ಹೆಜಮಾಡಿಯ ಗಜಷೃಷ್ಠಾಕಾರದ ಗರ್ಭಗುಡಿಯ ಗ್ರೀವದಲ್ಲಿ ಶಿಲ್ಪಗಳ ಕುಸುರಿ
Posted On:
01-09-2020 08:20PM
ದೇವಾಲಯ ರಚನೆಯಲ್ಲಿ ಶಿಲ್ಪದ
ಸೊಗಸು ಸೊಗಯಿಸುವುದು ಸಹಜ ಮತ್ತು
ಅನಿವಾರ್ಯ. ಇಂತಹ ಒಂದು ಅಪೂರ್ವ ಕುಶಲ ಕುಸುರಿಯ ರಚನಾಕಾರ್ಯವು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮರುನಿರ್ಮಾಣದಲ್ಲಿ ನಡೆಯತ್ತಿದೆ .
ಗಜಪೃಷ್ಠಾಕಾರದ ಗರ್ಭಗುಡಿಯ ನಿರ್ಮಾಣ ನಡೆಯುತ್ತಿದ್ದು ಪ್ರತಿಬಂಧ ಕ್ರಮದ ಅಧಿಷ್ಠಾನ , ಭಿತ್ತಿ ಸ್ತಂಭ - ಪಂಜರ - ಘನದ್ವಾರ - ಉತ್ತರವಲ್ಲಭೀಕಪೋತ ಮುಂತಾದ ಶಾಸ್ತ್ರೀಯ ನಿರ್ಮಿತಿಗಳಿಂದ ಭಿತ್ತಿಯು ಸ್ದಿದ್ಧಗೊಂಡಿದೆ .ಈಗ ಗ್ರೀವದಲ್ಲಿ ( ಪ್ರಸ್ತರ ಮತ್ತು ಸ್ತೂಪಿಯ ಎರಡು ಛಾವಣಿಯ ಮಧ್ಯದ ಸ್ಥಳಾವಕಾಶ) ಇಟ್ಟಿಗೆ , ಸಿಮೆಂಟ್ ಬಳಸಿ ಅಸಾಧಾರಣ ಕುಸುರಿನ ಕಲೆಯ ಕೌಶಲ್ಯ ಪಡಿಮೂಡುತ್ತಿವೆ.
ಗ್ರೀವದಲ್ಲಿ ಕೂಟಗಳ( ಪುಟ್ಟ ಸ್ತಂಭಗಳ ಚೌಕಟ್ಟಿನಿಂದಾದ ಗೂಡು) ರಚನೆ . ಇಲ್ಲಿ ಭಿತ್ತಿ ಸ್ತಂಭವನ್ನು ವಿಸ್ತರಿಸಿ ಕೂಟವಾಗಿ ಮಾಡುವ , ಘನದ್ವಾರವನ್ನು ಹಿಗ್ಗಿಸಿ 'ಶಾಲಾ'
(ಇಳಿಜಾರಾಗಿರುವಂತಹ ಮಾಡನ್ನು ಹೊಂದಿರುವ ಆಯತಾಕಾರದ ಗೂಡು) ನಿರ್ಮಾಣ. ಪಂಜರಗಳನ್ನು ನಾಸಿಕಗಳಾಗಿ ಪರಿವರ್ತಿಸಿ ಅಂತಸ್ತವಾಗಿ ಪಂಜರ , ಕುಂಭಲತೆಗಳಿಂದ ಅಲಂಕೃತವಾಗಿದೆ .ಕೂಟ ಮತ್ತು ನಾಸಿಕಗಳ ಮಧ್ಯೆ ಒದಗುವ ಅವಕಾಶದಲ್ಲಿ ಸ್ತಂಭ ಗೋಪುರಗಳನ್ನು ಅಳವಡಿಸಲಾಗಿದೆ .ಈ ರಚನೆಯು ಶಿಲ್ಪದ ಶ್ರೀಮಂತಿಕೆಯ ಅಭಿವ್ಯಕ್ತಿಯಾಗಿದೆ .
ಶಾಲಾ ರಚನೆಯು ಉಭಯ ಪಾರ್ಶ್ವಗಳಲ್ಲಿ ಪಂಜರಗಳನ್ನು ಒಳಗೊಂಡಿದೆ .ಒಟ್ಟು ರಚನೆಯು ಹತ್ತು ಅಂಶದ ಪಡಿ,ವೇದಿಕೆ , ಭಿತ್ತಿ ಅಲಂಕಾರ, ಉತ್ತರವಲಭಿಕಪೋತ , ಪಿಂಡಿ ಹೀಗೆ ಹಂತಹಂತವಾಗಿ ಸೃಷ್ಟಿ ಯಾಗುತ್ತಿದೆ .
ಗಜಪೃಷ್ಠಾಕಾರದ ವೃತ್ತಭಾಗದ ಪಂಜರದಲ್ಲಿ ಹೆಚ್ಚಿನ ಔನ್ನತ್ಯದಲ್ಲಿ ವೃತ್ತ ಸ್ಪುಟಿತಕಗಳಿವೆ .
ಚತುರಸ್ರದಿಂದ ವೃತ್ತಕ್ಕೆ ತಿರುಗುವ ಭಾಗದಲ್ಲಿ
ಅರ್ಧ ಶಾಲಾ ವಿಭಜಿಸಲ್ಪಟ್ಟಿದೆ .ಇಂತಹ ರಚನೆಗಳಿಂದ ಗ್ರೀವದ ಕೆಲಸ ನಡೆಯುತ್ತಿದೆ.
ಹೆಜಮಾಡಿಯ ಬಸ್ತಿಪಡ್ಪುವಿನಲ್ಲಿರುವ ಸುಮಾರು ಹತ್ತನೇ ಶತಮಾನದ ಗಜಪೃಷ್ಠಾಕಾರದ ಗರ್ಭಗುಡಿಯ ಮರು ನಿರ್ಮಾಣದ ವೇಳೆ ಗ್ರೀವದಲ್ಲಿ ಮೇಲೆ ವಿವರಿಸಿದ ವಿನ್ಯಾಸಗಳು ನಿರ್ಮಾಣವಾಗುತ್ತಿದೆ .
ಗರ್ಭಗುಡಿಯ ಒಳಸುತ್ತಿನಲ್ಲಿ ( ಮೂರು ಪದರಗಳಲ್ಲಿ ಒಳಗಿನದ್ದು) ಕರ್ಣ ಮುಚ್ಚಿಕೆಯ ಬದಲಿಗೆ ಕೆಂಪುಕಲ್ಲಿನ 'ತೊರವು' ಗಮನಸೆಳೆಯುತ್ತದೆ . ಗರ್ಭಗುಡಿಯ
ಚತುರಸ್ರ ಆಕಾರದ ( ಗಜಪೃಷ್ಠಕ್ಕೆ ತಿರುಗುವ ಮೊದಲಿನ ಆಕಾರ) ಮೇಲೆ ಅದೇ ಆಕಾರದಲ್ಲಿ ಆರಂಭಗೊಂಡು ಅಷ್ಟಪಟ್ಟಿಯಾಗಿ ವಿಸ್ತರಿಸಲ್ಪಟ್ಟು ಮುಂದೆ ವೃತ್ತವಾಗಿ ಮೇಲೆ ಗೋಲಾಕಾರವಾಗಿ ನಿರ್ಮಿಸಲ್ಪಟ್ಟ ಪುರಾತನ ಕರ್ಣಮುಚ್ಚಿಕೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ .ಇಂತಹ ರಚನೆಗಳು ವಿರಳ ಲಭ್ಯ .
ದೇವಾಲಯದ ಸ್ಥಪತಿ ಅವದಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರ ನಿರ್ದೇಶನದಂತೆ ನಿರ್ಮಾಣಕಾರ್ಯ ನಡೆಯುತ್ತಿದೆ .ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಪುಣೆ , ಆಡಳಿತೆ ಮೊಕ್ತೇಸರ ದಯಾನಂದ ಹೆಜಮಾಡಿಯವರ ಮುತುವರ್ಜಿಯಿಂದ ಕಾಮಗಾರಿ ನಡೆಯುತ್ತಿದೆ.