ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನಿರಂತರ ಪರಿಶ್ರಮದಿಂದ ಕಲಾಸಾಧನೆ ಸಾಧ್ಯ: ಡಾ. ಗಣೇಶ್ ಗಂಗೊಳ್ಳಿ ಅಭಿಮತ

Posted On: 26-11-2021 05:45PM

ಕಾಪು : ಕಲೆಯು ಯಾವಾಗಲೂ ಓರ್ವ ಸಾಧಕನ ಸ್ವತ್ತು. ತನ್ನ ಆಯ್ದ ಕ್ಷೇತ್ರದಲ್ಲಿ ಸಾಧನೆಗೈಯಲು ಶೃದ್ಧೆ, ಸತತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ವಿನಮ್ರತೆ ಅಗತ್ಯ. ಜೀವನದಲ್ಲಿ ಬರುವ ಅಡೆತಡೆಗಳನ್ನೆದುರಿಸಿ ಸಾಧನೆಯ ಹಾದಿಯಲ್ಲಿ ದೃಢ ಸಂಕಲ್ಪದೊಂದಿಗೆ ಹೆಜ್ಜೆಯಿಡಬೇಕು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸೂರ್ಯ ಚೈತನ್ಯ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಕನ್ನಡ ಜಾನಪದ ಪರಿಷತ್ ನ ಉಡುಪಿ ಜಿಲ್ಲಾಧ್ಯಕ್ಷ , ಖ್ಯಾತ ಜಾನಪದ ಗಾಯಕ ಡಾ. ಗಣೇಶ್ ಗಂಗೊಳ್ಳಿ ಹೇಳಿದರು. ಅವರು ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಪು ತಾಲೂಕು ಕಸಾಪ ಪೂರ್ವಾಧ್ಯಕ್ಷ ಪುಂಡಲೀಕ ಮರಾಠೆ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸೂಕ್ತ ವೇದಿಕೆಯನ್ನು ಕಂಡುಕೊಳ್ಳಬೇಕೆಂದು ಕರೆಯಿತ್ತರು. ಮುದರಂಗಡಿ ಸರಕಾರಿ ಪ.ಪೂ. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಭಾಸ್ಕರ ವೈ. ಜಿ. ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿದ್ವಾನ್ ಶಂಭುದಾಸ ಗುರೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಗುರುದತ್ತ ಸೋಮಯಾಜಿ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಶೇಟ್ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ರಾಜಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ಶ್ರುತಿ ಆಚಾರ್ಯ ವಂದಿಸಿದರು.

ಸನ್ಮಾನ ಕಾರ್ಯಕ್ರಮದ ಬಳಿಕ ಡಾ. ಗಣೇಶ್ ಗಂಗೊಳ್ಳಿಯವರಿಂದ 'ಗೀತ ಗಾಯನ' ಸಂಗೀತ ಕಾರ್ಯಕ್ರಮ ಜರುಗಿತು.