ಕೊರೋನಾ ಸತ್ವ ಪರೀಕ್ಷೆಯಿಂದ ಪಾರಾಗಲು ಮನೆಯಲ್ಲಿ ಇರುವುದೇ ಮದ್ದು-ಲಾಲಾಜಿ ಮೆಂಡನ್
ಕಾಪು :ಕೊರೊನೊ ವ್ಯಾಪಿಸದಂತೆ ಮನೆಯಲ್ಲಿ ಇರುವುದೇ ಪ್ರಮುಖ ಮದ್ದು. ನಾವೇ ಮುಂಜಾಗ್ರತೆ ವಹಿಸಿಕೊಂಡು ಶಾಂತ ರೀತಿಯ ಸಹಕಾರ ಅವಶ್ಯಕ. ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸಿ ಸುರಕ್ಷತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಪು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ ಸೇವೆಯು ಶ್ರೇಷ್ಠ ಸೇವೆಯಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.
ಅವರು ಭಾನುವಾರ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಲ್ಲಿ ಉಡುಪಿ ಜಿಲ್ಲೆಯ ಕಾಪು ವಲಯ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ವತಿಯಿಂದ ಉಡುಪಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕೊರೋನಾ ವೈರಸ್ ಹರಡದಂತೆ ಜನಜಾಗೃತಿ ಮೂಡಿಸಲು ವಾಹನಗಳನ್ನು ಬಳಸಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಹಿತ ಇತರೇ ಇಲಾಖೆಗಳು ಹಗಲಿರುಳೆನ್ನದೆ ಸಾಮಾಜಿಕ ಸುವ್ಯವಸ್ಥೆಯನ್ನು ಕಲ್ಪಿಸಲು ಕಾರ್ಯೋನ್ಮುಖರಾಗಿದ್ದಾರೆ. ಸಾಂಕ್ರಾಮಿಕ ರೋಗದಿಂದ ಪಾರಾಗಳು ಜನರ ಜಾಗೃತಿಯಿಂದ ಮಾತ್ರ ಶೀಘ್ರ ನಿಯಂತ್ರಣ ಸಾಧ್ಯವಾಗಿದ್ದು, ಸತ್ವ ಪರೀಕ್ಷೆಯಿಂದ ಪಾರಾಗಲು ಎಲ್ಲರೂ ಸಹಕರಿಸುವಂತೆ ಕ್ಷೇತ್ರದ ಜನರಿಗೆ ಮನವಿಯನ್ನು ಮಾಡಿಕೊಂಡರು.
ಕಾಪು ತಹಶೀಲ್ದಾರ ಮಹಮ್ಮದ್ ಇಸಾಕ್ ಮಾತನಾಡಿ, ವಲಸೆ ಕಾರ್ಮಿಕರು ಸಹಿತ ನಿರಾಶ್ರಿತರಿಗೆ ದಾನಿಗಳು, ಸ್ವಯಂ ಸೇವಕರ ಸಹಕಾರದಿಂದ ಗಂಜಿ ಕೇಂದ್ರ ತೆರೆಯವಲ್ಲಿ ಕ್ರಮ ಕೈಗೊಳ್ಳಲು ಚಿಂತಿಸಲಾಗುತ್ತಿದೆ. ಕೊರೊನಾ ಪೊಸಿಟೀವ್ ತಡೆಯಲು ಜತೆಗೂಡಿ ಸನ್ನದ್ಧರಾಗೋಣ ಎಂದು ಕರೆ ನೀಡಿದರು.
ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮಾತನಾಡಿ, ಕೊರೋನಾ ತೀವ್ರತೆ ಪಡೆಯದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಜನತೆ ಕಾನೂನು ಸುವ್ಯವಸ್ಥೆಗೆ ಕೈ ಜೋಡಿಸಿದಲ್ಲಿ, ನಾವು ಇತರೇ ಸೇವೆಯಲ್ಲಿ ಮುನ್ನಡೆಸಲು ಸಹಕಾರ ನೀಡಬೇಕಿದೆ. ಇಂದಿನ ಪರಿಸ್ಥಿಯಲ್ಲಿ ವೈದ್ಯಾಧಿಕಾರಿಗಳೇ ನಮ್ಮ ನಡುವೆ ಇರುವ ಸೈನಿಕರಾಗಿದ್ದು, ಆರೋಗ್ಯ ಸೇವಕರಿಗೆ ನಾವೆಲ್ಲರೂ ಸೇರಿ ನೈತಿಕವಾದ ಬೆಂಬಲವನ್ನು ನೀಡಬೇಕಿದೆ ಎಂದರು.
ಈ ಸಂದರ್ಭ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್ ಮಾಹಿತಿ ನೀಡಿ, ಸಾರ್ವಜನಿಕರು ಸರಕಾರದ ಕಾನೂನನ್ನು ಪಾಲಿಸಬೇಕು. ಸಾಮಾಜಿಕ ಅಂತರವನ್ನು ಅತ್ಯಂತ ಅವಶ್ಯವಾಗಿ ಕಾಪಾಡಬೇಕಿದೆ. ಹೋಮ್ ಕ್ವಾರಂಟೈನ್ ನಲ್ಲಿ ಇರುವವರು ಕಾನೂನು ಬ್ರೇಕ್ ಮಾಡಿ ತಿರುಗಾಡುವುದು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ವಿನಂತಿಸಿದರು.
ಈ ಸಂದರ್ಭ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಶಿವರಾಜ್ ಮಲ್ಲಾರು, ಪ್ರಧಾನ ಕಾರ್ಯದರ್ಶಿ ದಾಮೋದರ ನಾಯಕ್, ಕಾಪು ವಲಯಾಧ್ಯಕ್ಷ ರಾಘು ಡಿ. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಅನಿಲ್ ಡೇಸಾ, ಕೋಶಾಧಿಕಾರಿ ಶೇಖರ್ ಬಂಗೇರ, ರೆವೆನ್ಯೂ ಇನ್ಸ್ ಪೆಕ್ಟರ್ ರವಿಶಂಕರ್, ಆರೋಗ್ಯ ಸಹಾಯಕರು, ಗ್ರಾಮ ಕರಣಿಕರು, ಕಾಪು ಪುರಸಭಾ ಸದಸ್ಯರು, ಆರಕ್ಷಕರು, ಮೊದಲಾದವರು ಉಪಸ್ಥಿತರಿದ್ದರು.
ಫೋಟೋ : 29 ಮಾ. 001