ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಶಿಯಿಂದ ಬಂದ 'ಎಲ್ಲೂರು ವಿಶ್ವನಾಥ' ದೇವರು - ಕ್ಷೇತ್ರ ಪರಿಚಯ

Posted On: 23-04-2020 03:12PM

ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ "ಮಹಾತೊಭಾರ ಎಲ್ಲೂರು ಶ್ರೀವಿಶ್ವೇಶ್ವರ ದೇವಾಲಯ" ಕೂಡ ಒಂದು. ಎಲ್ಲೂರಿನ ಮೂಲಸ್ಥಾನ ಶ್ರೀ ವಿಶ್ವನಾಥ ಅಥವಾ ಶ್ರೀವಿಶ್ವೇಶ್ವರ ಸನ್ನಿಧಾನವು ಸ್ವಯಂಭು ಸನ್ನಿಧಿ ಎನ್ನುವುದು ಪ್ರತೀತಿ. ಅಪೂರ್ವ ವಾಸ್ತು ವಿನ್ಯಾಸದ ಮತ್ತು ಸರಳ ರೂಪದಲ್ಲಿರುವ ದೇವರು ಕಾಶಿಯಿಂದ ಬಂದವರೆಂದು ನಂಬಿಕೆ. ಸ್ಥಳ ಪುರಾಣ:ಉದ್ಭವ ಮಹಾದೇವನು ಮೊದಲು ಬುಡಕಟ್ಟು ವರ್ಗದ ವೃದ್ದ ಮಹಿಳೆಗೆ ಗೋಚರಿಸಿದ್ದು. ಮಹಿಳೆ ಅಣಬೆ ತೆಗೆಯಲು ಕತ್ತಿಯನ್ನು ಉಪಯೋಗಿಸಿದಾಗ ಆ ಕತ್ತಿ, ಉದ್ಭವ ಲಿಂಗಕ್ಕೆ ತಾಗಿ ರಕ್ತ ಒಸರಿಸಲಾರಂಭಿಸಿತಂತೆ. ವಿಷಯ ತಿಳಿದ ಅರಸ ಮತ್ತು ಆತನ ಗುರುಗಳು ಆಗಮಿಸಿ ಎಳನೀರು ಸುರಿದಾಗ ಮಹಾದೇವ ಗೋಚರಿಸಿದನು. ಕುಂದ ಹೆಗ್ಗಡೆ ಅರಸು ಮನೆತನದ ಭೂರಿ ಕೀರ್ತಿ ಎಂಬ ಅರಸನು ಸಂತಾನ ಅಪೇಕ್ಷೆಯಿಂದ ಮತ್ತು ತನ್ನ ರಾಜ್ಯದಲ್ಲಿ ದೇವಾಲಯವಿಲ್ಲವೆಂಬ ಕಾರಣಕ್ಕೆ ಕಾಶಿಗೆ ಹೋಗಿ ತಪಸ್ಸನ್ನು ಆಚರಿಸಿ ದೇವರನ್ನು ಕರೆತಂದನೆಂದು ಕೂಡ ಇತಿಹಾಸ ಪುಟದಲ್ಲಿ ಗುರುತಿಸಲ್ಪಟ್ಟಿದ್ದಾನೆ. ಕ್ಷೇತ್ರದಲ್ಲಿ ಎಳನೀರು ಸೇವೆ ಬಹಳ ವಿಶೇಷ. ಎಳ್ಳೆಣ್ಣೆ ಸೇವೆ ನೀಡಿದರೆ ಸಕಲ ಗ್ರಹದೋಷ, ದುಷ್ಟಾರಿಷ್ಟ, ಅಪತ್ತು ದೂರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ರೋಗಭಾದೆ, ಬಾಲಗ್ರಹ ನಿವಾರಣೆಗೆ ತುಲಾಭಾರ ಸೇವೆ ಕೂಡ ಸ್ವಾಮಿಗೆ ಅರ್ಪಣೆಯಾಗುತ್ತಿದೆ. ಬಿಲ್ಲವ, ಮೊಗವೀರ, ಮಡಿವಾಳ, ದೇವಾಡಿಗ ವಿಶ್ವಕರ್ಮ , ಬಂಟ್ಸ್, ಬ್ರಾಹ್ಮಣ ಸಮಾಜದವರ ಸಹಭಾಗಿತ್ವ ಕ್ಷೇತ್ರದ ವೈಶಿಷ್ಟ್ಯ. ಇತ್ತೀಚಿಗೆ ಕ್ಷೇತ್ರದ ಜೀರ್ಣೋದ್ದಾರ ಹೆಚ್ಚುಕಮ್ಮಿ ಆರು ಕೋಟಿ ರುಪಾಯಿ ವೆಚ್ಚದಲ್ಲಿ 2009 ಮಾರ್ಚ್ ತಿಂಗಳಲ್ಲಿ ವಿಜೃಂಭಣೆಯಿಂದ ನಡೆದಿತ್ತು. ಕ್ಷೇತ್ರದ ವಿಳಾಸ: ಮಹತೋಭಾರ ವಿಶ್ವೇಶ್ವರ ದೇವಾಲಯ, ಎಲ್ಲೂರು ಅಂಚೆ, ತಾಲೂಕು ಮತ್ತು ಜಿಲ್ಲೆ - ಉಡುಪಿ ದೂ. ಸ. 0820 -2550365 ಮಾರ್ಗ: ಉಡುಪಿಯಿಂದ : ರಾ.ಹೆ 17 ರಲ್ಲಿ ಬಂದು ಕಟಪಾಡಿ, ಕಾಪು, ಉಚ್ಚಿಲ ಬಳಿ ಎಡಕ್ಕೆ ತಿರುಗಬೇಕು(ಮುದರಂಗಡಿಗೆ ಹೋಗುವ ರಸ್ತೆ) ಮಂಗಳೂರಿನಿಂದ : ರಾ.ಹೆ 17 ರಲ್ಲಿ ಬಂದು ಸುರತ್ಕಲ್ , ಮೂಲ್ಕಿ, ಪಡುಬಿದ್ರಿ , ಉಚ್ಚಿಲ ಬಳಿ ಬಲಕ್ಕೆ ತಿರುಗಬೇಕು (ಮುದರಂಗಡಿಗೆ ಹೋಗುವ ರಸ್ತೆ)