ಸಮಯವ ವ್ಯರ್ಥ ಮಾಡುವ ಇಂದಿನ ಮಕ್ಕಳಿಗೆ ಮಾದರಿ.
ಜಾದು, ಆವೆಮಣ್ಣಿನ ಕಲಾಕೃತಿ, ಚಿತ್ರಕಲೆ, ಅಭಿನಯ ಎಲ್ಲಕ್ಕೂ ಸೈ. ಕಟಪಾಡಿ ಏಣಗುಡ್ಡೆಯ ಪ್ರಥಮ್ ಕಾಮತ್
ಸಾಮಾನ್ಯವಾಗಿ ರಜೆ ಬಂತೆಂದರೆ ಹೆತ್ತವರು ಮಕ್ಕಳ ಬಗೆಗೆ ಚಿಂತಿತರಾಗುತ್ತಾರೆ. ಕೆಲವರು ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ, ಮುಂದಿನ ತರಗತಿಯ ಟ್ಯೂಷನ್, ಅಜ್ಜಿಮನೆಗೆ ಕಳಿಸುತ್ತಾರೆ. ಆದರೆ ಪ್ರಸ್ತುತ ಸನ್ನಿವೇಶ ಹಾಗೆ ಇಲ್ಲ. ಕೊರೋನಾದ ಭೀತಿಯಿಂದ ಮನೆಯ ಹೊರಗೆ ಮಕ್ಕಳನ್ನು ಕಳುಹಿಸುವ ಹಾಗಿಲ್ಲ. ಬಹಳಷ್ಟು ಮಕ್ಕಳು ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಾರೆಂದು ಹೆತ್ತವರ ಚಿಂತೆ.
ಆದರೆ ಇಲ್ಲೊಬ್ಬ ಬಾಲಕ ತಾನು ಬಿಡುವಿನ ವೇಳೆಯಲ್ಲಿ ಗುರುಗಳ ಬಳಿ ಕಲಿತ ವಿದ್ಯೆಯನ್ನು ಮನೆಯಲ್ಲಿ ಕಾರ್ಯರೂಪಕ್ಕೆ ತರುವುದಲ್ಲದೆ, ಮೊಬೈಲ್ ಹಿಡಿದುಕೊಂಡು ಸುಮ್ಮನೆ ಕಾಲ ಕಳೆಯುವ ಬದಲು ತನಗೆ ಉಪಯುಕ್ತವಾದಂತಹ ಕ್ಲೇ ಮಾಡೆಲಿಂಗ್, ಚಿತ್ರಕಲೆ, ಕರಕುಶಲ ಕಲೆ, ಅಡುಗೆ ತಯಾರಿ, ಜಾದು ಇತ್ಯಾದಿ ಕಲಿಯುತ್ತಿರುತ್ತಾನೆ. ಬಾಲ್ಯದಲ್ಲೇ ಇಂತಹ ಹಲವಾರು ಹವ್ಯಾಸಗಳನ್ನು ಮೈಗೂಡಿಕೊಂಡ ಈ ಬಾಲಕ ಕಟಪಾಡಿಯ ಏಣಗುಡ್ಡೆ ಗ್ರಾಮದ ಪ್ರಸಿದ್ಧ ನಾಟಕ,ಕಿರುಚಿತ್ರ,ಸಿನಿಮಾ ಕಲಾವಿದರಾದ ಕೆ. ನಾಗೇಶ್ ಕಾಮತ್ ಮತ್ತು ಕೆ. ಸುಜಾತ ಕಾಮತ್ ದಂಪತಿಯ ಪುತ್ರ ಕೆ. ಪ್ರಥಮ್ ಕಾಮತ್.
ಕಟಪಾಡಿಯ ಎಸ್.ವಿ.ಕೆ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿರುವ ಪ್ರಥಮ್ ಕಾಮತ್ ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಿತರಾಗಿರುವುದಲ್ಲದೆ ಹಲವಾರು ಕಡೆ ಸನ್ಮಾನಿತರಾಗಿದ್ದಾರೆ.
ಓರ್ವ ಬಾಲ ಜಾದುಗಾರನಾಗಿ :
ಹಲವಾರು ವೇದಿಕೆಗಳಲ್ಲಿ ಸುಮಾರು 30ಕ್ಕೂ ಅಧಿಕ ಜಾದು ಪ್ರದರ್ಶನ ನೀಡಿದ್ದಾರೆ. ವಿಜಯಕರ್ನಾಟಕ ದಿನಪತ್ರಿಕೆ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಖಾಲಿ ಪಾತ್ರೆಗೆ ಬೆಂಕಿ ಹಾಕಿ ಮೀನುಗಳನ್ನು ತೆಗೆಯುವ ಮೂಲಕ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅಚ್ಚರಿಪಡಿಸಿದ್ದಾರೆ. ಬಾಲ ವೇದಿಕೆ ಮಕ್ಕಳ ಪ್ರತಿಭಾ ಪ್ರದರ್ಶನದಲ್ಲಿ ಡ್ರಾಯಿಂಗ್ ವಿತ್ ಮ್ಯಾಜಿಕ್ ಪ್ರದರ್ಶನ, ಉದಯವಾಣಿ ಮತ್ತು ಗೀತಾಂಜಲಿ ಸಿಲ್ಕ್ಸ್ ಉಡುಪಿ ಇವರ ವತಿಯಿಂದ ನಡೆದ ಯಶೋಧಾಕೃಷ್ಣ ಕಾರ್ಯಕ್ರಮ, ಹೊಸ ಬೆಳಕು ಸೇವಾ ಟ್ರಸ್ಟ್ ಮಣಿಪಾಲ ಇವರ ಕಾರ್ಯಕ್ರಮದಲ್ಲಿ ಆಶ್ರಮ ವಾಸಿಗಳ ಜೊತೆ ಜಾದೂ ಪ್ರದರ್ಶನ, ಉಡುಪಿ ಜಿ.ಎಸ್.ಬಿ ಸಮಾಜದ ಘರ್ ಘರ್ ಭಜನಾಂತರಂಗದ 100ನೇ ಕಾರ್ಯಕ್ರಮದಲ್ಲಿ ಪ್ರದರ್ಶನ, ಮಕ್ಕಳ ದಿನಾಚರಣೆಯ ಅಂಗವಾಗಿ ಉಡುಪಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ನಲ್ಲಿ ಜಾದೂ ಪ್ರದರ್ಶನ. ಇದಲ್ಲದೆ ಚಲನಚಿತ್ರ ನಟ ಶ್ರೀನಗರ ಕಿಟ್ಟಿಯವರೊಂದಿಗಿನ ಉದಯ ಟಿ.ವಿಯ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಜಾದು ಪ್ರದರ್ಶನ ನೀಡಿರುತ್ತಾರೆ.
ಆವೆ ಮಣ್ಣಿನ ಕಲಾಕೃತಿ ರಚನೆಯಲ್ಲಿ : ಹಲವಾರು ಕಲಾಕೃತಿಗಳನ್ನು ಆವೆಮಣ್ಣಿನಿಂದ ರಚಿಸಿದ್ದು ಇದು ಪ್ರಥಮ್ ಕಾಮತ್ ರ ನೆಚ್ಚಿನ ಹವ್ಯಾಸವಾಗಿದೆ. ಈಗಾಗಲೇ ಪ್ರತಿಭಾಕಾರಂಜಿಯಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರ ಇತ್ತೀಚಿನ ಕೊರೊನ ಲಾಕ್ಡೌನ್ ಸಮಯದಲ್ಲಿ ಬೆಂಕಿಕಡ್ಡಿ, ಸ್ಟ್ರಾ, ಆವೆಮಣ್ಣು ಬಳಸಿ ಮಾಡಿದ ಕೊರೊನ ಸಂಬಂಧಿತ ಜಾಗೃತಿ ಕಲಾಕೃತಿ ಸಾರ್ವಜನಿಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.
ಚಿತ್ರಕಲೆ, ಕ್ರಾಫ್ಟ್, ಛದ್ಮವೇಷ, ಅಭಿನಯದಲ್ಲಿ ಪ್ರಥಮ್ : ಚಿತ್ರಕಲೆಗೆ ಸಂಬಂಧಿಸಿದಂತೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಮಕ್ಕಳ ವರ್ಣಚಿತ್ರ ಸ್ಪರ್ಧೆಯಲ್ಲಿ 3 ಬಾರಿ ಬಹುಮಾನ ಪಡೆದವರಾಗಿದ್ದಾರೆ. ರಾಜ್ಯಮಟ್ಟದ ಕಲಾಶ್ರೀ ಶಿಬಿರ 2016 ರಲ್ಲಿ ಭಾಗವಹಿಸಿದ್ದಾರೆ. ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಪೆಟ್ರೊಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ ನಡೆಸಿದ ಸ್ಪರ್ಧೆಯಲ್ಲಿ ಅಂತಿಮ 100 ಸ್ಪರ್ಧಿಗಳಲ್ಲಿ ಇವರೂ ಒಬ್ಬರಾಗಿ ರಾಷ್ಟ್ರಮಟ್ಟದ ಸಮಾಧಾನಕರ ಬಹುಮಾನ ಗಳಿಸಿದ್ದಾರೆ. ಪೇಪರ್ ಕ್ರಾಫ್ಟ್ ನಲ್ಲಿ ಪರಿಣಿತರಾಗಿರುವ ಇವರು ಅಡುಗೆ ತಯಾರಿಯ ಬಗೆಯೂ ಆಸಕ್ತಿ ಹೊಂದಿದ್ದಾರೆ. ಛದ್ಮವೇಷ ಸ್ಪರ್ಧೆಯಲ್ಲಿ ಮತ್ತು ಕಿರುಚಿತ್ರವೊಂದರಲ್ಲಿಯೂ ನಟಿಸಿರುವ ಇವರು ಅಭಿನಯದತ್ತವೂ ಆಕರ್ಷಿತರಾಗಿದ್ದಾರೆ.
ಸಂದ ಪ್ರಶಸ್ತಿ-ಗೌರವಗಳು : ಇವರ ಚಿತ್ರಕಲೆ, ಕ್ರಾಫ್ಟ್, ಕ್ಲೇ ಮಾಡಲಿಂಗ್, ಜಾದು,ಅಭಿನಯದ ಅಸಾಧಾರಣ ಸಾಧನೆಗಾಗಿ 2019-20ನೇ ಸಾಲಿನ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ "ಹೊಯ್ಸಳ ಪ್ರಶಸ್ತಿ" ಪಡೆದವರಾಗಿರುತ್ತಾರೆ. ಕಾರ್ಕಳದಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ "ಕರ್ನಾಟಕ ಪ್ರತಿಭಾ ರತ್ನ" ರಾಜ್ಯಮಟ್ಟದ ಗೌರವ ಪ್ರಶಸ್ತಿ ಪಡೆದಿರುತ್ತಾರೆ. ಇವರ ಪ್ರತಿಭೆ ಗುರುತಿಸಿ ಹಲವಾರು ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಮಂಗಳೂರಿನ ಖಾಸಗಿ ವಾಹಿನಿ ದಾಯ್ಜಿ ವಲ್ಡ್೯ನಲ್ಲಿ ದಿನೇಶ್ ಅತ್ತಾವರ ನಡೆಸಿಕೊಡುವ ಸಂದರ್ಶನ ಕಾರ್ಯಕ್ರಮ 'ದಾಯ್ಜಿ ಸ್ಪೆಷಲ್ ಅಜ್ಜಿಡ ಕುಸಲ್' ನಲ್ಲಿ ಭಾಗವಹಿಸಿರುತ್ತಾರೆ.
ಪ್ರಥಮ್ ಕಾಮತ್ ಚಿತ್ರಕಲೆ ಹಾಗು ಕ್ರಾಫ್ಟ್ ಕಲಿಕೆಯನ್ನು ರಮೇಶ್ ರಾವ್ ನೇತೃತ್ವದ ಉಡುಪಿ ದೃಶ್ಯ ಸ್ಕೂಲ್ ಆಯ ಆಟ್ಸ್೯ನಲ್ಲಿ , ಕ್ಲೇ ಮಾಡಲಿಂಗ್ ನ್ನು ವೆಂಕಿ ಪಲಿಮಾರ್ ಬಳಿ, ಜಾದೂ ಕಲೆಯನ್ನು ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಸತೀಶ್ ಹೆಮ್ಮಾಡಿ ಬಳಿ ಕಲಿಯುತ್ತಿದ್ದಾರೆ.
ಯುವ ಜನಾಂಗಕ್ಕೆ ಮಾದರಿಯಾಗಿ ಇನ್ನಷ್ಟು ಸಾಧನೆಗಳು ಇವರಿಂದಾಗಲಿ. ಆಲ್ ದಿ ಬೆಸ್ಟ್ ಪ್ರಥಮ್ ಕಾಮತ್..
✍️ ಬರಹ - ದೀಪಕ್ ಕೆ. ಬೀರ
ಪಡುಬಿದ್ರಿ