ಸಾಧನೆಯ ಹಾದಿಯಲ್ಲಿ ಸಾಗುವ ಹೆಜ್ಜೆಗಳ ಹಿಂದೆ ಸಹಕಾರದ ಮತ್ತು ಪ್ರೋತ್ಸಾಹದ ಹಿರಿಮೆಯಿದ್ದರೆ ಸಾಧಕನ ನಿಜವಾದ ಪ್ರತಿಭೆ ಮುಂದೆ ಬರಲು ಸಾಧ್ಯ, ಹೀಗೆ ಸಾಧನೆಗಳ ಮೆಟ್ಟಿಲುಗಳನ್ನು ಹತ್ತಿಕೊಂಡು ಅರಳುತ್ತಿರುವ ಪ್ರತಿಭೆಗಳಲ್ಲಿ ಅಲೆವೂರಿನ ನಿತಿನ್ ಸೇರಿಗಾರ್ ಕೂಡ ಒಬ್ಬರು.
ಇವರು ಯುವ ಸ್ಯಾಕ್ಸೋಫೋನ್ ಮತ್ತು ನಾಗಸ್ವರ ವಾದಕ. ಇವರ ಈ ಕಲೆಗೆ ಬೆನ್ನೆಲುಬಾಗಿ ನಿಂತಿರುವುದು ಇವರ ತಂದೆ ರಾಘುವ ಸೇರಿಗಾರ್ ಮತ್ತು ತಾಯಿ ಮೋಹಿನಿ ಸೇರಿಗಾರ್. ತಂದೆಯೆ ಇವರ ಮೊದಲ ಗುರು.
ಏಳನೇ ತರಗತಿಯಲ್ಲಿ ಇರುವಾಗಲೇ ತನ್ನ ಗುರು ಕಾಡುಬೆಟ್ಟು ರಾಘವೇಂದ್ರ ರಾವ್ ಅವರಿಂದ ಸ್ಯಾಕ್ಸೋಫೋನ್ ನುಡಿಸುವುದನ್ನು ಕಲಿಯುತ್ತಾ ಮುಂದೆ ನಾಗಸ್ವರವನ್ನು ತನ್ನ ಗುರುಗಳಾದ ಪೆರ್ಣಂಕಿಲ ರಾಘು ಸೇರಿಗಾರ್ ಅವರಿಂದ ಕಲಿತಿದ್ದಾರೆ. ಅಲೆವೂರು ಗಣೇಶೋತ್ಸವ ಸಮಿತಿ, ಬುಡ್ನಾರು ಗರಡಿ, ಮಾರ್ಪಳ್ಳಿ ಗರಡಿ, ಕಿದಿಯೂರು ಗರಡಿ, ಸಗ್ರಿ ಮಲೆ ಜುಮಾದಿ ದೈವಸ್ಥಾನ, ಬೀಡಿನಗುಡ್ಡೆ ಪಿಲಿ ಚಾಮುಂಡಿ, ಮಂಚಿ ಪಿಲಿ ಚಾಮುಂಡಿ, ಮಂಚಿ ಮೂಲಸ್ಥಾನ, ಅಂಬಾಡಿ ದೈವಸ್ಥಾನ, ನಡಿಬೆಟ್ಟು ದೈವಸ್ಥಾನ ಮೂಲ್ಕಿ, ಈ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ವರ್ಷಾಂಪ್ರತಿ ನಾಗಸ್ವರ ನುಡಿಸುತ್ತಾ ಬಂದಿದ್ದಾರೆ.
ಉಡುಪಿ ವಾಸುಕಿ ಅನಂತಪದ್ಮನಾಭ ದೇವಸ್ಥಾನ, ಕೆಮ್ತೂರು ವಿಷ್ಣುಮೂರ್ತಿ ದೇವಸ್ಥಾನ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ದೇವರ ಸಮ್ಮುಖದಲ್ಲಿ ನಾಗಸ್ವರದ ನಾದವನ್ನು ನುಡಿಸುವ ಇವರ ಕಲೆ ಊರಿನಲ್ಲಿ ಮಾತ್ರವಲ್ಲದೆ ಮುಂಬಯಿ, ಹುಬ್ಬಳ್ಳಿ, ಬಳ್ಳಾರಿ, ಬೆಂಗಳೂರಿನಲ್ಲೂ ಸ್ಯಾಕ್ಸೋಫೋನ್ ಮತ್ತು ನಾಗಸ್ವರ ನುಡಿಸುತ್ತಾ ಬಂದಿದ್ದಾರೆ.
ಇಷ್ಟು ಮಾತ್ರವಲ್ಲದೆ ತನ್ನ ನಾಗಸ್ವರದಿಂದ ಹತ್ತು ಹಲವು ಸಿನಿಮಾ ಮತ್ತು ಭಾವಗೀತೆ, ಭಕ್ತಿಗೀತೆಯನ್ನು ನುಡಿಸಿದ್ದಾರೆ.
'ನಿನ್ನ ದನಿಗಾಗಿ' ಎನ್ನುವ ಹಾಡನ್ನು ನಾಗಸ್ವರದಿಂದ ವಾದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಾಗ ಬಹುಬೇಗ ಜನಪ್ರಿಯವಾಗಿತ್ತು,
ಮುನಿಸು ತರವೇ ಭಾವಗೀತೆ ಇವರ ನಾಗಸ್ವರದಿಂದ ಮೂಡಿ ಬಂದು ಯುಟ್ಯೂಬ್ನಲ್ಲಿ 50,000 ಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ, ಕನ್ನಡದಲ್ಲಿ ಬೊಂಬೆ ಹೇಳುತೈತೆ, ಸ್ವಾಗತಂ ಕೃಷ್ಣ (ಭಕ್ತಿಗೀತೆ) ಭಾಗ್ಯದ ಬಳೆಗಾರ ಭಾವಗೀತೆ ಹೀಗೆ ನಾನ ಪ್ರಕಾರದ ಹಾಡನ್ನು ಸ್ಯಾಕ್ಸೋಫೋನ್ ಮತ್ತು ನಾಗಸ್ವರದ ವಾದ್ಯದಿಂದ ಹೊರಹಾಕುವ ಪ್ರತಿಭೆ ನಿತಿನ್ ಹತ್ತು ಹಲವು ಕಡೆ ಪ್ರಶಸ್ತಿ, ಪುರಸ್ಕಾರ ಲಭಿಸಿ ಗೌರವವನ್ನು ಪಡೆದಿರುತ್ತಾರೆ
ಬರಹ : ಸುಹಾನ್ ಉಡುಪಿ