ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಂಟಕಲ್‍ನಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ, ವಿವಿಧ ಸಾಧಕರಿಗೆ ಸನ್ಮಾನ

Posted On: 28-11-2021 11:54AM

ಕಾಪು : ನಮ್ಮ ನಾಡಿನ ಪುರಾತನ ಸಾಂಪ್ರದಾಯಿಕ ಜನಪದ ಸೊಬಗು ಇಂದಿನ ಯುವಪೀಳಿಗೆಗೆ ಕಟ್ಟುಕತೆಯಂತೆ ಭಾಸವಾಗಬಹುದು. ಆದರೆ ಜಾನಪದ ಎಂಬುದು ವಾಸ್ತವ ಸತ್ಯವಾಗಿದೆ. ಕುದುರೆ ರೇಸ್‍ನಂತಹ ಜೂಜಾಟವನ್ನು ನಿಲ್ಲಿಸದೆ ಜನರ ಮನೋರಂಜನಾ ಜಾನಪದ ಕ್ರೀಡೆಗಳಾದ ಕೋಳಿಅಂಕ, ಕಂಬಳದಂತಹ ಕ್ರೀಡೆಗಳನ್ನು ನಿರ್ಬಂಧಿಸಲು ಪ್ರಯತ್ನ ಪಡುವುದು ದುರಂತವಾಗಿದೆ. ಇದಕ್ಕೆ ಜಾನಪದ ಪರಿಷತ್ ನಂತಹ ಸಂಘಟನೆಗಳು ಸರಕಾರವನ್ನು ಪ್ರಶ್ನಿಸಬೇಕಾಗಿದೆ ಎಂದು ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯದರ್ಶಿ ರತ್ನಕುಮಾರ್ ತಿಳಿಸಿದ್ದಾರೆ. ಅವರು ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಕನ್ನಡ ಜಾನಪದ ಪರಿಷತ್ ಕಾಪು ತಾಲೂಕು ಘಟಕ ಮತ್ತು ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ಜಾನಪದ ರಾಜ್ಯೋತ್ಸವ-2021 ಕಾರ್ಯಕ್ರಮವನ್ನು ಉದ್ಘಾಟಿಸಿ, ವಿವಿಧ ಸಾಧಕರನ್ನು ಗೌರವಿಸಿ ಮಾತನಾಡಿದರು. ಪ್ರಸ್ತುತ ಜಾನಪದದ ಬಗ್ಗೆ ಮಕ್ಕಳಿಗೆ ತಿಳಿಸುವ ಅನಿವಾರ್ಯತೆಯಿದೆ. ಅದರ ಆಳ, ಅರಿವಿನ ಸಂಶೋಧನೆಗಳಾಗಬೇಕಾಗಿದ್ದು,ಜಾನಪದ ದಾಖಲೀಕರಣ ಪ್ರಕ್ರಿಯೆಗಳಿಗೆ ನಮ್ಮ ಸಂಸ್ಥೆ ಸದಾ ಪ್ರೋತ್ಸಾಹಿಸಲಿದೆ ಎಂದರು.

ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ಮಾತನಾಡಿ, ಅಳಿವಿನಂಚಿನಲ್ಲಿರುವ ಜಾನಪದದ ವಸ್ತು ವಿಷಯಗಳ ಬಗ್ಗೆ ದಾಖಲೀಕರಣವಾಗಬೇಕು. ಅದರ ಮೂಲಕ ಮತ್ತಷ್ಟು ತಿಳುವಳಿಕೆಯನ್ನು ಜನರಿಗೆ ಮೂಡಿಸಲು ಸಾಧ್ಯವಾಗಬಹುದು ಎಂದರು. ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಕುಮಾರ್ ಗಂಗೊಳ್ಳಿ ಮಾತನಾಡಿ, ಹಳ್ಳಿಗಳಲ್ಲಿ ಜಾನಪದಗಳು ಜನರ ದಿನನಿತ್ಯದ ಬದುಕಾಗಿದೆ. ಬೆಳಗಿನ ರಂಗೋಲಿಯಿಂದ, ತಾವು ಮಾಡುವ ಕೆಲಸಗಳ ದಣಿವಾರಿಸಲು ಜನಪದ ಸಾಹಿತ್ಯವನ್ನು ಅವರು ಬಳಸುವುದು ಜಾನಪದದ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದರು.

ಇದೇ ಸಂದರ್ಭ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಫಾರೂಕ್ ಚಂದ್ರನಗರ, ಚಾಣಕ್ಯ ಪ್ರಶಸ್ತಿ ವಿಜೇತ ಮಾಸ್ಟರ್ ಯಶಸ್ ಪಿ. ಸುವರ್ಣ, ಡಾ.ಎಸ್.ಪಿ.ಬಿ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ ಕೆ. ರವಿಶಂಕರ್ ಮಂಗಳೂರು, ಪ್ರಗತಿಪರ ಯುವಕೃಷಿಕ ಸಂತೋಷ್ ಶೆಟ್ಟಿ ಪಂಜಿಮಾರು, ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಗಣೇಶ್ ಕುಮಾರ್ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದೆ ಭಾರತಿ ಟಿ ಕೆ, ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಕಟಪಾಡಿ, ಕಾರ್ಯದರ್ಶಿ ಭುವನೇಶ್ ಪ್ರಭು ಹಿರೇಬೆಟ್ಟು, ಜತೆಕಾರ್ಯದರ್ಶಿ ಪವಿತ್ರ ಶೆಟ್ಟಿ, ದಯಾನಂದ ದೆಂದೂರುಕಟ್ಟೆ, ದೀಪಕ್ ಬೀರ ಉಪಸ್ಥಿತರಿದ್ದರು. ಕನ್ನಡ ಜಾನಪದ ಪರಿಷತ್ ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತಿಮಾ ಸಾಮಗ ಪ್ರಾರ್ಥಿಸಿದರು. ಚೈತ್ರ, ಸಮೀಕ್ಷ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು. ಬಳಿಕ ಮಾಸ್ಟರ್ ಯಶಸ್ ಪಿ.ಸುವರ್ಣ ಕಟಪಾಡಿ ಅವರಿಂದ ಕೊಳಲುವಾದನ ಹಾಗೂ ಗಣೇಶ್‍ಕುಮಾರ್ ಗಂಗೊಳ್ಳಿ ಅವರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.