ಅದೇಕೋ ಬಹಳ ದಿನಗಳ ನಂತರ ತೆರೆಮರೆಯಲ್ಲಿರುವ ವ್ಯಕ್ತಿಯೊಬ್ಬರ ಬಗೆ ನಿಮ್ಮೆಲ್ಲರಿಗೂ ಪರಿಚಯಿಸೋಣ ಅಂತ ಪೆನ್ನು ಪೇಪರ್ ಹಿಡಿದು ಕುಳಿತೆ ಬಿಟ್ಟೆ.
ಅಂದ ಹಾಗೆ ನಾನಿವತ್ತು ಬರೆಯಲು ಹೊರಟಿರೋದು ದೈವ ನರ್ತಕ ಉಗ್ಗಪ್ಪ ಪರವ ಅವರ ಬಗ್ಗೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಸೆ ಗ್ರಾಮದ ಚಕ್ಕು ಪರವ ಮತ್ತು ಮಚ್ಚುಲು ಪರತಿ ದಂಪತಿಗಳು ಐದು ಜನ ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾರೆ. ಗಂಡು ಮಕ್ಕಳಿಲ್ಲವೆಂದು ಕೊರಗುತ್ತಿದ್ದ ಇವರಿಗೆ ಇವರು ನಂಬುತ್ತಿದ್ದ ದೈವ ದೇವರುಗಳ ದಯೆಯಿಂದ ಗಂಡು ಮಗುವಿನ ಜನನವಾಗುತ್ತದೆ. ಆ ಮಗು ಬೇರೆ ಯಾರು ಅಲ್ಲ ಅವರೆ ಉಗ್ಗಪ್ಪ ಪರವ.
ಉಗ್ಗಪ್ಪ ಪರವ ಇವರು ಬಾಲ್ಯದಿಂದಲೇ ದೈವ ದೇವರ ಮೇಲೆ ಅಪಾರ ಭಕ್ತಿ ಉಳ್ಳವರಾಗಿದ್ದರು. ಇವರು ಐದನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು, ದೈವ ಚಿತ್ತವೋ ಏನೋ ಎಂಬಂತ್ತೆ ತನ್ನ ಹದಿನಾರನೇ ವಯಸಿನಲ್ಲಿ ಗುರುಹಿರಿಯರ ಸಮ್ಮತಿಯೊಂದಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿವಪುರದ ಪಾಂಡುಕಲ್ಲು ಕೋಟೆನಾಥೇಶ್ವರ ಸನ್ನಿಧಾನಕ್ಕೆ ಒಳಪಡುವ ಬೆರ್ಮೆರ್ ಬೈದೇರುಗಳ ಗರಡಿಯಲ್ಲಿ ಮೊದಲ ಬಾರಿ ಎಣ್ಣೆ ಬೂಳ್ಯ ಸ್ವೀಕರಿಸಿ ದೈವ ನರ್ತಕನಾಗಿ ಸೇವೆ ಸಲ್ಲಿಸಲು ಆರಂಭಿಸಿದರು.
ದೈವ ನರ್ತಕನಾಗಿ ಸೇವೆ ಸಲ್ಲಿಸುತ್ತಿರುವ ಇವರು ಕೊಡಮಣಿತ್ತಾಯ, ಜುಮಾದಿ, ರಕ್ತೇಶ್ವರಿ, ಪಿಲ್ಚಂಡಿ, ಔಟಲ್ದಾಯ,ಬೈದೆರ್ಲು, ಮಾಯಂದಾಲ್ ಹೀಗೆ ಹತ್ತು ಹಲವಾರು ದೈವಗಳಿಗೆ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಪ್ಪತ್ತಾರನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ ಇವರು ತಮ್ಮ ಧರ್ಮಪತ್ನಿಯೊಂದಿಗೆ ಎರಡು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ.
ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಾದ ಹೆರ್ಮುಂಡೆ ಕಲ್ಕುಡ ಕ್ಷೇತ್ರ, ಅಂಡಾರು ಕೊಡಮಣಿತ್ತಾಯ ಕ್ಷೇತ್ರ, ಮಾಲ ಔಟಲ್ದಾಯ ಕ್ಷೇತ್ರ, ಮತ್ತು ಮುಜೂರು ಮಾಯಂದಾಲ್ ದೇವಿಯ ಸನ್ನಿದಿಯಲ್ಲಿ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇತ್ತೀಚಿನ ಐದಾರು ವರ್ಷಗಳಿಂದ ಯುವಕರಿಗೆ ದೈವಾರಾಧನೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿದ್ದು, ಕೆಲವೊಂದು ಯುವಕರು ಅನೇಕ ಮಾಹಿತಿಯನ್ನು ಕಳೆ ಹಾಕಿ ತುಳುನಾಡಿನ ದೈವಗಳ ಬಗ್ಗೆ ಪುಸ್ತಕಗಳನ್ನು ಕೂಡ ಬರೆಯುತ್ತಿದ್ದಾರೆ. ಯುವಕರ ಈ ರೀತಿಯ ಬೆಳವಣಿಗೆ ಪ್ರಶಂಸನೀಯ ಎಂದರು.
ದೈವಾರಾಧನೆಯಲ್ಲಿ ನಾವು ಮಾಡುವ ವಿಧಿವಿಧಾನಗಳು ಕ್ರಮವಾಗಿರಬೇಕು ಮತ್ತು ಶೃದ್ದೆ ಹಾಗೂ ನಿಷ್ಠೆಯಿಂದ ಕೂಡಿರಬೇಕು ಅನ್ನುತ್ತಾರೆ.
ದೈವಗ್ ಡೋಲು ಪೊರ್ಲು ದೇವೆರೆಗ್ ಚೆಂಡೆ ಪೊರ್ಲು ಎನ್ನುವ ಮಾತಿದೆ ಇದರ ಅರ್ಥ ದೈವಕ್ಕೆ ಡೋಲು ದೇವರಿಗೆ ಚೆಂಡೆ ಆದರೇ ಇತ್ತೀಚಿನ ಕಾಲಘಟ್ಟದಲ್ಲಿ ದೈವಾರಾಧನೆಯಲ್ಲಿ ಚೆಂಡೆ ಬಳಕೆಯಾಗುತ್ತಿದೆ, ಇದರ ಬಗ್ಗೆ ಉಗ್ಗಪ್ಪ ಪರವರಲ್ಲಿ ಕೇಳಿದಾಗ ಅವರ ಉತ್ತರ ಹೀಗಿತ್ತು. ದೈವಾರಾಧನೆಯಲ್ಲಿ ಚೆಂಡೆಯ ಬಳಕೆಯಲ್ಲಿ ಯಾವುದೇ ತಪ್ಪಿಲ್ಲ ಕಾಲ ಬದಲಾದ ಹಾಗೆ ಎಲ್ಲವೂ ಬದಲಾಗಲೇ ಬೇಕು, ಹಿಂದಿನ ಕಾಲದಲ್ಲಿ ಗ್ಯಾಸ್ ಲೈಟ್, ತೂಟೆ, ದೊಂದಿಯ ಬೆಳಕಿನಲ್ಲಿ ದೈವಾರಾಧನೆ ನಡೆದು ಹೋಗಿತ್ತು ಕಾಲ ಬದಲಾದಂತೆ ಜನರೇಟರ್,ಟ್ಯುಬ್ಲೈಟ್ ಹಾಗೂ ಇನ್ನಿತರ ಜಗಮೀಗಿಸುವ ಬೆಳಕಿನ ಬಳಕೆ ಶುರುವಾಯ್ತು, ಇದೆ ರೀತಿಯಲ್ಲಿ ಚೆಂಡೆಯ ಬಳಕೆಯಲ್ಲಿ ಕೂಡ ಯಾವುದೇ ತಪ್ಪಿಲ್ಲ ಇದೊಂದು ರೀತಿಯ ಸೇವೆಯೇ ಆಗಿದೆ ಎನ್ನುತ್ತಾರೆ. ಕಾಲೊಗ್ ತಕ್ಕ ಕೋಲ ಎನ್ನುವ ಗಾದೆ ಮಾತು ಈ ರೀತಿಯಲ್ಲಿ ನೋಡಿದಾಗ ನಿಜ ಎಂದೆನಿಸುತ್ತದೆ.
ದೈವಾರಾಧನೆಯಲ್ಲಿ ಪ್ರಮುಖವಾಗಿ ಇರಬೇಕಾದ ಪರಿಕರಗಳು ಕಂಟೆ, ತೆಂಬರೆ, ದಗರೇ, ಡೋಲು, ಕೊಂಬು, ವಾದ್ಯ ಇವುಗಳನ್ನು ತುಳುವಿನಲ್ಲಿ ಸರ್ವಬಿರ್ದ್ ಅನ್ನುತ್ತಾರೆ. ದೈವಾರಾಧನೆಯಲ್ಲಿ ಇವಿಷ್ಟನ್ನು ಬಳಸಿದರೆ ಎಲ್ಲಾ ರೀತಿಯ ಸೇವೆಗಳನ್ನು ಸಲ್ಲಿಸಿದಂತೆ ಆಗುತ್ತದೆ.
ಇವರಿಗೆ ಈಗ ಐವತ್ತು ವರ್ಷ ಪ್ರಾಯ, ಅದೆಷ್ಟೋ ದೈವಸ್ಥಾನದಲ್ಲಿ ಸೇವೆ ಸಲ್ಲಿಸಿದ ಇವರಿಗೆ ಮೂವತ್ನಾಲ್ಕು ವರುಷದ ಅನುಭವ ದೈವಾರಾಧನೆಯಲ್ಲಿ ಇದೆ.
2018ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಜನವರಿ 2020ನೇ ಸಾಲಿನ ಉಡುಪಿಯ ದೈವ ವಿಶಾದಕರು , ಪಾಂಡುಕಲ್ಲು ಇಲ್ಲಿನ ದೈವಸ್ಥಾನದಲ್ಲಿ ಚಿನ್ನದ ಬಳೆ ತೊಡಿಸಿ ಸನ್ಮಾನಿಸಿರುತ್ತಾರೆ, ಕಾಪು ಪೊಯ್ಯ ಪೊಡಿಕಲ್ಲ ಗರಡಿಯಲ್ಲಿಯೂ ಸನ್ಮಾನಿತರಾಗಿರುತ್ತಾರೆ, ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ, ಬೈದರ ನೃತ್ಯ ವಿಶಾರದರು, ಕೆರ್ವಾಶೆ, ಮಂಗಳೂರು ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಸನ್ಮಾನಿತರಾಗಿರುತ್ತಾರೆ.
ಇವರು ಮಾಡುತ್ತಿರುವ ಸೇವೆಗೆ ತುಳುನಾಡಿನ ಸರ್ವಶಕ್ತಿಗಳ ಆಶೀರ್ವಾದ ಇವರ ಹಾಗೂ ಇವರ ಕುಟುಂಬದ ಮೇಲಿರಲಿ.
ಅದೆಷ್ಟೋ ದೈವಸ್ಥಾನದ ಕೋಡಿಯಡಿಯಲ್ಲಿ ನ್ಯಾಯ ತೀರ್ಮಾನ ನೀಡಿರುವ ಇವರಲ್ಲಿ ಯುವಕರಿಗೆ ದೈವಾರಾಧನೆಯಲ್ಲಿ ಇರುವಂತಹ ಸಂದೇಹಗಳನ್ನು ಬಗೆಹರಿಸಿಕೊಳ್ಳಬಹುದು.
ಸಂಪರ್ಕ ಸಂಖ್ಯೆ : 9972406269
ಬರಹ : ವಿಕ್ಕಿ ಪೂಜಾರಿ ಮಡುಂಬು