ಭಗವಂತನ ಧರ್ಮಾವತಾರ ಅದು ಕೃಷ್ಣನೆಂಬ ಬೆರಗು
Posted On:
09-09-2020 06:01PM
ಭಗವಂತ . ಭಗವಂತನೇ ಧರ್ಮ.
ಧರ್ಮ ಭಗವಂತನಾಗುವುದು . ಧರ್ಮದಲ್ಲಿ ಭಗವಂತ ಸಂಭವಿಸುವುದು.
ಭಗವಂತನಲ್ಲಿ ಅವಿನಾಭಾವವಾಗಿ ಧರ್ಮವಿರುವುದು . ಅದು ಪ್ರಕಟಗೊಳ್ಳುವುದು - ದರ್ಶನ ಸಾಧ್ಯವಾಗುವುದು . ಈ ನಿರೂಪಣೆಯ ಸಾಕಾರವಾಗಿ ಮೂಡಿ ಬರುತ್ತದೆ ಒಂದು 'ಬೆರಗು' ....ಅದೇ ಕೃಷ್ಣ .
ಲಾಲಿತ್ಯ - ಲಾವಣ್ಯಗಳ ಆಕರ್ಷಕ ರೂಪದಿಂದ ಜಗತ್ತನ್ನು ಗೆಲಿದವನಾಗಿ ,
ಮನುಕುಲದ ಪ್ರಿಯಬಂಧುವಾಗಿ ,ಚಾಣಾಕ್ಷ ಸೂತ್ರಧಾರನಾಗಿ , ಮಲ್ಲಯುದ್ಧ ಪ್ರವೀಣನಾಗಿ , ರಾಜಕೀಯ ಮುತ್ಸದ್ಧಿಯಾಗಿ , ಗೀತಾಚಾರ್ಯನಾಗಿ ಭಾರತೀಯರ ಆರಾಧ್ಯನಾದ ಕೃಷ್ಣನ ಜನನ ಭೀತಿಯ ಪರಿಸರದಲ್ಲಿ , ಕಾಲದ ಅಗತ್ಯವಾಗಿ , ಸಜ್ಜನರ ನಿರೀಕ್ಷೆಯಾಗಿ ನೆರವೇರುತ್ತದೆ . ಋಷಿಮುನಿಗಳ ಪ್ರಾರ್ಥನೆ ,
ಶುಭ ಪ್ರತೀಕ್ಷೆ ಹುಸಿಯಾಗದೇ 'ಧರ್ಮ'ವಾಗಿ ಆವಿರ್ಭವಿಸುತ್ತಾನೆ ಕೃಷ್ಣ.
ಮತ್ಸ್ಯ , ಕೂರ್ಮ , ವರಾಹ , ನರಸಿಂಹ ಅವತಾರಗಳು ಕ್ಷಣದಲ್ಲಿ ನಡೆದು ಧರ್ಮವನ್ನು ಉದ್ಧರಿಸಿ ಮೂಲದಲ್ಲಿ ಸೇರಿಹೋಗುತ್ತದೆ .ವಾಮನಾವತಾರ ಏಕೋದ್ದೇಶದಿಂದ ನಡೆದು ಪಾತಾಳ ಸೇರಿಹೋಗುತ್ತದೆ .ಭಾರ್ಗವರಾಮನಾಗಿ ಆಯುಧ ಗ್ರಹಣ ನಿಷಿದ್ಧವಾಗಿದ್ದರೂ ಸಂದರ್ಭದ ಅನಿವಾರ್ಯವಾಗಿ ಕ್ಷತ್ರಿಯ ಸಂಹಾರವಾಗುತ್ತದೆ .ಇಲ್ಲಿ ಧರ್ಮ ಸ್ಥಾಪನೆಯೇ ಪರಮಲಕ್ಷ್ಯವಾಗಿ ನಿರ್ವಹಿಸಲ್ಪಡುತ್ತದೆ . ಬಹುಶಃ ಆಕಾಲಕ್ಕೆ ಅದೇ ಮಾನ್ಯತೆಯ ಮೌಲ್ಯವಾಗಿದ್ದಿರಬೇಕು.
ಮರ್ಯಾದಾ ಪುರುಷೋತ್ತಮನಾದ ಶ್ರೀ ರಾಮಚಂದ್ರ ಮೆರೆದ ಆದರ್ಶ ,ಪಾಲಿಸಿದ ಮಾನವ ಧರ್ಮ,ಬದುಕಿನ ವಿಧಾನಗಳೆಲ್ಲ ಮಾನವ ಜೀವನ ಶೈಲಿಯ ಅಪೂರ್ವ ಸಾಧ್ಯತೆಗಳನ್ನೆಲ್ಲ ಸಾಧಿಸಿದುದು ,ಹೀಗೂ ಬದುಕಬಹುದೇ ? ಎಂದು ಉದ್ಗರಿಸುವುದು ಬಿಟ್ಟರೆ ಆ ವ್ಯಕ್ತಿತ್ವ ಕಷ್ಟಸಾಧ್ಯವೆಂದು ನೆಲ ನೋಟಕರಾಗಬೇಕಾಗುತ್ತದೆ .
ಕೃಷ್ಣಾವತಾರ ಪರಿಪೂರ್ಣವಾಗುತ್ತದೆ
ಆದರೆ ಕೃಷ್ಣಾವತಾರದ ಸಂದರ್ಭ ಮಾತ್ರ ವಿಶಿಷ್ಟ , ವಿಭಿನ್ನ . ಲೋಕೋತ್ತರ ಹಿತ ಸಾಧನೆ ,ಯಾರದ್ದು ಯಾರಿಗೆ ಸಲ್ಲಬೇಕು ಎಂಬ ಲೋಕಧರ್ಮೀ ನ್ಯಾಯದ ಅನುಷ್ಠಾನ ,ದುರ್ಬಲರಿಗೆ ,ಸಜ್ಜನರಿಗೆ ಬಲವಾಗುವ ,ಅಶಕ್ತರಿಗೆ ಶಕ್ತಿಯಾಗುವ ,
ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸುವ ಸದುದ್ದೇಶದೊಂದಿಗೆ ಕಾರ್ಯಪ್ರವೃತ್ತನಾಗುವ ಸಂಕಲ್ಪ ಸ್ವೀಕರಿಸಿದವ 'ವಾಸುದೇವ - ಕೃಷ್ಣ' . ಸಂದರ್ಭದ ಅನಿವಾರ್ಯತೆಯನ್ನು ಬಳಸಿಕೊಂಡು ಕುಬ್ಜೆಯ ವಕ್ರತೆಯನ್ನು ತಿದ್ದಿ ಸೃಷ್ಟಿಯನ್ನೆ ಸರಿಪಡಿಸಬಲ್ಲೆ ಎಂಬ ಸಂದೇಶವನ್ನು ಕೊಡುತ್ತಾನೆ .
ಯಾರು ಹೇಳಿದರು ಕೃಷ್ಣನಿಗೆ ನೀನು ಮನುಕುಲದ ಉದ್ಧಾರಕನಾಗು ,ಯುಗ ಪ್ರವರ್ತಕನಾಗು ,ಧರ್ಮಸಂಸ್ಥಾಪಕನಾಗು ಎಂದು . ಆದರೆ ಕೃಷ್ಣ , ಆ ಕರ್ತವ್ಯ ತನ್ನದೆಂದು ,ತನ್ನ ಜವಾಬ್ದಾರಿ ಎಂದು ಪರಿಭಾವಿಸಿಕೊಂಡು ದ್ವಾಪರದ ಅಂತ್ಯದಲ್ಲಿ ಮಹತ್ಕಾರ್ಯ ಸಾಧಸಿಯೇಬಿಟ್ಟ , ಅಗತ್ಯವಿದ್ದವರಿಗೆ 'ಹೀಗೆಯೇ' ಮಾಡು ಎಂದು ನಿರ್ದೇಶಿಸಿದ .ಧರ್ಮವನ್ನು ಸ್ಥಾಪಿಸಿ ಧರ್ಮಸಂಸ್ಥಾಪನಾಚಾರ್ಯನಾದ .ಶ್ರುತಿ - ಸ್ಮೃತಿಗಳು ಹೇಳುವಂತೆ ಅವನೇ ಭಗವಂತ .
ತಾನು ವಿಶ್ವವ್ಯಾಪಕನಿದ್ದೇನೆ .
ಪರಿಪೂರ್ಣನಿದ್ದೇನೆ ಎಲ್ಲವೂ ನಾನೇ ,ಎಲ್ಲ
ಶ್ರೇಷ್ಠ ವಾದುವುಗಳಲ್ಲಿ ನಾನಿದ್ದೇನೆ ಅಥವಾ ಅದು ನಾನೇ ಆಗಿರುತ್ತೇನೆ . ಯಾವುದು ಯಾರಿಗೆ ಯಾವ ಕಾಲದಲ್ಲಿ ಧರ್ಮವೋ ಅದನ್ನು ಮಾಡು ,ಅದೇ ನಿನಗೆ ಧರ್ಮ ಮುಂತಾದ ವ್ಯಾಖ್ಯಾನವನ್ನು ಬೋಧಿಸುತ್ತಾ ಮಾನವ ಬದುಕಿನ ಸುಂದರ ಅನುಕರಣೀಯ ಸಿದ್ಧಾಂತವು ವಾಚ್ಯವಾಗುವಂತೆ "ವಿರಾಡ್ - ದರ್ಶನ"ದ ಮೂಲಕ ಪ್ರಕಟಗೊಳ್ಳುತ್ತಾನೆ .
ವಿಜಯವನ್ನು ನೆಲೆಗೊಳಿಸುತ್ತಾನೆ . ಈ ನಿರೂಪಣೆ ಅಥವಾ ಉಪದೇಶ "ಭಗವದ್ಗೀತೆ" ಯಾಗಿ ಬಹುಮಾನ್ಯವಾಗುತ್ತದೆ .ಇದು ಮನುಕುಲಕ್ಕೆ ನೀಡಿದ ಅದ್ಭುತ ಕೊಡುಗೆ ,ಈ ಉಪದೇಶದಿಂದ ವಾಸುದೇವ ಭಗವಾನ್ ವಾಸುದೇವನಾಗುತ್ತಾನೆ , ಗೀತಾಚಾರ್ಯನೇ ಆಗುತ್ತಾನೆ .ಮನುಷ್ಯ ಭಾವಕ್ಕಿಂತ ದೂರ , ಎತ್ತರಕ್ಕೆ ಏರುತ್ತಾನೆ ,ತತ್ ಕ್ಷಣ ನಮ್ಮ ಹತ್ತಿರಕ್ಕೆ ಬಂದು ಆತ್ಮೀಯನಾಗುತ್ತಾನೆ.
ಗೋಪಿಗೀತ ,ಉದ್ಧವಗೀತೆಗಳು ಭಗವದ್ಗೀತೆಯಷ್ಟು ಲೋಕಧರ್ಮಿಯಲ್ಲ .
ಅವು ಹೆಸರೇ ಸೂಚಿಸುವಂತೆ ಅವರವರಿಗೆ ಸೀಮಿತವಾಗಿವೆ .
ಯುವಸಮುದಾಯದ ಆಕರ್ಷಣೆ
ಜರಾಸಂಧ ಅಥವಾ ಮಾಗಧ ತಾನು ಭರತವರ್ಷದ ಚಕ್ರವರ್ತಿಯಾಗಬೇಕೆಂಬ ಸಂಚು ರೂಪಿಸಿದ್ದ .ರಾಜಕುಮಾರರನ್ನು ಸೆರೆಯಲ್ಲಿರಿಸಿಕೊಂಡಿದ್ದ . ಮಾಗಧನನ್ನು ಭೀಮನಿಂದ ಕೊಲ್ಲಿಸಿ ರಾಜಕುಮಾರರನ್ನು ಬಂಧಮುಕ್ತಗೊಳಿಸಿದ , ಯುವ ಸಂದೋಹ ಕೃಷ್ಣನಿಗೆ ಆತ್ಮೀಯವಾಗುತ್ತದೆ .ನರಕಾಸುರನ ಸೆರೆಯಲ್ಲಿದ್ದ ಸಾವಿರಾರು ಸ್ತ್ರೀಯರ ಸೆರೆಬಿಡಿಸುತ್ತಾನೆ ,ಮಾತ್ರವಲ್ಲ ಅವರ ಬದುಕಿಗೆ ಭದ್ರತೆಯನ್ನು ಒದಗಿಸುತ್ತಾನೆ .ಇದು ಕೃಷ್ಣ ಪ್ರದರ್ಶಿಸಿದ ಜೀವಪ್ರೀತಿ ,ಮಾನವ ಪ್ರೇಮ . ಈ ಎಲ್ಲಾ ಸಾಧನೆಗೆ ಪ್ರಾರಂಭದ ವೇದಿಕೆಯಾದದ್ದು ಗೋಕುಲ , ಗೋಪಾಲಕರು ಮತ್ತು ಗೋವುಗಳು .
ಹಸ್ತಿನಾವತಿಯ ಚಕ್ರವರ್ತಿ ಪೀಠ ಪ್ರಶ್ನಾರ್ಹವಾಗಬಾರದು , ಅದು ಚಂದ್ರವಂಶೀಯರಿಗೆ ಸಲ್ಲತಕ್ಕದು ಎಂಬ ಕಾಲಧರ್ಮವನ್ನು ಪ್ರತಿಪಾದಿಸಿದ . ಆದರೆ ಹಸ್ತಿನೆಯಲ್ಲಿ ದಾಯಾದ್ಯ ಕಲಹವೇರ್ಪಟ್ಟಾಗ ಧರ್ಮ ಪಕ್ಷಪಾತಿಯಾಗಿ ಕಾರ್ಯನಿರ್ವಹಿಸಿ ಸರ್ವಪ್ರಯತ್ನೇನ ಧರ್ಮರಾಯಾದಿ ಪಾಂಡವರಿಗೆ ಹಸ್ತಿನಾವತಿಯ ಚಕ್ರವರ್ತಿ ಪೀಠ ದೊರೆಯುವಂತೆ ಮಾಡುತ್ತಾನೆ ಕೃಷ್ಣ .
ಕೊನೆಗೂ ತಾನು ನಿರ್ಲಿಪ್ತನಾಗಿಯೇ ಅರಸೊತ್ತಿಗೆ ,ಚಕ್ರವರ್ತಿಪೀಠವನ್ನು ತಿರಸ್ಕರಿಸುತ್ತಾನೆ . ಬಹಳ ಹಿಂದೆ ನೂತನವಾಗಿ ಭರತವರ್ಷದ ಐವತ್ತಾರಕ್ಕೆ ಹೊರತಾಗಿ ಐವತ್ತೇಳನೇದ್ದಾಗಿ ಕಟ್ಟಿದ ದ್ವಾರಾವತಿಗೆ ಅಣ್ಣ ಬಲರಾಮನಲ್ಲವೇ ಅರಸ .ಯಾದವರಿಗೆ ರಾಜತ್ವ ಇದೆ ಎಂಬುದನ್ನು ಸ್ಥಾಪಿಸಿದ ....ಇದು ಕೃಷ್ಣ .
ಲಾಲಿತ್ಯದಿಂದ ಅರಳುತ್ತದೆ
ಭಾರತೀಯ "ಧರ್ಮ - ತತ್ತ್ವಜ್ಞಾನ"ವು ಲಾಲಿತ್ಯದಿಂದ ಅರಳುವುದು ಬಹಳ ವಿರಳ .
ಆದರೆ ಕೃಷ್ಣನ ಸಂದರ್ಭದಲ್ಲಿ ಮಾತ್ರ ಅರಳಿ ಘಮಘಮಿಸುತ್ತದೆ .ಇದು ಪ್ರೀತಿಯ ಕಣ್ಣು ಕುಕ್ಕುವ ಸೊಬಗಿನಿಂದ ಸಂಭ್ರಮಿಸುತ್ತದೆ .
ಪ್ರೇಮ ಕತೆಗಳಿಗೆ ಹೊಸತೊಂದು ಕೋಮಲತೆ ಬರುತ್ತದೆ .ಕೃಷ್ಣನ ಬಾಲ್ಯ ಮರೆಯಲಾಗದ ಸಂಗತಿ ಇವತ್ತಿಗೂ ಪ್ರತಿಯೊಂದು ಭಾರತೀಯನ ಮನೆಯಲ್ಲಿ ಈ ಬಾಲ್ಯ ಕುಣಿಯುತ್ತಲೇ ಇದೆ .ಆಡಿದ ರಾಸಕ್ರೀಡೆ ಕೃಷ್ಣ - ಗೋಪಿಕೆಯರ ವಿನೋದ ನೃತ್ಯ ಶ್ರೇಷ್ಠವಾಗಿಯೇ ನಿಲ್ಲುತ್ತದೆ ,
ಆಕ್ಷೇಪಾರ್ಹವಾಗುವುದೇ ಇಲ್ಲ , ರಂಜನೀಯ ಸಂದರ್ಭವಾಗುತ್ತದೆ .
ಸೀರೆಕದ್ದ - ಅಕ್ಷಯಾಂಬರ ಕೊಟ್ಟ
ಬಾಲ್ಯದಲ್ಲೊಮ್ಮೆ ತುಂಟಕೃಷ್ಣ ಗೋಪಿಕೆಯರ ಸೀರೆ ಕದ್ದು ಮರ ಏರಿ ಕುಳಿತು ಒಂದು ಅಪಕೀರ್ತಿಗೆ ಪಾತ್ರನಾಗುತ್ತಾನೆ .
ವಾಸುದೇವನಾಗಿ ಬೆಳೆದಾಗ ದ್ರೌಪದಿಗೆ ಅಕ್ಷಯಾಂಬರವಿತ್ತು ಮಾನ - ಪ್ರಾಣ ಉಳಿಸಿ ಆಪತ್ಬಂಧುವಾಗಿ ಮೆರೆಯುತ್ತಾನೆ .ಸೀರೆಕದ್ದ ದೋಷದಿಂದ ಮುಕ್ತನಾಗುತ್ತಾನೆ .ಬಹುಶಃ ಅಕ್ಷಯಾಂಬರದ ಕೊಡುಗೆಯಲ್ಲಿ ಈ ಭಾವವಿರಬಹುದು .ಹೀಗೆ ಬಾಲ್ಯದ ಪ್ರತಿಯೊಂದು ಬಾಲ್ಯ ಸಹಜವಾದ ಪ್ರಮಾದಗಳಿಗೂ ಬದುಕಿನುದ್ದಕ್ಕೂ ತಕ್ಕುದಾಗಿ ವರ್ತಿಸಿ , ಉತ್ತರಿಸುತ್ತಾ ಮನುಕುಲದ ಪ್ರಿಯ ಬಂಧುವಾಗುತ್ತಾನೆ .
ಕೃಷ್ಣ ಜನ್ಮಾಷ್ಟಮಿಯ ವೇಳೆ ಹೀಗೊಂದು ಓದಿದ ,ಕೇಳಿದ ವಿವರಗಳನ್ನು ಹಂಚಿಕೊಂಡದ್ದು .
ಅಷ್ಟಮಿ - ಅಟ್ಟೆಮಿ ಪೇರರ್ಘ್ಯೆ
ಅಷ್ಟಮಿ ದಿನದಂದು ಉಪವಾಸವಿದ್ದು ರಾತ್ರಿ ಚಂದ್ರೋದಯವಾಗುವ ( ತಿಂಗೊಲು ಮೂಡ್ನಗ) ಮುಹೂರ್ತದಲ್ಲಿ ಸ್ನಾನಮಾಡಿ ಮನೆ ತುಳಸಿಕಟ್ಟೆಯ ಎದುರು ತೆಂಗಿನಕಾಯಿ ಒಡೆದಿಟ್ಟು ಹಾಲು ಎರೆಯುವ ,ಬಿಲ್ವಪತ್ರೆ ಅರ್ಪಿಸುವ 'ಪೇರರ್ಘ್ಯೆ' ಬಿಡುವ ಕ್ರಮವಿದೆ .ಅರ್ಘ್ಯೆ ಪ್ರದಾನ ಎಂದರೆ "ಅಡಿಗೆ ಬುಡ್ಪುನು".ಅಷ್ಟಮಿದ 'ಉಡಾರಿಗೆ' ಎಂಬುದು ಅಷ್ಟಮಿಯ ವಿಶೇಷ ತಿಂಡಿ .
ಅರ್ಘ್ಯ ಪ್ರದಾನ
ಕೃಷ್ಣಜನ್ಮಾಷ್ಟಮಿ/ ಕೃಷ್ಣ ಜಯಂತಿಯ
ದಿನಪೂರ್ತಿ ಉಪವಾಸವಿದ್ದು ರಾತ್ರಿ ಚಂದ್ರೋದಯಕ್ಕೆ ಸರಿಯಾಗಿ ವಿವಿಧ ಭಕ್ಷ್ಯ ,ಉಂಡೆ , ಚಕ್ಕುಲಿ,ಕಡುಬು ಮುಂತಾದುವುಗಳನ್ನು ಮನೆ ದೇವರಿಗೆ ಸಮರ್ಪಿಸಿ ಪೂಜೆಮಾಡುವುದು .
ಕೃಷ್ಣ ,ಬಲರಾಮ,ವಸುದೇವ ,ದೇವಕಿ,
ನಂದಗೋಪ , ಯಶೋದಾ,ಸುಭದ್ರೆಯರನ್ನು ಸ್ಮರಿಸಿಕೊಂಡು ಬಿಲ್ವಪತ್ರೆ ಅರ್ಪಿಸಿ ಶಂಖದಲ್ಲಿ ನೀರು ತುಂಬಿ ದೇವರಿಗೆ ( ಶಾಲಗ್ರಾಮ ಒಂದಕ್ಕೆ) ಅರ್ಘ್ಯ ಸಮರ್ಪಿಸುವುದು . ಬಳಿಕ ತುಳಸಿಕಟ್ಟೆಯ ಮುಂಭಾಗ ಒಡೆದ ತೆಂಗಿನಕಾಯಿಯನ್ನು ( ತೆಂಗಿನ ಗಂಡು ಭಾಗದಲ್ಲಿ ಸುಲಿದ ಬಾಳೆಹಣ್ಣು ಇರಿಸಿ ಅರ್ಘ್ಯ ಅರ್ಪಿಸುವ ಕ್ರಮವೂ ಇದೆ) ಇರಿಸಿ ಬಿಲ್ವಪತ್ರೆ ಅರ್ಪಿಸಿ ಶಂಖದಲ್ಲಿ ಹಾಲು ತುಂಬಿಸಿ ರೋಹಿಣೀ ಸಹಿತ ಚಂದ್ರನಿಗೆ ಅರ್ಘ್ಯವನ್ನು ಸಮರ್ಪಿಸುವುದು .
ಸೌರಮಾನ , ಚಂದ್ರಮಾನ
ಪದ್ಧತಿಗಳಿಗನುಗುಣವಾಗಿ ಅರ್ಘ್ಯ ಪ್ರದಾನ ನೆರವೇರುತ್ತದೆ . ಈ ಆಚರಣೆಯಲ್ಲಿ ಪಾಠಾಂತರಗಳಿವೆ .
ವಿಟ್ಲ ಪಿಂಡಿ ; ಮಸುರ್ಡಿಕೆ -
ಮೊಸರು ಕುಡಿಕೆ
ವಿಠಲನ ಪಿಂಡಿ 'ವಿಟ್ಲಪಿಂಡಿ' . ಪಿಂಡಿ ಎಂದರೆ 'ಗಂಟು'. ವಿಠಲನಲ್ಲಿ ಇದ್ದುದು ಅಥವಾ ವಿಠಲನಿಗಾಗಿ ತಂದದ್ದು - ಬಂದದ್ದು .ಉಂಡೆ ,ಚಕ್ಕುಲಿಗಳಂತಹ ತಿಂಡಿಗಳುಳ್ಳ ಗಂಟು .ಈ ಗಂಟನ್ನು ಇಟ್ಟುಕೊಂಡು ಅದನ್ನು ನನಗೆ ,ನನಗೆ ಎಂದು ಪಡೆಯಲು ಆಡುವ ಮಕ್ಕಳಾಟವೇ ವಿಟ್ಲಪಿಂಡಿ .
'ವಿಠಲ' ಎಂಬ ಹೆಸರಿನ ಕೃಷ್ಣನು ಗೋಪಾಲರೊಂದಿಗೆ - ಗೋಪಿಯರೊಂದಿಗೆ ಆಡಿದ ಆಟಗಳೇ "ಕೃಷ್ಣ ಲೀಲೆ" . ಅದನ್ನು ಉತ್ಸವೆಂದು ಸುಂದರ ಸ್ಮರಣೆಯಾಗಿ ಆಚರಿಸುವುದರಿಂದ ಅದುವೇ ಲೀಲೋತ್ಸವ ಕೃಷ್ಣ ಲೀಲೋತ್ಸವ .
ಗೋಪಿಯರ ಕಣ್ಣುತಪ್ಪಿಸಿ ಗೋಪರ ಮನೆ ಹೊಕ್ಕು ಹಾಲು , ಮೊಸರುಗಳನ್ನು ಕದ್ದು ತಿಂದದ್ದು ಮತ್ತು ತಿನ್ನುವಾಗ ಕೈತಪ್ಪಿ ಕೆಳಗೆಬಿದ್ದು ಮಡಕೆಗಳು ಪುಡಿಯಾದಾಗ ಮೊಸರಿನ ಕುಡಿಕೆ ಪುಡಿಯಾಗುತ್ತದೆ . ಎತ್ತರದಲ್ಲಿ ತೂಗಿಸಿಡುವ ಹಾಲು - ಮೊಸರಿನ ಕುಡಿಕೆಗಳಿಗೆ ಕಲ್ಲಿನಿಂದ ಹೊಡೆದು ಅಥವಾ ಕೋಲಿನಿಂದ ರಂಧ್ರಮಾಡಿ ಅದರಿಂದ ಇಳಿಯುವ ಹಾಲಿಗೊ ಮೊಸರಿಗೊ ಬಾಯಿಕೊಟ್ಟು ಕುಡಿಯುವ ಕೃಷ್ಣ ಚೇಷ್ಟೆಗಳ 'ಮೊಸರುಕುಡಿಕೆ'ಯ ಅಣಕನ್ನು ಅಥವಾ ಮರುಪ್ರದರ್ಶನವೇ ನಾವಿಂದು ಕಾಣುವ 'ಕೃಷ್ಣಲೀಲೋತ್ಸವ' . ಬಹುಶಃ ಯಾವ ಮಹನೀಯರ ಬಾಲ್ಯದ ತುಂಟಾಟವೇ ಪ್ರಧಾನವಾಗುವ , ರೂಪಕವಾಗುವ ಪುರಾಣವಾಗುವುದನ್ನು ಕಾಣುವುದೇ ಇಲ್ಲ.
ಬರಹ : ಕೆ.ಎಲ್ .ಕುಂಡಂತಾಯ