Updated News From Kaup
ಕಾಪು ತಾಲ್ಲೂಕು ಕ.ಸಾ.ಪ. : ವಿದ್ಯಾರ್ಥಿಗಳಿಗೆ ಅಭಿನಂದನೆ, ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Posted On: 14-07-2025 07:54PM
ಕಾಪು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲ್ಲೂಕು ಘಟಕ ವತಿಯಿಂದ 2024-25 ಸಾಲಿನ ಎಸ್ಎಸ್ಎಲ್ ಸಿ ಮತ್ತು ಪದವಿ ಪೂರ್ವ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ಪೂರ್ಣ ಅಂಕಗಳಿಸಿದ ಕಾಪು ತಾಲ್ಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಅಭಿನಂದನೆ ಹಾಗೂ ತಾಲ್ಲೂಕು ವ್ಯಾಪ್ತಿಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಕಾಪು ತಾಲ್ಲೂಕು ವ್ಯಾಪ್ತಿಯಲ್ಲಿ ಶೇ.100ಫಲಿತಾಂಶ ದಾಖಲಿಸಿದ ಪಲಿಮಾರು ಸ.ಪ.ಪೂ.ಕಾಲೇಜು ಪ್ರಾಂಶುಪಾಲರಾದ ಗ್ರೆಟ್ಟಾ ಮೊರಸ್ ಇವರಿಗೆ ಅಭಿನಂದನೆ ಕಾರ್ಯಕ್ರಮ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ ಇಲ್ಲಿ ಜರಗಿತು.

ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಶಾಲೆಯೆಂಬ ಅರಿವಿನ ಬಾಗಿಲನ್ನು ತೆರೆದಾಗ ಜ್ಞಾನವನ್ನು ಪಡೆಯಬಹುದು. ಭಾಷಾ ಜ್ಞಾನದೊಂದಿಗೆ ಕಲಿಕೆಯ ಬಗ್ಗೆ ಆಸಕ್ತಿ ವಹಿಸಿದಾಗ ಮಾತ್ರ ಉನ್ನತ ಗುರಿ ತಲುಪಲು ಸಾಧ್ಯ ಎಂದರು. ಬಹುಮಾನ ವಿತರಣೆ/ ಅಭಿನಂದನೆ : ಭಾಷಣ ಸ್ಪರ್ಧೆಯಲ್ಲಿ ಸಮಥ್೯ ಜೋಶಿ ದಂಡತೀರ್ಥ ಪ.ಪೂ.ಕಾಲೇಜು ಕಾಪು ಪ್ರಥಮ, ಕೀರ್ತಿ ಆನಂದ ತೀರ್ಥ ಪ.ಪೂ. ಕಾಲೇಜು ಪಾಜಕ ದ್ವಿತೀಯ, ಬೇಬಿ ಒ ಜೈನ್ ಪೂರ್ಣಪ್ರಜ್ಞ ಪ.ಪೂ . ಕಾಲೇಜು ಅದಮಾರು ತೃತೀಯ ಮತ್ತು ನಿಧಿ ಅನಿತಾ ಸುರೇಶ್ ಶೆಟ್ಟಿ ಪ.ಪೂ.ಕಾಲೇಜು ಎರ್ಮಾಳ್ , ವಸುಪ್ರದಾ ತ್ರಿಶಾ ವಿದ್ಯಾ ಕಾಲೇಜು ಸಮಾಧಾನಕರ ಬಹುಮಾನ ಪಡೆದರು. ಶೇ.100 ಫಲಿತಾಂಶ ದಾಖಲಿಸಿದ ಪಲಿಮಾರು ಸ.ಪ.ಪೂ.ಕಾಲೇಜು ಪ್ರಾಂಶುಪಾಲರಾದ ಗ್ರೆಟ್ಟಾ ಮೊರಸ್ ಇವರಿಗೆ ಅಭಿನಂದನೆ ಕಾರ್ಯಕ್ರಮ ಜರಗಿತು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕಟಪಾಡಿ ತ್ರಿಶಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಹರಿಪ್ರಸಾದ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು.

ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೀಲಾನಂದ ನಾಯ್ಕ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಕೃಷ್ಣ ಕುಮಾರ್ ರಾವ್ ಬಹುಮಾನಿತರ ಪಟ್ಟಿ ವಾಚಿಸಿದರು.ವಿದ್ಯಾಧರ್ ಪುರಾಣಿಕ್ ನಿರೂಪಿಸಿ, ಅನಂತ ಮೂಡಿತ್ತಾಯ ವಂದಿಸಿದರು.
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಂಟಕಲ್ ಸನ್ ಶೈನ್ ಲೀ ಜನ್, ಏರಿಯಾ- ಜಿ ಪದಗ್ರಹಣ

Posted On: 14-07-2025 07:25PM
ಕಾಪು : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಂಟಕಲ್ ಸನ್ ಶೈನ್ ಲೀ ಜನ್, ಏರಿಯಾ- ಜಿ ಇದರ ಪದಗ್ರಹಣ ಸಮಾರಂಭ ನೆರವೇರಿತು. ಎಸ್ಎನ್ಆರ್. ಪಿಪಿಎಫ್ ರೇಖಾ ಮರಳಿಧರನ್, ಎನ್ ವಿ ಪಿ ಏರಿಯಾ ಜಿ ಸಿಎಸ್ಐಯವರು ನೂತನ ಅಧ್ಯಕ್ಷ ಎಸ್ಎನ್ಆರ್. ರಮೇಶ್ ಬಂಟಕಲ್ ಅವರಿಗೆ ಪ್ರಮಾಣ ವಚನ ನೀಡಿದರು ಮುಖ್ಯ ಅತಿಥಿ ಎಸ್ಎನ್ಆರ್, ಸಿ ಎಸ್ ಎಲ್., ಪಿ. ಪಿ. ಎಫ್ ಚಿತ್ರ ಕುಮಾರ್ ಸಮಾಜಮುಖಿ ಕೆಲಸಗಳನ್ನು ಮಾಡಿರಿ ಎಂದು ತಿಳಿಸಿದರು.
.jpg)
ಪಿಪಿಎಫ್ ನವೀನ್ ಅಮೀನ್ ಕಾರ್ಯಕ್ರಮಗಳು ಜನರಿಗೆ ತಲುಪುವಂತೆ ಇರಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಾರಾಯಣ ಶೆಟ್ಟಿ ಪೊದಮಾಲೆ, ಬಂಟಕಲ್ಲು ಹಿರಿಯ ಕೃಷಿಕರು ಇವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಎಸ್ಎನ್ಆರ್ ವಿಘ್ನೇಶ್ ಶೆಟ್ಟಿ ಮೇಲ್ಮನೆ ಇವರು ನೂತನ ಅಧ್ಯಕ್ಷರ ಪರಿಚಯ ಮಾಡಿದರು. ನೂತನ ಅಧ್ಯಕ್ಷರಾದ ರಮೇಶ್ ಬಂಟಕಲ್ ಅನಿಸಿಕೆ ವ್ಯಕ್ತಪಡಿಸಿದರು.
ಸ್ಥಾಪಕ ಅಧ್ಯಕ್ಷ ಎಸ್ ಎಸ್ ಎನ್ ಆರ್ ಸಂದೀಪ್ ಬಂಗೇರ ಸ್ವಾಗತಿಸಿದರು. ಎಸ್ ಎನ್ ಆರ್ ವಿವೇಕ್ ಶೆಟ್ಟಿ ಸೀನಿಯರ್ ಚೇಂಬರ್ ವಾಣಿಯನ್ನು ಓದಿದರು. ಎಸ್ಎನ್ಆರ್ ಪ್ರಸಾದ್ ಶೆಟ್ಟಿ ವಳದೂರುರವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಮನೋಜ್ ಕಡಬ ಶುಭ ಹಾರೈಸಿದರು. ಎಸ್ಎನ್ಆರ್. ರವೀಂದ್ರ ಪಾಟ್ಕರ್ ವಂದಿಸಿದರು.
ಇನ್ನಂಜೆ ಎಸ್ ವಿ ಎಸ್, ಎಸ್ ವಿ ಎಚ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

Posted On: 14-07-2025 07:09PM
ಕಾಪು : ಇಲ್ಲಿನ ಇನ್ನಂಜೆ ಎಸ್ ವಿ ಎಸ್ ಮತ್ತು ಎಸ್ ವಿ ಎಚ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಶಾಲಾ ಆಡಳಿತ ಅಧಿಕಾರಿಯವರಾದ ಪ್ರಭಾವತಿ ಎಸ್ ಅಡಿಗರವರ ಅಧ್ಯಕ್ಷತೆಯಲ್ಲಿ ಶಾಲಾ ಪೋಷಕರಾದ ಶ್ರೀ ಶ್ರೀ ವಿಶ್ವವಲ್ಲಭ ಸ್ವಾಮೀಜಿಯವರ ಭಾವಚಿತ್ರವನ್ನು ಇಟ್ಟು ಅವರಿಗೆ ಗುರುವಂದನೆಯನ್ನು ಸಲ್ಲಿಸಲಾಯಿತು.
ಅನಂತರ ಆಡಳಿತ ಅಧಿಕಾರಿ ಅವರಿಗೆ ಮುಖ್ಯ ಶಿಕ್ಷಕಿಯರು, ಶಿಕ್ಷಕಿಯರು ಹಾಗೂ ಮಕ್ಕಳು ಪಾದಪೂಜೆಯನ್ನು ಮಾಡಿ ಗುರುವಂದನೆಯನ್ನು ನೆರವೇರಿಸಿದರು.
ಪಡುಬಿದ್ರಿ : ಕಾಪು ಶಾಸಕರಿಂದ ಕಂಚಿನಡ್ಕದಲ್ಲಿ ರಸ್ತೆ ಕಾಮಗಾರಿ ಉದ್ಘಾಟನೆ ; ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ

Posted On: 14-07-2025 06:51PM
ಪಡುಬಿದ್ರಿ : ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಮಿಂಚಿನ ಬಾವಿ ಸಂಪರ್ಕ ರಸ್ತೆ ಕಾಂಕ್ರಿಟೀಕರಣಕ್ಕೆ 6 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆಯನ್ನು ಸೋಮವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಇದೇ ಸಂದರ್ಭ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಕಂಚಿನಡ್ಕ ಮಮ್ತಾಜ್ ಮನೆ ಬಳಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ರವಿ ಶೆಟ್ಟಿ, ಅಶೋಕ್ ಪೂಜಾರಿ, ಶೋಭಾ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನೀತಾ ಗುರುರಾಜ್, ಸ್ಥಳೀಯರಾದ ಸಂತೋಷ್, ಕೃಷ್ಣ ಉಪಸ್ಥಿತರಿದ್ದರು.
ಕಾಪು : ಕಾಂಗ್ರೆಸ್ ಪಕ್ಷದಿಂದ ಕೇಂದ್ರ ಸರಕಾರದ ವೈಫಲ್ಯದ ವಿರುದ್ಧ ತಹಶಿಲ್ದಾರ್ ಕಛೇರಿ ಎದುರು ಪ್ರತಿಭಟನೆ

Posted On: 14-07-2025 06:43PM
ಕಾಪು : ಕೇಂದ್ರ ಸರಕಾರದ ವೈಫಲ್ಯಗಳ ವಿರುದ್ಧ ಸೋಮವಾರ ಕಾಪು ತಶಿಲ್ದಾರ್ ಕಛೇರಿ ಎದುರು ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನಾ ಸಭೆಗು ಮುನ್ನ ಕಾಪು ರಾಜೀವ ಭವನದಿಂದ ತಹಶಿಲ್ದಾರ್ ಕಛೇರಿವರೆಗೆ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಮೆರವಣಿಗೆಯಲ್ಲಿ ಸಾಗಿ ಬಂದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಪಂಚ ಗ್ಯಾರಂಟಿಯ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರ ಜನ ಮನ ಗೆದ್ದಿದೆ. ಇದನ್ನು ಸಹಿಸದ ಬಿಜೆಪಿ ಪಕ್ಷದವರು ಏನು ಮಾಡಲು ತೋಚದೆ ಕಾಂಗ್ರೆಸ್ ಪಕ್ಷದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಪು ಶಾಸಕರು ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ಕೊಡಿಸುವ ಕಾರ್ಯ ಮಾಡಲಿ. ಹದಿನಾರು ಪಂಚಾಯತ್ ಗಳಲ್ಲಿ ಬಿಜೆಪಿಯವರ ಸುಳ್ಳು ಮತ್ತು ಕೇಂದ್ರ ಸರಕಾರದ ವೈಫಲ್ಯದ ವಿರುದ್ಧ ಪ್ರತಿಭಟನೆ ಮಾಡುವುದರ ಮುಖೇನ ನೈಜತೆಯನ್ನು ಜನತೆಯ ಮುಂದೆ ಇಡುವ ಕೆಲಸವನ್ನು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಈ ಸಂದರ್ಭ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಪಡುಬಿದ್ರಿ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಿಯಾಝ್, ನವೀನ್ಚಂದ್ರ ಸುವರ್ಣ, ಎಂಎ ಗಫೂರ್, ಗಣೇಶ್ ಕೋಟ್ಯಾನ್ ಪಡುಬಿದ್ರಿ, ಶರ್ಫುದ್ಧೀನ್ ಶೇಖ್, ನವೀನ್ ಎನ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ ಮತ್ತು ಕಾಂಗ್ರೆಸ್ ಸದಸ್ಯರುಗಳು ಉಪಸ್ಥಿತರಿದ್ದರು.
ISPRL ಪಾದೂರು ಘಟಕದಿಂದ : ಪ್ರಕೃತಿ ರಮಣೀಯವಾಗಿರುವ ಧನಸ್ಸು ತೀರ್ಥ ಸ್ವಚ್ಛತೆ

Posted On: 13-07-2025 05:30PM
ಕಾಪು : ಇನ್ನಂಜೆ ಗ್ರಾಮದ ಮಡುಂಬು ಧನಸ್ಸು ತೀರ್ಥ, ರೆಂಜಾಲ ಪಾದೆ ಇಲ್ಲಿ ISPRL ಪಾದೂರು ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಶೆಟ್ಟಿ ಉಪಸ್ಥಿತರಿದ್ದರು.
ಗ್ರಾಮಸ್ಥರ ಆಗ್ರಹ : ಧನಸ್ಸು ತೀರ್ಥ ಎಂಬುದು ಪವಿತ್ರ ತೀರ್ಥಬಾವಿಯನ್ನು ಹೊಂದಿದ್ದು, ಕುಂಜಾರು ಗಿರಿಯಿಂದ ಗುರುತಿಸಲ್ಪಡುವ ನಾಲ್ಕು ತೀರ್ಥಗಗಳಲ್ಲಿ ಇದೂ ಒಂದು, ಕಾಪು ರಾಷ್ಟ್ರೀಯ ಹೆದ್ದಾರಿಯಿಂದ 3 ಕಿಲೋಮೀಟರ್ ಅಂತರದಲ್ಲಿ ಇದ್ದು, ಶಂಕರಪುರ ಅಥವಾ ಬಂಟಕಲ್ಲಿಗೂ 3 ಕಿಲೋಮೀಟರ್ ಅಂತರದಲ್ಲಿರುವ ಈ ಬೆಟ್ಟವು ಪ್ರವಾಸಿಗರನ್ನು ಆಕರ್ಷಿಸಿ ಕೈ ಬೀಸಿ ತನ್ನತ್ತ ಕರೆಯುತ್ತಿದೆ, ಪ್ರವಾಸೋದ್ಯಮಕ್ಕೆ ಕೊಡುಗೆಯನ್ನು ನೀಡಬಲ್ಲ ಈ ಧನಸ್ಸು ತೀರ್ಥಕ್ಕೆ ಸಾಗಬೇಕಾದರೆ ಮಣ್ಣಿನ ರಸ್ತೆಯಲ್ಲೇ ಸಾಗಬೇಕಾಗಿರುವುದು ದುರದೃಷ್ಟಕರ ಸಂಗತಿ, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ, ಸೂಕ್ತ ರಸ್ತೆಯ ವ್ಯವಸ್ಥೆಯನ್ನು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಪು ಶ್ರೀ ಹೊಸ ಮಾರಿಗುಡಿಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಭೇಟಿ

Posted On: 13-07-2025 04:57PM
ಕಾಪು : ಕರ್ನಾಟಕ ಸರಕಾರದ ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿಯವರು ಭಾನುವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು.
ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.
ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಸರಕಾರದ ಅನುದಾನವಿಲ್ಲದೆ ದಾನಿಗಳ ಮತ್ತು ಭಕ್ತರ ನೆರವಿನಿಂದ ಇಷ್ಟು ದೊಡ್ಡ ದೇವಸ್ಥಾನ ನಿರ್ಮಾಣ ಮಾಡಿರುವುದು ಬಹಳ ಸಂತೋಷ. ಇಲ್ಲಿನ ವಾಸ್ತುಶಿಲ್ಪ ಬಹಳಷ್ಟು ಚೆನ್ನಾಗಿ ಮೂಡಿಬಂದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ದೇವಳದ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಮಾಜಿ ಸಚಿವ ಮತ್ತು ಗೌರವಾಧ್ಯಕ್ಷ ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ಅಭಯ ಚಂದ್ರ ಜೈನ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಮಂಜುಳಾ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಅಧ್ಯಕ್ಷ ಭಾಸ್ಕರ ದೇವಾಡಿಗ, ಕಾಪು ತಾಲೂಕು ತಹಶಿಲ್ದಾರ್ ಪ್ರತಿಭಾ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ದೇವಳದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಮಾಧವ ಆರ್ ಪಾಲನ್, ಶೇಖರ ಸಾಲ್ಯಾನ್, ಮನೋಹರ ರಾವ್ ಕಲ್ಯ, ರವೀಂದ್ರ ಮಲ್ಲಾರ್, ಜಯಲಕ್ಷ್ಮಿ ಸುರೇಶ್ ಶೆಟ್ಟಿ, ಚರಿತ ದೇವಾಡಿಗ, ನವದುರ್ಗಾ ಲೇಖನ ಯಜ್ಞ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆ ಸಾವಿತ್ರಿ ಗಣೇಶ್, ಕಾಪು ಪುರಸಭೆ ನಾಮ ನಿರ್ದೇಶಿತ ಸದಸ್ಯ ದೇವರಾಜ್ ಕೋಟ್ಯಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಜನೆಗೆ ಸಹಾಯ ಮಾಡುವುದು ಸುಭದ್ರ ಭವಿಷ್ಯಕ್ಕೆ ಬುನಾದಿ ಇಟ್ಟಂತೆ : ಅಶೋಕ್ ಸಾಲ್ಯಾನ್

Posted On: 06-07-2025 09:33PM
ಪಡುಬಿದ್ರಿ: ಬಡತನ ಮತ್ತು ಹಣದ ಕೊರತೆಯ ಕಾರಣದಿಂದಾಗಿ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ವಿದ್ಯೆ ಲಭಿಸಬೇಕು. ವಿದ್ಯಾರ್ಜನೆಗೆ ಸಹಾಯ ಮಾಡುವುದರಿಂದ ದೇಶದ ಸುಭದ್ರ ಭವಿಷ್ಯಕ್ಕೆ ಬುನಾದಿ ಇಟ್ಟಂತೆ ಎಂದು ಪಡುಬಿದ್ರಿ ಕಾಡಿಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್ ಹೇಳಿದರು. ಅವರು ಕಾಡಿಪಟ್ಣದ ಶ್ರೀ ವಿಷ್ಣು ಭಜನಾ ಮಂದಿರದ ಆವರಣದಲ್ಲಿ ಭಾನುವಾರ ಕಾಡಿಪಟ್ಣ ಮೊಗವೀರ ಮಹಾಸಭಾ ಮುಂಬೈ ಇವರ ಸಹಕಾರದೊಂದಿಗೆ ನಡೆದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಡುಪಿ ಜಿಲ್ಲಾ ಮೀನುಗಾರ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ಮಾತನಾಡಿ, ವಿದ್ಯಾರ್ಥಿವೇತನದ ಸಹಾಯ ಪಡೆದುಕೊಳ್ಳುವ ಪ್ರತಿಯೊಬ್ಬರೂ ಭವಿಷ್ಯದಲ್ಲಿ ಸುಂದರ ಸಮಾಜ ನಿರ್ಮಾಣಕ್ಕೆ ಅಣಿಯಾಗಬೇಕು. ಯುವಕ ಯುವತಿ ವೃಂದದಂತಹ ಸಂಘಟಿತ ವೇದಿಕೆ ನಿರ್ಮಾಣವಾಗಬೇಕು. ಇದರಿಂದ ಶೈಕ್ಷಣಿಕವಾಗಿ ಮಾತ್ರವಲ್ಲದೆ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಈ ಸಂದರ್ಭ ಊರಿನ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಾಡಿಪಟ್ಣ ಮೊಗವೀರ ಮಹಾಸಭಾದ ಕೋಶಾಧಿಕಾರಿ ಅಶೋಕ್ ಬಂಗೇರ, ಕೆ.ಎನ್.ವಿ.ಪಿ ಸದಸ್ಯ ಸುಧಾಕರ್ ಸಾಲ್ಯಾನ್, ಮಹಿಳಾ ಸಭಾ ದ ಅಧ್ಯಕ್ಷೆ ಸರಳಾ ಕಾಂಚನ್, ಮೊಗವೀರ ಮಹಿಳಾ ಮಹಾಜನ ಸಂಘದ ಉಪಾಧ್ಯಕ್ಷೆ ಮಾಲತಿ ಸಾಲ್ಯಾನ್, ಗುರು ಪ್ರಸಾದ್, ಶರತ್ ಕರ್ಕೇರ, ನಾರಾಯಣ ಕಕೇರ, ಉದಯ ಸಾಲ್ಯಾನ್, ಸತೀಶ್ ಕೋಟ್ಯಾನ್, ಜೀವನ್ ಎಸ್ ಸುವರ್ಣ, ಮಿಥುನ್ ಸಾಲ್ಯಾನ್, ದೇವರಾಜ್ ಬಂಗೇರ, ಅಕ್ಷಿತ್ ಕರ್ಕೇರ, ಆಡಳಿತ ಮಂಡಳಿ ಸದಸ್ಯರು ಮತ್ತು ಊರಿನ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ ಸ್ವಾಗತಿಸಿ, ನಿರೂಪಿಸಿದರು.
ಅಂಗಾಗ ಕಸಿ ಚಿಕಿತ್ಸೆಯಲ್ಲಿ ಶ್ರೇಷ್ಠತೆ ಸಾಧಿಸಿ ಡಾ.ಸುರೇಶ ರಾವ್ ಗೆ ಹುಟ್ಟೂರ ಅಭಿನಂದನೆ

Posted On: 04-07-2025 06:09AM
ಕಾಪು : ಮಾನವ ದೇಹದ ಅಮೂಲ್ಯ ಅತ್ಯಗತ್ಯ "ಅಂಗಾಂಗಳ ಕಸಿ ಶಸ್ತ್ರಚಿಕಿತ್ಸೆ"ಯ ವಿಭಾಗದಲ್ಲಿ ಅಂತಾರಾಷ್ಟ್ರೀಯ ಶ್ರೇಷ್ಠತೆಯನ್ನು ಸುಮಾರು ನಾಲ್ನೂರು ಯಶಸ್ವಿ ಶಸ್ತ್ರಚಿಕಿತ್ಸೆಗಳ ಮೂಲಕ ಪ್ರಮಾಣಪಡಿಸಿದ ಡಾ.ಕೆ.ಜಿ.ಸುರೇಶ ರಾವ್ ಅವರಿಗೆ ಹುಟ್ಟೂರಿನಲ್ಲಿ ಅಭಿಮಾನ ಪೂರ್ವಕ ಗೌರವಾರ್ಪಣೆ ನೆರವೇರಿತು. ಕೆಮುಂಡೇಲಿನ ಶ್ರೀ ಪಾಂಡುರಂಗ ಭಜನಾ ಮಂಡಳಿ,ಕೆಮುಂಡೇಲು ಅನುದಾನಿತ ಹಿ. ಪ್ರಾಥಮಿಕ ಶಾಲೆಹಾಗೂ ಹಳೆವಿದ್ಯಾರ್ಥಸಂಘ ಮತ್ತು ಕೆಮುಂಡೇಲು,ಉಳ್ಳೂರು ಗ್ರಾಮಸ್ಥರು ಈ ಕಾರ್ಯಕ್ರಮವನ್ನು ಕೆಮುಂಡೇಲು ಭಜನಾ ಮಂಡಳಿಯಲ್ಲಿ ಸಂಘಟಿಸಿದ್ದರು.
ಮಹತ್ತನ್ನು ಸಾಧಿಸುವ ಸಂಕಲ್ಪ ವ್ಯಕ್ತಿಜೀವನವನ್ನು ಸುಸಂಪನ್ನಗೊಳಿಸಿ ದೇಶದ ಆಸ್ತಿಯನ್ನಾಗಿಸಿ ಸಮಾಜದಲ್ಲಿ ಬಹುಮಾನ್ಯತೆಯನ್ನು ಪಡೆಯುವ ಎತ್ತರಕ್ಕೆ ಏರಿಸುತ್ತದೆ ಎಂಬುದಕ್ಕೆ ನಮ್ಮ ಸುರೇಶ ರಾವ್ ಪ್ರತ್ಯಕ್ಷ ಸಾಕ್ಷಿ, ಯುವ ಸಂದಣಿಗೆ ಇವರ ಜೀವನ ವಿಧಾನ ಒಂದು ಆದರ್ಶ - ಮಾರ್ಗದರ್ಶಿ ಎಂದು ಹುಟ್ಟೂರಿನ ಕುವರನನ್ನು ಶ್ಲಾಘಿಸಿ "ಅಭಿನವ ಧನ್ವಂತರಿ" ಉಪಾದಿಯನ್ನಿತ್ತು ಸಮ್ಮಾನಿಸಲಾಯಿತು.ಸುರೇಶ ರಾವ್ ಪತ್ನಿ ನೇತ್ರತಜ್ಞೆ ಡಾ.ಕಲ್ಪನಾ ಜೊತೆಗಿದ್ದರು.
ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಯುಎಸ್ ಎಎಂ ಎಸ್ ಅಕಾಡೆಮಿಕ್ಸ್ ಆ್ಯಂಡ್ ಟ್ರೈನಿಂಗ್ ನ ನಿರ್ದೇಶಕ ಡಾ.ಸಿ.ಕೆ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ ರಮೇಶ ಹಂದೆ,ಎನ್ ಎಸ್ ಯು ಎಂ ಪ.ಪೂ.ಕಾಲೇಜಿನ ಪ್ರಾಚಾರ್ಯ ಪ್ರಕಾಶ ಶೆಣೈ ಅವರು ಡಾ.ಸುರೇಶ ರಾವ್ ಅವರ ಸಾಧನೆಗಳನ್ನು ವಿವರಿಸಿ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಂಡು ಅಭಿನಂದಿಸಿದರು.ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಆಶೀರ್ವದಿಸಿದರು.
ನಿವೃತ್ತ ಪಾಂಶುಪಾಲ ಬಿ.ಆರ್. ನಾಗರತ್ನ, ಕೆಮುಂಡೇಲು ಶಾಲೆಯ ಮುಖೋಪಾಧ್ಯಾಯ ಜಗನ್ನಾಥ ಶೆಟ್ಟಿ, ಭಜನಾ ಮಂಡಳಿಯ ಅರ್ಚಕ ಶ್ರೀಪತಿ ಆಚಾರ್ಯ, ಬಾಲಕೃಷ್ಣ ರಾವ್, ಕೆ.ಎಲ್.ಕುಂಡಂತಾಯ ಉಪಸ್ಥಿತರಿದ್ದರು. ಭಜನಾ ಮಂಡಳಿಯ ಕಾರ್ಯದರ್ಶಿ ಕೃಷ್ಣಾನಂದ ರಾವ್ ಪ್ರಸ್ತಾವಿಸಿ,ಸ್ವಾಗತಿಸಿದರು.ಹರೀಶ ಕೋಟ್ಯಾನ್ ಡಾ.ಸುರೇಶ ರಾವ್ ಅವರಿಗೆ ನೀಡಲಾದ "ಅಭಿನಂದನೆಯ ಆಲೇಖ"ವನ್ನು ವಾಚಿಸಿದರು, ಪ್ರಾಧ್ಯಾಪಕ ದೇವಿಪ್ರಸಾದ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಅವರು ವಂದಿಸಿದರು.
ಶ್ರೀ ಅಯ್ಯಣ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಡುಕಳತ್ತೂರು : ಪಾಯಸ ಸೇವೆಗೆ ಚಾಲನೆ

Posted On: 04-07-2025 05:58AM
ಕಾಪು : ಶ್ರೀ ಅಯ್ಯಣ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಡುಕಳತ್ತೂರು ಶಾಲೆಯಲ್ಲಿ ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ್, ಶಂಕರಪುರ ವತಿಯಿಂದ ಶಾಲಾಮಕ್ಕಳಿಗೆ ಪಾಯಸ ಸೇವೆ ನೀಡಲಾಯಿತು.
ಶ್ರೀ ಸಾಯಿ ಈಶ್ವರ್ ಗುರೂಜಿಯವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಯಿ ಮಂದಿರದ ಟ್ರಸ್ಟಿಗಳಾದ ಗೀತಾಂಜಲಿ ಸುವರ್ಣ, ಲಾವಣ್ಯ, ಶಾಲಾ ಸಂಚಾಲಕ ಪ್ರವೀಣ್ ಕುಮಾರ್ ಗುರ್ಮೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಕಿಶನ್ ಶೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಲಕ್ಷ್ಮೀ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಸಂಧ್ಯಾ, ಶಾಲಾ ಶಿಕ್ಷಕರು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.