ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ದೀನರಿಗೆ, ದಿಕ್ಕು ದೆಸೆಯಿಲ್ಲದ ಹೋಟೆಲ್ ಕಾರ್ಮಿಕರಿಗೆ ಆಶ್ರಯದಾತರಾದವರ ಕಥೆಯಿದು

Posted On: 03-06-2020 02:16PM

ಮಹಾರಾಷ್ಟ್ರದ ಮಣ್ಣಿನಲ್ಲಿ ಹಸಿದವರಿಗೆ ಅನ್ನ ನೀಡಿದ "ಅನ್ನದಾತ" , ಮನುಷ್ಯತ್ವದ ರಾಯಬಾರಿ ಎನಿಸಿಕೊಂಡ ಮುಂಬೈ ಉದ್ಯಮಿಯೊಬ್ಬರ ಪರೋಪಕಾರದ ಪರಿಚಯವಿದು.. ಹೌದು ಅಲ್ಲಿ ಮೌನ ಹೆಪ್ಪುಗಟ್ಟಿದೆ. ಕಣ್ಣೀರು ಸಹ ಅನಾಥವಾಗಿದೆ.ಕಳೆಗುಂದಿದ ಮುಖ, ನಿಸ್ತೇಜಗೊಂಡ ಕಣ್ಣುಗಳು,ಏಳು ಸುತ್ತಿನ ಕೋಟೆಯಲ್ಲಿ ಬಂದಿ ನಾನಾದೆ ಎಂಬ ಬಾವ, ದುಡಿದು ತಿಂದ ಕೈಗಳಿಗೆ ಬೇಡಿ ತಿನ್ನಲು ಸ್ವಾಭಿಮಾನ ಅಡ್ಡ ಬರುತ್ತೆ.. ಈ ವರ್ಷ ಮುರುಕಲು ಮನೆಯನ್ನು ದುರಸ್ತಿ ಮಾಡಿ ಹಂಚನ್ನು ಹಾಕೋಣ. ಬರುವ ಸಲ ತಂಗಿಗೆ ಗಂಡು ಹುಡುಕೋಣ. ಪೋರೆಯಿಂದ ಮಂಜಾದ ನಿನ್ನ ಕಣ್ಣಿನ ಸರ್ಜರಿ ಮಾಡಿಸಬೇಕು ಅಮ್ಮ.. ನೀವು ಇನ್ಮುಂದೆ ಕೂಲಿಗೆ ಹೋಗಿದ್ದು ಸಾಕು ಮನೆಯಲ್ಲೇ ಆರಾಮಾಗಿರಿ ಅಪ್ಪಾ. ಅಂದ ಹುಡುಗನೊಬ್ಬ ತನ್ನೆಲ್ಲಾ ಕನಸುಗಳನ್ನು ನನಸು ಮಾಡಿಕೊಳ್ಳಲು ಎಂದೂ ಮಲಗದ ಈ ಮಾಯನಗರಿಯಲ್ಲಿ ಹಗಲಿರುಳೆನ್ನದೆ ರಕ್ತ ಬೆವರನ್ನು ಒಂದು ಮಾಡಿಕೊಂಡು ದುಡಿಯತೊಡಗುತ್ತಾನೆ.ಆದರೆ ಕೋರೋನ ಎನ್ನುವ ಮಹಾಮಾರಿ ಆತನ ಕನಸುಗಳನ್ನೆಲ್ಲ ಹಿಂಡಿ ಹಿಪ್ಪೆ ಮಾಡಿ ಹಾಕಿದೆ. ತನ್ನವರ ಬದುಕನ್ನು ಬಿಡಿ,ತನ್ನೊಬ್ಬನ ಜೀವನವನ್ನು ರಕ್ಷಿಸಿಕೊಳ್ಳಲು ಹೆಣಗಾಡುವ ದುಸ್ಥಿತಿ ಅವನಿಗೆ ಎದುರಾಗಿದೆ.ಅನೇಕ ತುಳು ಕನ್ನಡಿಗರ ಬದುಕು ಇಲ್ಲಿ ಡೋಲಾಯಮಾನವಾಗಿದೆ..ಅವರ ಕೂಗು ಅರಣ್ಯ ರೋದನವಾಗಿದೆ. ಇಂತಹ ಸಮಯದಲ್ಲಿ ಇವರ ನೆರವಿಗೆ ಧಾವಿಸಿ ಬಂದು ಸಹಾಯಕ್ಕೆ ನಿಂತವರೆ "ಮಾತೃ ಹೃದಯಿ" ಬಂಟರ ಸಂಘದ ವಸಾಯಿ - ಡಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕರಾದ ಶ್ರೀ ಶಶಿಧರ್ ಕೆ ಶೆಟ್ಟಿಯವರು.. ಸಾಲಿನಲ್ಲಿ ಬರೆದಷ್ಟು ಸುಲಭವಲ್ಲಾ ಶಶಿಧರ್ ಶೆಟ್ಟಿಯವರ ಸಾಗರದಷ್ಟು ವಿಸ್ತಾರವಾದ ವ್ಯಕ್ತಿತ್ವವನ್ನು ವರ್ಣಿಸುವುದು.. ಶ್ರೇಷ್ಠ ಜನನಾಯಕ,ಸಂಘಟಕ, ಯಶಸ್ವೀ ಹೋಟೆಲ್ ಉದ್ಯಮಿ,ಕಲಾರಾಧಕ, ಸಮಾಜಮುಖಿ ಕಳಕಳಿಯ ಧೀಮಂತ ವ್ಯಕ್ತಿ ಎಲ್ಲಕಿಂತ ಮಿಗಿಲಾಗಿ ಇವರೊಬ್ಬ ಹೃದಯವಂತ ಮನುಷ್ಯ.. ಉಡುಪಿ ಜಿಲ್ಲೆಯ ಇನ್ನಂಜೆಯ ಮಂಡೇಡಿ ಇವರ ಊರು.ತಂದೆ ಮಂಡೆಡಿ ರಾಜನ್ ಮನೆ ಕಾಳು ಶೆಟ್ಟಿ, ತಾಯಿ ಮಂಡೆಡಿ ಕುಂಜಾರಬೆಟ್ಟು ಶಾರದಾ ಶೆಟ್ಟಿ. ದೇಶದ ಪ್ರತಿಷ್ಠಿತ ಕಂಪನಿಗಳೊಂದಾದ ಗೋದ್ರೆಜ್ ಕಂಪನಿಯ ಮುಂಬೈ ವಿಭಾಗದ ಶಾಖೆಯಲ್ಲಿ ಕ್ಯಾಂಟೀನ್ ನ ಮುಖ್ಯ ಬಾಣಸಿಗರಾಗಿ ಕಾಳು ಶೆಟ್ಟಿಯವರು ಕಾರ್ಯನಿರ್ವಹಿಸುತ್ತಿದ್ದರು. ಇವರ ಸಂಸಾರ ಮುಂಬೈಯ ಹೃದಯ ಬಾಗವಾದ ಲೋವರ್ ಪರೆಲ್ ನಲ್ಲಿ ವಾಸಿಸುತಿತ್ತು. ಎಲ್ಲರ ನೋವಿಗೂ ಸ್ಪಂದಿಸುವ ಕರುಣಾಮಯಿ ಈ ಕಾಳು ಶೆಟ್ಟಿಯವರ ಮನಸ್ಸು. ದಾರಿಹೋಕರಾದ ಬಿಕ್ಷುಕರು ಬಿಕ್ಷೆ ಬೇಡಲು ಬಂದರೆ ಅವರನ್ನು ಮನೆಯೊಳಗೆ ಕುಳ್ಳಿರಿಸಿ ಊಟ ಹಾಕಿ ಕಳಿಸುತ್ತಿದ್ದ ಕರುಣಾಮಯಿ. ಹೆತ್ತವರ ಇಂತಹ ಪರೋಪಕಾರದ ಗುಣಗಳು ಮಕ್ಕಳ ಮನಸ್ಸಿನ ಮೇಲೂ ಪ್ರಭಾವ ಬೀರತೊಡಗಿದವು.ವರ್ಲಿಯ ಮುನ್ಸಿಪಲ್ ಕನ್ನಡ ಮಾದ್ಯಮ ಶಾಲೆಯಲ್ಲಿ ಶಶಿಧರ್ ಶೆಟ್ಟಿ ಯವರು ವಿದ್ಯಾರ್ಥಿಯಾಗಿ ಸೇರಿಕೊಂಡರು.ಎಲ್ಲವೂ ಸುಖಕರವಾಗಿ ಸಾಗುತ್ತಿರುವಾಗ ಕಾಳು ಶೆಟ್ಟಿ ಯವರ ಸಾವು ಬರಸಿಡಿಲಂತೆ ಬಂದಪ್ಪಳಿಸಿತು. ಆಗ ಶಶಿಧರ ಶೆಟ್ಟಿಯವರ ಪ್ರಾಯ ಹನ್ನೊಂದು.ಐದನೇ ತರಗತಿಯ ವಿದ್ಯಾರ್ಥಿ.ಮನೆಯ ಆದಾರವೆ ಕುಸಿದು ಬಿದ್ದಾಗ ಕಂಗಾಲಾದ ಇವರೆಲ್ಲಾ ತಾಯಿಯೊಂದಿಗೆ ಪುನಃ ಹುಟ್ಟೂರಾದ ಇನ್ನಂಜೆಯ ಕಂಜಾರಬೆಟ್ಟುಗೆ ಬರಬೇಕಾಯಿತು.ಊರಲ್ಲಿ ಇವರದ್ದು ಅವಿಭಕ್ತ ಕುಟುಂಬ.ವ್ಯವಸಾಯ ಭೂಮಿಯೂ ಅಷ್ಟೇ ಪ್ರಮಾಣದಲ್ಲಿತ್ತು.ಇಲ್ಲಿ ಶಶಿಧರ್ ಶೆಟ್ಟರು ತನ್ನ ಶಿಕ್ಷಣವನ್ನು ಮುಂದುವರೆಸಿದರು.ಆದರೆ ಇವರ ಮನಸ್ಸು ಮುಂಬೈಗೆ ಮರಳಿ ಬರಲು ಕನವರಿಸುತಿತ್ತು.ತನ್ನ ಹದಿನೇಳನೇ ವರ್ಷದಲ್ಲಿ ಪುನಃ ಮುಂಬೈಯತ್ತ ಪ್ರಯಾಣ ಬೆಳೆಸಿದರು.ಬಂದವರೇ ಸಂಬಂಧಿಯೊಬ್ಬರ ಹೋಟೆಲಿನಲ್ಲಿ ಕೆಲಸ ಮಾಡತೊಡಗಿದರು. ಈ ಮಹಾರಾಷ್ಟ್ರದ ಮಣ್ಣಿನಲ್ಲಿ ಸಾಧನೆಯ ದಿವಿಗೆಯನ್ನು ಹಚ್ಚುವ, ತನ್ಮೂಲಕ ಬದುಕಿನಲಿ ಉನ್ನತಿಯನ್ನು ಹೊಂದುವ, ಮಹತ್ವಾಕಾಂಕ್ಷೆ ಇವರಲ್ಲಿ ತುಡಿತವಾಗಿ ಮಾರ್ಪಟ್ಟಿತ್ತು. ಕಾಲಕ್ರಮೇಣ ಉದ್ಯೋಗಿ ಆಗಿದ್ದವರು ಉದ್ಯಮಿಯಾಗಿ ಬೆಳೆದರು. ಈ ನಡುವಿನ ಇವರ ಹೊರಟ ನಿಜಕ್ಕೂ ಅದ್ಭುತ ಹಾಗೂ ಅವಿಸ್ಮರಣೀಯ.. ಶಶಿಧರ್ ಶೆಟ್ಟಿಯವರ ಧರ್ಮಪತ್ನಿ ಶಶಿಕಲಾ ಶೆಟ್ಟಿ. ಶ್ರೀಯುತರ ಬದುಕಿನ ಪಥವನ್ನೆ ಬದಲಿಸಿದಾಕೆ. ಮೂಲತಃ ಕಾರ್ಕಳದ ಹೆಬ್ರಿಯವರು. "ಕನಸು ಗುರಿಯಾಗಬೇಕು,ಗುರಿಯೇ ಕನಸಾಗಬಾರದು" ಅನ್ನುವುದು ಶಶಿಕಲಾರ ಮನದ ಇಂಗಿತ.. ಇವರ ದಾಂಪತ್ಯದ ಸಾಕ್ಷಿ ಎಂಬಂತೆ ಮನೆಯ ಲಕ್ಷ್ಮಿ ಯಾಗಿ ಮಗಳು ಸೃಷ್ಟಿ ಜನಿಸಿದಳು.. ನಾಲಾಸೋಪರ ಪರಿಸರದ ಯಶಸ್ವಿ ಹೋಟೆಲ್ ಉದ್ಯಮಿ ಅನ್ನಿಸಿಕೊಂಡರು.ಅನೇಕ ಹೆಸರಾಂತ ಹೋಟೆಲುಗಳ ಮಾಲಕ ಹಾಗೂ ಪಾಲುದಾರರೇನಿಕೊಂಡರು. ಅದರಲ್ಲೂ ನಾಲಸೋಪರ ದ "ಗ್ಯಾಲಕ್ಸಿ ಫ್ಯಾಮಿಲಿ ರೆಸ್ಟೋರೆಂಟ್" ಪ್ರಸಿದ್ಧವಾದುದು."ನಿನ್ನ ಸಾಧನೆಯ ದೀಪವನ್ನು ನೀನೇ ಹಚ್ಚಬೇಕು.ಕಟ್ಟಿಗೆ ಸುಟ್ಟಾಗ ಬೂದಿಯಾಗುತ್ತದೆ.ಆದರೆ ಇಟ್ಟಿಗೆ ಸುಟ್ಟಾಗ ಗಟ್ಟಿಯಾಗುತ್ತದೆ.ಆದ್ದರಿಂದ ನಾವು ಕಷ್ಟಗಳನ್ನು ಎದುರಿಸಿ ಮುಂದ ಡಿಯಿಟ್ಟಾಗ ಮಾತ್ರ ಜೀವನದಲ್ಲಿ ಸುಟ್ಟ ಇಟ್ಟಿಗೆಯಂತೆ ಗಟ್ಟಿ ಆಗುತ್ತೇವೆ" ಅನ್ನುವುದು ಶಶಿಧರ್ ಶೆಟ್ಟರ ಮಾತು.. ಲಾಕ್ ಡೌನ್ ನಿಂದಾಗಿ ಊರಿನಲ್ಲಿದ್ದು, ಮುಂಬೈಗೆ ಬರಲಾಗದಿದ್ದರೂ ಅಲ್ಲಿಂದಲೇ ಹತ್ತಾರು ಲಕ್ಷದ ದಿನಸಿ ಸಾಮಾನುಗಳನ್ನು ,ಬಂಟರ ಸಂಘ ಮುಂಬೈ, ವಸಾಯಿ- ದಾಹಣು ಪ್ರಾದೇಶಿಕ ಸಮಿತಿ,ಶ್ರೀದೇವಿ ಯಕ್ಷಕಲಾ ನಿಲಯ,ತುಳುಕೂಟ ಫೌಂಡೇಶನ್ ಇವರ ಮೂಲಕ ಲಾಕ್ ಡೌನ್ ನಿಂದ ತೊಂದರೆಗಿಡಾದ ಜನರಿಗೆ ಅದರಲ್ಲೂ ಮುಖ್ಯವಾಗಿ ಹೋಟೆಲ್ ಕಾರ್ಮಿಕರಿಗೆ, ಹಾಗೂ ತುಳು ಕನ್ನಡಿಗರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ಕಾರ್ಯ ಆರಂಭಿಸಿದರು.ಈಗಾಗಲೇ 2500ಕ್ಕೂ ಮಿಕ್ಕಿ ಕುಟುಂಬಗಳಿಗೆ ಸುಮಾರು 15 ಲಕ್ಷ ರೂಪಾಯಿ ಮೊತ್ತದ ಆಹಾರ ಪೊಟ್ಟಣ ಕೊಡಲಾಗಿದ್ದು,ಕೆಲವರಿಗೆ ನಗದನ್ನು ನೀಡಿ ಸಹಕರಿಸಿದ್ದಾರೆ...ಇವರ ಈ ಸೇವಾ ಕಾರ್ಯದಲ್ಲಿ ಅನೇಕ ವ್ಯಕ್ತಿಗಳು ಕೈ ಜೋಡಿಸಿದ್ದಾರೆ. ಶಶಿಧರ್ ಶೆಟ್ಟಿಯವರ ಮನಸ್ಸು ಯಾವಾಗ್ಲೂ ಸಮಾಜಮುಖಿಯಾಗಿ ಯೋಚಿಸುತ್ತಿರುತ್ತದೆ.ಎಷ್ಟೇ ಚಿಕ್ಕವರಾಗಿರಲಿ ತುಂಬಾ ಸರಳ ಸಜ್ಜನಿಕೆಯಿಂದ ಮಾತಾಡುವ ಇವರು ನಯವಿನಯಕ್ಕೆ ಪರ್ಯಾಯ ನಾಮ.ಇದಕ್ಕೆಲ್ಲ ಕಾರಣ ಅವರ ಬಾಲ್ಯದ ದಿನಗಳು. ಆಗೆಲ್ಲಾ ಹಲವು ರೀತಿಯ ಅಗ್ನಿ ದಿವ್ಯಗಳನ್ನು ಎದುರಿಸಿದ್ದಿರಿ.ಹಲವು ಬಗೆಯ ಸಂಸ್ಕಾರಕ್ಕೆ ಒಳಗಾದಿರಿ.ಅಪ್ಪಟ ಚಿನ್ನಾವಾದಿರಿ.ಕಲ್ಲು ಸಕ್ಕರೆ ಯಂತ ನಿಮ್ಮ ತುಳು ಬಾಷೆ .ತಿಳಿನೀರ ಮನಸುಳ್ಳ ಸಹೃದಯಿ.ಅದಕ್ಕೆ ನೀವು ಮನೆಯವರ ಊರವರ ಪ್ರೀತಿ ಪಾತ್ರರಾದೀರಿ.ಲಕ್ಷಾಂತರ ತುಳುವರಿಗೆ ಮತ್ತು ಕನ್ನಡಿಗರಿಗೆ ಪರಿಚಿತ ಮುಖವಾದಿರಿ.ಕೆಲಸಗಾರರಿಗೆ ಪ್ರೀತಿಯ ಅಣ್ಣನಾದಿರಿ... "ನೀರು ತಾನು ಹರಿಯುವಾಗ ಎದುರಿಗೆ ಬರುವ ಕಸ ಕಡ್ಡಿ ಕಲ್ಲು ಮುಳ್ಳುಗಳನ್ನು ಹೊತ್ತುಕೊಂಡು ಹರಿದು ತನ್ನ ಗುರಿ ತಲುಪುತ್ತದೆ.ನೀವು ಅಷ್ಟೇ ಜೀವನದಲ್ಲಿ ಎದುರಾಗುವ ಅವಮಾನ,ತಿರಸ್ಕಾರ, ಕೊಂಕು ನುಡಿಗಳನ್ನು ಎದುರಿಸುತ್ತಾ ಸಾಧನೆಯ ಶಿಖರ ಮುಟ್ಟಿದ್ದಿರಿ." ಹಸಿವೆಯಿಂದ ಬಳಲಿ ಕಂಗಾಲಾಗಿದ್ದ ಸಾವಿರಾರು ಜನರ ಬಳಿ ಧಾವಿಸಿ ಬಂದ ನೀವು ಅವರೆಲ್ಲರ ಪಾಲಿಗೆ ಅನ್ನದಾತರಾದಿರಿ."ಎನಿತು ಜನರಿಗೆ,ಎನಿತು ಜನ್ಮಗಳಿಗೆ ತಾನೂ ಎನಿತು ಋಣಿಯೋ? ಹಾಗೆ ನೋಡಿದರೆ ಈ ಜೀವನವೆಂಬುದು ಒಂದು ಋಣದ ಗಣಿಯಂತೆ..ಹಾಗಾಗಿ ಸಮಾಜದ ಋಣಬಾರವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ದಲ್ಲಿ ಅಶಕ್ತರು ಹಾಗೂ ಹಸಿದವರ ಕಣ್ಣೀರನ್ನು ಒರೆಸುವ ನಿಮ್ಮ ಬಾಗವತ್ಕರ್ಯ ನಿತ್ಯ ನಿರಂತರ ನಡೆಯುತ್ತಿರಲಿ. ಆ ಶಕ್ತಿಯನ್ನು ಶ್ರೀ ದೇವರು ನಿಮಗೆ ಇನ್ನಷ್ಟು ಅನುಗ್ರಹಿಸಿ ಕಾಪಾಡಲಿ.. ಬರಹ ✍️ ಉದಯ್ ಪೂಜಾರಿ