ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬೋರ್ಡ್ ಆಫ್ ಇಸ್ಲಾಮಿಕ್ ಕರ್ನಾಟಕ ಕಾಪು ಸೆಂಟರ್ - ಅಭಿನಂದನಾ ಸಮಾರಂಭ

Posted On: 18-08-2025 10:27AM

ಕಾಪು : ಸಂಪತ್ತಿಗಿಂತ ವಿದ್ಯೆ ಮನುಷ್ಯನಿಗೆ ಮುಖ್ಯವಾಗಿದೆ. ವಿದ್ಯೆ ಇಲ್ಲದಿದ್ದರೆ ಆತನ ಬದುಕು ಬರೀ ಶೂನ್ಯ. ಸಂಪತ್ತಿನಿಂದ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ. ವಿದ್ಯೆಯಿಂದ ಜ್ಞಾನ ಗಳಿಸಲು ಪ್ರಯತ್ನಿಸಬೇಕು. ಲೌಕಿಕ ಜ್ಞಾನದ ಜೊತೆಗೆ ಧಾರ್ಮಿಕ ಜ್ಞಾನವನ್ನು ಕೂಡ ಮುತುವರ್ಜಿಯಿಂದ ಗಳಿಸಬೇಕು. ದೇವನ ವತಿಯಿಂದ ಬಂದ ಕೊನೆಯ ಗ್ರಂಥ ಕುರಾನ್ ಆಗಿದ್ದು, ಅದರಲ್ಲಿ ಇರುವ ಮೊದಲ ವಾಕ್ಯವೇ ಜ್ಞಾನ ಗಳಿಸುವ ಕುರಿತಾಗಿದೆ ಎಂದು ಆಯಿಷಾ ಮಸ್ಜಿದ್ ನೆಜಾರ್ ನ ಧರ್ಮ ಗುರುಗಳಾದ ಮೌಲಾನ ಆದಿಲ್ ನದ್ವಿ ಯವರು ಹೇಳಿದರು. ಅವರು ಕಾಪು ಕೆ. ಒನ್ ಹೋಟೆಲ್ ನ ಸಭಾಂಗಣ ದಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಕರ್ನಾಟಕ ಕಾಪು ಸೆಂಟರ್ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು ಜಮಾ ಅತೆ ಇಸ್ಲಾಮಿ ಹಿಂದ್ ನ ಸದಸ್ಯೆ ರೇಷ್ಮಾ ಬೈಲೂರು ರವರು ಮಾತನಾಡಿ, ಮನುಷ್ಯನು ಭೂಮಿಗೆ ಬಂದ ಉದ್ದೇಶವೇನು? ಬಂದ ನಂತರ ಏನು ಮಾಡಬೇಕು? ಮರಣದ ನಂತರದ ಬದುಕಿಗೆ ಇಹಲೋಕದಲ್ಲಿ ಯಾವ ಕೆಲಸ ಮಾಡಬೇಕು ಎಂಬುದರ ಬಗ್ಗೆ ನಾವು ಅಧ್ಯಯನ ಮಾಡಬೇಕು. ಮತ್ತು ಈ ಅಧ್ಯಯನದಿಂದ ಸಿಗುವ ಜ್ಞಾನವನ್ನು ತನ್ನಲ್ಲಿ ಅಳವಡಿಸಿಕೊಂಡು ಅದರ ಪ್ರಯೋಜನ ಸಮಾಜದಲ್ಲಿರುವ ಇತರರಿಗೂ ಸಿಗಬೇಕು. ಆಗ ಮಾತ್ರ ಆತ ಗಳಿಸಿದ ಜ್ಞಾನ ಸಾರ್ಥಕವಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಾಕೀರ್ ಹುಸೈನ್, ಆಸೀಫ್ ಜಿ. ಡಿ, ಅಷ್ಫಾಕ್ ಅಹಮದ್ ಮುಜಾವರ್ ರವರು, ಬಿ. ಐ. ಇ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಅಭಿನಂದಿಸುತ್ತಾ, ಪ್ರಶಸ್ತಿ ಮತ್ತು ಸರ್ಟಿಫಿಕೇಟ್ ಮತ್ತು ಎಸ್. ಐ. ಓ ಮತ್ತು ಜಿ. ಐ. ಓ ವರ್ತುಲದಲ್ಲಿ ಭಾಗವಹಿಸಿದ ಎಸ್.ಎಸ್‌.ಎಲ್.ಸಿಯಲ್ಲಿ ಮತ್ತು ಪಿ.ಯು.ಸಿ ಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು ಹಾಗೂ ಸಿ. ಐ. ಓ ನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ಅಧ್ಯಕ್ಷರಾದ ಅನ್ವರ್ ಅಲಿಯವರು ಮಾತನಾಡಿ, ಜಮಾ ಅತೆ ಇಸ್ಲಾಮಿ ಹಿಂದ್ ಈ ರಾಷ್ಟ್ರದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವ, ಕೆಡುಕನ್ನು ಅಳಿಸಿ ಒಳಿತನ್ನು ಸಂಸ್ಥಾಪಿಸುವ, ಯುವ ಪೀಳಿಗೆಯನ್ನು ನೈತಿಕ ಮೇರೆಯಲ್ಲಿ ಮುನ್ನಡೆಸುವ, ಸಮಾಜದಲ್ಲಿ ಶಾಂತಿ, ಪ್ರೀತಿ ಸೌಹಾರ್ದತೆ ಕಾಪಿಡುವ ಕೆಲಸ ಮಾಡುತ್ತಿದೆ ಇದರೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಿ ಎಂದರು.

ಫರಾನ ಬೇಗಮ್ ರವರು ಕುರಾನ್ ಪಠಿಸಿದರು. ಮುಹಮ್ಮದ್ ಶರೀಫ್ ಶೇಕ್ ಸ್ವಾಗತಿಸಿದರು. ಬಿ. ಐ. ಇ.ನ ಸಂಚಾಲಕಿ ಶೇಹೇನಾಜ್ ಪ್ರಸ್ತಾವನೆಗೈದರು. ಮೆಹರೂಫರವರು ನಿರೂಪಿಸಿ, ಸಯ್ಯದ್ ಮುಸ್ತಖೀಮ್ ವಂದಿಸಿದರು.