ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪ್ರಿಯದರ್ಶಿನಿ ಕೊ-ಆಪರೇಟಿವ್‌ ಸೊಸೈಟಿ ಪಡುಬಿದ್ರಿ ಶಾಖೆ ವತಿಯಿಂದ ಅಶಕ್ತ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ವಿತರಣೆ New

Posted On: 29-08-2025 01:57PM

ಪಡುಬಿದ್ರಿ : ಪ್ರಿಯದರ್ಶಿನಿ ಕೊ-ಆಪರೇಟಿವ್‌ ಸೊಸೈಟಿ ಲಿ. ಇದರ ಪಡುಬಿದ್ರಿ ಶಾಖೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಅಶಕ್ತ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಶುಕ್ರವಾರ ಪಡುಬಿದ್ರಿ ಶಾಖೆಯ ಆವರಣದಲ್ಲಿ ಜರಗಿತು.

ತುಳುನಾಡು ಕಲಾವಿದರು ಪಡುಬಿದ್ರಿ ಇದರ ಅಧ್ಯಕ್ಷರಾದ ಸಂತೋಷ್ ಪಡುಬಿದ್ರಿ ಮುಖ್ಯ ಅತಿಥಿಯಾಗಿ ಆಗಮಿಸಿ, ಹೊಲಿಗೆ ಯಂತ್ರ ವಿತರಿಸಿ ಮಾತನಾಡಿ, ಪ್ರಿಯದರ್ಶಿನಿ ಕೊ-ಆಪರೇಟಿವ್‌ ಸೊಸೈಟಿಯು ಕಡಿಮೆ ಅವಧಿಯಲ್ಲಿ ಗ್ರಾಹಕ ಸ್ನೇಹಿಯಾಗಿ ಉತ್ತಮ ಸೇವೆಯನ್ನು ನೀಡುತ್ತಿದೆ. ಲಾಭಾಂಶದಲ್ಲಿ ಪ್ರತಿವರ್ಷ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದರು. ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ಪಡುಬಿದ್ರಿ ವಲಯ ಅಧ್ಯಕ್ಷೆ ಪುಷ್ಪಲತಾ ಗಂಗಾಧರ್ ಸೊಸೈಟಿಯ ಕಾರ್ಯಗಳನ್ನು ಶ್ಲಾಘಿಸಿ, ಶುಭ ಹಾರೈಸಿದರು.

ಪ್ರಿಯದರ್ಶಿನಿ ಕೊ-ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾದ ಎಚ್. ವಸಂತ್ ಬೆರ್ನಾಡ್೯ ಮಾತನಾಡಿ, ಹಳೆಯಂಗಡಿಯಲ್ಲಿ ಸೊಸೈಟಿಯ ಪ್ರಧಾನ ಕಚೇರಿಯಿದೆ. ಪಡುಬಿದ್ರಿ ಶಾಖೆಯು ಮೂರನೇ ವರ್ಷದಲ್ಲಿ 4.5 ಕೋಟಿ ಠೇವಣಿ ಹೊಂದಿದ್ದು, 4.25 ಕೋಟಿ ಸಾಲ ನೀಡಲಾಗಿದೆ. ಶೇ.98.5 ಸಾಲ ವಸೂಲಾತಿ ಮಾಡಲಾಗಿದೆ. ಗ್ರಾಹಕರಿಗೆ ಶೇ.8 ಡಿವಿಡೆಂಡ್ ನೀಡಲಾಗುತ್ತಿದೆ. ಲಾಭಾಂಶದಲ್ಲಿ ಕಳೆದ ಬಾರಿ ವಿಕಲಚೇತನರಿಗೆ ವ್ಹೀಲ್ ಚೇರ್, ಈ ಬಾರಿ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ. 2023-24 ರಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ವಿಶಿಷ್ಟ ಸಾಧನ ಪ್ರಶಸ್ತಿ ಪಡೆದಿದ್ದು, ಈ ಬಾರಿಯು ಸೊಸೈಟಿಯ ಸಾಧನೆಗೆ ದೊರೆಯಲಿದೆ ಎಂದರು.

ಆಡಳಿತ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪಡುಬಿದ್ರಿ ಶಾಖಾ ಪ್ರಬಂಧಕಿ ಅಂಜಲಿ ಉಳ್ಳಾಲ್ ಎಸ್‌. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಂದಿಸಿದರು.