ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕೌಶಲ್ಯ ತರಬೇತಿಯಿಂದ ಕೈದಿಗಳಿಗೆ ಸ್ವಾವಲಂಬಿ ಜೀವನ ಸಾಧ್ಯ : ನ್ಯಾ.ಶರ್ಮಿಳಾ

Posted On: 01-12-2021 11:23PM

ಉಡುಪಿ : ಜೈಲು ಎಂದರೆ ಕೈದಿಗಳಿಗೆ ಶಿಕ್ಷೆ ನೀಡುವುದು ಮಾತ್ರವಲ್ಲ ಅವರ ಮನ: ಪರಿವರ್ತನೆ ಮಾಡುವ ಕೇಂದ್ರಗಳೂ ಆಗಿದ್ದು, ಜೈಲಿನಲ್ಲಿದ್ದ ಅವಧಿಯಲ್ಲಿ ಕೈದಿಗಳು ಕೌಶಲಯುಕ್ತ ತರಬೇತಿ ಪಡೆಯುವುದರಿಂದ, ಬಿಡುಗಡೆಯ ನಂತರ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಹೇಳಿದರು. ಅವರು ಇಂದು ಕಾಜಾರಗುತ್ತುನಲ್ಲಿನ ಜಿಲ್ಲಾ ಕಾರಾಗೃಹದಲ್ಲಿ, ಕಾರಾಗೃಹ ಮತ್ತು ಸುಧಾರಣಾ ಸೇವೆ, ಜಿಲ್ಲಾ ಕಾರಾಗೃಹ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ, ಜಿಲ್ಲಾ ಕೌಶಲ್ಯ ಆಭಿವೃದ್ಧಿ ಇಲಾಖೆ, ಆರ್ಟ್ ಆಫ್ ಲಿವಿಂಗ್ ಉಡುಪಿ ಸಹಯೋಗದಲ್ಲಿ, ಕಾರಾಗೃಹ ಬಂಧಿಗಳು ಮತ್ತು ಸಿಬ್ಬಂದಿಗಳ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ಆಯೋಜಿಸಿದ್ದ ಯೋಗ ತರಬೇತಿ ಸಮಾರಂಭ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರಾಗೃಹದಲ್ಲಿನ ಕೈದಿಗಳಿಗೆ ಕೌಶಲ್ಯ ತರಬೇತಿ ನೀಡುವುದರಿಂದ ಅವರ ಬಿಡುಗಡೆಯ ನಂತರ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಲು ಸಹಾಯವಾಗುತ್ತದೆ. ಅಲ್ಲದೇ ಶಿಕ್ಷೆಯ ಅವಧಿಯಲ್ಲಿ ಯಾವುದಾದರೊಂದು ಕಾರ್ಯದಲ್ಲಿ ತೊಡಗಿಕೊಳ್ಳುವುದರಿಂದ ಅವರ ಮಾನಸಿಕ ಅರೋಗ್ಯ ಮತ್ತು ಆತ್ಮ ವಿಶ್ವಾಸ ವೃದ್ಧಿಯಾಗುತ್ತದೆ. ಕೆಟ್ಟ ಆಲೋಚನೆಗಳು ಅವರಲ್ಲಿ ಮೂಡುವುದಿಲ್ಲ ಹಾಗೂ ಅವರಲ್ಲಿನ ಕೌಶಲ್ಯ ಪ್ರತಿಭೆ ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಈ ಕಾರ್ಯ ಪ್ರಶಂಸನೀಯವಾದುದು ಎಂದರು.

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಮಾತನಾಡಿ, ಬದಲಾವಣೆ ಬೆಳವಣಿಗೆಯ ಸಂಕೇತ. ಕೌಶಲ್ಯ ತರಬೇತಿಯ ಮೂಲಕ ಕೈದಿಗಳು ಹೊಸ ಬದುಕಿಗೆ ಕಾಲಿಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ತಪ್ಪಿನಿಂದ ಮತ್ತೊಬ್ಬರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು. ಎಲ್ಲರನ್ನೂ ಕ್ಷಮಿಸುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ ಎಂದರು. ಆರ್ಟ್ ಆಫ್ ಲಿವಿಂಗ್ ಉಡುಪಿಯ ಯೋಗ ಶಿಕ್ಷಕಿ ವಿಮಲಾಕ್ಷಿ ದಿವಾಕರ್ ಯೋಗದ ಮಹತ್ವದ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಜಗದೀಶ್, ಯೋಗ ಶಿಕ್ಷಕ ರವಿ ಬಂಗೇರಾ, ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾರಾಗೃಹದ ಅಧೀಕ್ಷಕ ಶ್ರೀನಿವಾಸ್ ,ಸ್ವಾಗತಿಸಿ ವಂದಿಸಿದರು.