ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ತುಳುನಾಡಿನ ಮೂಲ ಬೈದ್ಯ ಪರಂಪರೆಯಲ್ಲಿ ಔಷಧಿ ನೀಡುತ್ತಿರುವ ಶಿರ್ವ ನಿವಾಸಿ

Posted On: 25-03-2020 11:48AM

ಕಾಪು ತಾಲೂಕಿನ ಶಿರ್ವದಲ್ಲಿರುವ ತುಳುನಾಡ ಬೈದ್ಯರು (ವೈದ್ಯರು) ಶಾಲಿನಿ ಡಿ ಅಮೀನ್ ಶಿರ್ವ ಹಿಂದಿನ ಕಾಲದಲ್ಲಿ ಈ ತುಳುನಾಡ ಮಣ್ಣಿನಲ್ಲಿ ಜನರಿಗೆ ಅನಾರೋಗ್ಯದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆ ಆಯುರ್ವೇದ ಪದ್ಧತಿ ಮುಖಾಂತರ ನೀಡುತಿದ್ದವರು ಪಂಡಿತರು ಅಥವಾ ವೈದ್ಯರು.. ಇವರನ್ನು ತುಳುವಿನಲ್ಲಿ ಬೈದ್ಯರು(ಬೈದ್ಯೆ) ಎಂದು ಕರೆಯುತ್ತಿದ್ದರು.ಪ್ರಕೃತಿಯಲ್ಲಿ ಸಿಗುವ ಗಿಡ ಮೂಲಿಕೆಗಳನ್ನು, ಬೇರು, ವಿಶೇಷ ಕಲ್ಲು ಹಾಗೂ ಮಣ್ಣನ್ನು ಬಳಸಿ ಸರಿಯಾದ ರೀತಿಯ ಪಥ್ಯೆ ಮುಖಾಂತರ ಮದ್ದು ನೀಡಿ ಯಾವುದೇ ಫಲಾಫೇಕ್ಷೆ ಇಲ್ಲದೇ ಖಾಯಿಲೆ,ಗಾಯ, ಇತರೆ ರೋಗವನ್ನು ವಾಸಿ ಮಾಡಿಸುತ್ತಿದ್ದ ಹಿರಿಮೆ ಬೈದ್ಯರದ್ದು. ಈಗಿನ ಕಾಲದಲ್ಲಿ ಕೇವಲ ಕೆಲವೇ ರೋಗಕ್ಕೆ ಅನಿವಾರ್ಯವಾಗಿ ಜನರು ಬೈದ್ಯರನ್ನು ಅವಲಂಬಿಸಿದ್ದಾರೆ. ಕಾರಣವೇನೆಂದರೆ ಆಧುನಿಕ ಕಾಲದಲ್ಲಿ ಜನರು ಪರಕೀಯ ಮಾತ್ರೆ ಮದ್ದುಗಳ ದಾಸರಾಗಿದ್ದಾರೆ ಆದ್ದರಿಂದ ಬೈದ್ಯ ಪರಂಪರೆಯು ನಶಿಸುತ್ತಾ ಬಂದಿದ್ದು ಈಗ ಕೆಲವೇ ಕೆಲವು ಬೈದ್ಯರು ಮದ್ದು ನೀಡುತ್ತಿದ್ದಾರೆ. ಅಂತವರಲ್ಲಿ ಒಬ್ಬರು ಶಿರ್ವಮೂಲದ ಚೆಕ್ ಪಾದೆ ನಿವಾಸಿ ಶಾಲಿನಿ ಡಿ ಅಮೀನ್, ದಿವಂಗತ ಕೊರಗ ಪೂಜಾರಿ ಮತ್ತು ಜಲಜ ದಂಪತಿಗಳ ಮಗಳಾದ ಇವರು 14-06-1972 ರಲ್ಲಿ ಜನಿಸಿರುತ್ತಾರೆ ಪಾರಂಪರಿಕ ಹಿನ್ನೆಲೆ : ಬೈದ್ಯರ ಮದ್ದುಕೊಡುವ ಸೇವೆ ವಂಶ ಪಾರಂಪರ್ಯವಾಗಿ ಬಂದಿರುವಂತಹದ್ದು. ಬೈದ್ಯ ಕುಲದೇವ ನಾಗಬ್ರಹ್ಮರನ್ನು, ಕುಟುಂಬದ ಆರಾಧಿಸುವ ನಾಗನನ್ನು ಹಾಗೂ ದೈವ ದೇವರನ್ನು ಮನಸಾರೆ ನೆನೆಸಿ, ಪ್ರಾರ್ಥಿಸಿ ಕಾಣಿಕೆ ಇಟ್ಟು ಮದ್ದು ಅರೆಯುತ್ತಿದ್ದರು, ತಮ್ಮ ಮದ್ದು ಕೊಡುವ ವಿದ್ಯೆಯನ್ನು ಯಾರ ಬಳಿಯೂ ತಿಳಿಸುತ್ತಿರಲಿಲ್ಲ. ಶಾಲಿನಿ ಅವರ ವಂಶದಲ್ಲಿ, ಅವರ ಹಿರಿಯರಿಗೆ ವಿಶೇಷ ದೈವ ಶಕ್ತಿ ಹಾಗೂ ಬೈದ್ಯ ಶಕ್ತಿಯನ್ನು ಪಡೆದ ಶ್ರೀ ಮೈಂದ್ಯ ಪೂಜಾರಿ ಅವರು ಹಿಂದಿನ ಕಾಲದಲ್ಲಿ ಬೈದ್ಯರಾಗಿ ಮದ್ದು ನೀಡುತ್ತಿದ್ದರು. ಅವರ ಬೈದ್ಯ ಶಕ್ತಿ ಎಷ್ಟಿತ್ತೆಂದರೆ ಅವರು ಜನರಿಗೆ ಹಾವು ಕಚ್ಚಿದರೆ ಮದ್ದು ಕೊಡುವಾಗ ಪ್ರಾರ್ಥಿಸಿ, ಒಂದು ರೇಖೆ(ದಡೆ ಕಟ್ಟುವುದು) ಹಾಕಿದರೆ ತಕ್ಷಣ ಕಚ್ಚಿದ ಹಾವು ಎಲ್ಲಿದ್ದರೂ ಅವರು ಹಾಕಿದ ರೇಖೆಯ ಬಳಿ ಬಂದು ಹೋಗುತ್ತಿತ್ತು, ಇದರಿಂದ ಯಾವ ಹಾವು ಕಚ್ಚಿದ್ದು ಮತ್ತು ಯಾವ ಪ್ರಮಾಣದ ಮದ್ದು ನೀಡಬಹುದೆಂದು ಅವರಿಗೆ ತಿಳಿಯುತ್ತಿತ್ತಂತೆ. ಕಾಲಕ್ರಮೇಣ ಅವರ ನಂತರ ಅವರ ಅಳಿಯ ನರಂಗ ಪೂಜಾರಿ ತನ್ನ ಮಾವ ಮೈಂದ್ಯ ಪೂಜಾರಿಯವರಂತೆ ಮದ್ದು ನೀಡಲಾರಂಭಿಸಿದರು, ಬೈದ್ಯ ಪರಂಪರೆಯಲ್ಲಿ ಒಂದು ಮಾತಿದೆ ತನಗೆ ತಿಳಿದಿರುವ ಪರಿಪೂರ್ಣ ವಿದ್ಯೆಯನ್ನು ಮತ್ತೊಬ್ಬರಿಗೆ ತಿಳಿಸಬಾರದು ತಿಳಿಸಿದರೆ ಅವರ ವಿದ್ಯೆ ಮರೆಯಾಗುತ್ತದೆ ಇಲ್ಲವೇ ಶಕ್ತಿಕುಂದುತ್ತದೆ,ಅದರ ಪ್ರಕಾರ ನರಂಗ ಪೂಜಾರಿಯವರು ತನ್ನ ಮಾವನನ್ನು ನೋಡಿ ಕಲಿತು ಮದ್ದು ನೀಡುತ್ತಿದ್ದರು ನರಂಗ ಪೂಜಾರಿಯವರು ಶಿರ್ವ ಮಾತ್ರವಲ್ಲದೆ ನೆರೆಹೊರೆಯ ಎಲ್ಲಾ ಊರಲ್ಲಿಯೂ ಹೆಸರುವಾಸಿಯಾಗಿದ್ದರು. ಶಾಲಿನಿಯವರ ಬೈದ್ಯ ಶಾಸ್ತ್ರದತ್ತ ಚಿತ್ತ : ತನ್ನ ಮಾವ ನರಂಗ ಪೂಜಾರಿಯವರ ಆಕಸ್ಮಿಕ ನಿಧನದ ದಿನದಂದೇ ಇಬ್ಬರು ಅನಾರೋಗ್ಯದಿಂದ ಮದ್ದು ಕೇಳಲು ಬಂದಿದ್ದರು, ಆ ವೇಳೆ ಅವರಿಗೆ ಮದ್ದು ಕೊಡಲೇ ಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು ಆಗ ಶಾಲಿನಿಯವರು ಭಯದಿಂದ ದೈವ ದೇವರನ್ನು ನೆನೆತು ಮಾವ ಮದ್ದು ಕೊಡುವುದನ್ನು ನೋಡಿದ ಕೆಲವು ಗಿಡ ಮೂಲಿಕೆ ತಂದು ಮದ್ದು ನೀಡಿದರು ಕೊಟ್ಟ ಮದ್ದು ವಿಷ ನೀಗುವ ಅಮೃತವಾಯಿತು. ನಂತರ ಅವರಿಗೆ ಮದ್ದು ಕೊಡುವ ಬೈದ್ಯ ವೃತ್ತಿಯನ್ನು ಮುಂದುವರೆಸುವ ಯಾವುದೇ ಯೋಚನೆಯಲ್ಲಿರಲಿಲ್ಲ ಆದರೇ ಒಂದು ಕಡೆಯಲ್ಲಿ ಬಡತನ, ಮತ್ತೊಂದುಕಡೆಯಲ್ಲಿ ಮದ್ದು ಕೊಡಲು ಧೈರ್ಯವಿರಲಿಲ್ಲ ಯಾಕೆಂದರೆ ಬೈದ್ಯ ವಿದ್ಯೆಯುಅವರಿಗೆ ಅಷ್ಟಾಗಿ ತಿಳಿದಿರಲಿಲ್ಲ ಈ ಹೊತ್ತಿಗೆ ಶಿರ್ವದ ಕಾರಣಿಕದ ಶಕ್ತಿ ನ್ಯಾರ್ಮ ಶ್ರೀ ಧರ್ಮ ಜಾರಂದಾಯನ ಹೂವಿನ ಪೂಜೆಯಲ್ಲಿ ದೈವದ ಬಳಿ ಕೇಳಿದಾಗ ದೈವದ ನುಡಿಯಾಗುತ್ತದೆ ಬೈದ್ಯ ವೃತ್ತಿಯನ್ನು ನಿಲ್ಲಿಸಬೇಡಿ ಮದ್ದು ಕೊಡಿ ವಿಷವನ್ನು ನಾನು ಅಮೃತ ಮಾಡುವೆನೆಂದು ಅಭಯ ನೀಡಿ ಅಪ್ಪಣೆ ನೀಡಿದ ನಂತರದ ದಿನದಲ್ಲಿ ಶಾಲಿನಿಯವರು ಧೈರ್ಯದಿಂದ, ಗುರುಹಿರಿಯರ ಆಶೀರ್ವಾದದಿಂದ, ಮದ್ದು ಕೊಡುವ ಮೊದಲು ಮನೆಯಲ್ಲಿ ಧರ್ಮ ಜಾರಂದಾಯನನ್ನು ಭಕ್ತಿಯಿಂದ ನೆನೆದು 20 ರೂಪಾಯಿ ಕಾಣಿಕೆ ತೆಗೆದಿಟ್ಟು ಯಾವ ರೋಗಕ್ಕೂ ಮದ್ದು ನೀಡುತ್ತಾರೆ, ನೀಡಿದ ಮದ್ದು ರಾಮ ಭಾಣವಾಗಿ ಪರಿಣಮಿಸಿದೆ. ಶಾಲಿನಿಯವರು ಕಳೆದ 10 ವರ್ಷಗಳಿಂದ ಸುಮಾರು 4,500 ಜನಕ್ಕೆ ಉಚಿತ ಮದ್ದು ನೀಡಿದ್ದಾರೆ. ಕೊಟ್ಟ ಮದ್ದಿನಿಂದ ರೋಗ ವಾಸಿಯಾದ ಜನರು ಸಂತೋಷದಿಂದ ಕೊಟ್ಟ ಹಣವನ್ನು ಸ್ವೀಕರಿಸುತ್ತಾರೆ. ಇವರೊಂದಿಗೆ ಇವರ ಅಕ್ಕ ಕುಶಲ ಪೂಜಾರಿ ಇವರಿಗೆ ಸಹಾಯ ಮಾಡುತ್ತಾರೆ, ಪಕ್ಕದ ಗುಡ್ಡದಿಂದ ಗಿಡ ಮೂಲಿಕೆ ತಂದು ಮದ್ದು ನೀಡಬೇಕು, ಆದರೆ ಈಗ ಗಿಡಮೂಲಿಕೆಗಳ ಸಂಖ್ಯೆ ವಿರಳವಾಗಿದೆ ಮತ್ತು ಕಾಡು ಮತ್ತು ಗುಡ್ಡ ನಾಶದಿಂದ ಅವನತಿಯಾಗಿದೆ ಎಂಬುವುದು ಇವರ ಅಭಿಪ್ರಾಯ. ಎಷ್ಟೋ ಜನರನ್ನು ಇವರು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ, ಮಣಿಪಾಲದಂತಹ ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ಬದುಕುವುದು ಕಷ್ಟ ಎಂದವರನ್ನು ಬದುಕಿಸಿದ್ದಾರೆ, ಇನ್ನು ಎರಡು ದಿವಸದಲ್ಲಿ ಕಾಲು ಕಡಿಯಬೆಕು ಎಂದವರ ಕಾಲನ್ನು ವಾಸಿ ಮಾಡಿಸಿ ಈಗ ಅವರು ನಡೆಯುತ್ತಿದ್ದಾರೆ. ತನ್ನ ಮನೆಗೆ ಬರುವ ಮಾರ್ಗ ಸಂಪೂರ್ಣ ಹಾಳಾಗಿದ್ದು ವಾಹನ ಮನೆಯಿಂದ 200 ಮೀಟರ್ ದೂರದ್ದಲ್ಲಿ ನಿಲ್ಲಿಸಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ರಾತ್ರಿಯ ಸಮಯದಲ್ಲಿ ನಡೆಯಲಾಗದೆ ಹೊತ್ತು ತರಲಾಗದ ವ್ಯಕ್ತಿಯ ಬಳಿಗೆ ಕುರ್ಚಿಯನ್ನು ತೆಗೆದುಕೊಂಡು ಹೋಗಿ, ಚುಮುಣಿ ಬೆಳಕಿನ ಸಹಾಯದಲ್ಲಿ ಮದ್ದು ನೀಡಿರುವುದು ಇವರ ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಿದೆ. ಶಾಲಿನಿಯವರು ಯಾವುದೇ ಜಾತಿ ಧರ್ಮ ಬೇಧವಿಲ್ಲದೆ ಎಲ್ಲಾ ರೋಗಿಗಳಿಗೆ ಯಾವುದೇ ಸಂಧಿಗ್ದ ಸಮಯದಲ್ಲೂ, ಯಾವುದೇ ಕೆಲಸದಲ್ಲಿದ್ದರೂ ಮದ್ದು ನೀಡಿ ಜನರ ಸೇವೆ ಮಾಡುತ್ತಿದ್ದಾರೆ.. ಇವರ ನಿಸ್ವಾರ್ಥ ಸೇವೆಯನ್ನು ಗಮನಿಸಿ ಹಲವಾರು ಸಂಘ ಸಂಸ್ಥೆಗಳು ಇವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದೆ... ಬಡತನವಾದರೂ ಪರವಾಗಿಲ್ಲ ಮನೆಗೆ ವ್ಯವಸ್ಥಿತ ರಸ್ತೆಯು ಅನಿವಾರ್ಯವಾಗಿ ಬೇಕೆಂಬುದು ಇವರ ಬೇಡಿಕೆ. ತುಳುನಾಡ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಬೈದ್ಯರಲ್ಲಿ ಒಬ್ಬರಾದ ಇವರಿಗೆ ಇನ್ನಷ್ಟು ನಮ್ಮ ಸಮಾಜದ ಬೆಂಬಲ ಪ್ರೋತ್ಸಾಹ ಅಗತ್ಯವಿದೆ. ಬರಹ : ಅತಿಥ್ ಸುವರ್ಣ ಪಾಲಮೆ +91 73535 21150