ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮಾನ್ಯ ಸಚಿವರ ಕಾರ್ಯಶೈಲಿಯ ಬಗ್ಗೆ ಯುವಕನಿಂದ ಅದ್ಭುತ ಬರಹ - nammakaup.in

Posted On: 20-03-2020 08:39AM

ಬಹುಶಃ ಈ ಹಿಂದೆಲ್ಲಾ ಮುಜರಾಯಿ ಇಲಾಖೆ ಅಂದರೆ ಯಾರಿಗೂ ಬೇಡದ ಇಲಾಖೆ... ಆದಾಯವೇನೋ ಚೆನ್ನಾಗಿದ್ದರೂ ದೇವರ ದುಡ್ಡಲ್ವಾ... ಅದನ್ನ ಯಾವ್ಯಾವುದಕ್ಕೋ ಬಳಸಿ ಅನೇಕ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನ ಹಾಳು ಮಾಡಿದ ಖ್ಯಾತಿಯೂ ಈ ಇಲಾಖೆಗೆ ಇದೆ. ಅಂತಹಾ ಇಲಾಖೆಯೊಂದು ಈ ಬಾರಿ ಬಲು ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದೆ. ಅದನ್ನ ಬಲು ಹುಮ್ಮಸ್ಸಿನಿಂದ ನಡೆಸಿಕೊಂಡು ಹೋಗುತ್ತಿರುವ ನಿಮ್ಮ ನಡೆ ಕಂಡು ತುಂಬಾನೇ ಹೆಮ್ಮೆ ಪಡುತ್ತಿರುವೆ... ನೀವು ಹಾಕಿಕೊಂಡಿರುವ ಅನೇಕ ಯೋಜನೆಗಳು ಉತ್ತಮವಾಗಿದೆ... ಇವುಗಳಲ್ಲಿ ನನ್ನನ್ನ ಬಹುವಾಗಿ ಸೆಳೆದದ್ದು ಎ ಗ್ರೇಡ್ ದೇವಳಗಳಲ್ಲಿ ಗೋಶಾಲೆಯ ನಿರ್ಮಾಣ... ಬಹುಶಃ ಇದೊಂದು ಬಲು ಉತ್ತಮ ಪರಿಕಲ್ಪನೆ... ಇದರ ಮೂಲ ಸ್ವರೂಪ ಹೇಗಿದೆಯೋ ಗೊತ್ತಿಲ್ಲ ಆದರೆ ಗೋಶಾಲೆ ನಿರ್ಮಾಣ ಮಾಡುವುದೇನೋ ದೊಡ್ದದಲ್ಲ ಆದರೆ ಅದನ್ನ ನಿರ್ವಹಿಸೋದು ಬಹಳ ಕಷ್ಟ... ಮಂಗಳೂರಿನ ಗೋವನಿತಾಶ್ರಯಕ್ಕೆ ಭೇಟಿ ಕೊಟ್ಟಾಗ ನಾನು ಕಂಡ ಸತ್ಯ ಅದು... ಗೋವುಗಳಿಗೆ ಬೇಕಾದ ಆಹಾರ, ಅವುಗಳನ್ನ ನೋಡಿಕೊಳ್ಳಲು ಬೇಕಾದ ಆಳು ಕಾಳುಗಳು ಇವೆಲ್ಲವನ್ನೂ ಹೊಂದಿಸೋದು ಬಲು ಕಷ್ಟವೇ ಸರಿ.. ಗೋಶಾಲೆಯನ್ನ ಮಾಡಿ ಅಂತ ಸುತ್ತೋಲೆ ಕಳುಹಿಸಿ ಅದು ಸರಿಯಾಗಿ ನಿರ್ವಹಣೆಯಾಗದೇ ಹೋದರೆ ಅದೊಂದು ದುರಂತವೇ ಸರಿ... ಈ ನಿಟ್ಟಿನಲ್ಲಿ ಸರಕಾರ ಪರಿಪೂರ್ಣವಾದ ಯೋಜನೆ ಮತ್ತು ಯೋಚನೆ ಮಾಡಿಯೇ ಮುಂದುವರಿಯುವುದು ಉತ್ತಮ... ಮುಖ್ಯವಾಗಿ ನೋಡಿಕೊಳ್ಳಲು ಜನ ಸಿಗುವುದು ಬಹಳ ಕಷ್ಟ ಪ್ರತಿಯೊಬ್ಬರ ಮನೆಯಲ್ಲೂ ದನಗಳಿರುತ್ತಿದ್ದ ಕಾಲದಿಂದ ಜಿಲ್ಲೆಗೊಂದು ಗೋಶಾಲೆ ಅನ್ನುವಂತಾಗಿದೆ. ಹಾಗಾಗಿ ಗೋವಿನ ಚಾಕರಿ ಮಾಡಲು ಮುಂದೆ ಬರುವವರಿಗೆ ಅತ್ಯುತ್ತಮ ವೇತನ ನೀಡುವ ಕಾರ್ಯ ಕೈಗೊಂಡಲ್ಲಿ ನಿಜಕ್ಕೂ ಜನ ಮುಂದೆ ಬಂದಾರು... ಆರ್ಥಿಕವಾಗಿ ಲಾಭವಿದೆ ಅಂದಾಗ ಈ ವೃತ್ತಿಯನ್ನೂ ಸ್ವೀಕರಿಸೋ ಜನರು ಸಿಗುವುದರಲ್ಲಿ ಸಂಶಯವಿಲ್ಲ... ಕಲಿಯೋದರಲ್ಲಿ ಹಿಂದುಳಿದ ಅದೆಷ್ಟೋ ಜನರಿಗೆ ಇದು ಉತ್ತಮ ಕೆಲಸವಾಗಬಲ್ಲದು... ಇನ್ನೂ ಆಕಳ ಮೇವಿನ ಬಗ್ಗೆ... ದೇವಳ ಅಂತಂದ ಮೇಲೆ ಭಕ್ತರು ಇದ್ದೇ ಇರುತ್ತಾರೆ... ಈ ಭಕ್ತರಿಗೂ ಒಂದು ಅವಕಾಶ ಒದಗಿಸಿ ಕೊಡೋ ಯೋಚನೆ ಮಾಡಬಹುದು.... ಅದೇನೆಂದರೆ ಭಕ್ತರು ತಾವೇ ಹುಲ್ಲನ್ನ ಬೆಳೆದು ಗೋವಿಗೆ ತಂದು ಕೊಡುವ ಯೋಜನೆ... ಈ ರೀತಿ ತಂದು ಹುಲ್ಲು ಕೊಡುವ ಭಕ್ತರಿಗೆ ದೇವರ ಮತ್ತು ಗೋವಿನ ವಿಶೇಷ ಪ್ರಸಾದ ವಿತರಣೆಯ ಕ್ರಮ... ಇನ್ನೂ ಬೇಕಿದ್ದಲ್ಲಿ ದೇಸೀ ಗೋವುಗಳನ್ನೇ ಸಾಕಿ, ಮೇವು ತಂದವರಿಗೆ ಹಾಲು ಅನ್ನುವ ಪರಿಕಲ್ಪನೆಯನ್ನೂ ಯೋಚಿಸಬಹುದು. ಇದರಿಂದ ದೇಸೀ ತಳಿಗಳೂ ಬೆಳೆಯುತ್ತದೆ.. ಜತೆಗೆ ದೇಸೀ ಹಾಲನ್ನ ಪಡೆದ ಭಕ್ತರ ಆರೋಗ್ಯವೂ ಚೆನ್ನಾಗಿರುತ್ತದೆ. ಗೋಸೇವೆಯ ಅವಕಾಶವನ್ನೂ ಭಕ್ತರಿಗೆ ನೀಡಬಹುದು. ಗೋಶಾಲೆಯ ಪರಿಪೂರ್ಣ ಲಾಭ ಪಡೆದುಕೊಳ್ಳಬೇಕಾದಲ್ಲಿ ಗೋವಿನ ಪ್ರತಿಯೊಂದು ಉತ್ಪನ್ನಗಳನ್ನೂ ತಯಾರಿಸಿ ಮಾರಾಟ ಮಾಡುವ ಯೋಜನೆಯನ್ನೂ ಹಾಕಿಕೊಳ್ಳಬಹುದು. ಇದರಿಂದ ಸ್ಥಳೀಯರಿಗೆ ಗೋವಿನ ತಾಜಾ ಉತ್ಪನ್ನಗಳು ಕಡಿಮೆ ಬೆಲೆಗೆ ಮತ್ತು ಕ್ಲಪ್ತ ಸಮಯಕ್ಕೆ ಸಿಗುವಂತಾಗುತ್ತದೆ. ಇದರ ಜತೆಗೇ ದೇವಳದಲ್ಲಿ ಜಾಗಗಳಿದ್ದಲ್ಲಿ " ಯಾಗವನ "... ಅನ್ನುವ ಯೋಜನೆಯನ್ನೂ ಹಾಕಿಕೊಳ್ಳಬಹುದು... ನಮ್ಮಲ್ಲಿ ಅನೇಕಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ ಇದಕ್ಕೆ ಬೇಕಾದ ಸಮಿತ್ತುಗಳನ್ನ ದೇವಳದ ಯಾಗವನದಲ್ಲಿ ಬೆಳೆದು ಅದನ್ನ ಭಕ್ತರಿಗಾಗಲೀ ಇತರರಿಗಾಗಲೀ ಕೊಡುವ ಯೋಜನೆ... ನ್ಯಾಯಯುತವಾದ ಬೆಲೆಗೆ ಅಸಲಿ ಸಮಿಧೆಗಳು ಸಿಗುವುದೇ ಅಪರೂಪವಾದ ಈ ಕಾಲದಲ್ಲಿ ಇದು ಉತ್ತಮ ಯೋಜನೆಯಾಗಬಹುದು. ದೇವಳಕ್ಕೆ ಆದಾಯವೂ ಆಗಬಹುದು. ಇದೇ ರೀತಿಯಲ್ಲಿ ದೇವಳದಲ್ಲಿ ಸಾಂಪ್ರದಾಯಿಕವಾಗಿ, ಶುದ್ಧವಾದ ರೀತಿಯಲ್ಲಿ ಮಾಡುವ ಕುಂಕುಮ, ಭಸ್ಮ, ಅರಶಿನಗಳನ್ನು ಬಳಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಅದೇ ರೀತಿ ದೇವಳದ ಪರಿಸರದಲ್ಲಿ ಭಕ್ತರಿಗೆ ಈ ಸುವಸ್ತುಗಳು ಸಿಗುವ ವ್ಯವಸ್ಥೆಯೂ ಆದರೆ ಉತ್ತಮ. ಇನ್ನು ಪೂಜಾ ಸಾಮಾಗ್ರಿಗಳ ಉತ್ಪಾದನೆಯ ಎಲ್ಲಾ ಸಂಸ್ಥೆಗಳು ಧಾರ್ಮಿಕ ಧತ್ತಿ ಇಲಾಖೆಯಿಂದ ಪ್ರಮಾಣಪತ್ರ ಪಡೆಯುವಂತಾಗಬೇಕು. ಕರ್ಪೂರ, ಊದುಬತ್ತಿ ಇತ್ಯಾದಿ ಅನೇಕ ವಸ್ತುಗಳು ನಕಲಿಯೇ ಸಿಗುತ್ತಿದೆ. ಧಾರ್ಮಿಕ ದತ್ತಿ ಇಲಾಖೆಯು ಪ್ರಮಾಣ ಪತ್ರ ಕೊಡುವ ಸಂಸ್ಥೆಯು ಸಾಂಪ್ರದಾಯಿಕವಾಗಿ ಅದನ್ನ ತಯಾರಿಸುತ್ತಿದೆಯೇ...? ಅನ್ನುವುದನ್ನ ಕಾಲಕಾಲಕ್ಕೆ ಪರಿಶೀಲನೆ ಮಾಡಿದರೆ ಉತ್ತಮವಲ್ವೇ.. ಇನ್ನು ದೇವಳದಲ್ಲಿ ವಸ್ತ್ರಸಂಹಿತೆಯನ್ನ ಕಡ್ಡಾಯಗೊಳಿಸುವ ಆಲೋಚನೆಯನ್ನೂ ಮಾಡಬಹುದು.. ಇಲ್ಲಿ ಅನೇಕರು ಕೆಲಸದ ನಡುವೆ ದೇವಳಕ್ಕೆ ಬಂದು ಹೋಗುವವರಿದ್ದರೆ ಅವರಿಗೆ ಅನುಕೂಲವಾಗುವಂತೆ ದೇವಳದಲ್ಲೇ ಪಂಚೆ ಶಲ್ಯಗಳನ್ನೂ... ಬಾಡಿಗೆಗೆ ವಿತರಿಸುವ ಕ್ರಮ ಅನುಸರಿಸಿದಲ್ಲಿ ಉತ್ತಮ..ಇದರಿಂದ ದೇವಳಕ್ಕೆ ಆದಾಯವೂ ಆಗುತ್ತದೆ.. ಸಂಪ್ರದಾಯ ಉಳಿದಂತೆಯೂ ಆಗುತ್ತದೆ... ಬರುವ ಜನರಿಗೂ ಅನುಕೂಲವಾಗುತ್ತದೆ. ಇದರಿಂದ ಅಲ್ಲೂ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ... ಅದನ್ನ ನೋಡಿಕೊಳ್ಳುವವ ಒಬ್ಬಾತನಾದರೆ ...ಆ ಬಟ್ಟೆಗಳನ್ನ ಒಗೆದು ಶುಭ್ರಗೊಳಿಸುವ ಕಾಯಕವೂ ಸೃಷ್ಟಿಯಾಗುತ್ತದೆ. ಇನ್ನು ದೇವಳದ ಪರಿಚಾರಿಕೆಯಲ್ಲಿ ತೊಡಗಿಸಿಕೊಳ್ಳುವ ಅನೇಕರ ಮಕ್ಕಳಿಗೆ ಅವರ ಧಾರ್ಮಿಕ ನಡವಳಿಕೆಯ ಆಧಾರದ ಮೇಲೆ ವಿದ್ಯಾರ್ಥಿ ವೇತನವನ್ನೂ ನೀಡುವ ಕಾರ್ಯಕ್ರಮ ಹಾಕಿಕೊಳ್ಳಬಹುದು. ದೇವಳದಿಂದ ರಾಮಯಾಣ, ಮಹಾಭಾರತ ಮುಂತಾದ ಅನೇಕ ವಿಚಾರಗಳ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವಂತಹಾ ಕಾರ್ಯಕ್ರಮವನ್ನ ಹಮ್ಮಿಕೊಳ್ಳಬಹುದು... ಪ್ರತಿ ನಿತ್ಯ ಅಥವಾ ಸಂಜೆ ಆಸುಪಾಸಿನ ಮಕ್ಕಳಿಗೆ ಎಳವೆಯಲ್ಲಿಯೇ " ಸಂಸ್ಕಾರ ಮತ್ತು ಸಂಪ್ರದಾಯ "ಗಳ ಪಾಠ ಹೇಳಿಕೊಡುವ ಹಿಂದೂ ಧರ್ಮದ ಶ್ರೇಷ್ಠತೆಯ ಪಾಠ ಹೇಳಿಕೊಡುವ ಕೆಲಸವನ್ನೂ ಮಾಡಬಹುದು. ನಮ್ಮ ಹಿಂದಿನ ಜೀವನಶೈಲಿಯನ್ನ ಅನುಸರಿಸುವಂತಹಾ ಕುಟುಂಬಗಳನ್ನ ಗುರುತಿಸುವ ಮತ್ತು ಅದನ್ನ ಇತರಿಗೆ ತೋರಿಸಿಕೊಟ್ಟು ಜನರಲ್ಲಿ ಅವರಂತೆ ಬಾಳಿ ಬದುಕಬೇಕೆನ್ನುವ ಅಂತಃಪ್ರಜ್ಞೆ ಮೂಡಿಸುವ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳಬಹುದು. ದೇವಳಗಳು ಬರಿಯ ಶಿಲ್ಪಸೌಂದರ್ಯದ ಬೀಡಾಗದೇ ಅದು ಭಕ್ತರ ಆಧ್ಯಾತ್ಮಿಕ ಉನ್ನತಿಗೂ ಕಾರಣವಾಗುವಂತಹಾ ಯೋಜನೆಗಳನ್ನೂ ಹಾಕಿಕೊಳ್ಳಬಹುದು. ಇನ್ನೂ ಸಲಹೆಗಳನ್ನ ಕೇಳಿದಲ್ಲಿ ಉತ್ತಮವಾದ ಸಲಹೆಗಳು ಬಂದೀತು... ಎಷ್ಟು ಸಾಧ್ಯವೋ ಅಷ್ಟನ್ನು ಅಳವಡಿಸಿಕೊಂಡು ದೇವಳಗಳನ್ನ ಸಮಾಜದ ಶಕ್ತಿ ಕೇಂದ್ರವನ್ನಾಗಿಸಿ ಅನ್ನುವ ಆಶಯ ನನ್ನದು...ಬಹುಶಃ ನೀವಿದನ್ನ ಮಾಡಿ ತೋರಿಸಬಲ್ಲಿರಿ ಅನ್ನುವ ಆಶಾಭಾವ ಜಾಗೃತವಾದ ಕಾರಣಕ್ಕೇನೇ ಇಂತಹಾ ಪತ್ರವೊಂದನ್ನ ಬರೆದೆನೇನೋ... ✍️ ಗುರುಪ್ರಸಾದ್ ಆಚಾರ್ಯ, ಕುಂಜೂರು