ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕನಕದಾಸರ ಚಿಂತನೆಗಳು ಸಾರ್ವಕಾಲಿಕ ಸತ್ಯ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 22-11-2021 02:38PM

ಉಡುಪಿ : ಮನುಷ್ಯರಲ್ಲಿ ಜಾತಿ ,ಮತ, ಭೇದ ತೊರೆದು ಸಮಾನತೆ ಸಾರುವ ಕನಕದಾಸರ ಚಿಂತನೆ ಮತ್ತು ತತ್ವಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು,ಸಾರ್ವಕಾಲಿಕ ಸತ್ಯ ಆಗಿವೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಅಂದಿನ ಕಾಲದಲ್ಲಿದ್ದ ಜಾತಿ ಭೇದ ಭಾವಗಳ ಕುರಿತು ಕನಸದಾಸರು ತಮ್ಮ ಕೀರ್ತನೆಗಳಲ್ಲಿ ತಿಳಿಸಿದ್ದು, ಇಂದಿಗೂ ಸಮುದಾಯಗಳಲ್ಲಿ ಈ ಅಸಮಾನತೆ ಕಂಡು ಬರುತ್ತಿದ್ದು, ಕನಕದಾಸರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಅಸಮಾನತೆ ತೊಡೆಯಲು ಸಾಧ್ಯವಿದೆ. ಯಾವುದೇ ವ್ಯಕ್ತಿ ಅಧಿಕಾರದಿಂದ ಶ್ರೇಷ್ಠನಾಗಲು ಸಾಧ್ಯವಿಲ್ಲ ಎಂಬುದನ್ನು ತಮ್ಮ ರಾಮ ಧಾನ್ಯ ಚರಿತ್ರೆ ಕೃತಿಯ ಮೂಲಕ ಮಾನವಕುಲಕ್ಕೆ ತಿಳಿಸಿದ್ದಾರೆ ಎಂದ ಜಿಲ್ಲಾಧಿಕಾರಿ ಕೂರ್ಮಾರಾವ್, ಉಡುಪಿಗೂ ಕನಕದಾಸರಿಗೂ ಅವಿನಾಭಾವ ಸಂಬoಧವಿದೆ ಎಂದರು.

ಕನಕದಾಸರ ಜೀವನ ಮತ್ತು ವ್ಯಕ್ತಿತ್ವದ ಕುರಿತು ಉಪನ್ಯಾಸ ನೀಡಿದ ಸಾಹಿತಿ ಕಾತ್ಯಾಯನಿ ಕುಂಜಿಬೆಟ್ಟು ಮಾತನಾಡಿ, ಕನಕದಾಸರು ಭಕ್ತಿ ಕವಿ ಮಾತ್ರವಲ್ಲದೇ,ಸಂತ ಕವಿ,ತತ್ವಜ್ಞಾನಿ,ದಾರ್ಶನಿಕರೂ ಆಗಿದ್ದರು. ಮಾನವನಿಗೆ ಆತ್ಮ ಸಾಕ್ಷಾರ ಆಗದೇ ದೈವ ಸಾಕ್ಷಾರ ಆಗಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿದ್ದ ಅವರು, ಮನಸ್ಸಿನ ದಾಸರಾಗದೇ,ಮಾಯೆಯನ್ನು ದಾಟಿದವರಾಗಿದ್ದರು. ಸಮಾಜದಲ್ಲಿ ಮನುಷ್ಯರ ನಡುವಿನ ಜಾತಿ ಮತ ತಾರತಮ್ಮವನ್ನು ಎಲ್ಲರ ಮನಸ್ಸಿನಿಂದ ತೊಳೆಯುವ ಕಾರ್ಯ ಮಾಡಿದ್ದರು, ಮಾನವೀಯತೆಯೇ ಭಕ್ತಿ ಎಂಬುದನ್ನು ಸಾರಿದ್ದ ಅವರ ಎಲ್ಲಾ ಚಿಂತನೆಗಳು , ಐಷಾರಾಮಿ ಜೀವನದ ಈ ಕಾಲಘಟ್ದದಲ್ಲಿ ಅತ್ಯಂತ ಪ್ರಸ್ತುತವಾಗಿವೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ,ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಜಿಲ್ಲಾ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ಕರ್ನಾಟಕ ಪ್ರದೇಶ ಕುರುಬರ ಸಂಘ ಉಡುಪಿ ಜಿಲ್ಲೆಯ ನಿರ್ದೇಶಕ ಬಸವರಾಜ ಕುರುಬರ, ಮುಖಂಡರಾದ ಹನುಮಂತ ಆಡಿನ, ಹನುಮಂತ ಗೋಹಿ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ವಂದಿಸಿದರು.