ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮನದ ಕತ್ತಲೆ ತೊಲಗಿಸಿ ಭರವಸೆಯ ದೀಪ ಬೆಳಗಿದ ಗುರುವನ್ನು ನೆನೆಯೋಣ

Posted On: 04-09-2020 01:42PM

ಗುರುವಿನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಅದಕ್ಕಾಗಿ ನಾವು ಗುರುವಿನ ಸಮಾನ ನಾಗುವ ವರೆಗೆ ಕೆಲಸ ಮಾಡಿದರೆ ಅದುವೇ ಗುರುವಿಗೆ ನೀಡುವ ದೊಡ್ಡ ಕೊಡುಗೆ. ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ತಮ್ಮ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ "ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು " ಉತ್ತಮ ಗುರುಗಳು ಅದೇ ರೀತಿ ಉತ್ತಮ ಶಿಷ್ಯರಿದ್ದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗಬಹುದು.

ಹಳಸಿದ ಗುರು-ಶಿಷ್ಯರ ಸಂಬಂಧ: ದಿನ ಬೆಳಗಾದರೆ ಸಾಕು ಕೆಲವು ವಿದ್ಯಾರ್ಥಿ ಸಂಘಟನೆಗಳಿಂದ ಸರ್ಕಾರದ ವಿರುದ್ಧ ಧರಣಿ. ಶಿಕ್ಷಕರಿಂದಲೂ ನಾನಾ ಹಕ್ಕುಗಳಿಗಾಗಿ ಪ್ರತಿಭಟನೆಗಳನ್ನು ನಾವು ಸಮಾಜದಲ್ಲಿ ನೋಡುತ್ತಿದ್ದೇವೆ. ಸೇವೆಯ ಮುಖ್ಯ ಭಾಗವಾಗಿದ್ದ ಶಿಕ್ಷಣವು ಇಂದು ವ್ಯಾಪರೀಕರಣವಾಗಿ ಮಾರ್ಪಟ್ಟಿರುವುದು ಸರಿಯಲ್ಲ. ಶ್ರೀಮಂತರಿಗೆ ಅತ್ಯಂತ ಸುಲಭವಾಗಿ ಸಿಗುವ ಉನ್ನತ ವ್ಯಾಸಂಗದ ಸೀಟುಗಳು, ಓದಿನಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗೆ ಸಿಗದಂತಾಗಿದೆ. ಮೀಸಲಾತಿಯಲ್ಲಿ ಬದಲಾವಣೆಯಾಗಬೇಕಾದ ಅಗತ್ಯ ಇದೆ ಕೇವಲ ಜಾತಿಯ ದೃಷ್ಟಿಯಲ್ಲಿ ಮೀಸಲಾತಿ ನೀಡದೆ ಆಥಿ೯ಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿ ಅವರಿಗೂ ಉತ್ತಮ ಅವಕಾಶ ನೀಡಬೇಕು.
ಹಿಂದೆ ಗುರು-ಶಿಷ್ಯರ ಸಂಬಂಧ ಉತ್ತಮವಿತ್ತು. ವಿಶ್ವದಲ್ಲೇ ಭಾರತದ ಶಿಕ್ಷಣ ವ್ಯವಸ್ಥೆ ಶ್ರೇಷ್ಠಮಟ್ಟದಲ್ಲಿತ್ತು. ಬಂಗಾಳ, ನಲಂದಾ, ಕಂಚಿಯಲ್ಲಿ ಅಷ್ಟೇ ಏಕೆ ಧಾರವಾಡ, ಬಿಜಾಪುರ ಹಾಗೂ ಅರಸೀಕೆರೆಯೂ ಕೂಡ ಪ್ರಮುಖ ವಿದ್ಯಾಕೇಂದ್ರವಾಗಿತ್ತು ಎಂಬುದಾಗಿ ಚರಿತ್ರೆ ಹೇಳುತ್ತದೆ.

ಗುರುಕುಲ ಪದ್ಧತಿ ಪುನರುತ್ಥಾನವಾಗಬೇಕಾಗಿದೆ
:ನಾನಾ ವಿಷಯಗಳಲ್ಲಿ ವಿಶ್ವಮಟ್ಟದಲ್ಲಿ ಬೆಳಗಬಲ್ಲ ಅತ್ಯಂತ ಶ್ರೇಷ್ಠ ವಿದ್ವಾಂಸರು ನಮ್ಮಲ್ಲಿದ್ದರು. ಅವರೆಲ್ಲರ ಸಾಧನೆ ಹಿಂದೆ ಗುರುಗಳ ಮಾರ್ಗದರ್ಶನವಿರುದನ್ನು ನಾವು ಕಾಣಬಹುದು. ಆದರೆ ದುರದೃಷ್ಟವೆಂದರೆ ಅವರ ಹೆಚ್ಚಿನ ಸಂಶೋಧನೆಗಳು ಬರೀ ಕಡತದಲ್ಲಿ ಕೊಳೆಯುವಂತಾಗಿದೆ ವಿಪರ್ಯಾಸ.
ಈ ಹಿಂದೆ ಗುರುಕುಲ ಶಿಕ್ಷಣಪದ್ಧತಿಯಲ್ಲಿ ಗುರುಶಿಷ್ಯರು ಒಂದೆಡೆ ನೆಲೆಸಿ, ಒಂದೇ ಬಗೆಯ ಆಹಾರ ಸೇವಿಸಿ, ಸಮವಸ್ತ್ರ ಧರಿಸಿಕೊಳ್ಳುತ್ತಿದ್ದರು. ಮುಂಜಾನೆಯಿಂದ ಮುಸ್ಸಂಜೆಯವರೆಗೂ ಕಟ್ಟುನಿಟ್ಟಿನ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಬಗೆಯ ವಿದ್ಯೆಯನ್ನು ಕಲಿಯುವ ಅವಕಾಶವಿತ್ತು.
ಜಾತಿ ಭೇದವಿಲ್ಲದ ವಾತಾವರಣದಲ್ಲಿ, ಪ್ರಕೃತಿಯ ಮಡಿಲಲ್ಲಿ ಸದ್ವಿದ್ಯೆಯನ್ನು ಪಡೆಯಬಹುದಾಗಿತ್ತು. ಈಗ ಈ ರೀತಿಯ ವಾತಾವರಣ ಕಲ್ಪಿಸಲು ಅಸಾದ್ಯವಾಗಿದೆ .ಆದರೆ ಸಂತೋಷದ ವಿಷಯವೆಂದರೆ ಕೆಲವು ಕಡೆಗಳಲ್ಲಿ ಗುರುಕುಲ ಮಾದರಿಯ ಶಿಕ್ಷಣ ಸಂಸ್ಥೆಗಳು ಕಾಯ೯ ನಿವ೯ಹಿಸುತ್ತಿವೆ.
"ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರುವೆ ನಮ: "
-ಜ್ಞಾನವೆಂಬ ಸಲಾಕೆಯಿಂದ, ಶಿಷ್ಯರ ಅಜ್ಞಾನವೆಂಬ ಅಹಂಕಾರವನ್ನೂ ತೊಡೆದು ಜ್ಞಾನಚಕ್ಷುವನ್ನು ತೆರೆಸಿ ಕಾಪಾಡುವ ಗುರುವಿಗೆ ನಮಸ್ಕಾರ ನಮ್ಮಲ್ಲಿಡಗಿರಬಹುದಾದ ಜ್ಞಾನವೆಂಬ ಬೆಳಕನ್ನು ಹೊರಜಗತ್ತಿಗೆ ತೋರುವ ಕೆಲಸವಾಗಬೇಕಾಗಿದೆ. ನಮ್ಮಲ್ಲಿರುವ ಅಂತ :ಶಕ್ತಿಯನ್ನು ನಮಗರಿವಾಗುವಂತೆ ಮಾಡುವುದೇ ಗುರುವಿನ ಕಾಯಕ.
'ವಿದ್ಯೆಯಂ ಕಲಿಸಿದಾತಂ ಗುರು' ಎನ್ನುವಾಗ ಜ್ಞಾನ ಬೋಧನೆ ಯಾರಿಂದಾದರೂ ಅದನ್ನು ಸ್ವೀಕರಿಸುವ ಮನೋಭಾವ ಎಲ್ಲರಲ್ಲೂ ಇದ್ದರೆ ಒಳಿತು. ಇಂದು ನಮ್ಮಲ್ಲಿ ಕಮ್ಮಿಯಾಗಿರುವುದು ವಿನಯ . *ಗುರುಗಳ ಮಹತ್ವ ಕಡಿಮೆ?:* ಇಂದಿನ ವೇಗದ ಯುಗದ ವ್ಯವಸ್ಥೆಯಿಂದ ಗುರುಗಳ ಮಹತ್ವ ಕಡಿಮೆಯಾಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಶಿಕ್ಷಕರನ್ನೇ ನೋಡದೆ ಆನ್‌ಲೈನ್ ಶಿಕ್ಷಣ, ವರ್ಚ್ಯುಯಲ್ ಶಿಕ್ಷಣ ವ್ಯವಸ್ಥೆ ಪ್ರಚಲಿತವಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ವಿದ್ಯಾರ್ಥಿಗಳು ತಮ್ಮ ಹೊಸ ಸಂಶೋಧನೆಗಳನ್ನು ರಚನಾತ್ಮಕ ಕೆಲಸಗಳಿಗೆ ಉಪಯೋಗಿಸದೇ ವಿಧ್ವಂಸಕ ಕೃತ್ಯಗಳಿಗೆ ಪ್ರಯೋಗಿಸುತ್ತಿರುವುದು ಆತಂಕಕಾರಿ ವಿಷಯ. ಅನೇಕ ಪಿ.ಎಚ್.ಡಿ ಸಂಶೋಧನಾ ಪ್ರಬಂಧಗಳು ಕಪಾಟಿನ ಮೂಲೆಯಲ್ಲಿದೆ ಅದನ್ನು ಎಲ್ಲಾ ಕಾಲೇಜಿನ ಗ್ರಂಥಾಲಯದಲ್ಲಿಡುವ ಕಾಯ೯ ನಡೆಯಬೇಕು .ವಿದ್ಯಾಥಿ೯ಗಳು ಅದರ ಮೂಲಕ ಪ್ರೇರಣೆ ಪಡೆಯಬೇಕು. ವಿದ್ಯೆ ನೀಡಿದ ಗುರುವಿಗೆ ಪ್ರತಿಯಾಗಿ ಗುರುದಕ್ಷಿಣೆ ನೀಡುವ ಕಾಯಕ ಹಿಂದಿನಿಂದ ಬಂದಿದೆ. ಆದರೆ ಹಿಂದೆಲ್ಲಾ ಗುರುವಿಗೆ ಗೌರವಪೂರ್ವಕವಾಗಿ ಗುರುದಕ್ಷಿಣೆ ಸಲ್ಲುತ್ತಿತ್ತು. ಕಾಣದ ಗುರುವು ತನ್ನೆಡೆಗೆ ಬಂದು ಗುರುದಕ್ಷಿಣೆ ಕೇಳಿದಾಗ ಕೈಬೆರಳನಿತ್ತ ಏಕಲವ್ಯನ ಕತೆ ಜನಜನಿತ. ಗುರುಗಳಲ್ಲಿ ಹೇಗೆ ಅರ್ಪಣಾ ಮನೋಭಾವ ಅಗತ್ಯವೋ ಹಾಗೆ ಶಿಷ್ಯರಲ್ಲಿ ಗುರುವನ್ನು ಸತ್ಕರಿಸುವ ಮನಸ್ಸಿರಬೇಕು. ಸತ್ಕಾರವೆಂದರೆ ದ್ರವ್ಯರೂಪದಲ್ಲಿ ಸಂತೋಷಪಡಿಸುವುದಷ್ಟೇ ಅಲ್ಲ. ಕನಿಷ್ಠ ವರ್ಷಕ್ಕೊಂದು ದಿನವಾದರೂ (ಗುರುವಿನ ಹುಟ್ಟುಹಬ್ಬದ ದಿನವಾದರೆ ಇನ್ನು ಚೆನ್ನ) ಗುರುವಿಗೆ ನಮ್ಮ ನಮನ ಸಲ್ಲಿಸುವ ಕಾಯ೯ ನಡೆದರೆ ಉತ್ತಮ.

ಗುರುವಿಗೆ ಸಮಾನನಾದ ವ್ಯಕ್ತಿ ಇಲ್ಲ:
ಗುರುಗಳಿಗೆ ಶಿಷ್ಯರು ಅನೇಕರಿರಬಹುದು ಆದರೆ ಗುರು ಒಬ್ಬರೆ ಹೀಗಾಗಿ ಈ ಗುರುವಿನ ಬಗ್ಗೆ ಭಾರತದಲ್ಲಿ ನೆನಪಿಕೊಳ್ಳುವಂತೆ ಮಾಡಿದ ಕೀರ್ತಿ ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣರಿಗೆ ಸಲ್ಲುತ್ತದೆ. ಉದಾರ ಮನೋಭಾವನೆಯಿಂದ ತಾವು ಹುಟ್ಟಿದ ದಿನವನ್ನು (ಸೆಪ್ಟೆಂಬರ್ 5) ಶಿಕ್ಷಕರ ದಿನವೆಂದು ಆಚರಿಸಲು ತಮ್ಮ ಶಿಷ್ಯ ವೃಂದಕ್ಕೆ ಕರೆಯನ್ನಿತ್ತರು.
ಹೆಚ್ಚಿನ ಟಿ.ವಿ ಮಾಧ್ಯಮಗಳಲ್ಲಿ ಶಿಕ್ಷಕರ ಮಹತ್ವವನ್ನು ತೋರಿಸುವ ಕಾರ್ಯಕ್ರಮಗಳು ಕಾಣೆಯಾಗಿವೆ. ಜೊತೆಗೆ ಚಲನಚಿತ್ರಗಳಲ್ಲಿ ಶಿಕ್ಷಕರನ್ನು ಸರ್ಕಸ್‌ನ ಬಫೂನ್‌ಗಳಂತೆ ಚಿತ್ರಿಸುತ್ತಿರುವುದು ವಿಷಾದನೀಯ ಸಂಗತಿ. ಗುರು ಶಿಷ್ಯರ ನಡುವಿನ ಅಂತರವನ್ನು ಹೆಚ್ಚಿಸುವಲ್ಲಿ ಇಂತಹ ಕೆಟ್ಟ ಅಭಿರುಚಿಯ ಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆಂದರೆ ತಪ್ಪಾಗಲಾರದು.
ತಾಯಿಯೇ ಮೊದಲ ಗುರು :
ಮಗುವಿಗೆ ಮೊದಲು ಕೇಳಿಸುವುದು ತನ್ನಮ್ಮನ ಮಾತುಗಳೇ. ತಾಯಿಯಾದವಳು ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಗುರುವಿನ ಕೆಲಸಕ್ಕೆ ಸಹಕಾರಿಯಾಗುತ್ತದೆ. ತಾಯಿಯ ಮಮತೆ ತಂದೆಯಂತೆ ಜವಾಬ್ದಾರಿಯಿಂದ ಪೋಷಣೆ ಮಾಡಬಲ್ಲವನೇ ನಿಜವಾದ ಗುರು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. 'ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮನ್ನು ಪೋಷಿಸಿದವರನ್ನು ಒಮ್ಮೆ ಹಿಂದುರಿಗಿ ನೋಡಿದಾಗಲೇ ತೃಪ್ತಿ ದೊರೆಯುವುದು.'
ನೂತನ ಶಿಕ್ಷಣ ನೀತಿ ಶಿಕ್ಷಣಕ್ಕೆ ಹೊಸ ದಿಕ್ಕು ತೋರಿಸಲಿದೆ ಸಕಾ೯ರ ಜಾರಿಗೆ ಉದ್ದೇಶಿಸಿರುವ ಈ ನೀತಿಯಿಂದ ಖಂಡಿತವಾಗಿಯೂ ಬದಲಾವಣೆ ತರಲು ಸಾಧ್ಯ ಬ್ರಿಟಿಷರು ತಂದ ಶಿಕ್ಷಣವನ್ನು ಕಲಿತು ಯಾವುದೇ ರೀತಿಯ ಸಾಧನೆ ಅಸಾದ್ಯ.ಈ ನೀತಿಯಿಂದ ವಿದ್ಯಾಥಿ೯ಗಳ ಇತರ ಪ್ರತಿಭೆಗೆ ಕೂಡ ಗೌರವ ಸಿಗಬಹುದು.
ಒಟ್ಟಾಗಿ ಶಿಕ್ಷಕರ ದಿನದಂದು ಅವರಿಗೆ ಧನ್ಯವಾದ ತಿಳಿಸಿ ಮತ್ತಷ್ಟು ಉತ್ತಮ ಸಾಧನೆ ಮಾಡಲು ಗುರುಗಳ ಪ್ರೇರಣೆ ಪಡೆಯೋಣ. ಗುರುವೇ ನಮ:
ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ