ವೇಶ್ಯಾವಾಟಿಕೆ ದಂಧೆ : ಕಾರು, ನಗದು ವಶ, ಇಬ್ಬರ ದಸ್ತಗಿರಿ, ಓರ್ವ ಸಂತ್ರಸ್ತೆ ಯುವತಿಯ ರಕ್ಷಣೆ
Posted On:
26-11-2021 05:06PM
ಮಂಗಳೂರು : ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾವೂರು ಕಟ್ಟೆ ಪರಿಸರದ ಬಾಡಿಗೆ ಮನೆಯೊಂದರಲ್ಲಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಬೆಂಗಳೂರು , ಮಂಗಳೂರು, ಮೈಸೂರು, ಉಡುಪಿ ಹಾಗೂ ಇತರ ಕಡೆಗಳಲ್ಲಿನ ಯುವತಿಯರು ಮತ್ತು ಮಹಿಳೆಯರನ್ನು ಮಾನವ ಕಳ್ಳಸಾಗಾಟ ಮೂಲಕ ಮಂಗಳೂರಿಗೆ ಕರೆಯಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಾರೆಂಬ ಖಚಿತ ಮಾಹಿತಿ ಮೇರೆಗೆ ನವೆಂಬರ್ 25ರಂದು ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿದ್ದಾರೆ.
ಈ ಸಂದರ್ಭ ವೇಶ್ಯಾವಾಟಿಕೆ ದಂಧೆಯಲ್ಲಿ ನಿರತರಾಗಿದ್ದ ದಲ್ಲಾಳಿಗಳಾದ ಉಡುಪಿ ಉಳಿಯಾರಗೋಳಿಯ ಅಬ್ದುಲ್ ಹಫೀಸ್ (55), 7 ನೇ ಬ್ಲಾಕ್, ಬದ್ರಿಯಾ ಮಸೀದಿ ರಸ್ತೆ, ಕೃಷ್ಣಾಪುರ, ಕಾಟಿಪಳ್ಳದ ರಮ್ಲಾತ್ (46) ಎಂಬುವರನ್ನು ದಸ್ತಗಿರಿ ಮಾಡಿ ವೇಶ್ಯಾವಾಟಿಕೆ ದಂಧೆಯಲ್ಲಿ ನಿರತಳಾಗಿದ್ದ ಒಬ್ಬಳು ಸಂತ್ರಸ್ತೆ ಯುವತಿಯನ್ನು ರಕ್ಷಿಸಲಾಗಿದೆ.
ದಸ್ತಗಿರಿ ಮಾಡಿದ ಆರೋಪಿಗಳಿಂದ ರೂ. 10,060 ನಗದು, 3 ಮೊಬೈಲ್ ಫೋನುಗಳು ಮತ್ತು ಸ್ಕಾರ್ಪಿಯೋ ಕಾರು ಹೀಗೆ ಒಟ್ಟು ರೂ. 3,25,560 ಮೊತ್ತದ ಸೊತ್ತನ್ನು ಸ್ವಾಧೀನಪಡಿಸಿಕೊಂಡಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.