ಮಾಡಿ ಸ್ಥಳವನ್ನು ದಾನ ಮಾಡಿದರು, ಊರಿನಿಂದ ಒಂದನೇ ಬ್ರಾಹ್ಮಣರ ಮನೆಯವರ ಧನಸಹಾಯದಿಂದ ಊರಿನವರೆಲ್ಲರ ಸೇವೆಯಿಂದ ಮತ್ತು ರೈಲ್ವೆ ಗುತ್ತಿಗೆದಾರ ನೆರವಿನಿಂದ ಹೊಸ ಗುಡಿಗಳನ್ನು ಕಟ್ಟಿ 1994 ರಲ್ಲಿ ಶ್ರೀ ಕೊರತಿ ಮತ್ತು ಪಂಚದೈವ ದೈವಸ್ಥಾನದ ದೈವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಜೀರ್ಣೋದ್ದಾರ ಮಾಡಿದ್ದರು.
ಪ್ರಸ್ತುತ ದೈವಸ್ಥಾನವು ಶಿತಿಲಗೊಂಡಿದ್ದು ಪುನಃ "ನವೀಕರಣ" ಪಡಿಸುವ ಬಗ್ಗೆ 2010 ರ ನೇಮೋತ್ಸವದಲ್ಲಿ ಪರಿವಾರ ದೈವಗಳ ನುಡಿಗಳ ಅನುಸಾರ ತಾಂಬೂಲರೂಡ ಪ್ರಶ್ನೆಯನ್ನು ಇಟ್ಟಾಗ ಸಾನಿಧ್ಯದಲ್ಲಿ ದೈವಗಳು ಅಸಮಾಧಾನವಾಗಿವೆ ಎಂದು ತಿಳಿದು ಬಂತು, ಗುಡಿಗಳ ವಿಂಗಡಣೆ ಮತ್ತು ಕೆಲವೊಂದು ಪ್ರಾಯಶ್ಚಿತವನ್ನು ಮಾಡಿ ಪುನಃ ಜೀರ್ಣೋದ್ದಾರ ಕಾರ್ಯವನ್ನು ಮಾಡಿದರೆ ಶ್ರೀ ಕ್ಷೇತ್ರ ಬೆಳಗುತ್ತದೆ ಎಂದು ತಿಳಿದು ಬಂದ ಪ್ರಕಾರ ಆಡಳಿತ ಮಂಡಳಿ ಕಾರ್ಯಪ್ರವೃತರಾಗಿದೆ. ಇಲ್ಲಿ ಐದು ವರ್ಷಕ್ಕೊಮ್ಮೆ ಕೊರತಿ ಮತ್ತು ಪಂಚದೈವಗಳ ನೇಮೋತ್ಸವ ನಡೆಯುತ್ತದೆ..
ಕೊರತಿ ಮತ್ತು ಪಂಚ ದೈವಗಳಿಗೆ ಹಲವಾರು ಹರಕೆಗಳು ಬಾಕಿ ಇದ್ದು, ಇನ್ನು ಕೂಡ ಹರಕೆಗಳು ಬರುತ್ತಿವೆ ಅಂದರೆ ಇಲ್ಲಿ ಭಕ್ತರ ಇಷ್ಟಾರ್ಥಗಳು ನೆರೆವೇರುತ್ತಿವೆ. ಇಲ್ಲಿರುವ ಹಿರಿಯರಿಗೆ ಇಲ್ಲಿನ ಶಕ್ತಿಯ ಅನುಭವವಾಗಿವೆ.. ಮತ್ತು ಇಲ್ಲಿ ನಡೆಯುವ ಕಾರಣಿಕಗಳು ಇದಕ್ಕೆ ಸಾಕ್ಷಿಯಾಗಿವೆ..