ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಭ್ರಾತೃ - ಭಗಿನಿ ಬಾಂಧವ್ಯದ ಸಂಕೇತವೇ ರಕ್ಷಾಬಂಧನ - ಕೆ ಎಲ್ ಕುಂಡಂತಾಯ

Posted On: 02-08-2020 08:23PM

ಸಹೋದರ - ಸಹೋದರಿ‌ ನಡುವಿನ ಭಾವನಾತ್ಮಕ ಬಾಂಧವ್ಯದ ಸಾಕಲ್ಯ ಸಾಕ್ಷಾತ್ಕಾರವೇ 'ರಕ್ಷಾಬಂಧನ' . 'ಸಹಭವ'ರಲ್ಲಿ ಬದ್ದವಾಗಿರುವ ಬಂಧವೇ ಸಾರ್ವತ್ರಿಕವಾಗುತ್ತಾ ಸಮಾಜದಲ್ಲಿ ಸರ್ವವ್ಯಾಪಿಯಾಗುವಷ್ಟು ಅರಳುವ , ದೇಶದಾದ್ಯಂತ ವ್ಯಾಪಿಸುವ ಆಚರಣೆಯೇ 'ರಕ್ಷಾಬಂಧನ" ; ಇದು ಭಾರತೀಯ ಸಂಸ್ಕೃತಿಯ ಸೊಗಸು. ದೇಶದ ಇತಿಹಾಸದಲ್ಲಿ ಅನಿರೀಕ್ಷಿತ ಪರಿವರ್ತನೆಗೆ , ದೇಶದ ಸಂಸ್ಕಾರ ವಿಶ್ವ ಸಹೋದರತೆಯ ಎತ್ತರಕ್ಕೆ ಏರುವುದಕ್ಕೆ "ರಾಖಿ" ಕಾರಣವಾಗುವುದು ಒಂದು ಅದ್ಭುತ ಮನೋಧರ್ಮದ ದರ್ಶನ. ಅದೇ ಭಾರತೀಯ ಜೀವನ ವಿಧಾನದ ವೈಶಾಲ್ಯತೆ . ಇದೇ 'ಭ್ರಾತೃ - ಭಗಿನಿ ಬಾಂಧವ್ಯ ಬಂಧನ'. "ಪರನಾರಿ ಸೋದರ" ಇದೊಂದು ಪ್ರತಿಜ್ಞೆಯಾಗಿ ಪುರಾಣಗಳಲ್ಲಿ , ದೇಶದ ಇತಿಹಾಸದಲ್ಲಿ ಕಾಣಸಿಗುವ ಒಂದು ರೋಚಕ ಸ್ವೀಕಾರ . ಇದು ಒಂದು "ಮೌಲ್ಯ"ವಾಗಿ ಆಚರಿಸಲ್ಪಟ್ಟು 'ಸಂದೇಶ'ವಾಗುವ ಶೈಲಿ ನಮ್ಮ ನೆಲದ ವ್ಯಕ್ತಿತ್ವಗಳ ಹೃದಯಶ್ರೀಮಂತಿಕೆ . ನಡೆದುಹೋದ ಸಂಗತಿ, ವರ್ತಮಾನದ ಆಚಾರ - ವಿಚಾರ ,ಭವಿಷ್ಯಕ್ಕೆ ಮುಂದುವರಿಯುವ "ಬಾಂಧವ್ಯ ಬಂಧನ‌" . ಇಂತಹ ಸಂಸ್ಕಾರಗಳು ನಮ್ಮ ಬದುಕಿನ ಕ್ರಮಕ್ಕೆ , ಮನಸ್ಸಿನ ಆಲೋಚನೆಗಳಿಗೆ ಪ್ರತ್ಯಕ್ಷ ಸಾಕ್ಷಿ . ಇಂತಹ ನೂರಾರು ಮೌಲ್ಯಗಳಲ್ಲಿ 'ರಕ್ಷಾಬಂಧನ' ಒಂದು. ದೇಶದಲ್ಲಿ ನೆರವೇರುವ "ರಾಖೀ" ಅತ್ಯಂತ ಜನಪ್ರಿಯ ನಡವಳಿಕೆ . ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ತಮ್ಮ ಸಹೋದರರಿಗೆ ಸಹೋದರಿಯರು ರಾಖೀ ಕಟ್ಟುವ ಮೂಲಕ 'ನಮ್ಮ ಮಾನ - ಪ್ರಾಣ ಉಳಿಸುವ ಹೊಣೆ ನಿಮ್ಮದು' ಎಂದು ನೆನಪಿಸುತ್ತಾರೆ . ಉಡುಗೊರೆ ಪಡೆಯುತ್ತಾರೆ . ರಾಖೀ ಕಟ್ಟುವ ಸಿಹಿ ತಿನ್ನಿಸಿ - ತಿನ್ನುವ ,ಉಡುಗೊರೆ ಪಡೆಯುವ ಈ ಭಾವನಾತ್ಮಕ ಪರ್ವದಿನವು ಮನೆಯೊಳಗೆ ಒಡಹುಟ್ಟಿದ ಸಹೋದರ - ಸಹೋದರಿಯರ ನಡುವೆ ಸಂಭ್ರಮಿಸುವುದಿಲ್ಲ ಬದಲಿಗೆ ಒಂದು ನೆರಕರೆಯನ್ನು ಒಂದು ವ್ಯಾಪ್ತಿಯನ್ನು ಅಲ್ಲ ಇಡೀ ದೇಶದಾದ್ಯಂತ ವಿಜೃಂಭಿಸುತ್ತಿದೆ . ಸಹಭವರಾಗ ಬೇಕಿಲ್ಲ , ಅಂತಹ 'ಪವಿತ್ರ ಭಾವಸ್ಪುರಣೆ' ಸಾರ್ವತ್ರಿಕವಾಗುತ್ತಿರುವುದು ನಮ್ಮ ಸಾಂಸ್ಕೃತಿಕ ಭವ್ಯತೆ . ‌‌‌‌ ಸಹೋದರ ಭಾವದ ವೈಶಾಲ್ಯತೆ ‌‌ ಒಡಹುಟ್ಟಿದವರೊಂದಿಗೆ ಸಮಾಜದ 'ಸ್ತ್ರೀ'ಯರೆಲ್ಲ ತನ್ನ ಸೋದರಿಯರು ಎಂಬ‌ ಉದಾತ್ತ ಭಾವದೊಂದಿಗೆ ಚಿತ್ತಶುದ್ಧಿಯ ಜೀವನಕ್ಕೆ "ರಾಖೀಬಂಧನ" ಇಂಬು ಕೊಡುತ್ತದೆ .ಅನಿವಾರ್ಯ ಆಪತ್ಕಾಲದಲ್ಲಿ ಯಾವಳೇ ಸ್ತ್ರೀಯ ಮಾನ - ಪ್ರಾಣಗಳ ರಕ್ಷಣೆಗೆ ಪ್ರಾಣಾರ್ಪಣೆಗೂ ಸಿದ್ಧನಾಗುವ ಪುರುಷನ ಕರ್ತವ್ಯವಾದರೂ ಅದನ್ನು ರೂಢಿಸಿಕೊಳ್ಳುವ ಮನಃಸ್ಥಿತಿ ಏರ್ಪಡಲು ರಕ್ಷಾಬಂಧನ - ರಾಖೀಬಂಧನ ಆಚರಿಸಲ್ಪಡುತ್ತದೆ . 'ರಕ್ಷಾಬಂಧನ'ಕ್ಕೆ ಮೀಸಲಾದ ದಿನ ಶ್ರಾವಣದ ಹುಣ್ಣಿಮೆ .ಪ್ರತಿ ಹುಣ್ಣಿಮೆಯೂ ಚಂದ್ರ ಪೂರ್ಣ ವೃದ್ಧಿಯೊಂದಿಗೆ ರಾರಾಜಿಸುವ ದಿನ . ಚಂದ್ರ ಮನಃಕಾರಕನಾದುದರಿಂದ ,ಹುಣ್ಣಿಮೆಯೇ ಮನಸ್ಸಿನ ಮೇಲೆ ಪೂರ್ಣ ಪ್ರಮಾಣದ ಪರಿಣಾಮ ಬೀರುವ ಕಾಲವಾಗಿರುವುದರಿಂದ ಮನಸ್ಸಿನ ಭಾವ ಸಂಬಂಧಿಯಾದ ನಿರ್ಧಾರಕ್ಕೆ ಸಕಾಲವೆಂದು ತಿಳಿಯಬಹುದಲ್ಲ. ಶ್ರಾವಣ ಮಾಸವೂ ಒಂದು ಪ್ರೇರಣೆ ಸಹಜವಾಗಿ ಒದಗುವ ಶ್ರಾಯ. ನಾಡಿಗೆ ,ಬೀಡಿಗೆ ಬರುವ ಶ್ರಾವಣ ಮನಸ್ಸಿಗೆ ಬಾರದೆ ಇದ್ದೀತೆ ? , ಅದೇ ಶ್ರಾವಣದ ಕವಿ ಬೇಂದ್ರೆಯವರ "ಬಂತು ಶ್ರಾವಣ..." ಲವಲವಿಕೆ ತುಂಬಿದ ಉದ್ಗಾರ . ಇದೇ ಭಾವಗಳು ಬಿರಿಯುವ ,ಸುಗಂಧ ಬೀರುವ ಸುಸಮಯ . ರಾಖೀ ಎಷ್ಟೇ ವೈವಿಧ್ಯದ್ದಾದರೂ , ರಂಗುರಂಗಿನದ್ದಾದರೂ ಇದರ ಬಂಧನ ಪ್ರಕ್ರಿಯೆ ದಾರದ ಮೂಲಕ ತಾನೇ ? ಈ ದಾರ ಒಂದು ಕರ್ತವ್ಯಕ್ಕೆ ,ಜವಾಬ್ದಾರಿಗೆ‌ ನಿಯೋಜಿಸಲ್ಪಟ್ಟ ಭಾವವನ್ನು ಮೂಡಿಸಿದರೆ ಆಚರಣೆಯ ಆಶಯ ನೆರವೇರಿದಂತೆ . ವ್ರತ , ಪೂಜೆ , ಮಹೋತ್ಸವ , ಮಹಾಯಾಗ ,ಮದುವೆ ಮುಂತಾದ ಉತ್ಸವಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸಿ 'ಕಂಕಣಬಂಧ'ದಿಂದ ದೀಕ್ಷೆ ಸ್ವೀಕರಿಸುವ ವಿಧಿಯೊಂದು ದೇಶದಲ್ಲಿ ರೂಢಿಯಲ್ಲಿದೆ .ದುಷ್ಟ ಶಕ್ತಿಗಳು ಸತ್ಕರ್ಮಗಳಿಗೆ ಆತಂಕ ಒಡ್ಡದಿರಲಿ ಎಂಬುದು ಇಲ್ಲಿಯ 'ನಾಂದೀ' . ಸತ್ಕಾರ್ಯ ಆರಂಭದಿಂದ ಸಮಾರೋಪ ಪರ್ಯಂತ ಕಂಕಣಬಂಧ ಕಟ್ಟಿಸಿಕೊಳ್ಳುವವರು ದೀಕ್ಷಾಬದ್ಧರೆಂದು ಅರ್ಥ . ಅನ್ಯ ಕಾರ್ಯಗಳ ಬಗ್ಗೆ ಆಲೋಚಿಸದೆ ಸಂಪೂರ್ಣ ಸಂಕಲ್ಪಿತ ಸತ್ಕಾರ್ಯದಲ್ಲೇ ನಿರತರಾಗಿಬೇಕೆಂಬುದು ಉದ್ದೇಶ . ಜ್ಞಾನ ಪೂರಕ ಉಪಾಕರ್ಮ 'ರಕ್ಷಾಬಂಧನ' ಹಾಗೂ 'ಉಪಾಕರ್ಮ' ವಿಧಿಗಳಲ್ಲಿ ಒಂದು ಭಾವ ಸಂಬಂಧಿಯಾದರೆ ಮತ್ತೊಂದು ಜ್ಞಾನ ಶುದ್ಧಿಯನ್ನು ಎಚ್ಚರಿಸುವ ವಿಶಿಷ್ಟ ಆಚರಣೆಗಳು . ಸಿದ್ಧತೆ ,ಯಜ್ಞೋಪವೀತ ಬದಲಾಯಿಸಿ ಹಾಕಿಕೊಳ್ಳುವುದು ಮುಂತಾದ ಅರ್ಥ ನಿಷ್ಪತ್ತಿಯ ಉಪಾಕರ್ಮವು ವಾರ್ಷಿಕ ಧಾರ್ಮಿಕ ವಿಧಿಯಾಗಿ ,ಕಟ್ಟುಪಾಡಾಗಿ ಯಜ್ಞೋಪವೀತ ಧರಿಸುವ ವರ್ಗಕ್ಕೆ ವಿಶಿಷ್ಟ ಆಚರಣೆ . ಶ್ರಾವಣ ಮಾಸದ ಹುಣ್ಣಿಮೆಯಂದು ಹಾಗೂ ಶ್ರಾವಣಮಾಸದಲ್ಲಿ ಸನ್ನಿಹಿತವಾಗುವ ಶ್ರವಣ ನಕ್ಷತ್ರದಂದು ಉಪಾಕರ್ಮ ನಡೆಯುತ್ತದೆ . ಋಗ್ವೇದ ,ಯಜುರ್ವೇದ ,ಸಾಮವೇದ ಶಾಖೆಗಳವರಿಗೆ ಪ್ರತ್ಯೇಕ ದಿನಗಳಲ್ಲಿ ಉಪಾಕರ್ಮ ಆಚರಿಸಲ್ಪಡುತ್ತದೆ .ಆದರೆ ಉಪಾಕರ್ಮದ ಉದ್ದೇಶ ಹಾಗೂ ನಿರ್ವಹಣೆಯು ಬಹುತೇಕ ಸಮಾನವಾಗಿಯೇ ಇದೆ . ಉಪನಯನ ಸಂಸ್ಕಾರದೊಂದಿಗೆ ವೇದಾಧ್ಯಯನದ ಅಧಿಕಾರವನ್ನು ಪಡೆಯುವ ವಟು ಗುರುಕುಲಗಳಲ್ಲಿ ಮಾಘ ಮಾಸದಿಂದ ಆರುತಿಂಗಳು ವ್ಯಾಕರಣ , ಜ್ಯೋತಿಷ್ಯ ಮುಂತಾದುವುಗಳ ಅಧ್ಯಯನದಲ್ಲಿ ನಿರತನಿರುತ್ತಾನೆ . ಶ್ರಾವಣದಿಂದ ಮುಂದಿನ ಆರುತಿಂಗಳು ವೇದಾಧ್ಯಯನಕ್ಕೆ ಮೀಸಲಾಗಿರುತ್ತದೆ .ಆರು ತಿಂಗಳು ವೇದಾಧ್ಯಯನ ಮಾಡದಿರುವ ಕಾರಣಕ್ಕೆ ಪುನಃ 'ವೇದಾಧ್ಯಯನದ ಅಧಿಕಾರ ಸಿದ್ಧಿ'ಗಾಗಿ ಉಪಾಕರ್ಮ ವಿಧಿ ನೆರವೇರುತ್ತದೆ . ಮತ್ತೊಂದು ತಿಳಿವಳಿಕೆಯಂತೆ ಕೃಷಿ ಸಂಬಂಧಿಯಾದ ಕೆಲಸಕಾರ್ಯಗಳಿಗಾಗಿ‌ ವೇದ ಅಧ್ಯಯನ - ಅಧ್ಯಾಪನ ಸ್ಥಗಿತಗೊಳ್ಳುತ್ತದೆ , ಕೃಷಿಕಾರ್ಯ ಮುಗಿದ ಬಳಿಕ ವೇದಾಧ್ಯಯನ ಮುಂದುವರಿಸಲು ಅಧಿಕಾರ ಸಿದ್ಧಿಗಾಗಿ ಉಪಾಕರ್ಮ . ಬಹುಶಃ ಋಷಿಪರಂಪರೆ - ಗುರುಕುಲ ಪದ್ಧತಿಯಿದ್ದ ಕಾಲದಲ್ಲಿ ಇಂತಹ ಕ್ರಮ ಇದ್ದಿರಬಹುದಾದುದನ್ನು ಒಪ್ಪಬಹುದು. ಪುಣ್ಯಾಹ ,ಸಪ್ತ ಋಷಿಗಳ ಪೂಜೆ , ಉಪಾಕರ್ಮ ಹೋಮವನ್ನು 'ದಧಿ' ಮತ್ತು 'ಸತ್ತು'(ಅರಳು)ಗಳ ಮಿಶ್ರಣದ ದ್ರವ್ಯದಿಂದ ಹಾಗೂ ಉತ್ಸರ್ಜನ ಹೋಮವನ್ನು ಚರು ದ್ರವ್ಯದಿಂದಲೂ ನಡೆಸಲಾಗುತ್ತದೆ . ಪ್ರಧಾನ ಹೋಮದ ಬಳಿಕ ಹೋಮದ್ರವ್ಯದ ಶೇಷ ಭಾಗವಾದ 'ದಧಿ - ಸತ್ತು' ಸ್ವೀಕರಿಸಿ ನೂತನ ಯಜ್ಞೋಪವೀತ ಧಾರಣೆ . ಬಳಿಕ ಬ್ರಹ್ಮಯಜ್ಞ ,ದೇವ, ಋಷಿ ,ಆಚಾರ್ಯ‌, ಪಿತೃ ತರ್ಪಣ(ಅಧಿಕಾರವುಳ್ಳವರು ಮಾತ್ರ)ಕೊಡುವುದು . ಹೀಗೆ ಉತ್ಸರ್ಜನೆಯಿಂದ ಮರಳಿ ವೇದಾಧ್ಯಯನ ಆರಂಭಿಸುವುದಕ್ಕೆ ಸಿದ್ಧತೆಯಾಗಿಯೂ , ಮಾನಸಿಕ , ದೈಹಿಕ ಶುದ್ಧಿಗಾಗಿಯೂ ಈ ಕ್ರಿಯೆ ನಡೆಯುತ್ತದೆ ( ಋಗ್ವೇದ ಕ್ರಮ ) . ವೇದ ಶಾಖೆಯನ್ನು ಆಧರಿಸಿ ಉಪಾಕರ್ಮ ವಿಧಿ ನಿರ್ವಹಣೆಯಲ್ಲಿ ವ್ಯತ್ಯಾಸ ಸಾಮಾನ್ಯವಾದುದು .ಪಾಠಾಂತರಗಳು ಬೇಕಾದಷ್ಟು ಇವೆ . ಆಕ್ಷೇಪ ಮತ್ತು ವಾದಕ್ಕೆ ಇದಕ್ಕಿಂತ ಪ್ರಶಸ್ತವಾದ ಕ್ಷೇತ್ರ ಬೇರೆ ಇಲ್ಲ . ಪುರೋಹಿತ ಪುರೋಹಿತರಲ್ಲಿ ಅನುಸಂಧಾನ ವ್ಯತ್ಯಾಸಗಳನ್ನು ಗಮನಿಸಲಾಗಿದೆ . ಋಷಿ ಪೂಜೆ ಪ್ರಧಾನ .ಏಕೆಂದರೆ ವೇದ ಮಂತ್ರಗಳೆಲ್ಲವೂ ಋಷಿ ದ್ರಷ್ಟವಾದುದು . ಋಷಿದ್ರಷ್ಟವಾದ ಮಂತ್ರಗಳ ಅಧ್ಯಯನ - ಅಧ್ಯಾಪನಕ್ಕೆ ಋಷಿಗಳ ಅನುಗ್ರಹ ಪ್ರಾಪ್ತಿಗಾಗಿ ಋಷಿಪೂಜೆ . ಯಜ್ಞೋಪವೀತದ ಬದಲಾವಣೆ ಎಂಬುದು ಸಾಂಕೇತಿಕ.ಆದರೆ ಜ್ಞಾನದ ತಿಳಿವಳಿಕೆಗೆ ನಿರಂತರ ಜಾಗೃತಿ ಮೂಡಿಸುವ ಧಾರ್ಮಿಕ ವಿಧಿಯಾಗಿ ಉಪಾಕರ್ಮ. ಈ ವಿಧಿಯನ್ನು ಮತ್ತು ಯಜ್ಞೋಪವೀತವನ್ನು ಗಮನಿಸಿದರೆ ಯಜ್ಞೋಪವೀತದ ಉದ್ದ , ಎಳೆಗಳು , ಇವುಗಳಿಗಿರುವ ಶಾಸ್ತ್ರಾಧಾರ ಮತ್ತು ಮಂತ್ರಗಳು , ಕರ್ಮಾಂಗಗಳು ಭವ್ಯ ಅಷ್ಟೇ ದಿವ್ಯ . ಉಪಾಕರ್ಮವು ಜ್ಞಾನದ ಉತ್ಕರ್ಷಕ್ಕಾಗಿ ಉಪಶ್ರುತವಾದ ವಿಧಿ .ಉಪಗ್ರಹಣದಿಂದ ಉತ್ಪನ್ನವಾಗುವ ಜ್ಞಾನವು ಸಮಾಜಕ್ಕೆ , ವಿಶ್ವಕ್ಕೆ ಕೊಡುಗೆಯಾದರೆ ಉಪಾಕರ್ಮ ಸಂಕುಚಿತವಾಗದೆ ವಿಶಾಲ ಅರ್ಥ ವ್ಯಾಪ್ತಿಯನ್ನು ಪಡೆದು ಮತ್ತಷ್ಟು ಗೌರವಾರ್ಹವಾದೀತು . ಬರಹ : ಕೆ.ಎಲ್ .ಕುಂಡಂತಾಯ