ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ಪಟ್ಟಣಕ್ಕೆ ಬೊಬ್ಬರ್ಯನ ಆಗಮನ

Posted On: 29-05-2021 07:59PM

ಪೊಡ್ಡಿಕಲ್ಲ ಗರಡಿ ಕೋಟೆ ಕೊಪ್ಪಳ ಬ್ರಹ್ಮಬೈದರ್ಕಳ ಗರಡಿಯು ಕಾಪುವಿನ ಸಮುದ್ರ ಬದಿಯಲ್ಲಿ ಇದೆ. ಹಿಂದೊಮ್ಮೆ ರೋಡಿನ ಬದಿಯಲ್ಲಿ ಸಮುದ್ರಕಿನಾರೆಯಲ್ಲಿ ಒಂದು ಮರದ ಕುದುರೆಯು ಮೇಲೆ ಬಿದ್ದಿತ್ತು. ಆ ಸಮಯದಲ್ಲಿ ಅಲ್ಲಿ ಹತ್ತು ಸಮಸ್ತರು ಸೇರಿ ಮರದ ಕುದುರೆಯನ್ನು ಮೇಲೆತ್ತಲು ಎಷ್ಟು ಪ್ರಯತ್ನಪಟ್ಟರೂ ಮರದ ಕುದುರೆ ಅಲುಗಾಡಲಿಲ್ಲ.

ಅಲ್ಲಿ ಸೇರಿದವರು ಮಾರನೇ ದಿನ ನೋಡುವ ಎಂದು ಮನೆಗೆ ಹೋದರು. ಮಾರನೇ ದಿನ ಊರಿನವರು ಬಂದು ನೋಡುವಾಗ ಮರದ ಕುದುರೆ ಪೋಡಿಕಲ್ಲ ಗರಡಿಯ ಎದುರಿನಲ್ಲಿ ಬಂದು ಸ್ಥಿರವಾಗಿ ನಿಂತಿತ್ತು. ಆ ದಿನದಿಂದ ಇಂದಿನವರೆಗೂ ಮರದ ಕುದುರೆ ಬೆಳೆಯುತ್ತಿದೆ. ಅದಕ್ಕೆ ಕಟ್ಟಿದ ಮಾಡು ಎರಡು ಬಾರಿ ವಿಸ್ತರಿಸಲಾಯಿತು. ಈಗ ಬೆಳೆದು ಮಾಡಿಗೆ ತಾಗಿರುವುದರಿಂದ ಇನ್ನು ಕೂಡ ಮೇಲಿನ ಮಾಡನ್ನು ವಿಸ್ತರಿಸುವ ಅಗತ್ಯವಿದೆ. ಈ ಮರದ ಕುದುರೆ ಇನ್ನು ಬೆಳೆಯದಂತೆ ಇಲ್ಲಿಯ ಭಕ್ತಾದಿಗಳು ಒಟ್ಟಾಗಿ ಪ್ರಾರ್ಥನೆಯನ್ನು ಮಾಡಿದ್ದಾರೆ . ಒಟ್ಟಾರೆ ಹೇಳುವುದೇನೆಂದರೆ ಇದೊಂದು ಕ್ಷೇತ್ರದ ಕಲೆ ಕಾರ್ಣಿಕ ಎಂದೆ ಹೇಳಬಹುದು. ಇಲ್ಲಿಯ ಉತ್ಸವಾದಿಗಳು ಕೋಡಿ ತಿಂಗಳ ಹುಣ್ಣಿಮೆಯಂದು ನಡೆಯುತ್ತದೆ. ಕೋಟೆ ಕೊಪ್ಪಳ ಆದಿಸ್ಥಳ, ಬೊಬ್ಬರ್ಯನ ಮೂಲ ಸ್ಥಳ. ಶೆಟ್ರು, ಬಿಲ್ಲವರು, ಮೊಗವೀರರು ಒಟ್ಟು ಮೂರು ಜಾತಿಯವರು ನಂಬಿರುವ ಬೊಬ್ಬರ್ಯ. ಬೊಬ್ಬರ್ಯನನ್ನು ನಂಬಿರುವ ಸುಮಾರು ಜಾತಿಯವರಿಗೆ ಅವರವರಲ್ಲಿ ಮನಸ್ತಾಪ ಬಂದು ಮೊಗವೀರರು ಅಲ್ಲಿಂದ ಇಳಿದುಕೊಂಡು ಬಂದರು. ಆಮೇಲೆ ಪಾಟ್ನಾ ದವರು ಸಭೆ ಸೇರಿ ಬೊಬ್ಬರ್ಯನನ್ನು ತಂದು ಬೇರೆ ಪ್ರತಿಷ್ಠೆ ಮಾಡುವ ಬಗ್ಗೆ ಅಲ್ಲಿ ಸಭೆ ಸೇರಿ ಚರ್ಚಿಸಿ ಸ್ಥಳದ ಬಗ್ಗೆ ಚಿಂತನೆ ನಡೆಯುತ್ತಿರುವಾಗ ಆ ಸಭೆಯಲ್ಲಿದ್ದ ಮುಲ್ಕಿಯ ತಬುರ ಮರಕಾಲ ( ಬೊಬ್ಬರ್ಯ ಪೂಜಾರಿ) ನಿಗೆ ಬೊಬ್ಬರ್ಯನು ಮೈಮೇಲೆ ಬಂದು ಅಲ್ಲಿ ಸಭೆ ಸೇರಿದವರಿಗೆ ಸ್ಥಳದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ನಾನು ಈ ರಾತ್ರಿಯ ಮುಂಬೈಯಲ್ಲಿರುವ ಚೋಳ ಗುರಿಕಾರರಿಗೆ ಸ್ವಪ್ನದ ಮೂಲಕ ಕಾಣಿಸಿಕೊಂಡು ಚೋಳ ಗುರಿಕಾರರ ಕುಟುಂಬಿಕರ ಸ್ಥಳದಲ್ಲಿ ಬೊಬ್ಬರ್ಯ ದೈವಸ್ಥಾನ ಕಟ್ಟಲು ಬೇಕಾಗುವ ಸ್ಥಳವನ್ನು ಕೊಡಿಸುವಂತೆ ತಿಳಿಸುವೆನು. ಎಂದು ಮೈಯಾರೆ ಬಂದ ಬೊಬ್ಬರ್ಯನು ತಿಳಿಸಿದನು.

ಅದೇ ಪ್ರಕಾರ ಆ ದಿನ ರಾತ್ರಿಯೇ ಚೋಳ ಗುರಿಕಾರರಿಗೆ ಕನಸಿನಲ್ಲಿ ಕಾಣಿಸಿ ನಾನು ಬೊಬ್ಬರ್ಯ ನಿಮ್ಮ ಕುಟುಂಬಿಕರ ಪಟ್ಟ ಸ್ಥಳದಲ್ಲಿ ನನಗೆ ಗುಡಿ ಮಾಡಿ ಕಟ್ಟಲು ಬೇಕಾಗುವ ಸ್ಥಳವನ್ನು ಒದಗಿಸಿ ಕೊಡಬೇಕಾಗಿ ತಿಳಿಸಿದನು. ಮಾರನೇ ದಿನ ತನ್ನ ಅಳಿಯ ಮುತ್ತಯ್ಯ ಪುತ್ರನನ್ನು ಕರೆದು ಕಾಪು ಮೊಗವೀರ ಗ್ರಾಮ ಸಭೆಗೆ ತಮ್ಮ ಕುಟುಂಬದ ಪಟ್ಟ ಸ್ಥಳವನ್ನು ಕೊಡುವುದಾಗಿ ಪತ್ರ ಬರೆದು ಮುತ್ತಯ್ಯ ಪುತ್ರನ ಕೈಯಲ್ಲಿ ಕೊಟ್ಟು ಕಳಿಸಿದರು. ಹಾಗೂ ಊರಿಗೆ ಬಂದು ಈಗ ಇರುವ ಬೊಬ್ಬರ್ಯ ಸಾನದ ಜಾಗವನ್ನು ಅಂದರೆ ಚೋಳ ಗುರಿಕಾರರ ಕುಟುಂಬಿಕರ ಪಟ್ಟ ಸ್ಥಳದಲ್ಲಿ 12 ಸೆಂಟ್ಸ್ ಸ್ಥಳವನ್ನು 1933 ರಲ್ಲಿ ಕಾಪು ಮೊಗವೀರ ಗ್ರಾಮ ಸಭೆ ಯವರಿಗೆ ರಿಜಿಸ್ಟರ್ ಮಾಡಿಸಿ ವರ್ಗಾಯಿಸಿದರು ಎಂದು ತಿಳಿದುಬರುತ್ತದೆ. ಧರ್ಮಾರ್ಥವಾಗಿ ಸ್ಥಳವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ತಿಳಿದುಬರುತ್ತದೆ. ಜಾಗದ ಮರ್ಯಾದೆಗಾಗಿ ನೇಮೋತ್ಸವದ ದಿನ ಬದಿಕರ ತೆಂಗಿನಕಾಯನ್ನು ಚೋಳ ಗುರಿಕಾರರ ಕುಟುಂಬದವರಿಗೆ ಕೊಡಬೇಕು ಎಂದು ಜಾಗದ ಕರಾರಿನಲ್ಲಿ ತಿಳಿದುಬರುತ್ತದೆ. ಬೊಬ್ಬರ್ಯನನ್ನು ಅಂದಿನಿಂದ ಇಂದಿನವರೆಗೆ ಕಾಪು ಗ್ರಾಮ ಸಭೆಯವರು, ರಾಂಪನಿಯವರು ಮತ್ತು ಸಮುದ್ರದಲ್ಲಿ ದುಡಿಯುವವರು, ಕಸುಬಿನವರು ತಮ್ಮ ಸಂಪಾದನೆಯ ಒಂದಂಶವನ್ನು ಕೊಟ್ಟು ಇಲ್ಲಿಯ ನೇಮೋತ್ಸವ ಮತ್ತು ಇಲ್ಲಿ ನಡೆಯುವ ಪೂಜಾದಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಚೋಳ ಗುರಿಕಾರ ಮತ್ತು ಕುಟುಂಬಿಕರು ಪೂಜೆಗೆ ಮುಕ್ಕಾಲ್ದಿ ಆಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ನಡೆಯುವ ಪೂಜಾದಿಗಳು ಪ್ರತಿ ಸಂಕ್ರಮಣ ಗುರಿಕಾರರು ನಾಲ್ಕು ಜನ ಮತ್ತು ಮುಕ್ಕಾಲ್ದಿ ಬೊಬ್ಬರ್ಯ ಸಾನ ಬಾಗಿಲು ತೆರೆದು ಸ್ಥಾನದ ಒಳಗೆ ಸ್ವಚ್ಛ ಮಾಡಿ ದೀಪ ಆರತಿ ತೋರಿಸುವುದು. ಚೌತಿ ದಿನ ಪೂಜೆ ಮಾಡುವುದು ಸಮುದ್ರದಲ್ಲಿ ದುಡಿಯುವವರಿಂದ ತುಡರ್ ಬಲಿ, ವರ್ಷಕ್ಕೆ ಒಂದು ತಂಬಿಲ ಮತ್ತು ನೇಮೋತ್ಸವ ದಿನ ಚೋಳ ಗುರಿಕಾರರ ಮೂಲ ಮನೆಯಿಂದ ಸಾಯಂಕಾಲ ಹೊತ್ತಿಗೆ ಬಾಲು ಬಂಡಾರ ವಿಜ್ರಂಭಣೆಯಿಂದ ಬರುವುದು. ಅನಂತರ ನೇಮೋತ್ಸವ ವಿಜೃಂಭಣೆಯಿಂದ ನಡೆಯುವುದು. ವಿದ್ಯಾರ್ಥಿ ಹರಕೆ ಪಂಚಗಜ್ಜಾಯ ಪೂಜೆಯು ಇಲ್ಲಿ ಜರಗುವುದು. ಹಾಗೂ ಅಂದಿನಿಂದ ಇಂದಿನವರೆಗೆ ನಾಲ್ಕು ಜನ ಗುರಿಕಾರರು ಮತ್ತು ಮುಕ್ಕಾಲ್ದಿ ಸರ್ವ ಸದಸ್ಯರು ಸೇರಿ ಅತಿ ಉತ್ತಮ ರೀತಿ ಸೇವೆಯನ್ನು ಕೊಡುತ್ತಾ ಪೂಜಿಸಿಕೊಂಡು ಬರುತ್ತಿದ್ದಾರೆ... ಹಲವಾರು ಪವಾಡಗಳು ಹಲವಾರು ಜನರ ಭಕ್ತಾದಿಗಳ ಕಷ್ಟ ಸಮಸ್ಯೆಗಳನ್ನು ಇಲ್ಲಿಯ ದೈವ ಬೊಬ್ಬರ್ಯ ಭಕ್ತಾದಿಗಳ ಸಮಸ್ಯೆಯನ್ನು ಕೊನೆಗೋಳಿಸಿದ್ದಾನೆ.. ಇಲ್ಲಿ ಹರಕೆಯ ನೇಮೋತ್ಸವ ಹರಕೆಯ ಪೂಜೆ ಹಲವಾರು ದೈವಗಳ ಪರಿಕಗಳನ್ನು ಭಕ್ತಾದಿಗಳು ಸೇವೆ ರೂಪದಲ್ಲಿ ದೈವ ಸ್ಥಾನಕ್ಕೆ ಕೊಟ್ಟಿದ್ದಾರೆ.

ಮೊಗವೀರರ ಆರಾಧ್ಯ ದೈವವಾಗಿ ತುಳುನಾಡಿನಲ್ಲಿ ಪ್ರಸಿದ್ಧಗೊಂಡಿದೆ.. ಈ ಮಾಹಿತಿಯನ್ನು ಕಾಪು ಗ್ರಾಮದ ಹಿರಿಯರಿಂದ ತಿಳಿದು ಬರೆದಿದ್ದೇನೆ... ಲೇಖನ : ವಿನೋದ್ ಶೆಟ್ಟಿ