ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸ್ವಚ್ಚತೆ ಭಾರತೀಯರ ಸಂಸ್ಕೃತಿಯಲ್ಲೇ ಅಡಕವಾಗಿದೆ - ಕೆ.ಎಲ್.ಕುಂಡಂತಾಯ

Posted On: 18-03-2020 01:55PM

ಸ್ವಚ್ಛತೆ ನಮ್ಮ ಸಂಸ್ಕೃತಿ , ಪರಂಪರೆ ಕೆ . ಎಲ್ . ಕುಂಡಂತಾಯ "ಕೊರೋನ ವೈರಸ್" ಮನುಕುಲವನ್ನು ‌ ಬಾಧಿಸುತ್ತಿದೆ . ಆದರೆ ಭಾರತೀಯ ‌‌‌ ಸಂಸ್ಕೃತಿಯಲ್ಲಿ - ಪರಂಪರೆಯಲ್ಲಿ , ನಮ್ಮ ವಿಧಿಯಾಚರಣೆಗಳಲ್ಲಿ , ಜೀವನವಿಧಾನದಲ್ಲಿ ಸ್ವಚ್ಛತೆ ಹೇಗೆ ಹಾಸುಹೊಕ್ಕಾಗಿದೆ ಎಂಬುದೇ ಈ ಬರೆಹ . ಭಾರತೀಯರ ಬದುಕಿನ ಸಮಗ್ರತೆಯಲ್ಲಿ , ಸಾಂಸ್ಕೃತಿಕ ಸದಾಚಾರಗಳಲ್ಲಿ , ಧಾರ್ಮಿಕ ವಿಧಿಯಾಚರಣೆಗಳಲ್ಲಿ ಸ್ವಚ್ಛತೆಯ ಸಂಸ್ಥಾಪನೆ ಅನಿವಾರ್ಯ . ಇದು ನಿಚ್ಚಳ . ಶುದ್ಧೀಕರಣ ಪ್ರಕ್ರಿಯೆಯಿಂದಲೇ ನಮ್ಮ ಆಚಾರ - ವಿಚಾರಗಳು , ನಡವಳಿಕೆಗಳು ಮೊದಲ್ಗೊಳ್ಳುವುದು . ಮನುಕುಲವು ನಾಗರಿಕತೆಯ ಪ್ರಾರಂಭದಲ್ಲಿ , ವಾಸ್ತವ್ಯ ಹೂಡಿ ಬದುಕು ಕಟ್ಟಿದಂದಿನಿಂದ ಶುಚಿತ್ವಕ್ಕೆ ಆದ್ಯತೆ ಕೊಟ್ಟಿದೆ . ಅದು ಬಹಳ ಸರಳ ವಿಧಾನದಲ್ಲಿದ್ದು ಮುಂದೆ ವಿಕಾಸದ ವಿವಿಧ ಹಂತಗಳಲ್ಲಿ ರೂಪಾಂತರ , ನಿಷ್ಟಾಂತರಗೊಂಡರೂ ಮೂಲ ಆಶಯವನ್ನು ಮರೆಯದೆ ಜೀವನದ ಅಗತ್ಯವಾಗಿ ಗಾಢವಾಗಿ ರೂಢಗೊಂಡಿರುವುದನ್ನು ಗುರುತಿಸಬಹುದು. ಸ್ವಚ್ಛತೆಗೆ ಜನಪದರಲ್ಲಿ‌ ಇರುವ ನಿರೂಪಣೆ , ಆಚರಣೆಯಲ್ಲಿರುವ ಶ್ರದ್ಧೆಯ ಸ್ವರೂಪವೇ ಆಧಾರವಾಗಿ ಸ್ಪುಟಗೊಳ್ಳುವಿಕೆಯಲ್ಲಿ ಬದುಕಿನ ಅವಿಭಾಜ್ಯ ಅಂಗವಾಗುತ್ತದೆ . ವೇದ ಪೂರ್ವಕಾಲದ ಜನಪದರ ಕಲ್ಪನೆಗಳು ವೇದಕಾಲದಲ್ಲಿ ವಿಮರ್ಶೆಗೊಳಗಾಗಿ ಶಿಷ್ಟವಾಗಿ ಬದಲಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯ . ಅದರಂತೆ ಜೀವನ ಶೈಲಿಯೂ ಮೂಲವನ್ನು ಮರೆಯದೆ , ಅದರ ನೆಲೆಗಟ್ಟಿನ ಆಧಾರದಲ್ಲಿ ರೂಪುಗೊಂಡಿತು . ಎಲ್ಲ ಅಗತ್ಯ ಸ್ವೀಕಾರಗಳೊಂದಿಗೆ ಸ್ವಚ್ಛತೆಯ ವಿಚಾರವೂ ಮತ್ತಷ್ಟು ನಿಖರವಾಗಿ‌ ನಿಯಮಬದ್ಧವಾಗುತ್ತದೆ . ನಿಷ್ಟೆಯಾಗಿ , ಬದ್ಧತೆಯಾಗಿ ನೆಲೆಯಾಗುತ್ತದೆ . ಸ್ವಚ್ಛತೆ , ವೈಯಕ್ತಿಕದಿಂದ ತೊಡಗಿ‌ ಸಮಷ್ಟಿಯವರೆಗೆ ವ್ಯಾಪಿಸಿದ ಕ್ರಮವನ್ನು ಬೇರೆ ಬೇರೆ ಆಯಾಮಗಳಿಂದ ಗಮನಿಸಿದಾಗ ನಮ್ಮ ಪೂರ್ವಸೂರಿಗಳ ನಂಬಿಕೆಯ ಬದುಕಿನಲ್ಲಿ ಸ್ವಚ್ಛತೆ ಎಷ್ಟು ಪ್ರಧಾನವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ . ವೈಯಕ್ತಿಕ - ಕೌಟುಂಬಿಕವಾಗಿ ಇರುವ ಶುದ್ಧದ ಕಲ್ಪನೆ - ಪ್ರಕ್ರಿಯೆ ಸಾಮಾಜಿಕವಾಗಿ ವ್ಯಾಪಿಸಿರುವ ವಿಧಾನವು ಸ್ವಚ್ಛತೆಗೆ ನೀಡಿರುವ ಪ್ರಾಶಸ್ತ್ಯವನ್ನು ಪ್ರತಿಪಾದಿಸುವಂತಿದೆ .ಇದು ನಮ್ಮ ಉಪಾಸನಾ ಶ್ರದ್ಧೆ ಆರಂಭದಿಂದಲೇ ಇದೆ . ಯಾಕೆ ಎಂಬ ಪ್ರಶ್ಮೆ ಇಲ್ಲದೆ ಸಂಪ್ರದಾಯವಾಗಿ ಆಚರಿಸಲ್ಪಡುತ್ತಲೇ ಬಂದಿದೆ . ಇದು ನಮ್ಮ ಸಂಸ್ಕೃತಿಯಾಗಿ ಅನುಷ್ಠಾನದಲ್ಲಿದೆ . |ಸ್ವಚ್ಛತೆ - ಶುದ್ಧಿ - ಮಡಿ| ಸ್ವಚ್ಛತೆಯು 'ಶುದ್ಧ' ವಾಗಿ 'ಮಡಿ' ಎಂಬಲ್ಲಿ ಬಹುವಾಗಿ ವಿಸ್ತರಿಸಲ್ಪಟ್ಟು "ನಿರ್ಮಲ" ಎಂಬ ಭಾವದಲ್ಲಿ‌ ಒಪ್ಪಿತವಾಗಿ "ಶುದ್ಧಾಚಾರ"ವಾಗುವುದನ್ನು ಕಾಣುತ್ತೇವೆ .ಇದೇ ಪವಿತ್ರ ಎಂದಾಗುವುದು ನಮ್ಮ ಸಂಸ್ಕೃತಿ , ನಾವು ಒಪ್ಪಿದ ಮೌಲ್ಯ .ಭಾರತೀಯ ಮನಸ್ಸುಗಳು ಇಂತಹ ಶಿಷ್ಟಾಚಾರಗಳನ್ನು ತಲತಲಾಂತರಗಳಿಂದ ಅನುಸರಿಸಿಕೊಂಡು ಬಂದಿವೆ . ಈ ಸಂಬಂಧದ ಯಾವುದೇ ವಿಮರ್ಶೆಗಳಿಗೆ ಅವಕಾಶವನ್ನು ಕೊಡಲೇ ಇಲ್ಲ . ಯಾಕೆಂದರೆ ಇದು ಸರಳ ಮತ್ತು ಮುಗ್ಧ ಹೃದಯಗಳು ಸಮ್ಮತಿಸಿದ ನಡವಳಿಕೆಗಳು . ಇವು ಅಂತೆಯೇ ಸಾಗಿಬಂದುವು . ಆಚರಣೆಗಳ ಆರಂಭದಲ್ಲಿ ಒಮ್ಮೆ ಸ್ವಚ್ಭತಾಕಾರ್ಯ . ಇದು 'ನಿರ್ಮಲ' ಎಂಬ ಅರ್ಥದಲ್ಲಿ‌ , ಶುದ್ಧಾಚಾರವಾಗಿ ನೆರವೇರುವುದು . ಆರಾಧನೆ , ವಿಧಿನಿರ್ವಹಣೆ ವೇಳೆ ಪರಿಸರದಲ್ಲಿ ಪಾವಿತ್ರ್ಯ ಸೃಷ್ಟಿಗೆ ಶುದ್ಧ ಪ್ರಕ್ರಿಯೆ . ಆಚರಣೆಯಲ್ಲಿ ಪಾಲ್ಗೊಳ್ಳಲು ಬಹುಮಂದಿ ಆಗಮಿಸುವುದು , ಆಚರಣೆಯ ಅನಂತರ ಹಿಂದೆ ತೆರಳುವುದು ,ಈ ಮಧ್ಯೆ ಒಂದು ನಿರ್ದಿಷ್ಟ ಸ್ಥಳದಲ್ಲಿ‌ ಜನಸಂದಣಿಯಿಂದ ಉಂಟಾಗುವ ಅಶುದ್ಧಿಯನ್ನು ( ತ್ಯಾಜ್ಯಗಳಿಂದ) ಹೋಗಲಾಡಿಸಿ ಮರಳಿ ಸ್ವಚ್ಛತೆಯನ್ನು ನೆಲೆಗೊಳಿಸಲು ಮತ್ತೆ ಶುದ್ಧದ ವಿಧಿ ನಡೆಯುವುದು ಸಹಜ . ಇದು ದೈವ - ಬೂತ ಆರಾಧನೆ ಮತ್ತು ದೇವತಾರಾಧನೆಗಳ ಸಂದರ್ಭದಲ್ಲಿ ನಡೆಯುತ್ತವೆ . ವೈಯಕ್ತಿಕವಾಗಿ ಮನೆಯಲ್ಲಿ ನಿತ್ಯದಲ್ಲಿ ದೈನಂದಿನ ಕರ್ತವ್ಯದಂತೆ ಸ್ವಚ್ಛತೆ ಪಾಲಿಸಲ್ಪಡುತ್ತದೆ . ಸ್ವಂತದ ಆಚಾರಗಳಲ್ಲಿ - ಉಪಾಸನೆಗಳಲ್ಲಿ ಶುದ್ಧಾಚಾರ ಅನಿವಾರ್ಯವಾಗಿರುತ್ತದೆ . ಅದು ಅಂತೆಯೇ ಪಾಲಿಸಲ್ಪಡುತ್ತವೆ . ಈ ಕಾಳಜಿ ಸಮಷ್ಟಿಯಲ್ಲಿ ಇರಬೇಕು . ಇರಬೇಕು ಎಂಬ ಘೋಷಣೆಗೆ ಹೊಸತಾದ ಚಿಂತನೆಗಳು ಅಗತ್ಯವಿಲ್ಲ , ನಮ್ಮ ಸಂಸ್ಕೃತಿಯ ಮೂಲದಲ್ಲಿದೆ ಎಂಬ ನೆನಪು ಇದೆಯಾದರೆ ಸ್ವಚತಾ ಕಾರ್ಯ ನಿರಾಳ . ಆದರೆ ನಾವು ಮರೆತಿದ್ದೇವೆ ಎನ್ನೋಣವೇ , ಇಲ್ಲ ; ನಮ್ಮ ನೆನಪು ಹಸಿರಾಗಿದೆ . ಆದರೆ ಸ್ವಚ್ಛತೆಗಾಗಿ ಈ ವಿಧಿ ನಿಷೇಧಗಳಿವೆ ಎಂಬ ಗ್ರಹಿಕೆಯೇ ಇಲ್ಲ , ಆಲೋಚಿಸುವುದೇ ಇಲ್ಲ .ಆದರೆ ಈ ಕುರಿತಾದ ಜಾಗೃತಿ ಇರುವುದು , ಜಾಗೃತಿ ಮೂಡುವುದು ಈ ಕಾಲದ ಅಗತ್ಯವಾಗಿದೆ , ನಿರೀಕ್ಷೆಯಾಗಿದೆ .ಅಂದರೆ ನಮ್ಮ ಜೀವನ ವಿಧಾನದಲ್ಲೆ ಸ್ವಚ್ಛತೆಗೆ ಅಷ್ಟು ಪ್ರಾಧಾನ್ಯವಿದೆ ಎಂದು ತಿಳಿಯ ಬೇಕಷ್ಟೆ . ಹಬ್ಬಗಳ ಆಚರಣೆಗಳಲ್ಲಿ ಕೃಷಿಯನ್ನು ‌ನಂಬಿ ,ಅದನ್ನೆ ಆಶ್ರಯಿಸಿ ಬದುಕಲಾರಂಭಿಸಿದ ನಾವು ಕೃಷಿಯ ಫಲವನ್ನೇ ( ಬೆಳೆಯನ್ನು) ದೇವರು ಎಂದು ಪೂಜಿಸುವವರು . ಕೃಷಿ ಕಾರ್ಯ ಮುಗಿಸಿ ಸುರಿಯುವ ಮಳೆಯನ್ನು ಗಮನಿಸುತ್ತಾ ವಿಶ್ರಾಂತಿಗಾಗಿ ಆಟಿ ( ಕರ್ಕಾಟಕ ಮಾಸ) ತಿಂಗಳಲ್ಲಿ ಮನೆ ಸೇರುವ ಕೃಷಿಕ ಆಟಿತಿಂಗಳು ಮುಗಿದೊಡನೆ ಮಳೆಯ ತೀವ್ರತೆ ಕಡಿಮೆಯಾಗುತ್ತದೆ . ಕೃಷಿಕ ಮೈಕೊಡವಿ ಎದ್ದು ಮೊದಲು ಮಾಡುವ ಕೆಲಸ "ಆಟಿ ಪಿದಾಯಿ ಪಾಡ್ನು" ( ಆಟಿಯನ್ನು ಹೊರಹಾಕುವುದು) . ಇದು ಒಂದು ಸ್ವಚ್ಛತಾ ಕಾರ್ಯವೇ . ತೆನೆಕಟ್ಟುವ ಸಂದರ್ಭ ಮತ್ತೊಮ್ಮೆ ಮನೆ , ಮನೆಯಂಗಳವನ್ನು ಸ್ವಚ್ಛಗೊಳಿಸಿ ಅಲಂಕರಿಸುವುದು ಕ್ರಮ . ಮುಂದೆ ದೀಪಾವಳಿಯ ವೇಳೆ ಸಾಮೂಹಿಕವಾಗಿ ,ಊರಿನ ಎಲ್ಲಾ ಮನೆಯವರು ತಮ್ಮತಮ್ಮ ಪರಿಸರದ ಕಸಕಡ್ಡಿಗಳನ್ನೆಲ್ಲ ಒಂದೆಡೆ ರಾಶಿಹಾಕಿ ದೀಪಾವಳಿಯ ಹಿಂದಿನ ದಿನ ಬೆಂಕಿಹಚ್ಚಿ "ಮುಳ್ಳ ಮುಟ್ಟೆ" ಎಂದು ಉರಿನ ಸ್ವಚ್ಛತಾ ಕಾರ್ಯವನ್ನು ಸಾಮೂಹಿಕವಾಗಿ ಮಾಡುವ ಪದ್ದತಿ ಇದೆ . ಈ ಕ್ರಿಯೆ ದೀಪಾವಳಿಯ ಅಂಗವಾಗಿ ನೆರವೇರುತ್ತದೆ . ದೀಪಾವಳಿಯಂದು ಮನೆ , ಹಟ್ಟಿ - ಕೊಟ್ಡಿಗೆ , ಮನೆಗಳ , ಕೃಷಿ ಸಹಾಯಿ ಪ್ರಾಣಿಗಳನ್ನು , ಕೃಷಿಗೆ ಬೇಕಾಗುವ ನೇಗಿಲು ಮುಂತಾದ ಉಪಕರಣಗಳನ್ನು ತೊಳೆದು - ಸ್ವಚ್ಛಗೊಳಿಸಿ ರಾತ್ರಿ ದೀಪ ಬೆಳಗುವ ಆಚರಣೆಯಲ್ಲಿ ಸ್ವಚ್ಛತೆಗೆ ಇರುವ ಆದ್ಯತೆ ಅರಿವಾಗುತ್ತದೆ . ಪ್ರತಿ ಮನೆಯು ಆಚರಣೆಗಳ ನೆವದಲ್ಲಿ ಸ್ವಚ್ಛತೆ ಪಾಲಿಸುವ ಸಂಪ್ರದಾಯ ಪ್ರಾಚೀನವಾದುದು .ಹೀಗೆ ನಮ್ಮ ಆಚರಣೆಗಳಲ್ಲಿ ಸ್ವಚ್ಛತೆಯ ಕಾರ್ಯ ಅಡಕವಾಗಿದೆ . ಮದುವೆ , ಸೀಮಂತ , ಜನನ , ಹೆಣ್ಣು ಮಗು ಪುಷ್ಪವತಿಯಾಗುವುದು ಹೀಗೆ ಎಲ್ಲ ಮಂಗಳಕಾರ್ಯಗಳಲ್ಲಿ ಸ್ವಚ್ಛತೆಗೆ ವಿಶೇಷ ಅವಕಾಶಗಳಿವೆ , ಇವು ಸಂಪ್ರದಾಯಗಳಾಗಿ ನಡೆಸಲ್ಪಡುತ್ತವೆ . ಈ ಸಂದರ್ಭಗಳಲ್ಲಿ ನಡೆಯುವ ಸ್ವಚ್ಛತಾ ಕಾರ್ಯವನ್ನು "ಮಡಿ"ಮಾಡುವುದೆಂದೇ ಹೇಳಲಾಗುತ್ತದೆ. ಅದಕ್ಕಾಗಿಯೇ ಸಮಾಜದಲ್ಲಿ ನಮ್ಮೊಳಗೊಂದು ವರ್ಗವೇ ಇದೆ . ಅವರು ಮಾಡುವ ಮಡಿಯ ಕೆಲಸವು ಶುದ್ಧೀಕರಣ ಎಂದು ಸ್ವೀಕರಿಸಲ್ಪಡುತ್ತದೆ .ಸಾವಿನಲ್ಲಿ ಸ್ವಚ್ಛತೆಗೆ ಮತ್ತೆ ಪೂರ್ಣ ಪ್ರಾಶಸ್ತ್ಯ ನೀಡಲಾಗುತ್ತದೆ . ಮಡಿಯಾಗುವ - ಮಡಿಮಾಡುವ ಕ್ರಿಯೆಗಳು ಬಹಳ ವಿಸ್ತಾರವಾಗಿ ನೆರವೇರುತ್ತವೆ .ಇದೆಲ್ಲವೂ ಸ್ವಚ್ಛತೆಗೆ ನೀಡಲಾದ ಅವಕಾಶವೇ ಆಗಿದೆ . ಬೂತಾರಾಧನೆ - ಕೋಲ ,ನೇಮ ಬೂತಾರಾಧನೆಯ‌ ವೇಳೆ ಸ್ವಚ್ಛತೆ ಬಹಳ ಮಹತ್ವ ಪಡೆಯುವುದನ್ನು ಕಾಣುತ್ತೇವೆ . ಮನೆಯಲ್ಲಿ ನಡೆಯುವ ಬೂತ ಆರಾಧನೆ ಕಾಲದಲ್ಲಿ ಹೇಗೆ ಸ್ವಚ್ಛತೆಗೆ ಅವಕಾಶವಿದೆಯೋ ಅಂತೆಯೇ ಊರಿನ , ಗ್ರಾಮದ , ಸೀಮೆಯ ದೈವಸ್ಥಾನಗಳ ಕೋಲ - ನೇಮ - ಬಂಡಿ‌ ಸಂದರ್ಭಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ . ಪ್ರಾರಂಭದಲ್ಲಿ ಒಮ್ಮೆ ಶುದ್ದದ ಪ್ರಕ್ರಿಯೆ , ಅಂತ್ಯದಲ್ಲೊಮ್ಮೆ ಶುದ್ಧದ ಕೆಲಸ ಎಂದರೆ "ಶುದ್ಧದ ಅಗೇಲು" ಎಂಬ ಆಚರಣೆ ನಡೆಯುತ್ತದೆ . ಇದೆಲ್ಲವೂ ಸ್ವಚ್ಛತೆಗೆ ನೀಡಲಾದ ಅವಕಾಶಗಳೇ ಆಗಿವೆ . ಆಚರಣೆಯ ಪ್ರತಿ ಹಂತದಲ್ಲಿ ಮಡಿ , ಶುದ್ಧ , ಸ್ವಚ್ಛತೆಗೆ ಮಹತ್ವನೀಡುವುದನ್ನು ಗಮನಿಸಬಹುದು .ಇಂದಿಗೂ ರೂಢಿಯಲ್ಲಿವೆ ಎಂಬುದರಿಂದ ಸ್ವಚ್ಛತೆ ನಮ್ಮ ಸಂಸ್ಕೃತಿಯ ಒಂದಂಗವಾಗಿರುವುದು ನಿಚ್ಚಳವಾಗುತ್ತದೆ . ಬೂತಾರಾಧನೆಯ ಪ್ರತಿ ಹಂತವೂ ಶುದ್ಧವನ್ನು ಅಥವಾ ಶುದ್ಧ ಪ್ರಕ್ರಿಯೆಯನ್ನು ಒಳಗೊಂಡಿದೆ .ಶುದ್ಧಕ್ಕಾಗಿ "ಹೋಮ ದೀಪಿನಿ" ಎಂಬ ವಿಧಿ ನಿರ್ವಹಿಸಲಾಗುತ್ತದೆ ."ಸುದ್ದ ಕಲಸ ಕಟ್ಟುನಿ" ಎಂಬ ಜನಪದರ ನಿರ್ವಹಣೆಯೂ ಶುದ್ಧದ ಕಾರ್ಯವೇ ಆಗಿದೆ . ಅಗ್ನಿ - ಜಲಗಳೇ ಪ್ರಧಾನವಾಗಿ ಶುದ್ದ ಕ್ರಿಯೆ ನಡೆಸಲಾಗುವುದು .ಬಹು ಮಂದಿ ಭಾಗವಹಿಸುವ ಸಮಷ್ಟಿಯ ಕಾರ್ಯಕ್ರಮಗಳು ಇವು ಆಗಿರುವುದರಿಂದ ಪ್ರಾರಂಭದಲ್ಲಿ ಮತ್ತೆ ಕೊನೆಯಲ್ಲಿ ಶುದ್ಧದ ಶಾಸ್ತ್ರ ನಡೆಯುತ್ತದೆ . ಶುದ್ಧ - ಸ್ವಚ್ಛ ಪರಿಸರದಲ್ಲಿ ಆರಾಧನೆ .ಬಳಿಕ ಕೊನೆಗೆ ಶುದ್ದ ಕ್ರಿಯೆಯಿಂದ ಶುದ್ಧವನ್ನು ಮತ್ತೆ ನೆಲೆಗೊಳಿಸುವುದು . ಎಂತಹ ಕಲ್ಪನೆ , ಸ್ವಚ್ಛತೆಗೆ ನೀಡಿದ ಪ್ರಾಶಸ್ತ್ಯ . ದೇವಾಲಯ - ಉತ್ಸವ ದೇವಾಲಯಗಳ ಉತ್ಸವಗಳು ವೈದಿಕ ವಿಧಿಯಾಚರಣೆಯಾಗಿ ನಡೆಯುತ್ತವೆ . ಇಲ್ಲಿ ತಂತ್ರಾಗಮ ಶಾಸ್ತ್ರದ ಅನುಕರಣೆಯೂ ನಿಚ್ಚಳ . ವಾರ್ಷಿಕ ಮಹೋತ್ಸವ ಆರಂಭದಲ್ಲಿ ಒಮ್ಮೆ ಶುದ್ಧೀಕರಣ . ಉತ್ಸವ ಅಂತ್ಯದಲ್ಲಿ "ಸಂಪ್ರೋಕ್ಷಣೆ" ಎಂಬ ಶುದ್ಧೀಕರಣ . ಭಕ್ತರು ಆಗಮಿಸುವ ವೇಳೆ ಸ್ವಚ್ಛ ಪರಿಸರ ನಿರ್ಮಿಸುವುದು .ದೇವರ ಬಲಿ ಹೊರಟು ಒಳಾಂಗಣದಿಂದ ಹೊರಾಂಗಣಕ್ಕೆ ಆಗಮಿಸುವಾಗ "ಅಡಿಪು" ಎಂಬ ಸಾಂಕೇತಿಕ ಗುಡಿಸುವ ಕ್ರಿಯೆ ಇದೆ , ಬಹುಶಃ ಇದೇ ದೇವಳ ಪರಿಸರದ ಸ್ವಚ್ಛತೆಯನ್ನು ಮಾಡಬೇಕು ಎಂಬ ಸಂದೇಶವನ್ನು ಕೊಡುವಂತಿದೆ . ಬಳಿಕ‌ ಜಾತ್ರೆ ಮುಗಿದೊಡನೆ ಮತ್ತೆ ಶುದ್ಧವನ್ನು ಅಂದರೆ ಸ್ವಚ್ಛತೆಯನ್ನು ನೆಲೆಗೊಳಿಸುವುದು .ಸದಾ ಸ್ವಚ್ಭವಾಗಿರ ಬೇಕೆಂಬ ಸೂಚನೆ ಇದಲ್ಲವೇ . ಈ ಸ್ವಚ್ಛತೆ - ಶುದ್ಧೀಕರಣವನ್ನು ಹೇಗೆ ನಿರ್ವಹಿಸಬೇಕೆಂದು ಶಾಸ್ತ್ರವು ವಿಸ್ತಾರವಾಗಿ ವಿವರಿಸುತ್ತದೆ . ಗೋಮಯದಿಂದ ದೇವಾಲಯ ಪರಿಸರವನ್ನು ಸಾರಿಸಿ ಎಂದು ಹೇಳುವ ಶಾಸ್ತ್ರವು ಬಳಿಕ ತಳಿರು ತೋರಣಗಳಿಂದ ಅಲಂಕರಿಸಬೇಕು ಎಂದು ಸೂಚಿಸುತ್ತದೆ . ಮೊದಲು ಸ್ವಚ್ಭತೆಯನ್ನು ಸ್ಥಾಪಿಸಿ ಉತ್ಸವಾದಿಗಳನ್ನು ನಡೆಸಬೇಕು ಎಂದು ಪ್ರಮಾಣ ಗ್ರಂಥಗಳು ಮಾರ್ಗದರ್ಶನ ನೀಡುತ್ತವೆ .ಸ್ವಚ್ಛತೆ ನಮ್ಮ ಜೀವನ ವಿಧಾನದಲ್ಲಿ ಹಾಸುಹೊಕ್ಕಾಗಿದೆ . ಇಂತಹ ಸ್ವಚ್ಛತಾ ಪರಿಕಲ್ಪನೆಯನ್ನು ಮತ್ತೊಮ್ಮೆ ನೆನಪಿಸುವುದು ಈ ಲೇಖನದ ಉದ್ದೇಶ . ಪುಣ್ಯಾಹ ವಾಚನ ಇದೊಂದು ವೈದಿಕದ ಕರ್ಮಾಂಗ . ಇದನ್ನು "ಶುದ್ಧ ಪುಣ್ಯಾರ್ಚನೆ" ಎಂದೂ ಹೇಳಲಾಗುತ್ತದೆ . ಅಂದರೆ ಕಾರ್ಯಾರಂಭದಲ್ಲಿ‌ ಪಂಚಗವ್ಯದಿಂದ , ಕುಶೋದಕದಿಂದ ಕಲಶವನ್ನು ಸಿದ್ಧಗೊಳಿಸಿ ಅದರಲ್ಲಿ ದೇವಾನು ದೇವತೆಗಳನ್ನು ನೆಲೆಗೊಳಿಸಿ ಪೂಜಿಸುವುದು , ಶುದ್ಧವನ್ನು ಸ್ಥಾಪಿಸಿ , ಘೋಷಿಸುವುದು . ಬಳಿಕ ದೇಹ ಶುದ್ಧಿಗಾಗಿ ಸೇವಿಸುವುದು , ಪರಿಸರ ಶುದ್ಧಿಗಾಗಿ ಪ್ರೋಕ್ಷಿಸುವುದು . ಪುಣ್ಯವಾಗಲಿ , ವೃದ್ಧಿಯು ಸಮೃದ್ದಿಯಾಗಲಿ , ಕರ್ಮಾಂಗದ ಸಂಭ್ರಮವು ನೆಲೆಯಾಗಲಿ ಎಂಬುದು ಆಶಯವಾಗಿರುತ್ತದೆ . ಇದು ವೈದಿಕವು ವಿಸ್ತರಿಸುವ ಶುದ್ಧದ ಪ್ರಕ್ರಿಯೆ, ಅದೇ ಸ್ವಚ್ಛತಾ ಘೋಷಣೆ . ಇಂತಹ ಪರಿಶುದ್ಧ ಪರಿಸರವು ಶಾಂತ ಮನಸ್ಸಿನ ಪಾಲ್ಗೊಳ್ಳುವಿಕೆಗೆ ಪೂರಕವಾಗುವುದು . ಮನಸ್ಸಿನ ಸುಪ್ರಸನ್ನತೆಗೆ ಪರಿಸರ ಕಾರಣವಾಗುತ್ತದೆ . ಗಮಗಮಿಸುವ ಹೂವುಗಳು , ಹಚ್ಚ ಹಸುರಿನ ನೋಟ , ಮುದನೀಡುವ ನಿರ್ಮಿತಿಗಳು , ದಿವ್ಯವು ಸಾನ್ನಿಧ್ಯವಹಿಸುವ ಭವ್ಯ ಕಟ್ಟಡಗಳು , ಎಲ್ಲೆಡೆ ಒಪ್ಪ ಓರಣ , ಸ್ವಚ್ಛ ‌. ಹೀಗೆ ಸ್ವಚ್ಛತೆಯನ್ನು ಕಾಪಾಡಬೇಕೆಂದು ವೈದಿಕ ಕರ್ಮಾಂಗಗಳು ಸೂಚಿಸುತ್ತವೆ . ಮನಃ‌ ಶಾಂತಿಗೆ ಪೂರಕವಾಗಬಹುದಾದ ಸನ್ನಿವೇಶದಲ್ಲಿ ಮಾತ್ರ ದೇವಾಲಯ ಸಂದರ್ಶನ - ದೇವರೊಂದಿಗೆ ತಾದಾತ್ಮ್ಯ ಬೆಸೆಯಲು ಸಾಧ್ಯ . ಇಂತಹ ಸಿದ್ಧಿಗೆ ದೇವಾಲಯ ಪರಿಶುದ್ಧವಾಗಿರ ಬೇಕು ,ಸ್ವಚ್ಛವಾಗಿರಬೇಕು . ಈ ಸ್ವಚ್ಛ ಪರಿಸರ ಮಾನಸಿಕ ಶುಭ್ರತೆಗೆ ಕಾರಣವಾಗುತ್ತದೆ . ನೂತನ ದೇವಾಲಯಗಳಲ್ಲಿ ಅಥವಾ ಪ್ರತಿವರ್ಷಕ್ಕೊಮ್ಮೆ ದೇವಾಲಯಗಳಲ್ಲಿ ಶುದ್ಧವನ್ನು ಅಂದರೆ ಸ್ವಚ್ಛವನ್ನು ಸ್ಥಾಪಿಸಲು ಮಾಡುವ "ಸಪ್ತಶುದ್ದಿ" ಕರ್ಮಾಂಗವು ವೈದಿಕದ ಅದ್ಭುತ ಪರಿಕಲ್ಪನೆಯಾಗಿದೆ . ಏಳು ವಿಧದಲ್ಲಿ ಈ ಶುದ್ಧಿ ಕ್ರಿಯೆ ನಡೆಯುತ್ತದೆ .ಇಂತಹ ಹತ್ತಾರು ವಿಧದ ಸ್ವಚ್ಛತೆಗೆ ಎಂದೇ ಇರುವ ವಿಧಿಗಳು ದೇವಾಲಯಗಳಲ್ಲಿ ನಡೆಯುತ್ತವೆ . ಇದೊಂದು ವಿಸ್ತಾರವಾದ ಕರ್ಮಾಂಗ .ಇದೆಲ್ಲವೂ ನಮ್ಮ ಸಂಸ್ಕೃತಿಯ ಕೊಡುಗೆಗಳು . ಆದರೆ ..ಸ್ವಚ್ಛತೆಯ ಬಗ್ಗೆ‌ ನಾವು ಇಷ್ಟು ಗಾಢವಾದ , ಸ್ಪಷ್ಟವಾದ ಪರಂಪರೆವುಳ್ಳವರಾದರೂ ನಮ್ಮಲ್ಲಿ ಮತ್ತೆ ಅಭಿಯಾನ ಆರಂಭವಾಗಿದೆ .ಆಗಲೇ ಬೇಕಾದ ಸ್ಥಿತಿ ಸನ್ನಿಹಿತವಾಗಿದೆ . ಈಗಲಾದರೂ ಸ್ವಚ್ಛತೆ ನಮ್ಮ ಸಂಪ್ರದಾಯ ಎಂದು ತಿಳಿಯೋಣ .