ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುಲಾಲ ಚಾವಡಿಯಿಂದ ಧನ ಸಹಾಯ

Posted On: 26-11-2021 10:48PM

ಕಾಪು : ಕೈ ಹಿಡಿದ ಪತಿಯಿಂದ ಪರಿತ್ಯಕ್ತರಾಗಿ ತವರು ಮನೆ ಸೇರಿದ್ದ ಸುನೀತಾರ ಬದುಕಿಗೆ ಕಾಡಿದ ಹೃದ್ರೋಗದ ಖಾಯಿಲೆಯು ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ದೈಹಿಕ ಮಾನಸಿಕ ನೋವನ್ನು ಅವುಡುಗಚ್ಚಿ ಸಹಿಸಿಕೊಂಡರೂ ದೇಹಕ್ಕಂಟಿದ ಖಾಯಿಲೆಯ ಚಿಕಿತ್ಸೆಗೆ ತಗಲುವ ವೆಚ್ಚಕ್ಕೇನು ಎಂಬುವುದು ಅವರ ನಿತ್ಯ ಕಾಡುವ ಚಿಂತೆಯಾಗಿತ್ತು. ಅನಾಥೋ ದೈವ ರಕ್ಷಕ ಅನ್ನುವಂತೆ ಆ ಕ್ಷಣಕ್ಕೆ ಅವರಿಗೆ ಕಂಡಿದ್ದು ಕುಲಾಲ ಚಾವಡಿಯ ಸಹೃದಯಿಗಳು.

ಹಳಿ ತಪ್ಪಿದ ಬದುಕಿನ ಲಗಾಮು ಒಮ್ಮೆ ಕೈಗೆ ಸಿಕ್ಕರೆ ಮತ್ತೆ ವಿಧಿಯನ್ನಾದರೂ ಜೈಸಿ ಬಿಟ್ಟೇನು ಎನ್ನುವ ಅವರ ದೃಢ ವಿಶ್ವಾಸದ ಹೆಜ್ಜೆಗೆ ಆತ್ಮಬಲ ತುಂಬುವ ಪುಟ್ಟ ಪ್ರಯತ್ನ ಚಾವಡಿ ಬಂಧುಗಳದ್ದು. ಸುನೀತಾರವರ ವಾಸ್ತವ ಬದುಕಿನ ಕಥೆ ವ್ಯಥೆಗಳನ್ನು ಅಕ್ಷರರೂಪಕ್ಕಿಳಿಸಿದಾಗ ಮಿಡಿದ ಮಾನವೀಯ ಹೃದಯಗಳು ಅಗಣಿತ. ಶ್ರೀರಾಮನ ರಾಮಸೇತುವಿಗೆ ಅಳಿಲು ಸಲ್ಲಿಸಿದ ಸೇವೆಯಂತೆ ಶಕ್ತ್ಯಾನುಸಾರ ನನ್ನದೊಂದಿಷ್ಟು ಪಾಲಿರಲಿ ಎನ್ನುವ ಸಹೃದಯಿಗಳ ಸಹಕಾರದ ಪೈಪೋಟಿ ನಮ್ಮ ಚಾವಡಿಯ ಧ್ಯೇಯಕ್ಕೆ ನೂರಾನೆಯ ಬಲ ತುಂಬಿದಂತೆ.

ಸಹೃದಯಿ ಚಾವಡಿ ಬಂಧುಗಳ ಸದಾಶಯದ ಹಾರೈಕೆಯು ಆರ್ಥಿಕ ನೆರವಾಗಿ ಒಗ್ಗೂಡಿದ್ದು ₹ 25000/-ಕನಿಕರಿಸುವ ಹೃದಯಗಳ ಅಂತರಾತ್ಮದ ಹಾರೈಕೆಯ ಸಂತ್ರಸ್ತರಿಗೆ ತಲುಪಿಸುವ ಸುಯೋಗ ಕುಲಾಲ ಚಾವಡಿಯದ್ದು. ಫಲಾನುಭವಿಯ ಚಹರೆಯಲ್ಲಿ ಮೂಡಿತ್ತು ಮಂದಹಾಸದ ಕೋಲ್ಮಿಂಚು, ಕೃತಜ್ಞತಾ ಭಾವವು ಆನಂದ ಬಾಷ್ಪವಾಗಿ ತೊಯ್ದಿತ್ತು ಕಣ್ಣಂಚು. ಕುಲಾಲ ಚಾವಡಿಯ ಪುಟ್ಟ ಸತ್ಕಾರ್ಯ ಪಡೆದಿತ್ತು ಸಾರ್ಥೈಕ್ಯದ ಅಂಚು.

ಆರ್ಥಿಕ ನೆರವು ಹಸ್ತಾಂತರಕ್ಕೆ ಜೊತೆಗೂಡಿದ ಚಾವಡಿ ಬಂಧುಗಳು ದೇವಪ್ಪ ಕುಲಾಲ್,ವಿಶ್ವನಾಥ ಕುಲಾಲ್,ಹೃದಯ್ ಕುಲಾಲ್,ಸುಧೀರ್ ಬಂಗೇರ,ಸಂದೇಶ್ ಕುಲಾಲ್,ಜ್ಯೋತಿ ಕುಲಾಲ್,ಶಾಲಿನಿ ಕುಲಾಲ್,ಸಂತೋಷ್ ನಾನಿಲ್ತಾರ್ ಹಾಗೂ ಯೋಗೀಶ್ ಕುಲಾಲ್ ಮುಲ್ಲಡ್ಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಸಹೃದಯಿ ದಾನಿಗಳಿಗೆ ಕುಲಾಲ ಚಾವಡಿಯ ಅಡ್ಮಿನ್ ಸಂತೋಷ್ ಕುಲಾಲ್ ಪದವು ಕೃತಜ್ಞತೆ ಸಲ್ಲಿಸಿದರು.