ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಎಲ್ಲೂರಿನ ಶಿಕ್ಷಕ‌ ವೈ. ವಿ .‌ಸುಬ್ಬರಾವ್ ಇನ್ನಿಲ್ಲ

Posted On: 25-05-2020 08:07AM

ಎಲ್ಲೂರು , ಮೇ 24 : ಎಲ್ಲೂರಿನ ನಿತ್ಯ ಸಹಾಯ ಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ‌ ಸುದೀರ್ಘ ಅವಧಿಗೆ ಶಿಕ್ಷಕರಾಗಿ , ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿದ್ದ ಜನಾನುರಾಗಿ ಶಿಕ್ಷಕ ವೈ.ವಿ .ಸುಬ್ಬರಾವ್ (83) ಅವರು ಮೇ 23 ರಂದು ಅಲ್ಪಕಾಲದ ಅಸೌಖ್ಯದಿಂದ ಎಲ್ಲೂರಿನ‌ ಸ್ವಗೃಹ 'ಧವಳ'ದಲ್ಲಿ ನಿಧನರಾದರು . ಅವರು ಪತ್ನಿ , ಓರ್ವ ಪುತ್ರಿ , ಇಬ್ಬರು ಪುತ್ರರನ್ನು ಹಾಗೂ ಬಹು ಸಂಖ್ಯೆಯ ಶಿಷ್ಯರನ್ನು ಅಗಲಿದ್ದಾರೆ . ಐವತ್ತೆಂಟು ವರ್ಷಗಳಷ್ಟು ಹಿಂದೆ ಪ್ರಾರಂಭವಾಗಿದ್ದು ಈ ಪರಿಸರದಲ್ಲಿ ರಚನಾತ್ಮಕ‌ ಕೆಲಸಗಳಿಂದ ಹಾಗೂ ಮಾದರಿ ಕಾರ್ಯವೈಖರಿಗಳಿಂದ ಪ್ರಸಿದ್ಧವಾಗಿದ್ದ ,ಹಲವು ಸಾಧಕರನ್ನು - ಪ್ರತಿಭಾನ್ವಿತರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದ ಎಲ್ಲೂರು ಯುವಕ ಮಂಡಲದ ಸ್ಥಾಪಕ ಪದಾಧಿಕಾರಿಗಳಲ್ಲೊಬ್ಬರಾಗಿದ್ದ ಸುಬ್ರಾಯರು ಮಂಡಲದಲ್ಲಿ ಹಲವು ಜವಾಬ್ದಾರಿಯ ಹುದ್ದೆಗಳನ್ನು ನಿರ್ವಹಿಸಿದ್ದರು . ಯುವಕ ಮಂಡಲದ ಸಹ ಸಂಸ್ಥೆಯಾಗಿ 1972ರಲ್ಲಿ ಸಂಘಟಿತವಾದ ಪಂಚಾಕ್ಷರೀ ಯಕ್ಷಗಾನ ಮಂಡಳಿಯ ಕಲ್ಪನೆ ಮತ್ತು ಉಪಕ್ರಮದಲ್ಲಿ ಶ್ರಮಿಸಿದವರು. ಸ್ಥಳೀಯ ಹವ್ಯಾಸಿ ಕಲಾವಿದರಿಗೆ ಮಾದರಿ ಹಿರಿಯ ಕಲಾವಿದರಾಗಿದ್ದರು. ಸುಬ್ರಾಯರು ಎಲ್ಲೂರಿನ ವಿಶ್ವೇಶ್ವರ ದೇವಳದಲ್ಲಿ ಆಕಾಲದಲ್ಲಿ‌ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಪ್ರಸಿದ್ಧ ಅರ್ಥವಾದಿ ಪೊಲ್ಯ ದೇಜಪ್ಪ ಶೆಟ್ಟಿಯವರ ಗರಡಿಯಲ್ಲಿ ಪಳಗಿದ್ದ ಸಾಂಪ್ರದಾಯಿಕ ಶೈಲಿಯ ಅರ್ಥವಾದಿಯಾಗಿ ಹೆಸರುವಾಸಿಯಾಗಿದ್ದರು . ಪಂಚಾಕ್ಷರೀ ಯಕ್ಷಗಾನ ಮಂಡಳಿಯಲ್ಲಿ ವೇಷಧಾರಿಯಾಗಿಯೂ ಪರಿಶ್ರಮ ಸಾಧಿಸಿದ್ದರು .ಪಂಚಾಕ್ಷರೀ ಮಕ್ಕಳ ಮೇಳಕ್ಕೂ ಪ್ರೋತ್ಸಾಹ ಕೊಡುತ್ತಿದ್ದರು . ಸುಬ್ರಾಯರ ನಿಧನಕ್ಕೆ ಎಲ್ಲೂರಿನ ಯುವಕ ಮಂಡಲ , ಪಂಚಾಕ್ಷರಿ ಯಕ್ಷಗಾನ ಮಂಡಳಿ ಮತ್ತು ಮಕ್ಕಳ ಮೇಳಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ .