ಪಡುಬಿದ್ರಿ : ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿದ್ದ ಎಂ. ಆರ್. ಪಿ. ಎಲ್ ಗುತ್ತಿಗೆಯ ಗುಜರಾತ್ ನ ಅಲಯನ್ಸ್ ಟಗ್ ಪಡುಬಿದ್ರಿ ಸಮುದ್ರ ತೀರದಲ್ಲಿ ಮಗುಚಿ ಬಿದ್ದಿತ್ತು. ಇದನ್ನು ಮೇಲಕ್ಕೆತ್ತುವ ಜವಾಬ್ದಾರಿಯನ್ನು ಬಿಲಾಲ್ ನೇತೃತ್ವದ ಬದ್ರಿಯ ಸಂಸ್ಥೆಗೆ ನೀಡಲಾಗಿತ್ತು. ಕೆಲವು ದಿನಗಳ ಕಾರ್ಯಾಚರಣೆಯು ವಿಫಲವಾದ ಹಿನ್ನೆಲೆಯಲ್ಲಿ ಪಡುಬಿದ್ರಿಯ ಕಾಡಿಪಟ್ಣ ವಿಷ್ಣು ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ಎಂ. ಆರ್. ಪಿ. ಎಲ್. ನ ಎಂ.ಡಿ ವೆಂಕಟೇಶ್ ಈ ಕಾರ್ಯಾಚರಣೆಯನ್ನು ಬದ್ರಿಯ ಮತ್ತು ಯೋಜಕ ಸಂಸ್ಥೆಗಳಿಗೆ ನೀಡಲು ತೀರ್ಮಾನಿಸಿದ್ದಾರೆ.
ಟಗ್ ನಲ್ಲಿದ್ದ ಮೂವರು ಇನ್ನು ಪತ್ತೆಯಾಗಿಲ್ಲ. ಅವರ ಕುಟುಂಬ ವರ್ಗ ಕಾರ್ಯಚರಣೆಯ ಸ್ಥಳದಲ್ಲಿ ಉಪಸ್ಥಿತರಿದ್ದರು. ಮಗುಚಿ ಬಿದ್ದ ಟಗ್ ನ ಸುತ್ತ ದುರ್ವಾಸನೆಯ ಜೊತೆಗೆ ಟಗ್ ನಲ್ಲಿರುವ ಆಯಿಲ್ ಸೋರಿಕೆಯ ಭೀತಿಯ ಹಿನ್ನೆಲೆಯಲ್ಲಿ ಚುರುಕಿನ ಕಾರ್ಯಾಚರಣೆ ನಡೆಸಬೇಕಾದ ಅನಿವಾರ್ಯತೆಯಿದೆ.
ಸಭೆಯಲ್ಲಿ ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್, ತಾಲೂಕ್ ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಉಪಾಧ್ಯಕ್ಷರಾದ ಯಶೋದ, ಗ್ರಾಮ ಪಂಚಾಯತ್ ಸದಸ್ಯರು, ಪೋಲೀಸ್ ಸಿಬ್ಬಂದಿ, ಎಂ. ಆರ್. ಪಿ. ಎಲ್. ಸಿಬ್ಬಂದಿ, ಸ್ಥಳೀಯರು ಉಪಸ್ಥಿತರಿದ್ದರು.