ಕಾಪು : ನಗರದ ಮೂರು ಮಾರಿಗುಡಿಗಳಲ್ಲೂ ಜಾರ್ದೆ ಮಾರಿಪೂಜಾ ಮಹೋತ್ಸವ ಸಂಪನ್ನ
Posted On:
24-11-2021 07:45PM
ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಯಮ್ಮ ದೇವಸ್ಥಾನ, ಹೊಸ ಮಾರಿಯಮ್ಮ ದೇವಸ್ಥಾನ ಹಾಗೂ ಮೂರನೇ ಮಾರಿಯಮ್ಮ ದೇವಸ್ಥಾನಗಳ್ಲಲಿ ಏಕಕಾಲದಲ್ಲಿ ತುಳುವರ ಜಾರ್ದೆ ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.
ಸಿಡುಬು, ಸಂತಾನ ಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿಪೂಜೆ, ಜುಲೈ ತಿಂಗಳ ಅಂತ್ಯಕ್ಕೆ ಆಟಿ ಮಾರಿಪೂಜೆ ಹಾಗೂ ನವಂಬರ್ ತಿಂಗಳಾಂತ್ಯದಲ್ಲಿ ಜಾರ್ದೆ ತಿಂಗಳ ಮಾರಿ ಪೂಜೆ ನಡೆಯುತ್ತದೆ.
ಆಟಿ ಹಾಗೂ ಸುಗ್ಗಿ ತಿಂಗಳ ಮಾರಿಪೂಜೆಯಲ್ಲಿ ಅತೀ ಹೆಚ್ಚಿನ ಭಕ್ತಾಧಿಗಳು ಕಾಪುವಿನ ಮಾರಿಗುಡಿಗಳಿಗೆ ಆಗಮಿಸುತ್ತಿದ್ದು, ಜಾರ್ದೆ ಮಾರಿಪೂಜೆಯಲ್ಲಿ ಭಕ್ತಾಧಿಗಳ ಸಂಖ್ಯೆ ಇಳಿಮುಖವಾಗುತ್ತದೆ. ಆದರೂ ಭಕ್ತಾಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗುತ್ತದೆ.
ಪ್ರತಿ ಮಾರಿಪೂಜೆಗಳಲ್ಲಿ ಕುರಿ/ಕೋಳಿ ಹರಕೆ ಅಂದರೆ ಲಕ್ಷಾಂತರ ಕೋಳಿಗಳ ಬಲಿ ನಡೆಯುವುದೂ ಇಲ್ಲಿಯ ವಿಶೇಷತೆಗಳಲ್ಲೊಂದು. ಈ ಬಾರಿಯೂ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾದರು.