ಕಾಪು : ತುಳುನಾಡು ಹಿಂದೂ ಸೇನೆಯ ವತಿಯಿಂದ 110 ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆ
Posted On:
30-05-2021 02:48PM
ಕಾಪು : ತುಳುನಾಡ ಹಿಂದೂ ಸೇನೆ ಕಾಪು ಇವರ ವತಿಯಿಂದ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ 110ಕ್ಕೂ ಹೆಚ್ಚಿನ ಬಡ ಕುಟುಂಬಗಳಿಗೆ ಪಡಿತರ ಕಿಟ್ ಗಳನ್ನು ರವಿವಾರ ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್ ಅವರು ಮಾತನಾಡಿ, ಪುರಸಭಾ ವ್ಯಾಪ್ತಿಯ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಪಡಿತರ ಕಿಟ್ ಗಳನ್ನು ನೀಡುವ ತುಳುನಾಡು ಹಿಂದೂ ಸೇನೆಯ ಯುವಕರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ತಮ್ಮ ದುಡಿಮೆಯ ಒಂದಂಶದಲ್ಲಿ ಸಮಾಜದ ಇತರ ವರ್ಗದವರನ್ನು ಸದೃಢಗೊಳಿಸಲು ಪ್ರಯತ್ನಿಸುವ ಮೂಲಕ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ ಎಂದರು.
ಕಾಪು ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿ. ಅವರು ಮಾತನಾಡಿ, ತುಳುನಾಡು ಹಿಂದೂ ಸೇನೆಯ ಸಾಮಾಜಿಕ ಸೇವಾ ಕಾರ್ಯಗಳು ಪ್ರಶಂಸನೀಯವಾಗಿದೆ. ಕಳೆದ ವರ್ಷ ನೆರೆಯ ಸಂದರ್ಭದಲ್ಲಿ ಈ ಸಂಸ್ಥೆಯ ಪದಾಧಿಕಾರಿಗಳು ಉತ್ತಮ ಸೇವೆ ನೀಡಿರುವುದು ಸ್ಮರಣೀಯವಾಗಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಜನರ ಬೇಡಿಕೆ ಮತ್ತು ಅವಶ್ಯಕತೆಗಳಿಗೆ ಸ್ಪಂದಿಸಿ ಅವರಿಗೆ ಪಡಿತರ ಕಿಟ್ ವಿತರಿಸುವುದು ಇತರರಿಗೂ ಪ್ರೇರಣೆಯನ್ನು ನೀಡಿದೆ. ಕೊರೋನಾವನ್ನು ದೂರಗೊಳಿಸುವಲ್ಲಿ ಸರ್ವರ ಸಹಕಾರದ ಅಗತ್ಯವಿದ್ದು ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ನಿಗದಿ ಪಡಿಸಿರುವ ನಿಯಮಾವಳಿಗಳಿಗೆ ಜನರಿಂದಲೂ ಉತ್ತಮ ಬೆಂಬಲ ದೊರಕುವುದು ಅತ್ಯಗತ್ಯವಾಗಿದೆ ಎಂದರು.
ತುಳುನಾಡು ಹಿಂದೂ ಸೇನೆಯ ಸದಸ್ಯ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು ಮಾತನಾಡಿ, ತುಳುನಾಡು ಸೇನೆಯ ಯೋಜನೆಗಳು ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಈ ಯೋಜನೆಗಳನ್ನು ಸಾಕಾರ ಗೊಳಿಸುವಲ್ಲಿ ಸಹಕರಿಸಿದ ಎಲ್ಲರಿಗೂ ಸಂಸ್ಥೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ತುಳುನಾಡು ಹಿಂದೂ ಸೇನೆಯ ಉಪಾಧ್ಯಕ್ಷ ರವಿ ಬಿಂದಾಸ್, ಪ್ರಧಾನ ಕಾರ್ಯದರ್ಶಿ ಯಾದವ ಪೂಜಾರಿ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಪತ್ರಕರ್ತ ಪುರುಷೋತ್ತಮ್ ಸಾಲ್ಯಾನ್ ಮುಳೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.