ಕಾಪುವಿನ ರಾಣ್ಯಕೇರಿಯಲ್ಲಿ ವಿದ್ಯುತ್ ಇಲ್ಲದ ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ
Posted On:
11-09-2020 05:05PM
ಕಾಪು ಕ್ಷೇತ್ರದ ಪುರಸಭಾ ವ್ಯಾಪ್ತಿಯ ರಾಣ್ಯಕೇರಿ ಎಂಬಲ್ಲಿ ಜಯಲಕ್ಷ್ಮಿ ಎನ್ನುವರವರ ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ್ದನ್ನು ಗಮನಿಸಿದ ಕಾಪುವಿನ ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭುರವರು ಶ್ರೀಕಾಂತ್ ನಾಯಕ್ ಅವರಿಗೆ ತಿಳಿಸಿದಾಗ ಸ್ಥಳೀಯ ಪ್ರಮುಖರಾದ ಸುಧಾಮ ಶೆಟ್ಟಿ ಹಾಗೂ ಪ್ರಶಾಂತ್ ಪೂಜಾರಿ ಇವರೊಂದಿಗೆ ಮನೆಗೆ ಭೇಟಿ ನೀಡಿ ವಿದ್ಯುತ್ ಸಂಪರ್ಕ ಕೊಡಿಸುವ ಭರವಸೆ ನೀಡಿದ್ದರು.
ತೀರಾ ಬಡಕುಟುಂಬವಾದ ಇವರು ತಮ್ಮಲ್ಲಿ ಹೆಚ್ಚಿನ ದಾಖಲೆಗಳು ಇಲ್ಲದ್ದನ್ನು ಮನಗಂಡ ಸುಧಾಮ ಶೆಟ್ಟಿಯವರು ಪುರಸಭಾ ಅಧಿಕಾರಿಗಳೊಂದಿಗೆ ಮಾತನಾಡಿ ಮಾನವೀಯ ನೆಲೆಯಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು ನಿರಾಪೇಕ್ಷಣಾ ಪತ್ರ ಕೊಡಿಸಿದರು. ನಂತರದಲ್ಲಿ ಕಾಪು ಮೆಸ್ಕಾಂ ನ್ನು ಸಂಪರ್ಕಿಸಿ ಅವರಿಗೆ ಉಚಿತ ಕಂಬ ಒದಗಿಸಿ ವಿದ್ಯುತ್ ಸಂಪರ್ಕ ಒದಗಿಸಿದ್ದರು.
ಇಂದು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರೊಂದಿಗೆ ಫಲಾನುಭವಿಗಳ ಮನೆಗೆ ಭೇಟಿ ನೀಡಿ ವಿದ್ಯುತ್ ಸಂಪರ್ಕದ ಉದ್ಘಾಟನೆ ಮಾಡಿದರು. ಕಾಪುವಿನ ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭುರವರು ಮನೆಗೆ ಬೇಕಾದಂತಹ ಬಲ್ಬ್ಗಳನ್ನು ಹಾಗೂ ಒಂದು ಟೇಬಲ್ ಫ್ಯಾನ್ ನ್ನು ಕೊಡುಗೆಯಾಗಿ ನೀಡಿದ್ದು ಮಾನ್ಯ ಶಾಸಕರ ಮುಖೇನ ಅದನ್ನು ಹಸ್ತಾಂತರಿಸಲಾಯಿತು.
ಬಡಕುಟುಂಬವೊಂದಕ್ಕೆ ಸಹಾಯ ಮಾಡಲು ಅವಕಾಶ ನೀಡಿದ ನೀತಾ ಪ್ರಭು, ಪ್ರಶಾಂತ್ ಪೂಜಾರಿ ಮತ್ತು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ಹಾಗೂ ಹಿರಿಯರಾದ ಸುಧಾಮ ಶೆಟ್ಟಿ, ಇವರೆಲ್ಲರಿಗೂ ಶ್ರೀಕಾಂತ್ ನಾಯಕ್ ಧನ್ಯವಾದಗಳನ್ನು ತಿಳಿಸಿದರು.