ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ತುಳುವರ ನಾಗಾರಾಧನೆಯ ಹಿನ್ನೋಟ - ಕೆ. ಎಲ್. ಕುಂಡಂತಾಯ

Posted On: 24-07-2020 11:12PM

ಗಿಡ ,ಮರ , ಬಳ್ಳಿ ,ಪ್ರಾಣಿ ,ಪಕ್ಷಿ , ನದಿ , ಸಮುದ್ರ , ಪರ್ವತ , ಬೆಟ್ಟ , ಗುಡ್ಡಗಳನ್ನು ಆರಾಧಿಸುವ ಭಾರತೀಯ ಆಚಾರ - ವಿಚಾರ ಪ್ರಪ್ರಥಮ ದೈವೀಕರಿಸಿದ ಪ್ರಾಣಿ "ನಾಗ" ಅಥವಾ "ಸರ್ಪ" . ಪರಶುರಾಮ ಸೃಷ್ಟಿ ಎಂದು ನಂಬಲಾಗುವ ಈ ಪಶ್ಚಿಮ ಕರಾವಳಿಯಲ್ಲಂತೂ ನಾಗ ಶ್ರದ್ಧೆ ವಿಶಿಷ್ಟವಾದುದು .ವಿಶ್ವದ ಬೇರೆಲ್ಲೂ ಕಾಣಸಿಗದ ನಂಬಿಕೆ - ನಡವಳಿಕೆಗಳು ನಾಗ ಸಂಬಂಧಿಯಾಗಿದೆ .ನಾಗ ಪ್ರೀತಿ - ಭಕ್ತಿ - ಒಡಂಬಡಿಕೆ - ಸ್ವೀಕಾರಗಳು ನಮ್ಮಲ್ಲಿರುವಷ್ಟು ವೈವಿಧ್ಯಮಯವಾಗಿ ಬೇರೆಲ್ಲೂ ಇಲ್ಲ . ಈ ಭರವಸೆ - ವಿಶ್ವಾಸವು ಪುರಾತನವಾದರೂ ಬಲಗುಂದದೆ ಸಾಗಿಬಂದಿದೆ . ಸಹಸ್ರಾರು ವರ್ಷಕಳೆದರೂ "ನಾಗ ನಂಬಿಕೆ" ಪ್ರಸ್ತುತ , ಅಷ್ಟೇ ಗಾಢವಾದುದಾಗಿದೆ . ಮೃತ ನಾಗನ ಕಳೇವರ ಸಿಕ್ಕಿದರೆ ಸಂಸ್ಕಾರ ವಿಧಿ ಪೂರೈಸುವ ಭಯ ,ಭಕ್ತಿಯ ಸರ್ಪ ಸಂಸ್ಕಾರ ಧಾರ್ಮಿಕ ವಿಧಿವಿಧಾನಗಳನ್ನು( ಇದು ಬಹುಶಃ ವೈದಿಕ ಆಗಮನದ ಬಳಿಕದ ಅನುಸಂಧಾನ - ವಿರಬಹುದು) ಗಮನಿಸಿದಾಗ ,ನಮಗೇನು ನಾಗನೊಂದಿಗೆ ಪೈತೃಕದ ಸಂಬಂಧವೇ ಎಂದು ಅನ್ನಿಸುವುದಿಲ್ಲವೇ ? ಹೀಗೆ ಲೋಕ ಪ್ರಿಯ ನಾಗನನ್ನು ಭೂಮಿಪುತ್ರನೆಂದೇ ಒಪ್ಪಿದೆ ನಮ್ಮ ಧರ್ಮಶ್ರದ್ಧೆ . ಬ್ರಹ್ಮ ಸೃಷ್ಟಿಯ ಬಳಿಕ ಸಂಭವಿಸಿದ ಅಥವಾ ಗೋಚರಿಸಿದ ಈ ಭೂಭಾಗದ ಮೂಲನಿವಾಸಿಯೇ ನಾಗ ಎಂದು ಭಾವಿಸುವ ನಮ್ಮ ಮನಸ್ಸುಗಳು ನಾಗ ಸಂತತಿಯ ಕುರಿತಾಗಿ ಯೋಚಿಸುವಾಗ ಭಕ್ತಿ ಇರುತ್ತದೆ , ಹಿನ್ನೆಲೆಯಲ್ಲಿ ಭಯವೂ ಸ್ಪಷ್ಟ . 'ಮೂಲದ ನಾಗ'ಎಂದು ಜನಪದರಲ್ಲಿರುವ ರೂಢಿಯನ್ನು ನೆನಪಿಸಿಕೊಳ್ಳಬಹುದು . ವಿಶ್ವದ ಹಲವು ಸಂಸ್ಕೃತಿಗಳಲ್ಲಿ ನಾಗ ನಂಬಿಕೆಗಳಿವೆ ,ವೈವಿಧ್ಯಮಯ‌ ಆಚರಣೆಗಳಿವೆ . ಭಾರತದಲ್ಲಂತೂ ಸಾವಿರಾರು ವಿಶ್ವಾಸಗಳು - ಸ್ವೀಕಾರಗಳಿವೆ .ಉತ್ತರ ಭಾರತಕ್ಕಿಂತ ದಕ್ಷಿಣದಲ್ಲಿ ಭಿನ್ನತೆ ಇದೆ .ಕರ್ನಾಟಕದಲ್ಲೆ ಹಲವು ಕ್ರಮಗಳ ಆಚರಣೆಗಳು .ಕೇರಳದ ಕರಾವಳಿಯಲ್ಲಿ ಅನೇಕ‌ ವಿಧಿವಿಧಾನಗಳು. ಆದರೆ ನಮ್ಮ ಜಿಲ್ಲೆಗಳ ಕರಾವಳಿಯದ್ದು ಪ್ರತ್ಯೇಕ ಅನುಸಂಧಾನ - ಆರಾಧನಾ ವೈವಿಧ್ಯ . |ವೈದಿಕ ಅನುಸಂಧಾನ| ನಾಗ ಶ್ರದ್ಧೆಗೆ , ಆರಾಧನಾ ಸ್ವರೂಪಕ್ಕೆ ವಿಸ್ತಾರವಾದ ಆಯಾಮ ದೊರೆಯುವುದು ವೈದಿಕದಿಂದ . ನಾಗ ಸಂಬಂಧಿಯಾದ ವೇದ ಮಂತ್ರಗಳು ಎಲ್ಲೆಡೆ ವ್ಯಾಪ್ತನಾದ ನಾಗ - ಸರ್ಪದ ಕುರಿತು ವ್ಯಾಖ್ಯಾನಿಸುತ್ತದೆ . ಮಹಾಶೇಷನು ತನ್ನ ತಮ್ಮನಾದ ವಾಸುಕಿಗೆ ಭೂಮಿಯ ಅಧಿಕಾರವನ್ನು ಕೊಟ್ಟು ನಾಗರಾಜನಾಗಿರು ಎನ್ನುತ್ತಾನೆ. ಹಾಗಾಗಿಯೇ ನಮ್ಮಲ್ಲಿ "ವಾಸುಕೀ ನಾಗರಾಜ" ಎಂಬ ಸಂಕಲ್ಪ ರೂಢವಾಯಿತು .ವೈದಿಕದ ಪೂಜಾ ವಿಧಾನಗಳು ಒಪ್ಪಿತವಾದುವು . ಆಸ್ತಿಕನೆಂಬ ಬ್ರಾಹ್ಮಣ ವಟುವಿನಿಂದ ಸರ್ಪ ಸಂತತಿ ಉಳಿಯಿತು . ಇದು ಜನಮೇಜಯನ ಸರ್ಪಯಾಗದ ಪ್ರಸಂಗದಲ್ಲಿ (ಮಹಾಭಾರತ) . ಹಾಗಾಗಿಯೇ ನಾಗಬನಗಳಲ್ಲಿ , ವಿಶೇಷ ಪೂಜೆಗಳ ಸಂದರ್ಭ "ವಟುವಾರಾಧನೆ" ನಾಗ ಪ್ರೀತ್ಯರ್ಥವಾಗಿ ನೆರವೇರುತ್ತವೆ .ಇದನ್ನು ಆಸ್ತಿಕರು ಪ್ರೀತಿಯಿಂದ ನೆರವೇರಿಸುತ್ತಾರೆ . ಇಂತಹ ಹತ್ತಾರು ನಾಗ ಉಪಾಸನಾ ಪದ್ಧತಿಗಳು ವೈದಿಕ - ಅವೈದಿಕದ ಸುಗಮ ಸಮಾಗಮವಾಗಿ ಕಂಡುಬರುತ್ತವೆ .ಹಾಗಾಗಿ ಆಶಯದಲ್ಲಿ ವೈದಿಕ ಸಂಕಲ್ಪವು ಉದಾತ್ತವಾದುದಾಗಿದೆ. ‌ |ಸಮೂಹ ಪೂಜೆ| ಕರಾವಳಿಯಲ್ಲಿ ದೊರೆಯುವ ಮಾಹಿತಿಗಳಂತೆ ಮಾನವ ತನಗೆ ಆರಾಧಿಸಬೇಕೆಂದು ಬಯಸಿದುದನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ (ಮರದ ಬುಡದಲ್ಲಿ ಪ್ರತೀಕವಾಗಿ ಕಲ್ಲಿನ ತುಂಡೊಂದನ್ನಿರಿಸಿ) ನಂಬ ತೊಡಗಿರುವುದು ನಿಖರವಾಗುತ್ತದೆ . ಇದಕ್ಕೆ ಆಧಾರವಾಗಿ ಈಗ ಇರುವ ಬ್ರಹ್ಮಸ್ಥಾನಗಳು , ಆಲಡೆಗಳು , ಬೂತ - ದೈವಗಳ ಸಹಿತದ ಸಮೂಹ ಆರಾಧನಾ ನೆಲೆಗಳು ಇವೆ .ಆ ಸಂದರ್ಭದಲ್ಲಿ ನಾಗನು ಸಮೂಹದಲ್ಲೆ ಬೂತ - ದೈವಗಳೊಂದಿಗೆ ಪೂಜೆಗೊಳ್ಳುತ್ತಿದ್ದ . ಮುಂದೆ "ಬೆರ್ಮೆರ್", ಬೆಮ್ಮೆರ್ , ಬಿಮ್ಮೆರ್ ಎಂದರೆ 'ತುಳುವಿನ ದೇವರು' ( ಡಾ.ಜನಾರ್ದನ ಭಟ್ ಅವರ ಸಂಶೋಧನೆ) . ಈ 'ಬ್ರಹ್ಮ'( ಬೆರ್ಮೆರ್) ಪ್ರಧಾನವಾಗಿ ಆರಾಧನೆಗಳು ನಿಚ್ಚಳವಾದಾಗ ಬೆರ್ಮೆರ್(ಬ್ರಹ್ಮ) ಮುಖ್ಯವಾಯಿತು . ಬ್ರಹ್ಮನ ನೆಲೆಯಿಂದಾಗಿ ಅವು ಬ್ರಹ್ಮಸ್ಥಾನಗಳಾದುವು .ಹೇಗೆ ಬೆರ್ಮೆರ್ ತುಳುವಿನ ದೇವರೋ ಹಾಗೆಯೇ ಬ್ರಹ್ಮ - ಬೆರ್ಮೆರ್ ಇರುವ ತಾಣ ತುಳುವರ ದೇವಸ್ಥಾನ ಅದೇ ಬ್ರಹ್ಮಸ್ಥಾನವಾಯಿತು. ಇವೇ ಮೂಲದ ಬೆರ್ಮೆರ್ ಪ್ರಧಾನವಾದ ಸಮೂಹ ಪೂಜಾ ಸ್ಥಾನ . ಇತ್ತೀಚೆಗಿನ ದಶಕಗಳಲ್ಲಿ ತುಳುನಾಡಿನ ಅಥವಾ ಕರೆನಾಡಿನ ಬೆರ್ಮೆರ್ - ಬೆಮ್ಮೆರ್ - ಬಿಮ್ಮೆರ್ ಉತ್ತರಕನ್ನಡದಲ್ಲಿ ಗುರುತಿಸಲಾಗುವ 'ಬೊಮ್ಮಯ' ಮುಂತಾದ ಹೆಸರುಗಳಿಂದ ನಂಬಲಾದ ಬೆರ್ಮೆರ್ ಬಗ್ಗೆ ಸ್ಪಷ್ಟತೆ ಇಲ್ಲವಾಯಿತು , ನಾಗ ಪಾರಮ್ಯ ಅಧಿಕವಾಯಿತು ಹಾಗಾಗಿ ನಮ್ಮ ಪುರಾತನ 'ಬೆರ್ಮಸ್ಥಾನ'ಗಳು"ನಾಗ - ಬ್ರಹ್ಮಸ್ಥಾನ" ಗಳಾಗಿ ಪರಿವರ್ತನೆಯಾದುವು . |ಮೂಲದ ನಾಗಾರಾಧನೆ| ವೈದಿಕ ಆಗಮನ ಪೂರ್ವದ ನಾಗಾರಾಧನಾ ವಿಧಾನಗಳು ಅಲ್ಲಲ್ಲಿ ಉಳಿಕೆಯಾಗಿ ಉಳಿದುಕೊಂಡಿವೆ . ಈ ಲೇಖಕ ಗುರುತಿಸಿ ಪತ್ರಿಕೆಗೆ ಬರೆದಿರುವ 12 -13 ನಾಗಬನಗಳಲ್ಲಿ ಇಂದಿಗೂ ಮೂಲದ ನಾಗನ ಆರಾಧನೆ ಮೂಲಕ್ರಮದಂತೆ ನಡೆಯುತ್ತಿದೆ ( ಇನ್ನೂ ಇರಬಹುದು , ಇದೆ . ಪತ್ರಿಕೆಗಳು ಆ ಕುರಿತ ಲೇಖನಗಳನ್ನು ಪ್ರಕಟಿಸಿವೆ) . ಕಾಡ್ಯನ ಮನೆಗಳಲ್ಲಿ , ಮೂಲಿಗರ ಮೂಲಸ್ಥಾನಗಳಲ್ಲಿ ನಾಗರಪಂಚಮಿ ಆರಾಧನೆ ಇರುವುದಿಲ್ಲ . ಈ ಆರಾಧನಾ ಉಳಿಕೆಗಳನ್ನು ಮತ್ತು ಅಲ್ಲಿಯ ವಿಧಿಯಾಚರಣೆಗಳನ್ನು ಆಧರಿಸಿ "ನಾಗರಪಂಚಮಿ ತುಳುನಾಡಿನ ನಾಗಾರಾಧನಾ ಪರ್ವ ದಿನವೇ" ಎಂಬ ಸಂಶಯ ಬರುತ್ತದೆ . ಇವುಗಳೆಲ್ಲ ಪುರಾತನ ಬನಗಳು , ಮೂಲದ ಜನವರ್ಗದವರ ಆರಾಧನಾ ನೆಲೆಗಳು ಎಂಬುದು ಮತ್ತಷ್ಟು ಮೇಲಿನ ಊಹೆಗೆ ಪುಷ್ಟಿ ನೀಡುತ್ತದೆ . ನಮ್ಮಲ್ಲಿದ್ದ ,ಈಗಲೂ ಉಳಿದಿರುವ 'ಬೇಷದ ತನು" ಎಂಬ ಆಚರಣೆ ಈ ಸಂಶಯವನ್ನು ದೃಢಪಡಿಸುತ್ತದೆ .ಅಂದರೆ ಕೃಷಿ - ಬೇಸಾಯಕ್ಕೆ ಪೂರ್ವಭಾವಿಯಾಗಿ ನಮ್ಮ ದೈವ - ದೇವರನ್ನು‌ ಪೂಜಿಸುವ ಪದ್ಧತಿಯೊಂದು ನಮ್ಮಲ್ಲಿದೆ . ಅದಕ್ಕಾಗಿಯೇ ಬೇಷದ ತನು - ತಂಬಿಲ ನಮ್ಮಲ್ಲಿ ಮುಖ್ಯವಾದುದು. ಪಗ್ಗು ತಿಂಗಳು ಬರುವ ಸಂಕ್ರಮಣ (ಮೇಷ ಸಂಕ್ರಮಣ) ಎಂದರೆ 'ಪಗ್ಗು ಬರ್ಪಿ ಸಂಕ್ರಾಂದಿ'ಯಂದು ಆಚರಣೆಗಳು , ತನು ಹೊಯ್ಯುವ ವಿಧಿಗಳು ನಡೆಯುವ ಬನಗಳು ಗುರುತಿಸಲ್ಪಟ್ಟಿವೆ . ಹಾಗೆಯೇ ಇಂತಹ ಅಪೂರ್ವ ನಾಗಬನಗಳು ವೈದಿಕೀಕರಣಕ್ಕೆ ಮತ್ತು ವೈಭವೀಕರಣಕ್ಕೆ ಒಳಗಾಗುತ್ತಿವೆ . ಇದು ವೈದಿಕಾನುಕರಣೆಯ ಪ್ರಭಾವದಿಂದ . ನಮ್ಮ ಕಾಳಜಿ ಆರಾಧನಾ ವಿಧಾನದ ಮೂಲ ಮತ್ತು ವೈವಿಧ್ಯತೆಯ ಅನ್ವೇಷಣೆ ಅಥವಾ ತಿಳಿದುಕೊಳ್ಳುವುದೇ ಹೊರತು ಆಕ್ಷೇಪಗಳಲ್ಲವಲ್ಲ . ನಾಗನಿಗೆ 'ಅಭಿಷೇಕ'ವಲ್ಲ , ತನು ಹೊಯ್ಸುವುದು ( ತನು ಮಯಿಪಾವುನು). 'ಪ್ರಸನ್ನಪೂಜೆಯಲ್ಲ ; ತಂಬಿಲಕಟ್ಟಾವುನು . "ತನು ಮಯಿಪಾವೊಡು ತಂಬಿಲಕಟ್ಟಾವೊಡು" ಎನ್ನವುದೇ ನಾಗಸ್ಥಾನ - ಮೂಲತಾನಗಳ ಸಂದರ್ಶನದ ಉದ್ದೇಶವಾಗಿರುತ್ತದೆ . | 'ನಾಗಬನ'ಗಳು 'ವನ'ಗಳಾಗಿಯೇ ಇರಲಿ | ‌ ‌ ಮಾನವ ವಾಸ್ತವ್ಯದ ಹರವು ವಿಸ್ತಾರವಾಗುತ್ತಿರುವಂತೆ ಅಥವಾ ನಾಗ ಹರಿದಾಡುವುದು ಹೆಚ್ಚಾದಾಗ , ದರ್ಶನವಾದಾಗ ನಾಗ ಪ್ರೀತ್ಯರ್ಥವಾಗಿ ನಾಗನನ್ನು ಮಾತ್ರ ಪ್ರತ್ಯೇಕವಾಗಿ ನಂಬುವ ಅನಿವಾರ್ಯತೆ ಬಂದೊದಗಿತು .ಆಗ ನಾಗಬನಗಳು ಅಸ್ತಿತ್ವಕ್ಕೆ ಬಂದಿರುವುದನ್ನು ಸಂಶೋಧಕರು ಗಮನಿಸಿದ್ದಾರೆ . ಮಾನವ ಸಂಕಲ್ಪ - ಪ್ರಕೃತಿ ನಿರ್ಮಿಸಿದ ,ಶ್ರದ್ಧೆಯಿಂದ ಕಾಪಿಟ್ಟನಾಗ ಬನ ಎಂದರೆ ,ಅದೊಂದು ದಟ್ಟವಾದ ಅರಣ್ಯದ ಸಣ್ಣ ಮಾದರಿ . ಇದೊಂದು ಸುರಕ್ಷಿತ ಪರಿಸರ . ಮಾನವ ಅಭಿಯೋಗವಾಗದ ಒಂದು ನಾಗ ಬನದಲ್ಲಿ ಕನಿಷ್ಠ 50-60 ವೃಕ್ಷ - ಗಿಡ - ಬಳ್ಳಿ - ಪೊದೆಗಳ ಪ್ರಭೇದ , 20-30 ಔಷಧೀಯ ಸಸ್ಯಗಳು ಇರುತ್ತವೆ ಎಂಬುದು ಸಂಶೋಧಕರ , ಪರಿಸರ ಆಸಕ್ತರ ಅಭಿಪ್ರಾಯ . ಇಲ್ಲಿ ಬೆಳೆದ ಮರ- ಗಿಡ- ಬಳ್ಳಿಗಳನ್ನು ಆಶ್ರಯಿಸಿ ಪಕ್ಷಿಸಂಕುಲ ನಿರ್ಭಯದಿಂದ ಬದುಕುತ್ತವೆ . ಕ್ರಿಮಿಕೀಟಗಳಿಗೂ ಇದು ಆಶ್ರಯಸ್ಥಾನ .ಹೀಗೆ ನಾಗಬನಗಳು ಜೀವ ವೈವಿಧ್ಯಗಳ ತಾಣವೂ ಹೌದು . ಇದು ನಿಜ ಅರ್ಥದ ವನ , ಬನ.ಮರ ಗಿಡಗಳಿಲ್ಲದ "ನಾಗ ಬನ"ದಲ್ಲಿ ನಾಗವೇದಿಕೆ , ನಾಗಗುಡಿ , ನಾಗಮಂದಿರಗಳು ನಿರ್ಮಾಣವಾಗುತ್ತಿರುವುದನ್ನು ಇತ್ತೀಚೆಗಿನ ನಾಲ್ಕೈದು ದಶಕಗಳಿಂದ ಕಾಣುತ್ತಿದ್ದೇವೆ . ತಂಪನ್ನು ಬಯಸಿ ತಂಪನ್ನು ಆಶ್ರಯಿಸುವ ಪ್ರಾಣಿ ನಾಗ ಹುತ್ತದ ಆಳದಲ್ಲಿ , ವಿಶಾಲವಾದ ಮರಗಳ ಬುಡದಲ್ಲಿ , ಒತ್ತೊತ್ತಾಗಿ ಗಿಡ ಮರಗಳು ಬೆಳೆದಿರುವಲ್ಲಿ , ಮನುಷ್ಯ ಸಂಚಾರವಿಲ್ಲದೆ ತರಗೆಲೆಗಳು ಬಿದ್ದು ದಪ್ಪನೆಯ ಹಾಸು ನಿರ್ಮಾಣವಾದಲ್ಲಿ ಅದರಡಿಯಲ್ಲಿ ನಾಗನ ವಾಸಸ್ಥಾನ . ಇಲ್ಲೆ ಸಂತಾನಾಭಿವೃದ್ಧಿ . ಇಂತಹ ಸಹಜವಾದ ವ್ಯವಸ್ಥೆ ಇದ್ದುದನ್ನು ಹಾಳುಗೆಡಹದೆ ರಕ್ಷಿಸಿದರೆ ಇದೂ ಒಂದು ರೀತಿಯ ನಾಗಾರಾಧನೆ .ಹಿಂದೆ ಆಟಿ( ಕರ್ಕಾಟಕ ಮಾಸ) ತಿಂಗಳ ಅಮಾವಾಸ್ಯೆಯಂದು ಮಾತ್ರ ನಾಗಬನಗಳ ಅನಗತ್ಯ ಬೆಳವಣಿಗೆಗಳನ್ನು ಮಾತ್ರ ಕಡಿದು ನಾಗರಪಂಚಮಿಗೆ ಬನ ಪ್ರವೇಶಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದರು . ಆದರೆ ಇದೇ ರೀತಿಯ ನಾಗಬನಗಳ ನಾಶ ಪ್ರಕ್ರಿಯೆ , ಆಶಯ ಮರೆತ ವೈಭವೀಕರಣ ಅವ್ಯಾಹತವಾಗಿ ನಡೆದರೆ ಮುಂದೊಂದು ದಿನ ಕಾಂಕ್ರೀಟ್ ಕಟ್ಟೆಯನ್ನೊ , ಗುಡಿಯನ್ನೊ , ಮಂದಿರವನ್ನೋ ನಾಗಬನವೆಂದು ನಮ್ಮ ಮಕ್ಕಳಿಗೆ ತೋರಿಸಬೇಕಾಗಬಹುದು. ಆಗ ಮಾತ್ರ ಮಕ್ಕಳು ' ಬನ ಎನ್ನುತ್ತೀರಿ ಎಲ್ಲಿದೆ ವನ' ಎಂದು ಪ್ರಶ್ನಿಸಿದರೆ ನಮ್ಮಲ್ಲಿ ಉತ್ತರ ಇದೆಯಾ ? ಪ್ರತಿ ವರ್ಷ ಕನಿಷ್ಠ ಒಂದೆರಡು ಬಾರಿಯಾದರೂ ನಾಗ ಮೂಲಸ್ಥಾನಕ್ಕೆ "ತನುತಂಬಿಲ" ಸೇವೆಸಲ್ಲಿಸಲು ಹೋಗುವ ನಾವು ನಾಗರಪಂಚಮಿಯ ಪರ್ವದಲ್ಲಿ ಮೂಲಕ್ಕೆ ಹೋಗುವಾಗ ಒಂದು ಗಿಡವನ್ನು ಕೊಂಡೊಯ್ಯುವ ,ಬನದ ಪರಿಸರದಲ್ಲಿ ನೆಟ್ಟು ವನ ಮಹೋತ್ಸವ ಆಚರಿಸೋಣ . ಆ ವೇಳೆಯಲ್ಲಿ ಗಿಡನೆಡುವ ಅಭಿಯಾನ ಎಲ್ಲೆಡೆ ನೆರವೇರುತ್ತಿರುತ್ತವೆ . ಈ ವರ್ಷ ಮೂಲಕ್ಕೆ ಹೋಗುವ‌ , ಗಿಡ ನೆಡುವ ಪ್ರಯತ್ನಬೇಡ . ‌‌‌‌ ‌ ‌ ‌‌ಬನಗಳ ಮರುನಿರ್ಮಾಣಕ್ಕೆ ಹೀಗೊಂದು ಅವಕಾಶವಿದೆ. ಬರಹ : ಕೆ .ಎಲ್ .ಕುಂಡಂತಾಯ