ಭಾರತೀಯ ಕ್ರಿಕೆಟ್ ಆಟಗಾರ ತನುಷ್ ಕೋಟ್ಯಾನ್ ಕಾಪು ಶ್ರೀ ಹೊಸ ಮಾರಿಗುಡಿ ಭೇಟಿ
Posted On:
26-07-2025 08:05PM
ಕಾಪು : ಭಾರತೀಯ ಕ್ರಿಕೆಟ್ ಆಟಗಾರ, ಮುಂಬೈ ತಂಡದಲ್ಲಿ ಮತ್ತು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಟಗಾರನಾಗಿ ಗುರುತಿಸಿಕೊಂಡಿದ್ದ ಕಾಪುವಿನ ಪಾಂಗಾಳ ಮೂಲದ ತನುಷ್ ಕೋಟ್ಯಾನ್ ಇಂದು ಕಾಪು ಮಾರಿಯಮ್ಮನ ದರುಶನ ಪಡೆದರು.
ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ನಾನು ಬಾಲ್ಯದಿಂದಲೂ ಇಲ್ಲಿಗೆ ಬರುತ್ತಿದ್ದೇನೆ, ಭಾರತೀಯ ತಂಡದಲ್ಲಿ ಸೇರ್ಪಡೆಯಾದ ನಂತರ ಮೊದಲ ಬಾರಿಗೆ ಇಲ್ಲಿಗೆ ಬರುತ್ತಿದ್ದೇನೆ, ದೇವಳದ ನವನಿರ್ಮಾಣ ಬಹಳಷ್ಟು ಸುಂದರವಾಗಿ ಮೂಡಿಬಂದಿದೆ, ದೇವಳದ ಕೆತ್ತನೆಗಳು ಮನಸೂರೆಗೊಳ್ಳುತ್ತವೆ, ಮುಂಬರುವ ಟೆಸ್ಟ್ ಪಂದ್ಯಾಟದಲ್ಲಿ 14 ಆಟಗಾರರಲ್ಲಿ ನಾನು ಕೂಡ ಒಬ್ಬ, ಈ ಪಂದ್ಯಾಟದಲ್ಲಿ ನನಗೂ ಕೂಡ ಅವಕಾಶ ಸಿಗಬೇಕೆಂದು ಶ್ರೀದೇವಿಯಲ್ಲಿ ಪ್ರಾರ್ಥಿಸಿದೆ ಎಂದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಾಧವ ಆರ್. ಪಾಲನ್, ರವೀಂದ್ರ ಮಲ್ಲಾರ್, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯ ಮತ್ತು ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.