ಬೆಂಗಳೂರು : ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಮಳೆಗಾಗಿ ಕಾಯುತ್ತಿದ್ದ ರೈತರು ಯಾಕಾದರೂ ಇಷ್ಟು ಮಳೆ ಬರುತ್ತಿದೆಯೋ ಎನ್ನುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ವಾತಾವರಣ ಸೃಷ್ಟಿಯಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ನ.28ರವರೆಗೂ ಹೆಚ್ಚು ಮಳೆಯಾಗಲಿದೆ.
ಚಳಿಗಾಲ ಆರಂಭವಾಗಿದ್ದರೂ ಮಳೆಗಾಲ ಮುಗಿದಿಲ್ಲ. ಹೆಚ್ಚಿದ ಮಳೆಯಿಂದಾಗಿ ತರಕಾರಿ, ಹಣ್ಣುಗಳ ಬೆಲೆಯೂ ಹೆಚ್ಚಾಗಿದ್ದು, ಜನಸಾಮಾನ್ಯರಿಗೆ ತೊಂದರೆಯಾಗಿದೆ.
ನವೆಂಬರ್ 29ಕ್ಕೆ ಕರ್ನಾಟಕದಲ್ಲಿ ಮತ್ತೊಂದು ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ರೂಪಾಂತರಗೊಳ್ಳಲಿದೆ. ಇದರಿಂದಾಗಿ ಮಳೆ ಹೆಚ್ಚುವ ಸಾಧ್ಯತೆ ಇದೆ.
ಆಂಧ್ರಪ್ರದೇಶದ ಕರಾವಳಿ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ತಮಿಳುನಾಡು, ಪುದುಚೆರಿ ಮತ್ತು ಕಾರೈಕಲ್‌ನಲ್ಲಿ ಮಳೆಯಾಗಲಿದೆ.
ರಾಜ್ಯದಲ್ಲಿ ಉ.ಕ,ದ.ಕ, ಉಡುಪಿ, ಬೆಳಗಾವಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಹಾವೇರಿ, ಗದಗ, ಧಾರವಾಡ, ಚಿತ್ರದುರ್ಗ , ಕಲಬುರಗಿ, ಬೆಂಗಳೂರು, ಬೆಂ.ಗ್ರಾ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಹಾಗೂ ತುಮಕೂರಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.