ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಆಟೋಚಾಲಕಿ, ಆಶಾಕಾರ್ಯಕರ್ತೆ ರಾಜೀವಿಯವರ ಮಾನವೀಯ ಸೇವೆ ಅಪೂವ೯

Posted On: 25-07-2020 12:21PM

ರಾಜೀವಿ ಕರೋನಾ ವಾರಿಯರ್ ಮಾನವೀಯ ಸೇವೆ ಅಪೂವ೯ ಗುರುವಾರ ರಾತ್ರಿ 3 ಗಂಟೆಗೆ ಊರಿನ ಒಂದು ಹೆಣ್ಣು ಮಗಳಿಗೆ ಹೆರಿಗೆ ನೋವು ಕಾಣಿಸಿತು. ಆಶಾ ಕಾರ್ಯಕರ್ತೆ ರಾಜೀವಿ ಅವರು ಸ್ವತಃ ರಿಕ್ಷಾ ಚಲಾಯಿಸಿ ಪೆರ್ನಂಕಿಲ ದಿಂದ 18 ಕಿ.ಮಿ. ದೂರ ಇರುವ ಉಡುಪಿಯ ಬಿ.ಆರ್.ಶೆಟ್ಟಿ ಆಸ್ಪತ್ರೆಗೆ ಮಹಿಳೆಯನ್ನು ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ. ಗಭಿ೯ಣಿ ಮಹಿಳೆಯರಿಗೆ ಉಚಿತ ಸೇವೆ ನೀಡುತ್ತಿರುವ ಇವರು ಬಹುಮುಖ ಪ್ರತಿಭೆಯವರು ತನ್ನ ಬದುಕು ಮತ್ತೊಬ್ಬರಿಗೆ ಸಹಾಯವಾಗಬೇಕು. ಎನ್ನುವ ಪರಿಕಲ್ಪನೆ ಯಿಂದ ಊರಿನಲ್ಲಿಯೂ ಕೂಡ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ತನ್ನ ರಿಕ್ಷಾವನ್ನು ಕರೋನಾಕ್ಕೆ ಅನುಗುಣವಾಗಿ ಬದಲಾವಣೆ ಮಾಡಿ ವಿವಿಧ ಸಂದೇಶ ಉಳ್ಳ ಭಿತ್ತಿಪತ್ರ ಅಳವಡಿಸಿರುತ್ತಾರೆ. *ರಾಜೀವಿ ಅವರ ಮನದಾಳದ ಮಾತು* ನಾನು ಆಟೋ ಓಡಿಸಲು ಶುರುಮಾಡಿದಾಗ ಈ ಭಾಗದಲ್ಲಿ ಬಸ್ಸಿನ ಸೌಕರ್ಯ ಇರಲಿಲ್ಲ. ಹಾಗಾಗಿ, ಇತರರಿಗೆ ಸಹಾಯವಾದಂತಾಯಿತು, ನನ್ನ ಬದುಕಿಗೂ ಆಧಾರವಾದಂತಾಯಿತು ಎಂಬ ಧೋರಣೆಯಲ್ಲಿ ಈ ಕಾಯಕಕ್ಕೆ ಕಾಲಿರಿಸಿದೆ. ಈಗ ನಾನು ಆಟೋ ಚಾಲಕಿ ಮಾತ್ರವಲ್ಲ, ಆಶಾ ಕಾರ್ಯಕರ್ತೆಯಾಗಿಯೂ ದುಡಿಯುತ್ತಿದ್ದೇನೆ. ಈ ಭಾಗದ ಮಹಿಳೆಯರಿಗೆ ಹೆರಿಗೆನೋವು ಕಂಡುಬಂದರೆ, ರಾತ್ರಿಯಾಗಲಿ ಹಗಲಾಗಲಿ ನಾನು ಆಟೋ ಹತ್ತಿಬಿಡುತ್ತೇನೆ. ಒಮ್ಮೆ ಮಹಿಳೆಯೊಬ್ಬರಿಗೆ ಹೆರಿಗೆನೋವು ಬಂದಾಗ 108 ಆ್ಯಂಬುಲೆನ್ಸ್‌ ಗೆ ಫೋನ್‌ ಮಾಡಿದ್ದರು. ಆ್ಯಂಬುಲೆನ್ಸ್‌ ಬರುವುದು ತಡವಾದಾಗ, ನಾನೇ ಆಟೋದಲ್ಲಿ ಅವರನ್ನು ಕರೆದೊಯ್ದೆ. ತುಸು ದೂರ ಚಲಿಸುವಾಗ ಎದುರಿನಿಂದ ಆ್ಯಂಬುಲೆನ್ಸ್‌ ಬಂತು. ಗರ್ಭಿಣಿಯನ್ನು ಆ್ಯಂಬುಲೆನ್ಸ್‌ ಹತ್ತಿಸಿ ಮತ್ತೈದು ನಿಮಿಷದಲ್ಲಿಯೇ ಹೆರಿಗೆ ಆಯಿತು. ಈ ಘಟನೆ ಪತ್ರಿಕೆಗಳಲ್ಲಿಯೂ ವರದಿಯಾಗಿತ್ತು. ಆ ಮಗು ಈಗ ನಾನು ಕೆಲಸ ಮಾಡುವ ಅಂಗನವಾಡಿಗೆ ಬರುತ್ತಿದೆ. ಮಗುವಿನ ಮುಖ ನೋಡುವಾಗ ಬಹಳ ಖುಷಿ ಆಗುತ್ತದೆ. ಆಟೋ ಚಾಲನೆ ಆರಂಭದ ದಿನಗಳಲ್ಲಿ ಅಡೆತಡೆಗಳನ್ನು ಎದುರಿಸಿದ್ದೇನೆ. ಆದರೂ ಯಾವುದನ್ನೂ ಲೆಕ್ಕಿಸದೆ ನನ್ನ ಕಾಯಕವನ್ನು ಮುಂದುವರಿಸಿದೆ. ಕೆಲವೊಮ್ಮೆ ರಾತ್ರಿ ಹೊತ್ತು ಆಟೋ ಅಡ್ಡಹಾಕಿದ ಘಟನೆಗಳೂ ನಡೆದಿವೆ. ಆದರೆ ನಾನು ರಾತ್ರಿ ಎಲ್ಲಿಯೂ ಆಟೋ ನಿಲ್ಲಿಸುವುದೇ ಇಲ್ಲ. ಎಲ್ಲವನ್ನೂ ಎದುರಿಸಿ ಮುನ್ನುಗ್ಗಿದ ಮೇಲೆ ತೊಂದರೆ ಕೊಡುವವರೆಲ್ಲ ಹಿಮ್ಮೆಟ್ಟಿದ್ದಾರೆ. ಈಗ ಸಮಾಜಮುಖಿಯಾಗಿಯೂ ನಾನು ಕೆಲಸ ನಿರ್ವಹಿಸುತ್ತಿದ್ದೇನೆ. ಪ್ರಧಾನಮಂತ್ರಿ ಗಳ ಸ್ವಚ್ಛತಾ ಅಭಿಯಾನದ ಮಾಸ್ಟರ್‌ ಟ್ರೈನರ್‌ ಆಗಿದ್ದೇನೆ. ಕೊಡಿಬೆಟ್ಟು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಸಂಗ್ರಹ ಮಾಡುವ ವಿಂಗಡಿಸುವ ಕೆಲಸ ಮಾಡುತ್ತೇನೆ. ಸ್ತ್ರೀಶಕ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಲಸಗಳಲ್ಲಿ ಸಕ್ರಿಯಳಾಗಿದ್ದೇನೆ. ಹೀಗೆ ಬಹುಮುಖಿಯಾಗಿ ಕೆಲಸಮಾಡಲು ಧೈರ್ಯ ನನಗೆ ಕೊಟ್ಟಿದ್ದು ಇದೇ ಆಟೋ. ಇನ್ನೊಂದು ಆಟೋ ಖರೀದಿಸಿ, ಅದನ್ನು ಇನ್ನೊಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದೇನೆ. ಆಟೋರಿಕ್ಷಾದಲ್ಲಿ ದೂರದೂರಿಗೆ ಪ್ರಯಾಣಿಸು ವುದು ನನಗೆ ಖುಷಿ ಅನಿಸುತ್ತೆ, ನನ್ನ ತವರುಮನೆ ಸುಳ್ಯದಲ್ಲಿದೆ ನಾವೆಲ್ಲ ರಿಕ್ಷಾದಲ್ಲಿಯೇ ಸುಳ್ಯಕ್ಕೆ ಹೋಗುತ್ತೇವೆ. ಧರ್ಮಸ್ಥಳ, ಬೆಳ್ತಂಗಡಿ ಮುಂತಾದ ಕಡೆಗೂ ರಿಕ್ಷಾದಲ್ಲಿಯೇ ಪ್ರಯಾಣಿಸಿದ್ದೇನೆ. ದೂರದ ಪ್ರಯಾಣ ಎಂದರೆ ನನಗೆ ಇಷ್ಟವೇ ಎಂದು ಹೇಳುತ್ತಾರೆ. ಹೀಗೆ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಾಜೀವಿಯವರು ಹಲವಾರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಅದೆಷೋ ಮಹಿಳೆಯರು ಚಾಲಕ ಕೆಲಸ ನಿವ೯ಹಿಸಲು ಹಿಂಜರಿಯುವ ಈ ಸಂದಭ೯ದಲ್ಲಿ ಅತ್ಯಂತ ಗಟ್ಟಿಮನಸ್ಸಿನಿಂದ ಈ ಚಾಲಕ ವೃತ್ತಿಯನ್ನು ನಡೆಸುತ್ತಿದ್ದಾರೆ. ಸರಕಾರ ಇವರ ಕೆಲಸಗಳನ್ನು ಗುರುತಿಸಿ ಗೌರವಿಸಬೇಕಾಗಿದೆ. ಈ ರೀತಿಯ ಗಟ್ಟಿ ಮನಸ್ಸಿನ ಕರೋನಾ ವಾರಿಯರ್ಸ್ ನಿಂದ ಈ ಕರೋನಾ ವ್ಯಾಧಿ ಸಮಥ೯ವಾಗಿ ಎದುರಿಸಲು ದೇಶಕ್ಕೆ ಸಾಧ್ಯವಾಗಿದೆ.ಇವರಿಗೆ ಜಿಲ್ಲಾಡಳಿತ ಗುರುತಿಸಿ ಪ್ರೋತ್ಸಾಹ ನೀಡಲಿ ಎನ್ನುವುದು ನಮ್ಮ ಆಶಯವಾಗಿದೆ. ಈಗಾಗಲೇ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ರವರು ತಮ್ಮ ಟ್ವಿಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ರಾಘವೇಂದ್ರ ಪ್ರಭು ಕವಾ೯ಲು