ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

"ಮರ್ಯಾದಾ ಪುರುಷೋತ್ತಮ" ಶ್ರೀ ರಾಮ - ಕೆ.ಎಲ್. ಕುಂಡಂತಾಯ

Posted On: 05-08-2020 08:04PM

ಸಂಸ್ಕೃತಿಯ ದ್ರಷ್ಟಾರರಾಗಿ , ಮನುಕುಲಕ್ಕೆ ಬದುಕಿನ ಸತ್ಪಥವನ್ನು ತೋರಿದ ಋಷಿಮುನಿಗಳು ತಮ್ಮ ತಪಸ್ಸಿನ ಫಲವನ್ನು ಕಾಡಿನಿಂದ ನಾಡಿಗೆ 'ಹರಿಸಿದರು' ಅಥವಾ 'ಹರಸಿದರು' .ಈ ರೀತಿಯಲ್ಲಿ ದಟ್ಟಾರಣ್ಯದಲ್ಲಿ ಅನುರಣಿಸಿ , ಮಹಾಮಂತ್ರವಾಗಿ ,ಕೋಗಿಲೆಯ ಇಂಚರದ ಮಾಧುರ್ಯದೊಂದಿಗೆ ನಾಡಿಗೆ ಕೇಳಿದ ಎರಡಕ್ಷರದ ಮಂತ್ರ "ರಾಮ". ಸಾವಿರಾರು ವರ್ಷಗಳ ನಿರಂತರ ಪಠನದ ಬಳಿಕ 'ರಾಮ' ಶಬ್ದ 'ರಾಮನಾಮ'ವಾಯಿತು , 'ಶ್ರೀ ರಾಮ' ಮಂತ್ರವಾಯಿತು .ಒಂದು ಮನೋಹರ ಬಿಂಬ ಸಿದ್ಧಗೊಂಡಿತು , ವಾಲ್ಮೀಕಿ ಆದಿ ಕವಿಯಾದರು . ಮಹರ್ಷಿ ವಾಲ್ಮೀಕಿಯು 'ರಾಮಾಯಣ' ಮಹಾಕಾವ್ಯದ ಮೂಲಕ ಜಗತ್ತಿಗೆ ನೀಡಿದ ಪರಿಪೂರ್ಣ ವ್ಯಕ್ತಿತ್ವ 'ರಾಮ'. ಭಾರತೀಯ ಸಂಸ್ಕೃತಿಯನ್ನು 'ರಾಮ' ಎಂಬ ಪ್ರತಿಮೆಯ ಮೂಲಕ ಸಮಗ್ರವಾಗಿ ಚಿತ್ರಿಸಿದ್ದು , ರಘುರಾಮನೆಂದೇ ಗುರುತಿಸಲ್ಪಟ್ಟ ದಾಶರಥಿಯದ್ದು , "ಮರ್ಯಾದಾ ಪುರುಷೋತ್ತಮನಾದ" ಶ್ರೀ ರಾಮಚಂದ್ರನದ್ದು . ಹಾಗಾಗಿಯೇ 'ರಾಮ' ಸಾಮಾನ್ಯ ಮಾನವನಾಗಿ ಜನಿಸಿ ದೇಶದಾದ್ಯಂತ , ಪ್ರಪಂಚದೆಲ್ಲೆಡೆ ವ್ಯಾಪ್ತನಾಗುತ್ತಾನೆ ,ಆದುದರಿಂದ 'ರಾಮ' ಎಂಬುದು ನಮಗೆ 'ಶ್ರೇಷ್ಠ' , 'ರಾಮ' ಎಂಬುದು 'ಪ್ರತಿಷ್ಠೆ'. ಬಳಸಿಕೊಂಡು ಪ್ರವಹಿಸುವ ಸರಯೂ ನದಿಯಿಂ‌ದ ಅಯೋಧ್ಯೆ ಪಾವನ ಭೂಮಿಯಾಗುತ್ತದೆ. ಇಂತಹ ನೆಲದಲ್ಲಿ‌ ಸೂರ್ಯವಂಶವೇ ಹಿನ್ನೆಲೆಯಾಗಿದ್ದ ಮಹಾರಾಜರಲ್ಲಿ 'ಸತ್ಯ'ಕ್ಕೆ ಬೇಕಾಗಿ ಸರ್ವವನ್ನೂ ತಿರಸ್ಕರಿಸಿ ,ಆಡಿದ ಮಾತಿಗೆ ತಪ್ಪದೇ ನಡೆದು ಅದ್ಭುತ ಮೌಲ್ಯವನ್ನು ಪ್ರತಿಪಾದಿಸಿದವರಿದ್ದರು , ದೇವಗಂಗೆಯನ್ನು ಧರೆಗಿಳಿಸಿದ ಪ್ರಯತ್ನಶೀಲ ಸಾಧಕರಿದ್ದರು, ಇಕ್ಷ್ವಾಕು ,ಸಗರ, ದಿಲೀಪ , ರಘು ಹೀಗೆ ಹತ್ತು ಹಲವು ಮಹನೀಯ ಮಹಾರಾಜರು ಅಷ್ಟೇ ಬೆಲೆಯುಳ್ಳ ಮಹತ್ತನ್ನು ಸಾಧಿಸಿದ್ದು , ರಾಜರಾದರೂ ರಾಜ ಋಷಿಗಳಾಗಿ ಮೆರೆದದ್ದು , ಸೂರ್ಯವಂಶದಲ್ಲಿ. ಇನವಂಶ ವಾರಿಧಿಗೆ ಪ್ರತಿಚಂದ್ರನಂತೆ ದೀರ್ಘ ಅವಧಿಗೆ ಅಯೋಧ್ಯೆಯನ್ನು ಆಳಿದ ದಶರಥನಿಗೆ ಋಷಿಕಲ್ಪರಾಗಿ ,ದೇವಕಲ್ಪರಾಗಿ ನಾಲ್ವರು ಗಂಡು ಮಕ್ಕಳು ಹುಟ್ಟುತ್ತಾರೆ ,ಅವರಲ್ಲಿ ರಾಮ ಒಬ್ಬ .ಪುತ್ರಕಾಮೇಷ್ಠಿ ಯಾಗವೇ ಇದಕ್ಕೆ ನೆರವೇರಿದ ಸತ್ ಕರ್ಮ. ಇಂತಹ ಭವ್ಯ 'ಐತಿಹಾಸಿಕ ಪರಂಪರೆ'ಯ ಹಿನ್ನೆಲೆಯೊಂದಿಗೆ ರಾಮನ ಬದುಕು ಆರಂಭವಾಗುತ್ತದೆ .

ವಸಿಷ್ಠ - ವಿಶ್ವಾಮಿತ್ರರೇ ಗುರುಗಳಾಗಿ ಹರಸಿದ ಪುಣ್ಯಾತ್ಮ 'ರಾಮ'. ಪರಸ್ಪರ ವಿರೋಧಿಗಳಾದ ಈ ಮಹರ್ಷಿಗಳ ಶಿಷ್ಯನಾಗುವುದು ಎಂದರೆ ಇದು ಎಂತಹ ದೈವ ಸಂಕಲ್ಪ , ಮನುಕುಲಕ್ಕೆ ಎಂತಹ ಸಂದೇಶ. ರಾಮನೆಂಬವನೊಬ್ಬನ ಜನನವಾಗುತ್ತದೆ ಎಂದು ರಾಮನ ಹುಟ್ಟಿನ ಶತಮಾನ ಶತಮಾನಗಳಷ್ಟು ಪೂರ್ವದಲ್ಲೆ ವೇದಿಕೆ ಸಿದ್ಧಗೊಂಡಿರುತ್ತದೆ - ಸಂದರ್ಭ ಸೃಷ್ಟಿ ಯಾಗಿರುತ್ತದೆ . ತಪಸ್ವಿ ಗೌತಮನಿಂದ ಶಪಿಸಲ್ಪಟ್ಟು ಶಿಲೆಯಾಗಿದ್ದ ಆತನ ಪತ್ನಿ ಅಹಲ್ಯೆಯು ರಾಮನ ಪಾದಸ್ಪರ್ಶದಿಂದ ಮರಳಿ ಶಿಲೆಯ ಜಡತ್ವದಿಂದ ಮುಕ್ತಿಯನ್ನು ಪಡೆದು ಕ್ರಿಯಾಶೀಲ ಋಷಿ ಪತ್ನಿಯಾಗಿ , ಪತಿವ್ರತೆಯಾಗಿ ಎದ್ದು ಬರುತ್ತಾಳೆ. ಈ ಪ್ರಕರಣ ಪ್ರಾಚೀನವಾದ ಒಂದು ಋಷಿ ದಂಪತಿಯ ಬದುಕನ್ನು ಮತ್ತೆ ಒಂದಾಗಿಸಿದ 'ರಾಮ' ಕೆಲವೇ ದಿನಗಳಲ್ಲಿ ತಾನು 'ಸೀತಾರಾಮ'ನಾಗುತ್ತಾನೆ .ಬಳಿಕ ಭಾರ್ಗವರಾಮರಿಂದ ಅನುಗ್ರಹಿತನಾಗುತ್ತಾನೆ .ಏಕಕಾಲದಲ್ಲಿ ಎರಡು ರಾಮರ ಅಗತ್ಯ ಈ ಕಾಲಕ್ಕೆ ಬೇಡ , ಭಾರ್ಗವರಾಮನಾದ ನಾನು ನೇಪಥ್ಯಕ್ಕೆ ಸರಿಯುತ್ತೇನೆ , ರಘುರಾಮನಾದ ನೀನೇ ಧರ್ಮ ರಕ್ಷಣೆಯ ಕಾರ್ಯ ಮುಂದುವರಿಸು ಎಂದು ನಿರ್ದೇಶಿಸಲ್ಪಡುತ್ತಾನೆ . ಆ ಮೂಲಕ ಮಾನವ ಸಹಜವಾಗಿ ಪೂರ್ವಸೂರಿ ಸಾಧಕರಿಂದ ಹಾಗೂ ಯುಗಪ್ರವರ್ತಕರಿಂದ ಶುಭಾಶೀರ್ವಾದ ಪಡೆಯುತ್ತಾನೆ .

ರಾಜರ್ಷಿ ಜನಕರಾಜನು ಯಾಗ ಮಾಡುವ ಉದ್ದೇಶದಿಂದ ಚಿನ್ನದ ನೇಗಿಲಿನಿಂದ ಭೂಮಿಯನ್ನು ಉಳುವಾಗ ಸೀತೆ ಸಿಗುತ್ತಾಳೆ ,ಅಂದರೆ ಯಾಗ ಸಂಕಲ್ಪದಲ್ಲೆ ಸೀತೆ ಜನಕನಿಗೆ ಮಗಳಾಗಿ ಪ್ರಾಪ್ತಳಾಗುತ್ತಾಳೆ . ದಶರಥ ಯಾಗದ ಫಲವಾಗಿ ರಾಮನ ಸಹಿತ ನಾಲ್ವರು ಮಕ್ಕಳನ್ನು ಪಡೆಯುತ್ತಾನೆ . ಎಂತಹ ಋಣಾನುಬಂಧ ಕಾರಣವಾಗಿ ಇವರೆಲ್ಲ ಒಂದಾಗುತ್ತಾರೆ.ಇದು ಕಾಲದ ಅಗತ್ಯ . ಅಯೋಧ್ಯೆಯ ಯುವರಾಜ ಪಟ್ಟಾಭೀಷೇಕಕ್ಕೆ ಮಂಗಳಸ್ನಾನದಿಂದ ಪುನೀತನಾದ ರಾಮನಿಗೆ ಪ್ರಾಪ್ತಿಯಾದದ್ದು ವನವಾಸದ ದೀಕ್ಷೆ , ಯುವರಾಜ ಸಿಂಹಾಸನವಲ್ಲ .ಇದು 'ಪಿತೃವಾಕ್ಯ ಪರಿಪಾಲನೆ'ಯಾಗಿ ರಾಮನಿಗೆ ಒದಗಿದ ಅವಕಾಶ . ಈ ಒಂದು ತಿರುವು ಕಾರಣವಾಗಿ ರಾಮ ಅಯೋಧ್ಯೆಯಿಂದ ಭರತವರ್ಷವನ್ನು ದಾಟಿ ಲಂಕೆಯವರೆಗೆ ತನ್ನ ವ್ಯಕ್ತಿತ್ವವನ್ನು ಸ್ಥಾಪಿಸುತ್ತಾನೆ . ಭಾರತೀಯ ಸಂಸ್ಕೃತಿಯ ಸಂದೇಶವನ್ನು‌ ಜಗದಗಲ ಸಾರುತ್ತಾನೆ . ಈ ವಿಸ್ತಾರವಾದ ಅಂದರೆ ಹದಿನಾಲ್ಕು ವರ್ಷಕಾಲದ 'ವನವಾಸ' ಎಂಬ ಹೆಸರಿನ 'ತಿರುಗಾಟ' ರಾಮನ ವ್ಯಕ್ತಿತ್ವಕ್ಕೆ ವೈಚಾರಿಕ ವೈಶಾಲ್ಯತೆಯನ್ನು ಒದಗಿಸಿಕೊಡುತ್ತದೆ. ಸೀತೆ ಆದರ್ಶ ಸತಿಯಾಗುತ್ತಾಳೆ . ಲಕ್ಷ್ಮಣ ಅಣ್ಣನ ತಮ್ಮನಾಗುತ್ತಾನೆ , ಶ್ರೀರಾಮ ಪಾದುಕೆಯನ್ನು ಸ್ವೀಕರಿಸಿದ ಭರತ ಭ್ರಾತೃ ಪ್ರೇಮಕ್ಕೆ ಜ್ವಲಂತ ಉದಾಹರಣೆಯಾಗುತ್ತಾನೆ ,ಶತ್ರುಘ್ನ ರಾಮ ಸೇವೆಯ ನಿರೀಕ್ಷೆಯಲ್ಲಿರುತ್ತಾನೆ .ಇದೆಲ್ಲ ಪುತ್ರಕಾಮೇಷ್ಠಿಯಲ್ಲಿ ದೊರೆತ ಒಂದೇ ಪಾತ್ರೆಯಲ್ಲಿದ್ದ ಪಾಯಸ ಭಕ್ಷದ ಫಲಗಳೇ ತಾನೆ . ವನಾಭಿಮುಖರಾದ 'ಸೀತಾ , ರಾಮ , ಲಕ್ಷ್ಮಣ'ರು ಗಂಗಾನದಿಯನ್ನು ದಾಟುತ್ತಾರೆ . ಗಂಗಾನದಿಯ ಹರಿಯುವಿಕೆಯ ಜುಳುಜುಳು ಸ್ವರದಲ್ಲಿ ರಾಮನಿಗೆ ಕೇಳಿಸುವುದು "ಮರಳಿ ಯತ್ನವ ಮಾಡು" ,'ಮರಳಿ ಯತ್ನವ ಮಾಡು' ಎಂಬ 'ರವ'. ಭಗೀರಥನ ಪ್ರಯತ್ನವು ಗಂಗೆಯ ಪ್ರವಹಿಸುವಿಕೆಯಲ್ಲಿ ನಾದವಾಗಿ ಸ್ಥಾಯಿಯಾಗಿದೆ ಎಂಬುದು ರಾಮನಿಗೆ ಪ್ರೇರಣೆಯಾಗುತ್ತದೆ . ಆದುದರಿಂದಲೇ ತ್ಯಾಗಕ್ಕೆ ,ನಿರ್ಲಿಪ್ತ ಭಾವಕ್ಕೆ ,ಮಹಾನ್ ಸಾಧನೆಯ ಆದರ್ಶಕ್ಕೆ ರಾಮನ ಬದುಕು ದೃಶ್ಯ ಕಾವ್ಯವಾಗುತ್ತದೆ .

ಬಹಳ ಮಂದಿ ಋಷಿಗಳಿಂದ ಅನುಗ್ರಹಿತನಾಗುತ್ತಾನೆ , ಕಾಲ್ನಡಿಗೆಯಲ್ಲಿ ಉತ್ತರದ ರಾಮ ದಕ್ಷಣದ ಗೋದಾವರಿ ನದಿಯ ದಡಕ್ಕೆ ಬಂದು ವಾಸಿಸುತ್ತಾನೆ. ‌ಸೀತಾಪಹಣವಾಗುತ್ತದೆ . ಸುಗ್ರೀವ ಸಖ್ಯವು ಆಂಜನೇಯನಿಂದಾಗುತ್ತದೆ ,ಶಬರಿಯ ಮಾತು ಸತ್ಯವಾಗುತ್ತದೆ . ಸೀತಾಪಹರಣವನ್ನು ತಡೆದು ಧರೆಗೆ ಉರುಳಿದ ಪಕ್ಷಿರಾಜ ಜಟಾಯುವಿನಿಂದ ಅಪಹರಣದ ಸೂಕ್ಷ್ಮ ತಿಳಿಯುವುದು .ವಾಲಿ ಬಲಾಢ್ಯನಾದರೂ ಸುಗ್ರೀವನ ಪಕ್ಷವಹಿಸಿ ಸಖ್ಯದ ಮಹತ್ವವನ್ನು ಜಗತ್ತಿಗೆ ತೋರಿಸುತ್ತಾನೆ .ಸೀತಾನ್ವೇಷಣೆ , ಸೇತುಬಂಧನ , ಲಂಕಾ ಪ್ರವೇಶ , ಅಂಗದ ಸಂಧಾನ ಹೀಗೆ ರಾಮಾಯಣ ಮುಂದುವರಿಯುತ್ತದೆ ರಾಮ - ರಾವಣರು ಯುದ್ಧಭೂಮಿಯಲ್ಲಿ ಮುಖಾಮುಖಿಯಾಗುತ್ತಾರೆ . ಯುದ್ಧದಲ್ಲಿ ಒಮ್ಮೆ ಪರಾಜಿತನಾಗುವ ರಾಮ ಸಹಜವಾಗಿ ನನ್ನಿಂದ ಈ ಕಾರ್ಯವಾಗದು ,ಎಲ್ಲರೂ ಮರಳಿಹೋಗಿ ಎಂದು ಸುಗ್ರೀವಾದಿಗಳಿಗೆ ಹೇಳುತ್ತಾನೆ , ವಿಭೀಷಣನಿಗೆ ವಾಗ್ದಾನದಂತೆ ಲಂಕೆಯ ಪಟ್ಟಕಟ್ಟುವಲ್ಲಿ ನಾನು ವಿಫಲನಾದೆ , ಕ್ಷಮಿಸು ಅಯೋಧ್ಯೆ ನನಗಾಗಿ ಕಾಯುತ್ತಿದೆ ನಿನಗೆ ಅಲ್ಲಿಯ ಪಟ್ಟ ಕಟ್ಟುತ್ತೇನೆ ಎಂದು ಹೇಳಿ ಲಕ್ಷ್ಮಣನಲ್ಲಿ ನಾನು ಮರಳಿ ಬರಲಾರೆ ಎಂದು ವೈರಾಗ್ಯದ ಮಾತನ್ನು ಹೇಳುತ್ತಾನೆ .ಇದು ರಾಮ , ರಾಮನ ವ್ಯಕ್ತಿತ್ವ . ಇಂದ್ರ ; ದೇವಸಾರಥಿಯಾದ ಮಾತಲಿಯ ಮೂಲಕ ರಥವನ್ನು ಕಳುಹಿಸುತ್ತಾನೆ , ರಾಮ ಅದನ್ನು ತಿರಸ್ಕರಿಸುತ್ತಾನೆ ,ಆದರೆ ವಾನರರು ರಥಾರೂಢನಾದ ರಾಮನನ್ನು ಕಾಣಬೇಕು ಎಂದು ಹಠಹಿಡಿದಾಗ ರಥಾರೋಹಣ ಮಾಡುತ್ತಾನೆ . ಕಪಿಗಳ ಮಾತನ್ನು ಪರಿಪಾಲಿಸುವ ರಾಮ ಕಪಿಗಳನ್ನು ದುಡಿಸಿಕೊಂಡದ್ದು ಮಾತ್ರವಲ್ಲ‌ , ಅವರನ್ಮು ಗೌರವಿಸುತ್ತಿದ್ದ , ಪ್ರೀತಿಸುತ್ತಿದ್ದ ಎಂಬುದು ಈ ಸಂದರ್ಭದ ಸಂದೇಶವಲ್ಲವೆ . ಸೀತೆಯನ್ನು ಮರಳಿ ಪಡೆಯುವುದು ಲಂಕಾ ಪ್ರವೇಶದ ಉದ್ದೇಶವಲ್ಲ ಸೂರ್ಯ ವಂಶದ ರಾಜರ್ಷಿ ಅನರಣ್ಯನು ಯಾಗ ದೀಕ್ಷಾಬದ್ದನಾಗಿದ್ದ ವೇಳೆ ರಾವಣ ಆ ರಾಜರ್ಷಿಯನ್ನು ಕೊಲ್ಲುತ್ತಾನೆ . ಆ ಸೇಡನ್ನು ತೀರಿಸಿಕೊಳ್ಳುವುದು ಈ ಅಭಿಯೋಗದ ಉದ್ದೇಶವಾಗಿದೆ ಎಂಬುದನ್ನು ರಾಮ ದೃಢೀಕರಿಸುತ್ತಾನೆ . ರಾವಣ ವಧಾನಂತರ ಸೀತೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸುವುದು ಮತ್ತೊಂದು ಆದರ್ಶ. ಅಯೋಧ್ಯೆಯಲ್ಲಿ ನಿಜ ಪಟ್ಟಾಭಿಷೇಕದ ಅನಂತರ ದೀರ್ಘ ಅವಧಿಗೆ ರಾಮರಾಜ್ಯ ಸ್ಥಾಪನೆಯಾಗುತ್ತದೆ . ಅಯೋಧ್ಯೆಯ ರಜಕನೊಬ್ಬನ ಮಾತಿಗೂ ರಾಜರಾಮ ಸ್ಪಂದಿಸುತ್ತಾನೆ , ಗರ್ಭಿಣಿಯಾದ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸುತ್ತಾನೆ , 'ಸೀತಾ ಪರಿತ್ಯಾಗ' ರಾಮನ ದೃಢ ನಿರ್ಧಾರಕ್ಕೆ ಒಂದು ಸಾಕ್ಷಿ . ಈ ಕೆಲಸಕ್ಕೆ ಲಕ್ಷ್ಮಣನನ್ನು ನಿಯೋಜಿಸುತ್ತಾನೆ .ಇಲ್ಲಿ ಸೀತೆಯನ್ನು ಕಾಡಿಗೆ ಬಿಟ್ಟುಬರಲು ಲಕ್ಷ್ಮಣನನ್ನು ನಿಯೋಜಿಸುವ ಸಂದರ್ಭ‌ವಂತೂ ಸೀತೆಗೆ ಮಾತ್ರವಲ್ಲ ಲಕ್ಷ್ಮಣನಿಗೂ ಅಗ್ನಿಪರೀಕ್ಷೆ .ರಾಮ ತಾನು ಸ್ವತಃ ಸವಾಲುಗಳನ್ನು ಸ್ವೀಕರಿಸುತ್ತಾನೆ , ಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾನೆ . ಅವನನ್ನು ಅನುಸರಿಸಿದವರಿಗೂ ಅದೇ ಪರೀಕ್ಷೆಗಳನ್ನು ಎದುರಿಸುವ ಸ್ಥತಿ ಸೃಷ್ಟಿಸುತ್ತಾನೆ . ಕಾಡಿಗೆ ಹೋದ ಸೀತೆ ವಾಲ್ಮೀಕಿಯ ಮಡಿಲನ್ನು ಸೇರುತ್ತಾಳೆ ,ಕುಶಲವರ ಹುಟ್ಟು , ಕುಶಲವರ ಸಮೇತ ಸೀತಾರಾಮರ ಸಮಾಗಮ‌ . ಇದಕ್ಕೆ ವಾಲ್ಮೀಕಿಯ ಅನುಗ್ರಹ . ರಾಮ ನಿರ್ಯಾಣದವರೆಗೆ ಎಲ್ಲವೂ ವಚನಬದ್ಧತೆ , ಮನುಷ್ಯನಾಗಿ ಊಹಿಸಲೂ ಆಗದ ಆದರ್ಶವನ್ನು ಮೆರೆಯುವ ಕ್ರಮ , ನಿಜ ಕ್ಷತ್ರಿಯನಾಗಿ ವಿಜೃಂಭಿಸುವುದು , ರಾಜಧರ್ಮದ ಪಾಲನೆ ಎಲ್ಲವೂ ಅವಿಸ್ಮರಣೀಯ . ಆದುರಿಂದಲೇ ರಾಮ ಈ ದೇಶದ ಪ್ರತಿಷ್ಠೆ , ಸಂಸ್ಕೃತಿಯ ಸಾಕಾರಮೂರ್ತಿ , ಭಾರತೀಯರೆಲ್ಲರ ಆರಾಧ್ಯ ಮೂರ್ತಿ . ಪುರಾಣ ಪ್ರಪಂಚದ ನಿರೂಪಣೆಯಲ್ಲಿ ಪ್ರಖರವಾಗಿ ಮಿನುಗುವ ಜ್ಯೋತಿ . ರಾಮನ ಇಡೀ ಚರಿತ್ರೆಯಂತೆಯೇ ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರ ಕಟ್ಟುವ ಸಾಹಸದ ಕಾರ್ಯ ನಡೆದಿದೆ .ಎಷ್ಟು ತಿರುವುಗಳು , ಎಂತಹ ಆಘಾತಗಳು‌, ಮಂಥರೆಯಂತೆ , ಅಗಸನ ಪಾತ್ರಗಳ ಮೂಲಕ , ಸೀತಾಪಹರಣ ಪ್ರಕರಣಗಳಂತೆ ತಿರುವುಗಳನ್ನು ಪಡೆಯುತ್ತದೆ . ರಾಮನೆಂಬ ವ್ಯಕ್ತಿ ಇದ್ದನೆ ಎಂಬ ಪ್ರಶ್ನೆಯವರೆಗೂ ತಿಕ್ಕಾಟ ಭಾರತದಲ್ಲಿ ಕೇಳಿಬರುತ್ತದೆ . ರಾಮಮಂದಿರ ನಿರ್ಮಾಣಕಾರ್ಯ ಹೀಗೆ ಹಲವು ಆಯಾಮಗಳನ್ನು ಪಡೆಯುತ್ತಾ ಈ ಹಂತಕ್ಕೆ ಬರುತ್ತದೆ . ಈಗ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಯಾಗುತ್ತದೆ . ದೇಶದ ಸಂಸ್ಕೃತಿಗೆ ಸ್ಮಾರಕದಂತೆ ಈ ಮಂದಿರವು ನಿರ್ಮಾಣವಾಗುತ್ತದೆ .ರಾಮ ಒಂದು ಸಂಸ್ಕೃತಿಯಂತೆ , ಪ್ರತಿಷ್ಠೆಯಂತೆ ಭಾರತದಲ್ಲಿ ಸ್ಥಾಪನೆಯಾಗುವ ಕಾಲಸನ್ನಿಹಿತವಾಗಿದೆ . ಜೈ ಶ್ರೀರಾಮ್ ಲೇಖನ : ಕೆ .ಎಲ್ .ಕುಂಡಂತಾಯ