ಮತ್ತೆ ಕೃಷಿಯತ್ತ ಆಸಕ್ತಿ : ಲೇಖನ - ಕೆ.ಎಲ್. ಕುಂಡಂತಾಯ
Posted On:
29-08-2020 08:38PM
'ನಿಸರ್ಗ' ದೇಶಕ್ಕೆ ಸೌಭಾಗ್ಯವನ್ನು ಕೊಡುತ್ತದೆ.
'ಅನ್ನ' ಮನುಕುಲಕ್ಕೆ "ಜೀವ - ಜೀವನ" ಕೊಡುತ್ತದೆ.
ಹೌದು.... ನಿಸರ್ಗ, ತಾನು ಮೊದಲು ಸೌಭಾಗ್ಯವತಿ - ಫಲವತಿಯಾಗಬೇಕು.ಆಗ ದೇಶಕ್ಕೆ ಸೌಭಾಗ್ಯದ ಕೊಡುಗೆಯನ್ನು ಕೊಡಲಾದೀತು . ಸದಾ ಸಂಪದ್ಭರಿತ ನಿಸರ್ಗ "ಸೌಮಾಂಗಲ್ಯ"ವನ್ನು ಪಡೆದು ಹಸಿರು 'ಹೊದ್ದು' ಫಲ ಸಮೃದ್ಧಿಯನ್ನು 'ಹೊತ್ತು' ಸಂಭ್ರಮಿಸುವ ಕಾಲವೇ ವರ್ಷಾಕಾಲ - ಮಳೆಗಾಲ .
ನಿಸರ್ಗ - ಪ್ರಕೃತಿ 'ಸ್ತ್ರೀ' . ಆಕಾಶ 'ಪುರುಷ'.
ಸುರಿಯುವ 'ಮಳೆ' ; ಭೂಮಿ - ಆಕಾಶಕ್ಕೆ ಸಂಬಂಧವನ್ನು ಬೆಸೆಯುತ್ತದೆ . ರೈತ ಸಕಾಲವೆಂದು ಗದ್ದೆಗಿಳಿಯುತ್ತಾನೆ. ನಿಸರ್ಗ ನೀರೆ ಅರಳಿ ಸಿರಿವಂತಳಾಗುತ್ತಾಳೆ ಅಂದರೆ ಸಮೃದ್ಧಿಯ ಫಲವನ್ನು ಕೊಡುವುದಕ್ಕೆ ಸನ್ನದ್ಧಳಾಗುತ್ತಾಳೆ .
ಭೂಮಿಯ ಫಲವಂತಿಕೆಯನ್ನು ಕಂಡು ಹೆಣ್ಣು ಫಲವತಿಯಾಗುವುದಕ್ಕೆ ಸಮೀಕರಿಸಿ ಒಬ್ಬಳನ್ನು "ಹೆತ್ತ ತಾಯಿ' ಎಂದು , ಮತ್ತೊಬ್ಬಳನ್ನು "ಹೊತ್ತ ತಾಯಿ" ಎಂದು ಮಾನವ ಕಂಡುಕೊಂಡುದುದು ಪ್ರಕೃತಿಯ ಅಂತರ್ಗತವಾಗಿರುವ ಪರಮ ಸತ್ಯ . ಈ ಸತ್ಯದ ಅರಿವು ಮೂಡಲು ಸಹಸ್ರಾರು ವರ್ಷಗಳ ಬದುಕಿನ ಅನುಭವ ಕಾರಣ. ಇದೇ 'ಮಾತೃ ಆರಾಧನೆಯ' ಮೂಲ .
ಮಣ್ಣು - ಭೂಮಿಯನ್ನು ನಂಬುವುದು .
ಅದರೊಂದಿಗೆ ಹೋರಾಡುವುದು , ಕೃಷಿಕನ ಕಾಯಕ . ಈ ಸಂಬಂಧ 'ಕೃಷಿ ಸಂಸ್ಕೃತಿ'ಯ ಪ್ರಾರಂಭದಿಂದ ಸಾಗಿ ಬಂದಿದೆ . ಮಣ್ಣಿನೊಂದಿಗೆ ನಡೆಸುವ ಹೋರಾಟ - ಕೃಷಿಕಾರ್ಯ , ಫಲ - ಬೆಳೆಯನ್ನು ಕೊಡಬಲ್ಲುದೇ ಹೊರತು , ಅಮ್ಮ ಮುನಿಯಲಾರಳು , ಏಕೆಂದರೆ ಅಮ್ಮನ ಅಂದರೆ ಮಣ್ಣಿನ ಮಗನಲ್ಲವೇ . ಆದರೆ ತುಳು ಗಾದೆಯೊಂದು ಎಚ್ಚರಿಸುತ್ತದೆ
" ಮರಿ ತುಚಿಂಡ ಮರ್ದ್ ಉಂಡು , ಮಣ್ಣ್ ತುಚಿಂಡ ಮರ್ದ್ ಇಜ್ಜಿ" ಎಂದು .ಅಂದರೆ
ವಿಷತುಂಬಿದ ಹಾವು ಕಚ್ಚಿದರೆ ಮದ್ದುಇದೆ ,ಆದರೆ ಮಣ್ಣು ಕಚ್ಚಿದರೆ
- ಮುನಿದರೆ ಅದಕ್ಕೆ ಮದ್ದಿಲ್ಲ - ಪರಿಹಾರವಿಲ್ಲ .
ಜನ್ಮ ಭೂಮಿಯನ್ನು ಜನನಿಗೆ ಹೋಲಿಸಿದರು . ಜನ್ಮ ಭೂಮಿಯ ರಕ್ಷಣೆ ಮೌಲ್ಯಯುತ ಕಾಯಕವಾಯಿತು . ಮಣ್ಣನ್ನು ನಂಬಿದಹಾಗೆ ಮಣ್ಣನ್ನು ಸಾಕ್ಷಿಯಾಗಿರಿಸಿಕೊಂಡರು . ಜನಪದ ಕತೆಗಳಲ್ಲಿ , ಪುರಾಣಗಳಲ್ಲಿ ಮಣ್ಣಿನ ಸತ್ಯಗಳು ಪ್ರಕಟಗೊಳ್ಳುತ್ತಿರುತ್ತವೆ . ಮಣ್ಣು ,ದಿಕ್ಕುಗಳು , ಆಕಾಶ ,ಸೂರ್ಯ -
ಚಂದ್ರ ಮುಂತಾದ ಕಣ್ಣಿಗೆ ಕಾಣುವ ಸತ್ಯಗಳನ್ನು ಮಣ್ಣಿನಷ್ಟೇ ಮುಖ್ಯವಾಗಿ ಮನುಕುಲ ಸ್ವೀಕರಿಸಲ್ಪಟ್ಟಿದೆ .
ಮುನಿಯಲು , ಶಾಪಕೊಡಲು ಮಣ್ಣು ಸಾಕ್ಷಿಯಾಗುವ ಪರಿಕಲ್ಪನೆ ಅದ್ಭುತ . 'ನೆಲಕಾಯಿ ದರ್ತೆರ್' , "ಮಣ್ಣ್ ಮುಟುದು ಪೊಣ್ಣ ಶಾಪ ಕೊರಿಯೊಲು ಸಿರಿ". ಸತ್ಯವನ್ನು ದೃಢೀಕರಿಸಲು ಅಥವಾ ಮತ್ತಷ್ಟು ಪರಿಣಾಮಕಾರಿಯಾಗಿಸಲು 'ತಾಯಿ ಸಾಕ್ಷಿ' , "ಭೂಮಿ ಸಾಕ್ಷಿ" ('ಅಪ್ಪೆ ಕಂಟಲ್ದೆ' , 'ಭೂಮಿ ಸಾಕ್ಷಿ' ಇವು ಜನಪದರಲ್ಲಿ ಸಾಮಾನ್ಯ) ಎಂದು ಹೇಳುವುದು ಜನಪದರ ಮುಗ್ಧ ; ಸರಳ ; ವಿಮರ್ಶೆಗಳಿಲ್ಲದ ಜೀವನ
ವಿಧಾನದಲ್ಲಿದೆ.
ಜನಪದ - ವೈದಿಕ ವಿಧಿಗಳಲ್ಲಿರುವ ಭೂಮಿ ಪ್ರಧಾನವಾದ ಆಚರಣೆಗಳು ಭೂಮಿಯನ್ನು ಮನುಕುಲ ಒಪ್ಪಿದ ಭಾವವನ್ನು ಪ್ರಕಟಿಸುತ್ತದೆ .
ಅನುಷ್ಠಾನದಲ್ಲಿರುವ 'ಭೂಮಿಪೂಜೆ'
ಒಂದು ಪ್ರತ್ಯಕ್ಷ ಉದಾಹರಣೆ . ಬೂತ - ದೈವಗಳನ್ನು ಮಣ್ಣಿನ ಸತ್ಯಗಳೆಂದೇ ಸ್ವೀಕಾರ.ಅಬ್ಬರದ ಅಭಯ ಕೊಡಲು ಮಣ್ಣಿನ ಸತ್ಯವೇ ಭರವಸೆ - ಪ್ರೇರಣೆ . ನಾಗ ಭೂಮಿಪುತ್ರ . ವೈದಿಕದ ಹೆಚ್ಚಿನ ದೇವರು ಅವತರಿಸಿದ್ದು , ಲೀಲಾನಾಟಕ ಪ್ರದರ್ಶಿಸುವುದು ಭೂಮಿಯಲ್ಲಿ , ಶಾಪ ವಿಮೋಚನೆಗೆ ಆರಿಸಿಕೊಳ್ಳುವುದು ಧರಿತ್ರಿಯನ್ನೆ . ಇದು ಸನಾತನವಾದುದು ,
ಎಂದರೆ 'ಬಾಲ ಪ್ರಾಕ್ ದ ನಂಬಿಕೆಲು'.
ಈ ಭೂಮಿ ; ವಾಸಕ್ಕೆ , ಕಾಯಕಕ್ಕೆ , ಹುಟ್ಟಿನಿಂದ ಮರಣ ಪರ್ಯಂತದ ಕರ್ಮಗಳಿಗೆ ವೇದಿಕೆ . ಜೀವನಾಧಾರವಾದ ಅನ್ನವನ್ನು ಪಡೆಯಲು ಭೂಮಿ ಸಮೃದ್ಧಿಯ ನೆಲೆ .
ಇಂತಹ ಹತ್ತಾರು ಅನುಸಂಧಾನಗಳೊಂದಿಗೆ
ಭೂಮಿಯನ್ನು ಒಪ್ಪಿರುವ ಮಾನವ ಭೂಮಿ ಸಸ್ಯ ಶ್ಯಾಮಲೆಯಾಗಿರಬೇಕು ,ಅದಕ್ಕೆ ಕಾಲಕ್ಕೆ ಸರಿಯಾಗಿ ಮಳೆಬರಬೇಕು. ಅದರಿಂದ ಕ್ಷೋಭೆಗಳಿಲ್ಲದ ದೇಶ ,ಸಜ್ಜನರು ನಿರ್ಭಯದಿಂದ ಬದುಕುವಂತಹ ಸ್ಥಿತಿ ಸ್ಥಾಯಿಯಾಗ ಬೇಕು ಎಂಬುದೆ ಸಮಸ್ತರ ಪ್ರಾರ್ಥನೆಯಾಗುವುದು ಅರ್ಥಪೂರ್ಣ .
"ಭೂಮಿ - ಮಳೆ - ಕಾಯಕ - ಬೆಳೆ"
ಇವು ಶತಮಾನ ಶತಮಾನಗಳ ಅನುಬಂಧ . ಇಲ್ಲಿ ಪ್ರಾಪ್ತಿಯಾಗುವ ಸಮೃದ್ಧಿಯಿಂದ ದೇಶ ಕಟ್ಟಬಹುದು , ನೂತನ ,ಅತಿನೂತನ ಯುಗದಲ್ಲಿ ಪ್ರಸ್ತುತವಾಗಿ ಬದುಕಬಹುದು . ಅನ್ನ ಇಲ್ಲದೆ ಜೀವವಿಲ್ಲ , ಜೀವನವೂ ಇಲ್ಲ .
ಭೂಮಿ ಇರುತ್ತದೆ , ಮಳೆ ಬರುತ್ತದೆ , ಆದರೆ ಕಾಯಕ ಬೇಕು ; ಆಗ ಬೆಳೆ - ಫಲ ಸಿದ್ಧಿ. ಇದೇ ನಮ್ಮ ಆಧಾರ - ಸಿದ್ಧಾಂತ .
ಇದರಿಂದಲೇ ಮತ್ತೆಲ್ಲ ಅಭಿವೃದ್ಧಿ .ಲೋಕಕ್ಕೆ ಸುಭಿಕ್ಷೆ . ಕೃಷಿ ಇದ್ದಲ್ಲಿ ದುರ್ಭಿಕ್ಷೆ ಇಲ್ಲ ; ಹೌದಲ್ಲ.
ಮಳೆ ಬರುತ್ತಿದೆ ಕೃಷಿ ಕಾಯಕ ಆರಂಭವಾಗಿದೆ .ಆದರೆ ಪ್ರಮಾಣ ಏಕೆ ಕುಸಿದಿದೆ . ಕೃಷಿ ಭೂಮಿ ಹಡೀಲು ಬಿದ್ದಿವೆ .
ಮಣ್ಣು ,ಮಳೆ ಎರಡೂ ಇವೆ ಆದರೆ ಕೃಷಿಕಾಯಕವಿಲ್ಲ . ಮುನಿಯಲಿಕ್ಕಿಲ್ಲವೇ ನಿಸರ್ಗ ಎಂಬ ದಿನಗಳಿದ್ದುವು , ಆದರೆ ಈ ಮಳೆಗಾಲ ಬಹುತೇಕ ಸಮೃದ್ಧ ಗದ್ದೆಗಳು ಸಾಗುವಳಿಯ ಭಾಗ್ಯವನ್ನು ಪಡೆದಿವೆ . ಹಲವು ವರ್ಷಗಳಿಂದ ಹಡೀಲು ( ಪಡೀಲ್ ) ಬಿದ್ದಿದ್ದನ್ನು ಗಮನಿಸಿ ಕೃಷಿ ಕೃಶವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿತ್ತು. ಈ ವರ್ಷ ಅಂತಹ ಗೊಂದಲ ಸ್ವಲ್ಪಮಟ್ಟಿಗೆ ಪರಿಹಾರವಾದಂತೆ ಅನ್ನಿಸುತ್ತಿದೆ ..
ನಮಗೆ ಸೌಭಾಗ್ಯವನ್ನು ಕೊಡಬಲ್ಲ ಭೂಮಿ ಮತ್ತು ಸುರಿಯುವ ಮಳೆ ,ಇವೇ ತಾನೆ "ನಿಸರ್ಗ"ಅಲ್ಲವೆ?
ಉಳುವವ ಹೊಲದೊಡೆಯನಾದ
ಉಳುವವ ಹೊಲದೊಡೆಯನಾದ , ಆದರೆ ನಿರೀಕ್ಷೆಯಷ್ಟು ಫಲಕೊಡಲಿಲ್ಲ ಕಾಯಿದೆ . ಹಿಂದಿನ ಭೂಸುಧಾರಣಾ ಕಾಯಿದೆಯ ಪರಿಣಾಮ ಕಾಣಲು ನೀವೊಮ್ಮೆ ಉಡುಪಿ - ದಕ್ಷಿಣಕನ್ನಡ ಜಿಲ್ಲೆಗೆ ಬನ್ನಿ . ಕಾಯಿದೆ ಮೂಲಕ ಅಧಿಭೋಗದ ಹಕ್ಕು ದೊರೆತ ಕೃಷಿ ಭೂಮಿಗಳು:
• ಹಡೀಲು (ಕೃಷಿ ನಡಯದೆ ಬಂಜರು) ಬಿದ್ದಿವೆ.
• ಹೆಚ್ಚಿನ ಭೂಮಿಗಳು ಮಾರಾಟವಾಗಿವೆ .
• ರಸ್ತೆ ಬದಿಯಲ್ಲಿರುವ ಗದ್ದೆಗಳಿಗೆ ಮಣ್ಣು ತುಂಬಿಸಿ ಕಟ್ಟಡ ಕಟ್ಟಲಾಗುತ್ತಿದೆ .
• ಮೂರು ಬೆಳೆ ಬೆಳೆಯ ಬಲ್ಲ ಫಲವತ್ತಾದ ಗದ್ದೆಗಳು .ನೀರಿನ ಸಹಜ ಸೌಲಭ್ಯವಿರುವ ಗದ್ದೆಗಳ ಸ್ಥಿತಿ ಒಮ್ಮೆ ನೋಡಿ .ಹುಲ್ಲು ,ಕಳೆಗಿಡ ,ಮುಟ್ಟಿದರೆ ಮುನಿಯಂತಹ ಮುಳ್ಳು ಬೆಳೆದು ನಿಂತಿವೆ .
• ಗ್ತಾಮಾಂತರಗಳಲ್ಲಿ ಬಯಲಿನ ನಡುವೆ ಅಥವಾ ಬದಿಯಲ್ಲಿ ಸಣ್ಣ ತೊರೆಗಳು , ನದಿಗಳು , ದೊಡ್ಡ ನದಿಗಳ ಉಪತೊರೆಗಳು ಹರಿಯುತ್ತಿರುತ್ತವೆ . ಈ ನದಿಗಳಿಗೆ - ತೊರೆಗಳಿಗೆ ಅಡ್ಡ 'ಕಟ್ಟ' ಕಟ್ಟಿ ಇದರಿಂದ ಹರಿಯುವ ನೀರಿನಿಂದ ಎರಡನೇಯ ಬೆಳೆಯನ್ನು ಸುಲಭವಾಗಿ ಮಾಡುತ್ತಿದ್ದರು ನಮ್ಮ ಹಿರಿಯರು. ಇದರಿಂದ ಪರಿಸರದ ಬಾವಿಗಳಲ್ಲಿ ಬೇಸಗೆಯ ಕಾಲಕ್ಕೆ ನೀರಿನ ಬರವೇ ಇರುತ್ತಿರಲಿಲ್ಲ .ಆರೀತಿಯಲ್ಲಿ ಸಹಜವಾಗಿ ಪರಿಸರದಲ್ಲಿ ಅಂತರ್ಜಲ ವೃದ್ಧಿಯಾಗುತ್ತಿತ್ತು.
ರೈತ ಕಷ್ಟಪಟ್ಟು ಪ್ರತಿವರ್ಷ ತೊರೆಗಳಲ್ಲಿ ಹರಿಯುತ್ತಿದ್ದ ನೀರಿಗೆ ಅಡ್ಡನೆ ಕಟ್ಡವನ್ನು ಕಟ್ಟುತ್ತಿದ್ದು ಆ ನೀರಿನ ಫಲಾನುಭವಿಗಳೆಲ್ಲ ಸೇರಲೇ ಬೇಕಿತ್ತು . ಬೇಸಾಯದ ಸಹಕಾರ - ಸೌಹಾರ್ದ ಪದ್ಧತಿಯಂತೆ ಈ ಕಾಯಕ ನಡೆಯುತ್ತಿತ್ತು .
ಕೆಲವು ಕಟ್ಟಗಳು ಊರಿನ ದೇವರ ಹೆಸರಿನಲ್ಲಿ - ಬೂತಗಳ ಹೆಸರಿನಲ್ಲಿರುತ್ತಿದ್ದುವು . ಕಟ್ಟ ದೃಢವಾಗಿ ನಿಲ್ಲಲು ಊರ ದೈವ - ದೇವರಿಗೆ ಮಾಮೂಲು ಹರಕೆಗಳನ್ಮು ಹೇಳಲಾಗುತ್ತಿತ್ತು . ಬಳಿಕ ನಿರ್ದಿಷ್ಟ ದಿನದಂದು ಹರಕೆ ಸಲ್ಲಿಸಲಾಗುತ್ತಿತ್ತು ( ಪಡುಬಿದ್ರಿಯ ಕಟ್ಟದಪ್ಪ , ಬೇರೆ
ಊರುಗಳಲ್ಲಿ ದೇವರಿಗೆ , ದೈವಗಳಿಗೆ ಹೂವಿನಪೂಜೆ ಮುಂತಾದ ಹರಕೆ ಸಮರ್ಪಿಸಲಾಗುತ್ತಿತ್ತು) .
ಆದರೆ ಸರಕಾರದ ಕಿರುನೀರಾವರಿ ಯೋಜನೆಯ ವತಿಯಲ್ಲಿ ಸಣ್ಣ ಅಣೆಕಟ್ಡು(ಕಿಂಡಿ ಅಣೆಕಟ್ಟು)ಗಳನ್ನು ಕಟ್ಟುತ್ತಾರೆ , ಇದಕ್ಕೆ ಹಲಗೆ ಹಾಕಿದರೆ ಅಣೆಕಟ್ಟು ಅಥವಾ 'ಕಟ್ಟ' ಸಿದ್ಧ. ಹರಿದು ಹೋಗುವ ನೀರಿಗೆ ತಡೆಯಾಗಿ ನೀರು ಶೇಖರಣೆಯಾಗುತ್ತದೆ . ಈ ನೀರನ್ನು ಗದ್ದೆಯಿಂದ ಗದ್ದೆಗೆ ಹಾಯಿಸಿ ಬೆಳೆ ಬೆಳೆಯ ಬಹುದು ,ಆದರೆ ಈಗ ಸರಕಾರವು ಗ್ರಾಮಪಂಚಾಯತ್ ಮೂಲಕ ಒದಗಿಸಿದ ಅಣೆಕಟ್ಟುಗಳು ಬಹುತೇಕ ಉಪಯೋಗವಾಗುವುದೇ ಇಲ್ಲ .ಅಲ್ಲೊಂದು ಇಲ್ಲೊಂದು ಒಂದಷ್ಟು ಗದ್ದೆಗಳಿಗೆ ಉಪಯೋಗವಾಗತ್ತಿರಬಹುದು . ಇದು ನಾವು ಕೃಷಿಭೂಮಿಗಳಲ್ಲಿ ಬೆಳೆಬೆಳೆಯುವ ವಿಧಾನ . ಅಂದರೆ ಒಂದು ವಿಶಾಲವಾದ ಬಯಲಿನಲ್ಲಿ ಅಲ್ಲಲ್ಲಿ ನಾಲ್ಕೈದು ಗದ್ದೆಗಳು ನಾಟಿಯಾಗಿ , ಉಳಿದವುಗಳು ಹುಲ್ಲು ,ಕಳೆಗಿಡಗಳಿಂದ ತುಂಬಿರುವುದನ್ನು ಕಾಣುತ್ತೇವೆ . ಇದು ಭೂಸುಧಾರಣಾ ಕಾಯಿದೆಯ ಫಲಶ್ರುತಿ .
ಯಾವುದೋ ಒಂದು ಕ್ಷೇತ್ರಕಾರ್ಯ
ನಿಮಿತ್ತ ಬಯಲಿನ ನಡುವೆ ಹುಣಿಯಲ್ಲಿ ನಡೆದು ಹೋಗುವ ಸಂದರ್ಭ ಬಂತು .ಆಗ ನಾನು ಗಮನಿಸಿದ್ದು ಗದ್ದೆಗಳಲ್ಲಿ ನೀರು ತುಂಬಿದೆ ,ಆದರೆ ಬೆಳೆ ಬೆಳೆದಿಲ್ಲ . ಯಾಕೆಂದು ಕೇಳಿದಾಗ ಅಣೆಕಟ್ಟು ಕಾರಣವಾಗಿ ಗದ್ದೆಗಳಿಗೆ ನೀರು ಹರಿಯುತ್ತದೆ , ಆದರೆ ಬೆಳೆ ಬೆಳೆಯುವವರಿಲ್ಲ . ಮತ್ತೊಂದು
ಊರಿನಲ್ಲಿ ನೀರಿನ ಸೌಲಭ್ಯವಿದ್ದೂ ಬೆಳೆಬೆಳೆದಿಲ್ಲ ಏಕೆ ಎಂಬ ಪ್ರಶ್ನೆ ಕೇಳುತ್ತಾರೆ ಎಂದೇ ಆ ಊರಿನಲ್ಲಿ ಸಕಾಲದಲ್ಲಿ ಅಣೆಕಟ್ಟಿಗೆ ಹಲಗೆ ಹಾಕುವುದೇ ಇಲ್ಲ . ಹಲಗೆ ಹಾಕಿದರೆ ತಾನೆ ನೀರು ಹರಿದು ಗದ್ದೆಗೆ ಬರುವುದು . ನೀರು ತೊರೆಯಲ್ಲಿಯೇ ಸರಾಗವಾಗಿ ಹರಿದು ಹೋದರೆ ಯಾರು ಕೇಳುತ್ತಾರೆ ? ಅಂದರೆ ಕೃಷಿ - ಬೇಸಾಯ ಅಷ್ಟು ಅವಗಣಿಸಲ್ಪಟ್ಟಿದೆ . ಆದರೆ ಬಹಳ ಶ್ರದ್ಧೆಯಿಂದ ಕೃಷಿಕಾಯಕದಲ್ಲಿ ತೊಡಗುವವರಿದ್ದಾರೆ , ಅವರ ಸಂಖ್ಯೆ ವಿರಳ .ಕೃಷಿ ಲಾಭದಾಯಕವಲ್ಲ ,ಅವಿಭಕ್ತ ಕುಟುಂಬ ವಿಭಕ್ತ ಕುಟುಂಬಗಳಾಗಿವೆ . ಕಾರ್ಮಿಕರಲ್ಲ . ಒಪ್ಪ ಬಹುದು ಆದರೆ ಹಡೀಲು ಭೂಮಿಗೆ ಉತ್ತರವಿಲ್ಲ,ಕಾಯಿದೆಗೆ ಅರ್ಥವಿಲ್ಲದಾಗಿದೆ .ಇವತ್ತಿಗೂ ಬೆಳೆ ಬೆಳೆಯುವುದು ಪ್ರತಿಷ್ಠೆ ಎಂದು ಗೌರವದಿಂದ ಬೆಳೆ ಬೆಳೆಯುವವರಿದ್ದಾರೆ ,ಅವರು ಕೃಷಿ ಕಾಯಕವನ್ನು ನಿಲ್ಲಿಸಲೇ ಇಲ್ಲ .
• ಕಾಯಿದೆಯ ಮೂಲಕ ದೊರೆತ ಕೃಷಿ ಭೂಮಿಗಳ ಮಾರಾಟ ಈಗಾಗಲೇ ಆರಂಭವಾಗಿ ವರ್ಷ ಕೆಲವು ಕಳೆಯಿತು .
ಭೂಸುಧಾರಣಾ ಕಾಯಿದೆಯಂತೆ ಡಿಕ್ಲರೇಶನ್ ಕೊಟ್ಟು ಟ್ರಿಬ್ಯೂನಲ್ ಗಳಲ್ಲಿ ಅಧಿಭೋಗದ ಹಕ್ಕನ್ನು ಕೊಡುವಾಗ ಕುಟುಂಬದ ಪರವಾಗಿ ಎಂದು ತೀರ್ಪು ನೀಡಿರುವ ಭೂಮಿಗಳು ಮಾರಾಟಕ್ಕೆ ಕಷ್ಟವಾಗುತ್ತದೆ . ಆದರೆ ಒಬ್ಬ ವ್ಯಕ್ತಿಯ ಹೆಸರಲ್ಲಿ ತೀರ್ಪು ಇದ್ದಾಗ ಭೂಮಿ ಮಾರಾಟ ಸುಲಭ . ಒಟ್ಟಿನಲ್ಲಿ ಶೇ.ನೂರಕ್ಕೆ ನೂರು ಭೂಸುಧಾರಣಾ ಕಾನೂನು ರೈತನಿಗೆ ಮತ್ತು ಕೃಷಿಗೆ ಪೂರಕವಾಗಲೇ ಇಲ್ಲ .
ಒಮ್ಮೆ ಉಡುಪಿಯಿಂದ ಮಂಗಳೂರಿಗೆ ಹೆದ್ದಾರಿಗುಂಟ ಸಾಗಿದರೆ ದೇವರಾಜ ಅರಸರ
ಕನಸು "ಉಳುವವನೆ ಹೊಲದೊಡೆಯ" ಹೇಗೆ ನನಸಾಗಿದೆ ಎಷ್ಟು ಕೃಷಿ ಭೂಮಿ ಹಡೀಲು ಬಿದ್ದಿವೆ , ಎಷ್ಟು ಫಲವತ್ತಾದ ಗದ್ದೆಗಳು ಅನ್ಯ ಕಾರ್ಯ ನಿಮಿತ್ತ ಬಳಕೆಯಾಗುತ್ತಿವೆ ಎಂದು ತಿಳಿಯುತ್ತದೆ . ಉಭಯ ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕವಿರುವಲ್ಲಿ ಸಂಚರಿಸಿ ,ಕೃಷಿ ಭೂಮಿ ಹೇಗೆ ಪರಿವರ್ತನೆಯಾಗಿದೆ ಎಂದು ಮನಗಾಣ ಬಹುದು .
"ಈ ರೀತಿ ಕೃಷಿ ಅವಗಣಿಸಲ್ಪಡ ಬೇಕಿದ್ದರೆ
ಕಾರಣ ಕೃಷಿ ಲಾಭದಾಯಕವಾಗಿಲ್ಲ , ಕಾರ್ಮಿಕರ ಸಮಸ್ಯೆ ಮುಂತಾದ ಸಾರ್ವತ್ರಿಕ , ಸಿದ್ಧ ಉತ್ತರಗಳಿವೆ "
ಆದರೆ ಈ ವರ್ಷ ಪರಿಸ್ಥಿತಿ ಸ್ವಲ್ಪ ಬದಲಾಗಿದೆ ಕೃಷಿ ಕಾಯಕ ಹೆಚ್ಚಿದಂತೆ ಕಾಣುತ್ತದೆ .ಫಲವತ್ತಾದ ಗದ್ದೆಗಳಲ್ಲಿ ಉಳುವ ಯಂತ್ರಗಳು ಓಡಾಡುತ್ತಿವೆ. ಹಲವು ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಬೇಸಾಯ ಆರಂಭವಾಗಿದೆ . ಈ ಪ್ರಮಾಣ ಇನ್ನೂ ಹೆಚ್ಚಾಗಲಿ. ಮತ್ತೆ ಮಣ್ಣು ಆಕರ್ಷಿಸಲಿ . "ಪೃಥ್ವೀ ಗಂಧವತೀ" ತಾನೆ ?
ಈ ಗಂಧ ಮಣ್ಣಿನ ಮಕ್ಕಳನ್ನು ಆಕರ್ಷಿಸಲಿ .
ಇನ್ನೇನು ಎರಡು ತಿಂಗಳಲ್ಲಿ "ಬೆಳೆ" ಎಂಬ 'ಭಾಗ್ಯ - ಸಮೃದ್ಧಿ' ಮನೆಯಂಗಳಕ್ಕೆ ಬರುತ್ತದೆ , ಮನೆಯ ಚಾವಡಿಯಲ್ಲಿ ರಾಶಿಯಾಗಲಿದೆ .ಆಗ ನೋಡಿ ರೈತನ
ಧನ್ಯತೆಯ ಸಂಭ್ರಮವನ್ನು.
ಬರಹ : ಕೆ .ಎಲ್. ಕುಂಡಂತಾಯ