ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪರೀಕ್ಷೆ ನಡೆಸುವ ದಿಟ್ಟ ನಿರ್ಧಾರ ಅಭಿನಂದನೀಯ : ಶಿವಣ್ಣ ಬಾಯರ್

Posted On: 23-05-2021 10:23PM

ಇಂದು ಕೇಂದ್ರ ಸಚಿವರ ನೇತೃತ್ವದಲ್ಲಿ ವಿವಿಧ ರಾಜ್ಯಗಳ ಶಿಕ್ಷಣ ಸಚಿವರೊಂದಿಗೆ ಮಕ್ಕಳಿಗೆ ಪರೀಕ್ಷೆ ನಡೆಸುವ ಕುರಿತು ನಡೆದ ಸಂವಾದದಲ್ಲಿ ದ್ವಿತೀಯ ಪಿಯುಸಿಗೆ ಪರೀಕ್ಷೆ ಅನಿವಾರ್ಯ ಎಂಬ ಅಂಶವು ವ್ಯಕ್ತವಾಗಿರುವುದು ಪ್ರಶಂಸಾರ್ಹ. ನಮ್ಮ ರಾಜ್ಯದ ಮಾನ್ಯ ಸಚಿವರು ಪಬ್ಲಿಕ್ ಪರೀಕ್ಷೆ ನಡೆಸುವ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡಿರುವುದು ಅಭಿನಂದನೀಯ.

ಪರೀಕ್ಷೆ ಎನ್ನುವುದು ವಿದ್ಯಾರ್ಥಿಯ ಜೀವನದಲ್ಲಿ ಅತೀ ಪ್ರಾಧಾನ್ಯ. ನಿರ್ದಿಷ್ಟ ಹಂತದ ಪರೀಕ್ಷೆಗಳು ಅನಿವಾರ್ಯವೂ ಹೌದು. ಎಸ್ಸೆಸೆಲ್ಸಿ ಪರೀಕ್ಷೆ ಎನ್ನುವುದು ಮೊದಲ ಹಂತವಾದರೆ, ದ್ವಿತೀಯ ಪಿಯುಸಿ ಪರೀಕ್ಷೆಯು ವಿದ್ಯಾರ್ಥಿಗಳ ವೃತ್ತಿ ಜೀವನದಲ್ಲಿ ಬಹು ಮುಖ್ಯವೆನಿಸಿದೆ. ಹಾಗಾಗಿ ಪರೀಕ್ಷೆಯ ರದ್ದತಿಗಿಂತ ಸಿದ್ಧತೆ ನಡೆಸುವುದು ಅತೀ ಸೂಕ್ತ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಏರಿಳಿತ ಕಾಣುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವುದು ಹೇಗೆ ಎನ್ನುವ ಪ್ರಶ್ನೆ ಸಚಿವರು, ಇಲಾಖೆ, ಶಿಕ್ಷಕರು, ಹೆತ್ತವರು ಹಾಗೂ ವಿದ್ಯಾರ್ಥಿಗಳಲ್ಲಿ ಉಂಟಾಗಿದೆ.

ಆದರೆ ಕಳೆದ ಸಾಲಿನಲ್ಲಿ ನಡೆದ ಪಬ್ಲಿಕ್ ಪರೀಕ್ಷೆ ಎಲ್ಲಾ ವರ್ಗಗಳಲ್ಲಿ ಆತ್ಮ ವಿಶ್ವಾಸವನ್ನು ತುಂಬಿಸಿದೆ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ತೀರಾ ಭಿನ್ನವಾಗಿದ್ದು, ವಿದ್ಯಾರ್ಥಿಗಳನ್ನೇ ವೈರಸ್ ಹೆಚ್ಚಾಗಿ ಆಕ್ರಮಿಸಿಕೊಂಡಿದೆ. ಇದರ ಹೊರತಾಗಿಯೂ ವ್ಯಾಕ್ಸಿನ್ ಪೂರೈಕೆಯಾಗಿರುವುದರಿಂದ ಸಂಭಾವ್ಯ ತೊಂದರೆಯನ್ನು ತಪ್ಪಿಸಬಹುದಾಗಿದೆ.

ಹಾಗಾಗಿ ಸಚಿವರು ಹಾಗೂ ಶಿಕ್ಷಣ ಇಲಾಖೆಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ಶಿಕ್ಷಕ-ಶಿಕ್ಷಕೇತರ ವೃಂದಕ್ಕೆ ಮುಂಚಿತವಾಗಿ ಮೊದಲ ಹಂತದ ವ್ಯಾಕ್ಸಿನ್ ನೀಡಿ ಪರೀಕ್ಷೆ ನಡೆಸುವಂತಾದರೆ ಎಲ್ಲಾ ರೀತಿಯಿಂದಲೂ ಒಳಿತು. ಈ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸುವರೇ ? ಎಂದು ದಂಡತೀರ್ಥ ಪ. ಪೂ. ಕಾಲೇಜು, ಕಾಪು ಇಲ್ಲಿಯ ಉಪನ್ಯಾಸಕರಾದ ಶಿವಣ್ಣ ಬಾಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.