ದಕ್ಷಿಣ ಕನ್ನಡ ಜಿಲ್ಲೆಯ ಸಚಿವರು-ಶಾಸಕರ ಮುಖ್ಯಮಂತ್ರಿಗಳ ಭೇಟಿ, ವಿವಿಧ ವಿಷಯಗಳ ಚರ್ಚೆ
Posted On:
20-05-2021 02:28PM
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸಚಿವರು ಶಾಸಕರ ಜೊತೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪರವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಸಿದ ಚಂಡಮಾರುತದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ,ಪಂಚಾಯತ್ ರಾಜ್,ಕಡಲ್ಕೊರೆತವೂ ಸೇರಿದಂತೆ ಸುಮಾರು 126 ಕೋಟಿಯಷ್ಟು ನಷ್ಟವಾಗಿದ್ದು; ಪ್ರಾಕೃತಿಕ ವಿಕೋಪದಡಿ ಈ ನಷ್ಟ ಭರಿಸಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಸಚಿವ ಕೋಟ ನೇತೃತ್ವದ ನಿಯೋಗ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಕೋವಿಡ್ ಸಮಸ್ಯೆ ಹಾಗೂ ಅದರ ನಿಯಂತ್ರಣದ ಬಗ್ಗೆ ವಿವರವಾದ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು.
ಜಿಲ್ಲೆಗೆ ತುರ್ತಾಗಿ ವೈದ್ಯರು, ದಾದಿಯರು ಹಾಗೂ ಆರೋಗ್ಯ ಮಿತ್ರ ಹುದ್ದೆಗಳನ್ನು ಮಂಜೂರಾತಿ ಮಾಡಬೇಕೆಂದು ಮನವಿ.
ಸುಳ್ಯ ಹಾಗೂ ಪುತ್ತೂರು ತಾಲೂಕಿನ ಜನರ ಕೋವಿಡ್ ಸ್ವಾಬ್ ಟೆಸ್ಟ್ ನ್ನು ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಮಾಡಲು ಅನುಮತಿ ಕೋರಲಾಯಿತು. ಹೀಗಾದಲ್ಲಿ 24 ಗಂಟೆಯೊಳಗೆ ರಿಪೋರ್ಟ್ ನೀಡಲು ಅನುಕೂಲವಾಗುತ್ತದೆ.
ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಅಳವಡಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಲಾಯಿತು.
ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ 11 ವಿವಿಧ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ಆರಂಭವಾಗುತ್ತಿದ್ದು; ಅಲ್ಲಿಯವರೆಗೆ ಆಕ್ಸಿಜನ್ ಕೊರತೆ ನೀಗಿಸಲು ಜಿಲ್ಲೆಗೆ ತುರ್ತಾಗಿ ಆಕ್ಸಿಜನ್ ಟ್ಯಾಂಕ್ ನ್ನು ಒದಗಿಸಲು ಮನವಿ ಸಲ್ಲಿಸಲಾಯಿತು.
ವಿವಿಧ ರೂಪದಲ್ಲಿ ತೊಂದರೆಗೆ ಸಿಲುಕಿದ ಬಡವರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಈಗಾಗಲೇ ಬೇಡಿಕೆ ಸಲ್ಲಿಸಿರುವ ಅರ್ಚಕರು, ಬಸ್, ಟೆಂಪೋ ಚಾಲಕರು, ಮೀನುಗಾರರು, ಹೋಟೆಲ್ ಕಾರ್ಮಿಕರಿಗೆ ಕೂಡಾ ಈ ಪ್ಯಾಕೇಜ್ ವಿಸ್ತರಿಸಲು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಹಾಗೂ ಸಂಜೀವ ಮಠಂದೂರು, ಸಚಿವರಾದ ಅಂಗಾರ ಮತ್ತು ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.